ರಾಜಿನಾಮೆಗೆ ಪಂಚನಾಮೆ
20 ಶಾಸಕರು ತ್ಯಾಗಪತ್ರ ನೀಡಿದರೆ ಚುನಾವಣೆಗೆ ಬಿಜೆಪಿ ಇಂಗಿತ
ಕನ್ನಡಪ್ರಭ ವಾರ್ತೆ ಬೆಂಗಳೂರು ಜ.26
ರಾಜಿನಾಮೆ ನೀಡುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಬಲಿತ ಶಾಸಕರ ಸಂಖ್ಯೆ 20 ದಾಟಿದರೆ ವಿಧಾನಸಭೆ ವಿಸರ್ಜಿಸಿ ನೇರವಾಗಿ ಚುನಾವಣೆಯತ್ತ ಮುಖ ಮಾಡಲು ಬಿಜೆಪಿ ನಿರ್ಧರಿಸಿದೆ.
ಆದರೆ, ಆ ಪರಿಸ್ಥಿತಿ ಉದ್ಭವವಾಗದಂತೆ ಪಕ್ಷ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಒಂದು ವೇಳೆ ರಾಜಿನಾಮೆ ನೀಡುವವರ ಸಂಖ್ಯೆ 15 ದಾಟಿದರೆ ಪಕ್ಷೇತರರ ನೆರವು ಪಡೆದು ಸರ್ಕಾರ ಉಳಿಸಿಕೊಳ್ಳಲು ಕೂಡ ವೇದಿಕೆ ಸಿದ್ಧವಾಗಿದೆ.
ಹೀಗಾಗಿಯೇ ಸಿಎಂ ಶೆಟ್ಟರ್ ಸರ್ಕಾರಕ್ಕೆ ಬಹುಮತ ಇದೆ. ಫೆ.8ರಂದು ಬಜೆಟ್ ಮಂಡಿಸಿಯೇ ತೀರುತ್ತೇನೆ ಎಂದು ದೃಢವಾಗಿ ಹೇಳುತ್ತಿದ್ದಾರೆ. ಹೌದು, ಶುಕ್ರವಾರ ನಡೆದ ಬಿಜೆಪಿ ಸಭೆಯಲ್ಲಿ ಸರ್ಕಾರ ಉಳಿಸಿಕೊಳ್ಳುವ ಸಾಧ್ಯಾಸಾಧ್ಯತೆಗಳ ಬಗ್ಗೆ ಲೆಕ್ಕಾಚಾರ ಹಾಕಲಾಗಿದ್ದು, ರಾಜಿನಾಮೆ ನೀಡುವ ಶಾಸಕರ ಸಂಖ್ಯೆ 18 ಮೀರದಂತೆ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡುವ ಕುರಿತು ಕೆಲವು ಸದಸ್ಯರಿಂದ ಭರವಸೆ ಸಿಕ್ಕಿದೆಯಾದರೂ ಅದನ್ನು ನೆಚ್ಚಿಕೊಳ್ಳದೆ ವಿಧಾನಸಭೆ ವಿಸರ್ಜಿಸುವ ಬಗ್ಗೆಯೂ ತೀರ್ಮಾನಿಸಲಾಗಿದೆ.
ಪಕ್ಷೇತರರ ನೆರವು ಪಡೆಯಲು ನಿರ್ಧಾರ: ಪ್ರಸ್ತುತ 222 ಸದಸ್ಯಬಲ ಇರುವ ವಿಧಾನಸಭೆಯಲ್ಲಿ ಬಿಜೆಪಿ 118 ಸ್ಥಾನ ಹೊಂದಿದ್ದು, ಕೇವಲ ಪಕ್ಷದ ಶಾಸಕರನ್ನು ಮಾತ್ರ ನೆಚ್ಚಿಕೊಂಡು ಒಂದೊಮ್ಮೆ 15 ಶಾಸಕರು ರಾಜಿನಾಮೆ ನೀಡಿದರೆ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ.
ಆದರೆ, ರಾಜಿನಾಮೆ ನೀಡುವ ಶಾಸಕರ ಸಂಖ್ಯೆ 15 ದಾಟಲಿದೆ ಎಂಬುದು ಬಿಜೆಪಿಗೆ ಸ್ಪಷ್ಟವಾಗಿದೆ. ಈ ಕಾರಣಕ್ಕಾಗಿಯೇ ಪಕ್ಷೇತರ ಸದಸ್ಯರನ್ನು ನೆಚ್ಚಿಕೊಂಡಿದೆ. ಮೂಲಗಳ ಪ್ರಕಾರ ಸರ್ಕಾರ ವಿಶ್ವಾಸಮತ ಯಾಚಿಸುವ ಪರಿಸ್ಥಿತಿ ಬಂದರೆ ಶ್ರೀರಾಮುಲು ಅವರು ವಿಶ್ವಾಸಮತ ಯಾಚನೆ ಕಲಾಪದಿಂದ ದೂರ ಉಳಿಯಲಿದ್ದಾರೆ. ಇವರ ಜತೆಗೆ ನಾಲ್ವರು ಪಕ್ಷೇತರ ಸದಸ್ಯರೂ ಕಲಾಪದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.
ಇವರೆಲ್ಲರಿಗೂ ಬಿಜೆಪಿಗಿಂತ ಯಡಿಯೂರಪ್ಪ ಅವರೇ ಪ್ರಮುಖ ವಿರೋಧಿ. ಏಕೆಂದರೆ, ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರ ಉಳಿಸಿಕೊಳ್ಳಲು ಈ ನಾಲ್ವರು ಪಕ್ಷೇತರರನ್ನು ಅನರ್ಹಗೊಳಿಸಲು ಕಾರಣರಾಗಿದ್ದರು. ಈ ಸಿಟ್ಟು ಪಕ್ಷೇತರರಲ್ಲಿ ಇನ್ನೂ ಆರಿಲ್ಲ. ಹೀಗಾಗಿಯೇ ಯಡಿಯೂರಪ್ಪ ಅವರ ಕಾರಣದಿಂದ ಸರ್ಕಾರ ಉರುಳದಂತೆ ನೋಡಿಕೊಳ್ಳಲು ಅವರು ಮುಂದಾಗಿದ್ದಾರೆ.
ಜೆಡಿಸ್ ಸಹವಾಸ ಬೇಡ: ಶಾಸಕರ ರಾಜಿನಾಮೆಯಿಂದ ಸರ್ಕಾರ ಉರುಳುವ ಪರಿಸ್ಥಿತಿ ಬಂದರೆ ಜೆಡಿಎಸ್ ನೆರವು ಪಡೆಯುವ ಬಗ್ಗೆ ಆರಂಭದಲ್ಲಿ ಯೋಚನೆ ಮಾಡಲಾಗಿತ್ತಾದರೂ ನಂತರದಲ್ಲಿ ಇದನ್ನು ಕೈಬಿಡಲಾಗಿದೆ. ಏಕೆಂದರೆ, ಈ ಹಿಂದೆ ಜೆಡಿಎಸ್‌ಅನ್ನು ನಂಬಿ ಒಮ್ಮೆ ಕೈಸುಟ್ಟುಕೊಳ್ಳಲಾಗಿದೆ. ಆ ಪಕ್ಷ ಕೈಕೊಟ್ಟ ಕಾರಣದಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.
ಹೀಗಿರುವಾಗ ಮತ್ತೆ ಈ ಪಕ್ಷದ ನೆರವು ಪಡೆದರೆ ಸರ್ಕಾರ ಉಳಿಸಿಕೊಳ್ಳಬಹುದಾದರೂ ಮುಂದಿನ ದಿನಗಳಲ್ಲಿ ಅದು ಬಿಜೆಪಿಗೆ ಮುಳುವಾಗುತ್ತದೆ. ಏಕೆಂದರೆ, ಈ ವಿಚಾರವನ್ನೇ ಕಾಂಗ್ರೆಸ್ ಮತ್ತು ಕೆಜೆಪಿ ಚುನಾವಣಾ ಪ್ರಚಾರಕ್ಕೆ ಪ್ರಧಾನ ಅಸ್ತ್ರವಾಗಿ ಬಳಸಿಕೊಳ್ಳುತ್ತದೆ. ಅದು ಪಕ್ಷಕ್ಕೆ ಮುಳುವಾಗಬಹುದು ಎಂಬುದು ಬಿಜೆಪಿಯ ಆತಂಕ.
ಇನ್ನೊಂದೆಡೆ ಕಾಂಗ್ರೆಸ್‌ನ ಕೆಲವು ಸದಸ್ಯರು ಕೂಡ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ತಾವು ಹೊರಗುಳಿಯುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಈ ಭರವಸೆಯನ್ನು ನೆಚ್ಚಿಕೊಳ್ಳುವುದು ಬೇಡ. ಯಾವುದೇ ಅಪಾಯವನ್ನು ಎಳೆದುಕೊಳ್ಳದೆ ಸಮಸ್ಯೆ ಬಗೆಹರಿಸಲು ಬಿಜೆಪಿ ಮುಂದಾಗಿದೆ. ಈ ಕಾರಣಕ್ಕಾಗಿಯೇ 20ಕ್ಕಿಂತ ಹೆಚ್ಚು ಶಾಸಕರು ರಾಜಿನಾಮೆ ನೀಡಿದರೆ ವಿಧಾನಸಭೆ ವಿಸರ್ಜಿಸಲು ತೀರ್ಮಾನಿಸಲಾಗಿದೆ.
ಏನಿದು ಲೆಕ್ಕಾಚಾರ?
ವಿಧಾನಸಭೆ ಬಲಾಬಲ 222 ಇದ್ದು, ಬಿಜೆಪಿಯ ಈಗಿನ ಬಲಾಬಲ- 1181 ಇದೆ. ಬಿಜೆಪಿಯ 15 ಶಾಸಕರು ರಾಜಿನಾಮೆ ನೀಡಿದರೆ ಬಲಾಬಲ 207ಕ್ಕೆ ಕುಸಿಯುತ್ತದೆ. ಬಿಜೆಪಿ ಬಲ- 1031 ಇದ್ದು ಅಲ್ಲಿಗೆ ಸರ್ಕಾರ ಬಹುಮತ ಹೊಂದಿದಂತಾಗುತ್ತದೆ.
18 ಶಾಸಕರು ರಾಜಿನಾಮೆ ನೀಡಿದರೆ ವಿಧಾನಸಭೆ ಬಲ 204ಕ್ಕೆ ಕುಸಿಯುತ್ತದೆ. ಬಿಜೆಪಿ ಬಲ 1001 ಇರುತ್ತದೆ. ಆಗ ಬಿಜೆಪಿ ಬಹುಮತ ಕಳೆದುಕೊಳ್ಳುತ್ತದೆ.
ಬಲ 204 ಆದಾಗ 5 ಪಕ್ಷೇತರರು ಹೊರಗುಳಿದರೆ ವಿಶ್ವಾಸಮತ ಯಾಚನೆ ವೇಳೆ ಸದನದಲ್ಲಿರುವ ಸದಸ್ಯ ಬಲ 199ಕ್ಕೆ ಕುಸಿಯುತ್ತದೆ. ಬಿಜೆಪಿ 1001 ಸದಸ್ಯರ ಬೆಂಬಲ ಇರುವುದರಿಂದ ಮುಖ್ಯಮಂತ್ರಿಗಳು ಬಹುಮತ ಸಾಬೀತುಪಡಿಸಿದಂತಾಗುತ್ತದೆ.
-ಪ್ರದೀಪ್ ಕುಮಾರ್ ಎಂ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.