ಗಜಪಡೆ ತಂದ ಆತಂಕ
ಕೆಜಿಎಫ್: ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಗಡಿ ಭಾಗದ ಪ್ರದೇಶದಲ್ಲಿದ್ದ ಕಾಡಾನೆಗಳು ಇದೀಗ ಕೆಜಿಎಫ್ ಕ್ಷೇತ್ರದ ಬೇತಮಂಗಲ ಗ್ರಾಮೀಣ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ.
ಕಳೆದ ತಿಂಗಳ 28 ರಂದು ತಮಿಳುನಾಡಿನಿಂದ ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಗಡಿ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ವಲಸೆ ಬಂದಿದ್ದು, ಆನೆ ತುಳಿತಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿ, ಅನೇಕರು ಗಾಯಗೊಂಡಿದ್ದರು. ಈ ಆನೆಗಳು ಲಕ್ಷಾಂತರ ರುಪಾಯಿ ಮೌಲ್ಯದ ಬೆಳೆಗಳನ್ನು ನಾಶಪಡಿಸಿದ್ದು, ಇವುಗಳನ್ನು ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಅಟ್ಟಲು ಅರಣ್ಯ ಇಲಾಖೆ ಮಾಡಿದ ಪ್ರಯತ್ನ ವಿಫಲವಾಗಿವೆ. ಸುಮಾರು 20ಕ್ಕೂ ಹೆಚ್ಚು ಆನೆಗಳು ಕಾಮಸಮುದ್ರಂ ಗಡಿಭಾಗದಿಂದ ಮೇಲ್ ಮಾರಿಕುಪ್ಪಂ ಮಾರ್ಗವಾಗಿ ಲಕ್ಷ್ಮೀಸಾಗರ, ಬೈನಪಲ್ಲಿ, ಬಾಣಗೆರೆ, ತೊಂಗಲ್ ಬೀರನಕುಪ್ಪ ಕಡೆಯಿಂದ ಶನಿವಾರ ಬೆಳಗಿನ ಜಾವ 2ರಿಂದ 4ರವರೆಗೆ ಕ್ಯಾಸಂಬಳ್ಳದಿಂದ ಕಮ್ಮಸಂದ್ರ ಗ್ರಾಮದ ಹಾದಿ ಹಿಡಿದಿದ್ದು, ಬೇತಮಂಗಲ ಗ್ರಾಮದ ನೆಲ್ಲೂರು ಗ್ರಾಮದ ನೀಲಗಿರಿ ತೋಪಿನಲ್ಲಿ ಬಂದು ಸೇರಿವೆ.
ಇಬ್ಬರಿಗೆ ಗಾಯ: ನಲ್ಲೂರು ಗ್ರಾಮದ ನೀಲಗಿರಿ ತೋಪಿನಲ್ಲಿ ಕೃಷ್ಣಪ್ಪ ಎಂಬುವರ ಮೇಲೆ ದಾಳಿ ನಡೆಸಲು ಮುಂದಾದ ಆನೆಯಿಂದ ತಪ್ಪಿಸಿಕೊಳ್ಳಲು ಹೋಗಿ ಗಾಯಗೊಂಡರೆ, ಜಯವೇಲ್ ಎಂಬ ವ್ಯಕ್ತಿ ಅಂಗಲ ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆತನನ್ನು ತುಳಿಯಲು ಬಂದ ಆನೆಯಿಂದ ತಪ್ಪಿಸಿಕೊಳ್ಳುವಾಗ ಗಾಯಗೊಂಡಿದ್ದಾರೆ. ಇವರಿಬ್ಬರೂ ಸ್ಥಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆನೆ ಅಟ್ಟಲು ಹರಸಾಹಸ: ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಅಟ್ಟಲು ಪಟಾಕಿ, ಆಟಂಬಾಂಬ್ ಸಿಡಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದು ಸಫಲವಾಗಿಲ್ಲ. ಆನೆಗಳನ್ನು ನೋಡಲು ಮುಗಿಬಿದ್ದ ಜನರನ್ನು ನಿಯಂತ್ರಿಸುವಲ್ಲೇ ಸಿಬ್ಬಂದಿ ಸುಸ್ತಾಗುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.