ಕನ್ನಡಪ್ರಭ ವಾರ್ತೆ ಬೆಂಗಳೂರು ಜ.22
ನಿಯತ್ತಿಗೆ ನಾಯಿ ಹೆಸರುವಾಸಿ ಎಂಬುದೇನೋ ಸರಿ. ಅದರೆ, ಗಂಡು ನಾಯಿಗಳ ನಿಯತ್ತು ಒಮ್ಮೊಮ್ಮೆ ನಿಲ್ಲುವುದಿಲ್ಲ. ಯಾವಾಗ ? ಹೆಣ್ಣು ನಾಯಿಗಳು ಅವುಗಳ ಕಣ್ಣಿಗೆ ಬಿದ್ದಾಗ!
ಅದರಲ್ಲೇನಿದೆ ವಿಶೇಷ. ಗೊತ್ತಿರುವ ಸಂಗತಿ ತಾನೆ ಎಂದು ಮೂಗು ಮುರಿಯಬೇಡಿ. ಜನ ಸಾಮಾನ್ಯರಿಗೆ ಅಲ್ಲದಿದ್ದರೂ ಪೊಲೀಸರಿಗೆ ಇದು ಪೀಕಲಾಟ ತಂದೊಡ್ಡಿದೆ.
-ಅಂದರೆ ಇದು ಪೊಲೀಸ್ ಇಲಾಖೆಯ ಶ್ವಾನದಳದ ಕಥೆ.
ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಒಮ್ಮೆ ಆದೇಶ ಕೊಟ್ಟರೆ ಮುಗಿಯಿತು. ಅದನ್ನು ಎಲ್ಲರೂ ಪಾಲಿಸಲೇಬೇಕು. ಇಲ್ಲದಿದ್ದರೆ ಅದು ಅಶಿಸ್ತು ಆಗುತ್ತದೆ. ಆದರೆ, ಶ್ವಾನದಳದ ವಿಚಾರದಲ್ಲಿ ಆ ರೀತಿ ಆಗುತ್ತಿಲ್ಲವಲ್ಲ. ಅದರಲ್ಲೂ ಗಂಡು ನಾಯಿಗಳು ಏಕೋ ಏನೋ ಯಾರ ಮಾತಿಗೂ ಬಗ್ಗುತ್ತಿಲ್ಲ. ಕಮಾಂಡರ್‌ನ ಆರ್ಡರ್‌ಗೂ ಡೋಂಟ್ ಕೇರ್ !
ಪೊಲೀಸ್ ಇಲಾಖೆಗೆ ತೆಗೆದುಕೊಳ್ಳುವ ಗಂಡು ಶ್ವಾನಗಳಿಗೆ ಶಿಸ್ತು, ಸಮಯಪ್ರಜ್ಞೆ ಪಾಲನೆ ಕುರಿತು ಎಷ್ಟೇ ತರಬೇತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ.
ಅವು ಹೇಳಿದ ಮಾತೇ ಕೇಳುವುದಿಲ್ಲ ಎಂಬುದು ಶ್ವಾನದಳ ಸಿಬ್ಬಂದಿ ಅಭಿಪ್ರಾಯ.
ಈ ಗಂಡು ನಾಯಿಗಳು ಹೆಣ್ಣು ನಾಯಿಗಳನ್ನು ಕಂಡರೆ ಅವುಗಳ ಹಿಂದೆ ಓಡುತ್ತವೆ. ಅವನ್ನು ಎಳೆದು ತಂದು ತರಬೇತಿಗೆ ಕೂಡಿಸುವಷ್ಟರಲ್ಲಿ ಪೊಲೀಸರು ಸುಸ್ತೋ ಸುಸ್ತು. ಅದರಲ್ಲೂ ಡಿಸೆಂಬರ್‌ನಿಂದ ಫೆಬ್ರವರಿ ಮತ್ತು ಜೂನ್‌ನಿಂದ ಆಗಸ್ಟ್‌ವರೆಗೆ ಗಂಡು ನಾಯಿಗಳನ್ನು ನಿಯಂತ್ರಿಸುವುದು ಬಲು ಕಷ್ಟ. ಅದು ಶ್ವಾನಗಳ ಪಾಲಿಗೆ ಸಂತಾನದ ಸಮಯ. ಆದರೆ, ಹೆಣ್ಣು ನಾಯಿಗಳು ಆ ರೀತಿ ಇಲ್ಲ. ಅವು ಕಮಾಂಡರ್ ಹೇಳಿದಂತೆ ಕೇಳುತ್ತವೆ. ಶಿಸ್ತು ಪಾಲನೆಯಲ್ಲೂ ಎತ್ತಿದ ಕೈ. ಅವು ಯಾವುದೇ ಕಾಲದಲ್ಲೂ ಸಮಯಪ್ರಜ್ಞೆ ಪಾಲಿಸುತ್ತವೆ. ತರಬೇತಿ ವೇಳೆ ಕಮಾಂಡರ್ ಹೇಳಿದಂತೆ ಕೇಳುತ್ತವೆ. ಅವುಗಳ ನಿಯಂತ್ರಣ ಸುಲಭ ಎನ್ನುತ್ತಾರೆ ಪೊಲೀಸರು. ಗಂಡು ಶ್ವಾನಗಳ ಈ ವರ್ತನೆಯಿಂದ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ. ಅವುಗಳನ್ನು ನಿಯಂತ್ರಿಸುವ ವಿಚಾರದಲ್ಲಿ ಪಶು ವೈದ್ಯರ ಮೊರೆ ಹೋದರೂ ಪ್ರಯೋಜನವಾಗಿಲ್ಲ. ಈ ವಿಷಯದಲ್ಲಿ ನಾನಾ ಕಸರತ್ತು ಮಾಡಿ ಸೋತಿದ್ದೇವೆ ಎಂಬುದು ಪೊಲೀಸರ ಅನಿಸಿಕೆ. ಈ ವರ್ತನೆ ಕೇವಲ ಶ್ವಾನದಳ ಕೇಂದ್ರದಲ್ಲಿ ಮಾತ್ರವಲ್ಲ. ಬೀದಿಯಲ್ಲಿ ಹೋಗುವಾಗಲೂ ವರ್ತನೆ ಬದಲಾಗುತ್ತದೆಯಂತೆ. ಈ ವರ್ತನೆಯನ್ನು ನೂರಕ್ಕೆ ನೂರರಷ್ಟು ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ ಎಂಬುದನ್ನು ವೈದ್ಯರೇ ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಶ್ವಾನಗಳಿಗೆ ಶಿಸ್ತಿನ ಬಗ್ಗೆ ಎಷ್ಟೇ ತರಬೇತಿ ನೀಡಿದರೂ ಪ್ರಯೋಜನವಿಲ್ಲ. ಅಪರಾಧ ಪ್ರಕರಣ ಪತ್ತೆಗೆ ಹೋದಾಗ ಈ ವರ್ತನೆ ಹೆಚ್ಚಿರುತ್ತದೆ ಎನ್ನುತ್ತಾರೆ ಪೊಲೀಸರು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಶ್ವಾನದಳಕ್ಕೆ ಇನ್ನುಮುಂದೆ ಹೆಚ್ಚಾಗಿ ಹೆಣ್ಣು ನಾಯಿಗಳನ್ನೇ ಸೇರಿಸಿಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
- ಶಾಂತ ತಮ್ಮಯ್ಯ