ಜೇಬಿಗಿಳಿಯಿತು ರೈತರ ಸಾಲ ಮನ್ನಾ ಮೊತ್ತ
ಶೇ. 13.46 ಅರ್ಹ ಫಲಾನುಭವಿಗಳು ಯೋಜನೆಯಿಂದ ಅನರ್ಹ ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಂತರ ರು. ಲೂಟಿ.
ನವದೆಹಲಿ: ತರಂಗಾಂತರ ಹಂಚಿಕೆ, ಕಲ್ಲಿದ್ದಲು ಹಗರಣ ಆಯ್ತು. ಈಗ ರೈತರ ಸಾಲ ಮನ್ನಾ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ಹೊಸ ಬಾಂಬ್ ಸಿಡಿಸಿದೆ.
ಹೌದು. ಯುಪಿಎ-1ರ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ರೈತರ ಸಾಲ ಮನ್ನಾ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಸರ್ಕಾರಕ್ಕೆ ಸಲ್ಲಿಸಿದ ಕರಡು ವರದಿಯಲ್ಲಿ ಮಹಾಲೇಖಪಾಲ(ಸಿಎಜಿ)ರು ತಿಳಿಸಿದ್ದಾರೆ. ಈಗಾಗಲೇ ಯುಪಿಎ ಸರ್ಕಾರ ಸಾಲು ಸಾಲು ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಹೊಸದೊಂದು ಹಗರಣ ಅದನ್ನು ಸುತ್ತಿಕೊಂಡಿರುವುದು 2014ರ ಮಹಾ ಚುನಾವಣೆ ಸಿದ್ಧತೆಯಲ್ಲಿರುವ ಕಾಂಗ್ರೆಸ್‌ಗೆ ಇನ್ನಷ್ಟು ಮುಜುಗರ ಉಂಟುಮಾಡಲಿದೆ.
ಸಿಎಜಿ ವರದಿ ಪ್ರಕಾರ ಯೋಜನೆಯ ಶೇ.25ರಷ್ಟು ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಕ್ಕೇ ಇಲ್ಲ. ಈ ಸಂಬಂಧ ವಿತ್ತಸಚಿವ ಪಿ.ಚಿದಂಬರಂ ಅವರು ರಿಸರ್ವ್ ಬ್ಯಾಂಕ್ ಹಾಗೂ ನಬಾರ್ಡ್‌ಗೆ ಪತ್ರ ಬರೆದಿದ್ದು ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
2008ರಲ್ಲಿ ಘೋಷಣೆ...: ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದ ಕೋಟ್ಯಂತರ ರೈತರಿಗೆ ನೆರವು ನೀಡುವ ಉದ್ದೇಶದಿಂದ ಫೆ.2008ರಲ್ಲಿ ಯುಪಿಎ ಸರ್ಕಾರವು ಈ ಯೋಜನೆ ಘೋಷಿಸಿತ್ತು. ಯೋಜನೆಯಡಿ 3.5 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರ 52 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು.
ಈ ಯೋಜನೆಗೆ ಸಂಬಂಧಿಸಿ ಏಪ್ರಿಲ್ 2011ರಿಂದ ಮಾರ್ಚ್ 2012ರ ವರೆಗೆ ಒಟ್ಟು 25 ರಾಜ್ಯಗಳಲ್ಲಿ 90,576 ರೈತರ ಖಾತೆ, ದಾಖಲೆಗಳನ್ನು ಸಿಎಜಿ ಪರಿಶೀಲನೆ ನಡೆಸಿತ್ತು. ಈ ವೇಳೆ ಶೇ.25ರಷ್ಟಕ್ಕೂ ಹೆಚ್ಚು ಕಡೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.
ಪರಿಶೀಲನೆಯನ್ನೇ ನಡೆಸಿಲ್ಲ: ಯೋಜನೆಯಡಿ ವಾಣಿಜ್ಯ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಕೋ ಆಪರೇಟಿವ್ ಕ್ರೆಡಿಟ್ ಸಂಸ್ಥೆಗಳು ಹಾಗೂ ಸ್ಥಳೀಯ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲ ಮನ್ನಾ ಮಾಡಲಾಗಿತ್ತು. ಈ ವೇಳೆ ರೈತರ ದಾಖಲೆಗಳನ್ನು ಪರಿಶೀಲನೆ ನಡೆಸುವುದು ಆಯಾ ಬ್ಯಾಂಕ್‌ಗಳ ಜವಾಬ್ದಾರಿಯಾಗಿತ್ತು. ತಮಾಷೆಯೆಂದರೆ ಯೋಜನೆ ಜಾರಿಗೊಳಿಸಿದ ಬಳಿಕ ಸರ್ಕಾರ ಈ ಕುರಿತು ಪರಿಶೀಲನೆ ನಡೆಸುವ ಗೋಜಿಗೇ ಹೋಗಿಲ್ಲ. 5 ವರ್ಷಗಳಿಂದ ಅಡಿಟ್ ನಡೆಸುವ ಹಾಗೂ ಯೋಜನೆಯು ನೈಜ ಫಲಾನುಭವಿಗೆ ತಲುಪುತ್ತಿದೆಯೇ ಎನ್ನುವ ಪರಿಶೀಲನೆಯನ್ನೇ ನಡೆಸಿಲ್ಲ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.