ಆಡಿಸಿ ನೋಡು... ಬೀಳಿಸಿ ನೋಡು... ಉರುಳಿಹೋಗದು
ರಾಜಿನಾಮೆ ನೀಡುವ ಶಾಸಕರ ಸಂಖ್ಯೆ 14 ದಾಟುವ ಸಾಧ್ಯತೆ ಇಲ್ಲ. ಹೀಗಾಗಿ ಶೆಟ್ಟರ್ ಸರ್ಕಾರ ಭದ್ರವಾಗಿ ಇರಲಿದೆ. ಸದ್ಯ ಪದತ್ಯಾಗಕ್ಕೆ...
ಕನ್ನಡಪ್ರಭ ವಾರ್ತೆ ಬೆಂಗಳೂರು ಜ. 27
ಏನೇ ಆಗಲಿ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿರುತ್ತದೆ..!
ಈಗಿನ ಲೆಕ್ಕಾಚಾರಗಳ ಪ್ರಕಾರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲಿರುವ ಯಡಿಯೂರಪ್ಪ ಬೆಂಬಲಿಗ ಶಾಸಕರ ಸಂಖ್ಯೆ 14 ದಾಟುವ ಸಾಧ್ಯತೆ ಇಲ್ಲ. ಹೀಗಾಗಿ ಶಾಸಕರ ರಾಜಿನಾಮೆ ಅಂಗೀಕಾರವಾದರೂ ಬಹುಮತಕ್ಕೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಬೆಂಬಲಿಗ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಯಡಿಯೂರಪ್ಪ ಮತ್ತು ಬೆಂಬಲಿಗರು ಸತತ ಪ್ರಯತ್ನ ನಡೆಸುತ್ತಿದ್ದು, ಈ ಕಾರಣಕ್ಕಾಗಿಯೇ ರಾಜಿನಾಮೆ ನೀಡುವುದನ್ನು ಮಂಗಳವಾರಕ್ಕೆ ಮುಂದೂಡಿದ್ದಾರೆ ಎನ್ನಲಾಗಿದೆ.
ಜ.23ರಂದು ಒಟ್ಟು 13 ಶಾಸಕರು ರಾಜಿನಾಮೆ ಪತ್ರದೊಂದಿಗೆ ಸ್ಪೀಕರ್ ಕಚೇರಿಗೆ ಬಂದಿದ್ದು, ಮಾರನೇ ದಿನ ಸುನೀಲ್ ವಲ್ಯಾಪುರೆ ಅವರು ಜ.28ರಂದು ಸ್ಪೀಕರ್ಗೆ ರಾಜಿನಾಮೆ ಸಲ್ಲಿಸುವುದಾಗಿ ಹೇಳಿದ್ದರಿಂದ ಈ ಸಂಖ್ಯೆ 14ಕ್ಕೆ ಮುಟ್ಟಿತ್ತು. ಆದರೆ, ಬಿಜೆಪಿ ಮೂಲಗಳ ಪ್ರಕಾರ ಈ ಪೈಕಿ ಒಂದಿಬ್ಬರು ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.
ಆತಂಕ ತಂದ ರೇಣುಕಾಚಾರ್ಯ ನಿರ್ಧಾರ: ಸಚಿವ ಸ್ಥಾನ ಸಿಕ್ಕಿದ ಮೇಲೆ ಯಡಿಯೂರಪ್ಪ ಅವರ ಪರಮಾಪ್ತ ವಲಯದಲ್ಲೇ ಇದ್ದ ಅಬಕಾರಿ ಸಚಿವ ರೇಣುಕಾಚಾರ್ಯ ಅವರು ತಾವು ಯಾವುದೇ ಕಾರಣಕ್ಕೂ ರಾಜಿನಾಮೆ ನೀಡುವುದಿಲ್ಲ ಎಂದು ಹೇಳಿರುವುದು ಯಡಿಯೂರಪ್ಪ ಬೆಂಬಲಿಗ ಶಾಸಕರಲ್ಲಿ ಅತಂಕ ಉಂಟುಮಾಡಿದೆ.
ರೇಣುಕಾಚಾರ್ಯ ಅಂಥವರೇ ರಾಜಿನಾಮೆಯಿಂದ ಹಿಂದೆ ಸರಿದಿರುವಾಗ ಇದರ ಹಿಂದೆ ಬೇರೆ ಏನೋ ವಿಚಾರ ಇದೆ. ಹೀಗಾಗಿ ತಾವು ರಾಜಿನಾಮೆ ನೀಡಿದರೆ ಮುಂದೆ ಅಪಾಯ ಎದುರಾಗಬಹುದೇ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಇದು ಕೂಡ ಯಡಿಯೂರಪ್ಪ ಅವರ ಬಣದ ಶಕ್ತಿ ಹೆಚ್ಚದಿರಲು ಕಾರಣವಾಗಿದೆ.
ಉತ್ತರ ಕರ್ನಾಟಕಕ್ಕೆ ಅನ್ಯಾಯ: ಈ ಹಿಂದೆ ಉತ್ತರ ಕರ್ನಾಟಕ ಭಾಗದವರಾಗಿದ್ದ ವೀರೇಂದ್ರ ಪಾಟೀಲ್ ಮತ್ತು ಎಸ್.ಆರ್. ಬೊಮ್ಮಾಯಿ ಅವರನ್ನು ಸಕಾರಣವಿಲ್ಲದೆ ಅಧಿಕಾರದಿಂದ ಇಳಿಸಲಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಈ ಭಾಗದಲ್ಲಿ ಜನಬೆಂಬಲ ಕಡಿಮೆಯಾಗಲು ಈ ಅಂಶವೂ ಕಾರಣವಾಗಿತ್ತು. ಇದೀಗ ಶೆಟ್ಟರ್ ಅವರನ್ನೂ ಅಧಿಕಾರದಿಂದ ಇಳಿಸಿದರೆ ಅದಕ್ಕೆ ಕಾರಣರಾದವರ ವಿರುದ್ಧ ಉತ್ತರ ಕರ್ನಾಟಕದ ಜನತೆ ತಿರುಗಿಬೀಳಲಿದ್ದಾರೆ ಎಂಬ ಆತಂಕವೂ ಕೆಲ ಶಾಸಕರನ್ನು ಕಾಡುತ್ತಿದೆ.
ಈ ಕಾರಣದಿಂದಲೇ ಆರಂಭದಿಂದಲೂ ಯಡಿಯೂರಪ್ಪ ಅವರ ಜತೆಗಿದ್ದು, ಮುಖ್ಯಮಂತ್ರಿ ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ರಾಜಿನಾಮೆ ನಾಟಕವಾಡಿದ್ದ ಕೆಲ ಸಚಿವರು ಸರ್ಕಾರ ಉರುಳಿಸುವ ಯಡಿಯೂರಪ್ಪ ಅವರ ಪ್ರಯತ್ನಕ್ಕೆ ಕೈಜೋಡಿಸದಿರುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇನ್ನೊಂಡೆದೆ ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯ ಜಗದೀಶ್ ಶೆಟ್ಟರ್ ಅವರ ಪರವಾಗಿ ನಿಂತಿದೆ.
ಪರಿಸ್ಥಿತಿ ಹೀಗಿರುವಾಗ ಜಗದೀಶ್ ಶೆಟ್ಟರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅಪಾಯ ಮೈಮೇಲೆ ಎಳೆದುಕೊಳ್ಳುವ ಸ್ಥಿತಿಯಲ್ಲಿ ಬಹುತೇಕ ಶಾಸಕರು ಇಲ್ಲ.
ರಾಜ್ಯಪಾಲ ಭಾಷಣ: ಇನ್ನೊಂದೆಡೆ ಸರ್ಕಾರ ಬಹುಮತ ಕಳೆದುಕೊಂಡರೂ ಜಂಟಿ ಅಧಿವೇಶನವನ್ನುದ್ದೇಶಿಸಿ ನಾನು ಭಾಷಣ ಮಾಡುತ್ತೇನೆ. ನಂತರವೇ ಬಹುಮತ ಸಾಬೀತಿಗೆ ಸೂಚಿಸುತ್ತೇನೆ ಎಂದು ರಾಜ್ಯಪಾಲರು ಹೇಳಿರುವುದು ಕೂಡ ಯಡಿಯೂರಪ್ಪ ಅವರ ಬಣಕ್ಕೆ ಹಿನ್ನಡೆಯಾದಂತಾಗಿದೆ.
ರಾಜ್ಯಪಾಲರು ಮಾಡುವ ಭಾಷಣ ಸರ್ಕಾರದ ಭಾಷಣವಾಗಿದ್ದು, ಸಾಮಾನ್ಯವಾಗಿ ಸರ್ಕಾರದ ಮುಂದಿನ ವರ್ಷದ ಕಾರ್ಯಕ್ರಮಗಳ ಬಗ್ಗೆ ಇದರಲ್ಲಿ ಪ್ರಸ್ತಾಪವಿರುತ್ತದೆ. ನಂತರ ಅದನ್ನು ಬಜೆಟ್ನಲ್ಲಿ ಪ್ರಕಟಿಸಲಾಗುತ್ತದೆ. ಹೀಗಿರುವಾಗ ಸರ್ಕಾರ ಉರುಳಿದರೆ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಿದ ಅಂಶಗಳನ್ನು ಜಾರಿಗೊಳಿಸಲು ನಮಗೆ ಅವಕಾಶ ಸಿಗಲಿಲ್ಲ ಎಂದು ಬಿಜೆಪಿ ಹೇಳಿಕೊಂಡರೆ ಅದು ಕೆಜೆಪಿಗೆ ಮುಳುವಾಗಬಹುದು ಎಂಬ ಭೀತಿಯೂ ಕಾಡುತ್ತಿದೆ.
ಈ ಎಲ್ಲಾ ಕಾರಣಗಳಿಂದ ರಾಜಿನಾಮೆ ನೀಡುವ ಶಾಸಕರ ಸಂಖ್ಯೆ ಸರ್ಕಾರ ಉರುಳುವಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯವಿಲ್ಲ. ಸರ್ಕಾರ ಉರುಳಿಸಲು ಈ ಹಿಂದೆ ನಡೆಸಿದ ಎರಡು ಪ್ರಯತ್ನಗಳಂತೆ ಈ ಬಾರಿಯ ಪ್ರಯತ್ನವೂ ವಿಫಲವಾಗಲಿದೆ ಎಂದು ಹೇಳಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.