ವಿಘ್ನರೂಪಂ
ಬೆಂಗಳೂರು/ಭದ್ರಾವತಿ/ಮೈಸೂರು/ಚೆನ್ನೈ: ನಟ ಕಮಲ್ಹಾಸನ್ ಅವರ 'ವಿಶ್ವರೂಪಂ' ಸಿನಿಮಾ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಅಡ್ಡಿ ಉಂಟಾಗಿದೆ. ಬೆಂಗಳೂರಿನಲ್ಲಿ ಲಾಲ್ಭಾಗ್ ಸಮೀಪದ ಊರ್ವಶಿ ಚಿತ್ರಮಂದಿರದ ಬಳಿ ಗಲಾಟೆ ಉಂಟಾಗಿದೆ. ಚಿತ್ರಪ್ರದರ್ಶನ ವೇಳೆ ಕೆಲವರು ಕಲ್ಲುತೂರಾಟ ನಡೆಸಿದರು. ಇದೇ ವೇಳೆ ಭದ್ರಾವತಿಯಲ್ಲಿ ಶನಿವಾರದ ಬೆಳಗ್ಗಿನ ಪ್ರದರ್ಶನಕ್ಕೆ ಟಿಕೆಟ್ ನೀಡುತ್ತಿದ್ದಾಗ 2 ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಮೈಸೂರಿನಲ್ಲಿ ಬಾಲಾಜಿ ಚಿತ್ರಮಂದಿರಲ್ಲಿ ಗಾಜು ಧ್ವಂಸಗೊಳಿಸಿ ಸ್ಕ್ರೀನ್ಗೆ ಹಾನಿ ಮಾಡಲಾಗಿದೆ. ಮಲೇಷ್ಯಾದಲ್ಲೂ 'ವಿಶ್ವರೂಪಂ'ಗೆ ನಿಷೇಧ ಹೇರಲಾಗಿದೆ.
ಭದ್ರಾವತಿಯಲ್ಲಿ ಘರ್ಷಣೆ: ಭದ್ರಾವತಿಯ ವಾಗೀಶ್ ಚಿತ್ರಮಂದಿರದಲ್ಲಿ ಶನಿವಾರ ಬೆಳಗಿನ ಪ್ರದರ್ಶನಕ್ಕೆ ಟಿಕೆಟ್ ನೀಡಲಾಗುತ್ತಿತ್ತು. ಈ ವೇಳೆ ಆಗಮಿಸಿದ ಒಂದು ಗುಂಪು ಚಿತ್ರಪ್ರದರ್ಶನಕ್ಕೆ ಅಡ್ಡಿಪಡಿಸಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮತ್ತೊಂದು ಗುಂಪು 'ನಾವು ಟಿಕೆಟ್ ಪಡೆದಿದ್ದೇವೆ. ಅದಕ್ಕಾಗಿ ಚಿತ್ರಪ್ರದರ್ಶನ ಮಾಡಲೇಬೇಕು' ಎಂದು ಒತ್ತಾಯಿಸಿತು. ವಾಗ್ವಾದದಿಂದ ಕಂಗಾಲಾದ ಚಿತ್ರಮಂದಿರದ ವ್ಯವಸ್ಥಾಪಕರು ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ವಾಗ್ವಾದ ಗುಂಪು ಘರ್ಷಣೆ ರೂಪ ಪಡೆದಿದ್ದರಿಂದ ಮಧ್ಯಾಹ್ನದವರೆಗೂ ಪರಿಸ್ಥಿತಿ ಹತೋಟಿಗೆ ಬಾರದ ಕಾರಣ ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಅಂಗಡಿಗೆ ಬೆಂಕಿ: ಚನ್ನಗಿರಿ ರಸ್ತೆಯಲ್ಲಿ ಚಪ್ಪಲಿ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಎಸ್ಪಿ ಕೌಶಲೇಂದ್ರ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಮುಂಜಾಗ್ರತಾ ಕ್ರಮವಾಗಿ ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮೈಸೂರಿನಲ್ಲಿ ಸ್ಕ್ರೀನ್ಗೆ ಹಾನಿ: ಮೈಸೂರಿನ ಬನ್ನಿಮಂಟಪದ ಬಾಲಾಜಿ ಚಿತ್ರಮಂದಿರದಲ್ಲಿ ಶುಕ್ರವಾರ ರಾತ್ರಿ 10 ಗಂಟೆ ಪ್ರದರ್ಶನ ವೇಳೆ ಟಾಕೀಸ್ ಒಳಗಡೆ ನುಗ್ಗಿದ ದುಷ್ಕರ್ಮಿಗಳು ಸ್ಕ್ರೀನ್ಗೆ ಹಾನಿ ಮಾಡಿದರು. ಪೊಲೀಸರ ಸೂಚನೆ ಹಿನ್ನೆಲೆಯಲ್ಲಿ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ.
ಕಲ್ಲು ತೂರಾಟ,
ಬೆಂಗಳೂರು: ಕಮಲ್ಹಾಸನ್ ನಿರ್ದೇಶಿಸಿ, ನಟಿಸಿರುವ ವಿಶ್ವರೂಪಂ ಚಿತ್ರ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿ ಶನಿವಾರವೂ ಅಡ್ಡಿ ಉಂಟಾಯಿತು. ಸೋಮವಾರದವರೆಗೆ ಪ್ರದರ್ಶನ ತಡೆಹಿಡಿಯುವಂತೆ ನಗರ ಪೊಲೀಸರು ಪ್ರದರ್ಶಕರಿಗೆ ಮನವಿ ಮಾಡಿದ್ದಾರೆ. ಶನಿವಾರ ಮಧ್ಯಾಹ್ನ ಲಾಲ್ಬಾಗ್ ಸಮೀಪದ ಊರ್ವಶಿ ಚಿತ್ರಮಂದಿರದ ಬಳಿ ಗಲಾಟೆ ಸಂಭವಿಸಿದ್ದು, ಚಿತ್ರಪ್ರದರ್ಶನಕ್ಕೆ ಅಡ್ಡಿಪಡಿಸಿದ ಕೆಲವರು ಕಲ್ಲು ತೂರಿದರು. ಚಿತ್ರ ಮಂದಿರದೊಳಗೆ ನುಗ್ಗಿ ದಾಂಧಲೆ ಮಾಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ, ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿದ್ದವರನ್ನು ಚದುರಿಸಿದರು.
ಮಲೇಷ್ಯಾದಲ್ಲೂ ನಿಷೇಧ
ಕೌಲಾಲಂಪುರ: ನಟ ಕಮಲ್ಹಾಸನ್ ಅವರ ವಿಶ್ವರೂಪಂ ಚಿತ್ರವನ್ನು ಮಲೇಷ್ಯಾದಲ್ಲೂ ನಿಷೇಧಿಸಲಾಗಿದೆ. ಮಲೇಷ್ಯಾದಲ್ಲೂ ಶುಕ್ರವಾರ ಈ ಚಿತ್ರ ಬಿಡುಗಡೆಯಾಗಿತ್ತು. ಆದರೆ ಶನಿವಾರ ಅಲ್ಲಿನ ಗೃಹ ಇಲಾಖೆ ನಿರ್ದೇಶನದ ಹಿನ್ನೆಲೆಯಲ್ಲಿ ಚಿತ್ರದ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ ಎಂದು ವಿತರಕರು ಹೇಳಿದ್ದಾರೆ.
ಚಿತ್ರ ವೀಕ್ಷಿಸಿದ ನ್ಯಾಯಮೂರ್ತಿ
ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಕೆ. ವೆಂಕಟರಾಮನ್ ಶನಿವಾರ ವಿಶ್ವರೂಪಂ ಚಿತ್ರವನ್ನು ವೀಕ್ಷಿಸಿದ್ದಾರೆ. ಗುರುವಾರ ಚಿತ್ರ ವೀಕ್ಷಿಸಿ ಆದೇಶ ನೀಡುವುದಾಗಿ ಹೇಳಿದ್ದ ನ್ಯಾಯಮೂರ್ತಿಗಳು, ಅದರಂತೆ ಶನಿವಾರ ಚಿತ್ರ ನೋಡಿದ್ದಾರೆ. ಸೋಮವಾರ ಈ ಸಂಬಂಧ ತೀರ್ಪು ನೀಡಲಿದ್ದಾರೆ. ಇದೇ ವೇಳೆ ಆಂಧ್ರ ಪ್ರದೇಶದಲ್ಲಿ ಶನಿವಾರದಿಂದ ಚಿತ್ರ ಪ್ರದರ್ಶನವಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.