ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಧೂಳು

ರಾಜ್ಯ ಸರ್ಕಾರವನ್ನು ಸಂಪರ್ಕಿಸದೆ ಪರವಾನಗಿ ಕೊಟ್ಟ ಸಿಇಸಿಗಣಿ ಗುತ್ತಿಗೆ ವರ್ಗಾವಣೆ ಮಾಡುವಲ್ಲಿಯೂ ಅಕ್ರಮತನಿಖೆ ವ್ಯಾಪ್ತಿಯಿಂದಲೇ ರಾಮಗಡ ಮೈನ್ಸ್ ಕಂಪನಿ ಹೊರಕ್ಕೆ

Parashurama
Updated On : 24 Jan 2013, 11:29 am

ಬೆಂಗಳೂರು: ಘಟಾನುಘಟಿ ರಾಜಕಾರಣಿಗಳಿಗೆ ಜೈಲಿನ ಹಾದಿ ತೋರಿಸಿದ ಬಳ್ಳಾರಿ ಗಣಿ ಹಗರಣದಿಂದ ಮತ್ತೊಂದು ಅಕ್ರಮ ಎದ್ದು ಬಂದಿದೆ.
ಕಂಪನಿಯೊಂದರ ಈ ಅಕ್ರಮ ಕಣ್ಣಿಗೆ ರಾಚುವಂತೆ ನಡೆದಿದ್ದರೂ ಗಣಿ ಹಗರಣದ ತನಿಖೆಗೆ ಸುಪ್ರೀಂ  ಕೋರ್ಟ್ ರಚಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ ಏಕೋ ಏನೋ ಕಣ್ಣುಮುಚ್ಚಿ ಕುಳಿತಿದೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ. ನೀತಿ, ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಸಿರುವ ಕಂಪನಿಗೆ ಕ್ಲೀನ್‌ಚಿಟ್ ಕೊಟ್ಟು ಕೈ ತೊಳೆದುಕೊಂಡಿದೆ.
ಈ ವಿಚಾರದಲ್ಲಿ ರಾಜ್ಯ ಸರ್ಕಾರವೂ ಒಂದು ಹೆಜ್ಜೆ ಮುಂದಿಟ್ಟು ಎರಡು ಹೆಜ್ಜೆ ಹಿಂತೆಗೆದುಕೊಂಡಿದೆ. ಅಂದರೆ, ಆರಂಭದಲ್ಲಿ ಕಂಪನಿ ಅಕ್ರಮದ ಬಗ್ಗೆ ಆಕ್ಷೇಪವೆತ್ತಿದ್ದ ಸರ್ಕಾರ ಇದ್ದಕ್ಕಿದ್ದಂತೆ ಯು ಟರ್ನ್ ತೆಗೆದುಕೊಂಡ್ಡಿದ್ದಲ್ಲದೆ ಗಣಿಗಾರಿಕೆ ನಡೆಸಲು ಕಂಪನಿಗೆ ಹಸಿರು ನಿಶಾನೆ ತೋರಿಸಿದೆ. ಜೊತೆಗೆ ಕಂಪನಿಯ ಅಕ್ರಮಗಳಿಗೂ ತನಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಇದ್ದುಬಿಟ್ಟಿದೆ. ಅಷ್ಟರ ಮಟ್ಟಿಗೆ ಕಂಪನಿ ಕೇಂದ್ರ ಉನ್ನತಾಧಿಕಾರ ಸಮಿತಿ ಮತ್ತು ರಾಜ್ಯ ಸರ್ಕಾರವನ್ನು ಮೋಡಿ ಮಾಡಿಬಿಟ್ಟಿದೆ. ವಿಶೇಷ ಎಂದರೆ ಸಿಬಿಐ ತನಿಖೆಗೂ ಕಂಪನಿ ನಿಲುಕದಂತೆ ಆಗಿದೆ.
ಅಂದಹಾಗೆ ಅಕ್ರಮಗಳ ಸರಮಾಲೆಯನ್ನೇ ಹೊದ್ದು ಗಣಿಗಾರಿಕೆ ನಡೆಸುತ್ತಿರುವ ಕಂಪನಿ ಯಾವುದು ಎಂದರೆ 'ರಾಮಗಡ ಮೈನ್ಸ್ ಅಂಡ್ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್‌'.
ನೇರವಾಗಿ ಕೇಂದ್ರಕ್ಕೆ ಅರ್ಜಿ: ಯಾವುದೇ ಕಂಪನಿ ಗಣಿಗಾರಿಕೆಗೆ ಮುಂದಾಗಬೇಕು ಎಂದರೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಮತ್ತು ಕೇಂದ್ರ ಪರಿಸರ, ಇಲಾಖೆ ಒಪ್ಪಿಗೆ ಪಡೆದುಕೊಳ್ಳಬೇಕು. ಆದರೆ, ಇಲ್ಲಿ ಕಂಪನಿ ರಾಜ್ಯ ಸರ್ಕಾರವನ್ನು ಟಚ್ ಮಾಡಲೇ ಇಲ್ಲ. ಸೀದಾ ಕೇಂದ್ರಕ್ಕೆ ಹೋಗಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಅರ್ಜಿ ಹಾಕಿಕೊಂಡಿತ್ತು.                     
ರಾಜ್ಯ ಸರ್ಕಾರದ ಒಪ್ಪಿಗೆ ಪತ್ರ ಎಲ್ಲಿ ಎಂದು ಕೇಂದ್ರ ಕೇಳಿದಾಗ ಕಂಪನಿ ಕೊಟ್ಟ ಉತ್ತರವೇನು ಗೊತ್ತೇ? ಕರ್ನಾಟಕ ಸರ್ಕಾರದಿಂದ ನಮಗೆ ಸಹಕಾರ ಸಿಗುತ್ತಿಲ್ಲ. ಹೀಗಾಗಿ ನೇರವಾಗಿ ಇಲ್ಲಿಗೇ ಬಂದಿದ್ದೇವೆ. ಒಪ್ಪಿಗೆ ಕೊಡಿ ಎಂಬುದು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯವನ್ನು ಒಂದು ಮಾತು ಕೇಳಬೇಕಿತ್ತು. ಆದರೆ ಕಂಪನಿಯ ಮೋಡಿಗೆ ಒಳಗಾಗಿದ್ದರಿಂದ ಕಣ್ಣುಮುಚ್ಚಿಕೊಂಡು ಪರವಾನಗಿ ಮಂಜೂರು ಮಾಡಿತು. ಈ ಮಧ್ಯೆ ಸಂಸದೀಯ ಸಮಿತಿ ಗಣಿ ಪ್ರದೇಶಗಳ ಪರಿಶೀಲನೆಗೆ ಬಂದಾಗ ರಾಜ್ಯ ಸರ್ಕಾರ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿತು. ರಾಮಗಡ ಕಂಪನಿ ನಮ್ಮಿಂದ ಪರವಾನಗಿ ಪಡೆಯದೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂದು ದೂರಿತು. ಅದರೆ, ಸರ್ಕಾರಕ್ಕೆ ಅದ್ಯಾವ ಮಂಕು ಬಡಿಯಿತೋ ಏನೋ ಇದ್ದಕ್ಕಿದ್ದಂತೆ ಕಂಪನಿ ಪರವಾಗಿಯೇ ವಕಾಲತ್ತು ವಹಿಸಿತು.
ಕಂಪನಿ ಪರ ವಕಾಲತ್ತು: ತನ್ನ ಆಕ್ಷೇಪಣೆ ತಿದ್ದುಪಡಿ ಮಾಡಿ ಪರವಾನಗಿಯನ್ನೂ ಮಂಜೂರು ಮಾಡಿತು. ಇದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಒಳಗೊಳಗೆ ನಡೆದಿದ್ದಾರೂ ಏನು? ಎಂಬ ಪ್ರಶ್ನೆಯೂ ಮೂಡಿದೆ. ಇನ್ನು ಕೇಂದ್ರ ಉನ್ನತಾಧಿಕಾರ ಸಮಿತಿ ಮತ್ತು ಸಿಬಿಐ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಕ್ರಮಗಳನ್ನು ಹೆಕ್ಕಿ ತೆಗೆಯುವ ಉಸಾಬರಿಗೆ ಮುಂದಾಗಲೂ ಇಲ್ಲ. ಅಷ್ಟೇ ಅಲ್ಲ, ರಾಮಗಡ ಮೈನಿಂಗ್ ಕಂಪನಿಯನ್ನು ಸಮಿತಿ ತನಿಖೆಯ ವ್ಯಾಪ್ತಿಯಿಂದಲೇ ಹೊರಗಿಟ್ಟಿದೆ. ಬಳ್ಳಾರಿಯಲ್ಲಿ ಗಣಿಗಾರಿಕೆ ಮೇಲೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಹೊಸದಾಗಿ ಪರವಾನಗಿ ಪಡೆಯಲು ಮತ್ತು ಹಳೆಯ ಪರವಾನಗಿ ನವೀಕರಿಸಲು ತನ್ನಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಆದೇಶ ನೀಡಿದೆ. ಆದರೆ, ರಾಜ್ಯ ಸರ್ಕಾರ ನ್ಯಾಯಾಲಯದ ಗಮನಕ್ಕೆ ತರದೇ 2012ರ ಅಕ್ಟೋಬರ್‌ನಲ್ಲಿ ಕಂಪನಿಗೆ ಪರವಾನಗಿ ಕೊಟ್ಟಿದೆ. ಆದೂ 2011ರಲ್ಲಿ ತಾನೇ ವ್ಯಕ್ತಪಡಿಸಿದ್ದ ಆಕ್ಷೇಪವನ್ನು ಮರೆತು. ಅಂದ ಹಾಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು 2010ರ ಸೆಪ್ಟೆಂಬರ್‌ನಲ್ಲಿ. ಒಪ್ಪಿಗೆ ಕೊಡುವಾಗ ಕೇಂದ್ರ ಕಂಪನಿಯ ಹೇಳಿಕೆ ನೆಚ್ಚಿಕೊಂಡಿತೇ ಹೊರತು ರಾಜ್ಯ ಸರ್ಕಾರದ ಆಕ್ಷೇಪವನ್ನಲ್ಲ ಎಂಬುದು ಗಮನಾರ್ಹ.
ಕಾಯ್ದೆ ಪ್ರಕಾರ ಸಾಧ್ಯವಿಲ್ಲ: ಗಣಿಗಾರಿಕೆ ನಡೆಸಲು ದಾಲ್ಮಿಯಾ ಸಿಮೆಂಟ್ ಕಂಪನಿ ಪಡೆದುಕೊಂಡಿದ್ದ ಪರವಾನಗಿಯನ್ನು ಅವಧಿ ಮುಗಿವ ಮೊದಲೇ ರಾಮಗಡ ಕಂಪನಿಗೆ ವರ್ಗಾಯಿಸಲು ಅರಣ್ಯ ಇಲಾಖೆ ಕಾಯ್ದೆ ಪ್ರಕಾರ ಸಾಧ್ಯವಿಲ್ಲ. ಆದರೆ, ಇಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸ್ವಯಂಪ್ರೇರಿತವಾಗಿ ಗಣಿ ಗುತ್ತಿಗೆ ವರ್ಗಾವಣೆ ಮಾಡಿದೆ. ಆದರೂ ದಾಲ್ಮಿಯಾ ಸಿಮೆಂಟ್ ಕಂಪನಿಗೆ ನಿಗದಿಯಾಗಿರುವ ಜಾಗದಲ್ಲಿ ರಾಮಗಡ ಮೈನಿಂಗ್ ಕಂಪನಿ ಗಣಿಗಾರಿಕೆ ನಡೆಸುವಂತಿಲ್ಲ.
ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ 2004ರ ಜುಲೈ 27ರ ರಾಜ್ಯ ಸರ್ಕಾರದ ಪತ್ರದ ಪ್ರಕಾರ ಗಣಿಗಾರಿಕೆ ನಡೆಸಲು ಎರಡನೇ ಹಂತದ ಅರಣ್ಯ ಇಲಾಖೆ ಪರವಾನಗಿಯನ್ನೇ ದಾಲ್ಮಿಯ ಸಿಮೆಂಟ್ ಕಂಪನಿ ಪಡೆದುಕೊಂಡಿರಲ್ಲಿಲ. ರಾಜ್ಯ ಸರ್ಕಾರವೂ ವಿವಾದಿತ ಜಾಗದಲ್ಲಿ ಅರಣ್ಯೇತರ ಚಟುವಟಿಕೆ ನಡೆಸಲು ಆ  ಕಂಪನಿಗೆ ಅನುಮತಿ ಕೊಟ್ಟಿಲ್ಲ. ಆದರೂ ಈ ಗುತ್ತಿಗೆ ನವೀಕರಣವಾಗಿದೆ.  
ಗಣಿ ಗುತ್ತಿಗೆ ವರ್ಗಾವಣೆ: ಈ ಪತ್ರದ ಪ್ರಕಾರ ದಾಲ್ಮಿಯ ಸಿಮೆಟ್ ಕಂಪನಿಗೂ ನಿಗದಿತ ಸ್ಥಳದಲ್ಲಿ ಗಣಿಗಾರಿಕೆ ನಡೆಸಲು 1986ರ ಪರವಾನಗಿ ನಿಯಮ ಪ್ರಕಾರ ಅವಕಾಶ ಇರುವುದಿಲ್ಲ. ಆದರೂ ದಾಲ್ಮಿಯ ಸಿಮೆಂಟ್ ಕಂಪನಿ ಪರವಾನಗಿಯನ್ನು ರಾಮಗಡ ಮೈನಿಂಗ್ ಕಂಪನಿಗೆ ವರ್ಗಾವಣೆ ಮಾಡಿದೆ. ಹೀಗಾಗಿ ನಿಯಮಗಳನ್ನು ನಾನಾ ಹಂತಗಳಲ್ಲಿ ಉಲ್ಲಂಘನೆ ಮಾಡಿ ದಾಲ್ಮಿಯ ಸಿಮೆಂಟ್ ಕಂಪನಿಯಿಂದ ರಾಮಗಡ ಮೈನಿಂಗ್ ಕಂಪನಿಗೆ ಗುತ್ತಿಗೆ ವರ್ಗಾವಣೆ ಮತ್ತು ಗಣಿಗಾರಿಕೆಗೆ ಅನುಮತಿ ಕೊಟ್ಟಿರುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕಂಪನಿ ಸ್ಪಷ್ಟನೆ
ವಿವಾದಿತ ಎಂದು ಹೇಳಿರುವ ಜಾಗದಲ್ಲಿ ನಮ್ಮ ಕಂಪನಿ ಗಣಿಗಾರಿಕೆ ನಡೆಸುತ್ತಿಲ್ಲ. ಗುತ್ತಿಗೆ ವರ್ಗಾವಣೆಗೆ ಸಂಬಂಧಿಸಿದ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಬಗ್ಗೆ ನ್ಯಾಯಾಲಯ ತೀರ್ಪು ನೀಡುವವರೆಗೆ ಗಣಿಗಾರಿಕೆ ನಡೆಸದಂತೆ ಕೇಂದ್ರ ಉನ್ನತಾಧಿಕಾರ ಸಮಿತಿ ಹೇಳಿದೆ. ಹೀಗಾಗಿ ಕ್ಲೀನ್‌ಚಿಟ್ ನೀಡುವ ಪ್ರಶ್ನೆಯೇ ಇಲ್ಲ. ಪರವಾನಗಿ ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡಿದ್ದರಿಂದ ಕೇಂದ್ರಕ್ಕೆ ನೇರವಾಗಿ ಆರ್ಜಿ ಸಲ್ಲಿಸಬೇಕಾಯಿತು. ಬಳಿಕ ರಾಜ್ಯ ಸರ್ಕಾರ ಕಾನೂನು ಪ್ರಕಾರ ನಡೆದುಕೊಂಡಿದೆಯೇ ಹೊರತು ಕಂಪನಿಗೆ ಯಾವುದೇ ರೀತಿಯಲ್ಲೂ ನೆರವಾಗಿಲ್ಲ ಎಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments