ಬಾಗಲಕೋಟೆ: ಇಬ್ಬರು ಸಚಿವರೂ ಸೇರಿ 13 ಶಾಸಕರು ರಾಜಿನಾಮೆ ನೀಡಿರುವ ಹಿನ್ನಲೆಯಲ್ಲಿ ಶುಕ್ರವಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಐಹೊಳೆ ಗ್ರಾಮ ಸ್ಥಳಾಂತರ ಕಾರ್ಯಕ್ರಮ ಬಳಿಕ ಮಾತನಾಡಿದ ಅವರು 'ಯಾರೇ ರಾಜಿನಾಮೆ ನೀಡಲಿ. ಆದರೆ, ಸರ್ಕಾರ ಮಾತ್ರ ಭದ್ರವಾಗಿರುತ್ತದೆ. ಫೆ.8ರಂದು ನಾನೇ ಬಜೆಟ್ ಮಂಡಿಸುತ್ತೇನೆ. ಜನ ಮೆಚ್ಚುವಂತಹ ಬಜೆಟ್ ರೂಪಿಸಿದ್ದೇನೆ. ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗುವುದಿಲ್ಲ' ಎಂದರು.