ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಏಟು ತಿರುಗೇಟು

ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಬಲಿತ ಶಾಸಕರು ಮಂಗಳವಾರ ವಿಧಾನಸಭೆ...

Parashurama
Updated On : 29 Jan 2013, 10:38 am

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜ.28
ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಬಲಿತ  ಶಾಸಕರು ಮಂಗಳವಾರ ವಿಧಾನಸಭೆ ಅಧ್ಯಕ್ಷರಿಗೆ ನೇರವಾಗಿ ರಾಜಿನಾಮೆ ನೀಡಲಿದ್ದು, ಸರ್ಕಾರದ ಪಾಲಿಗೆ ಇದು ನಿರ್ಣಾಯಕ ದಿನವಾಗಿದೆ.
ಈ ಮಧ್ಯೆ ರಾಜಿನಾಮೆ ನೀಡಲು ಮುಂದಾಗಿರುವ 12 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅನರ್ಹಗೊಳಿಸುವಂತೆ ಶಾಸಕರಾದ ಬೇಳೂರು ಗೋಪಾಲಕೃಷ್ಣ ಮತ್ತು ಎಂ.ವಿ. ನಾಗರಾಜ್ ವಿಧಾನಸಭೆ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ. ಇದರೊಂದಿಗೆ ಶಾಸಕರ ರಾಜಿನಾಮೆ ವಿಚಾರ ಕುತೂಹಲಕಾರಿ ಹಂತ ತಲುಪಿದ್ದು, ರಾಜಿನಾಮೆ ಅಂಗೀಕರಿಸದೆ ತಡೆಹಿಡಿಯಲು ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಗೆ ಹೊಸ ಅಸ್ತ್ರವೊಂದು ಸಿಕ್ಕಿದಂತಾಗಿದೆ. ಆದರೆ, ಸ್ಪೀಕರ್ ಈ ಅವಕಾಶ ಬಳಸಿಕೊಳ್ಳದೆ ರಾಜಿನಾಮೆ ಅಂಗೀಕರಿಸಲಿದ್ದಾರೆ ಎನ್ನಲಾಗಿದೆ.
ಆದರೆ, ಮೂಲಗಳ ಪ್ರಕಾರ ಯಡಿಯೂರಪ್ಪ ಬೆಂಬಲಿಗ ಶಾಸಕರು ರಾಜಿನಾಮೆ ನೀಡಿದರೂ ಸರ್ಕಾರಕ್ಕೆ ಯಾವುದೇ ಅಪಾಯ ಉಂಟಾಗುವುದಿಲ್ಲ. ತಮ್ಮ ರಾಜಿನಾಮೆಯಿಂದ ಸರ್ಕಾರ ಉರುಳುತ್ತದೆ ಎಂಬ ವಿಶ್ವಾಸ ಯಡಿಯೂರಪ್ಪ ಅವರ ಬೆಂಬಲಿಗರಿಗೂ ಇಲ್ಲ.
ಯಾರಿಗೆ ಗೆಲುವು, ಯಾರಿಗೆ ಸೋಲು?: ಜ.23ರಂದು 13 ಶಾಸಕರು ರಾಜಿನಾಮೆ ನೀಡಲು ವಿಧಾನಸೌಧಕ್ಕೆ ಆಗಮಿಸಿದ್ದರಾದರೂ ಸ್ಪೀಕರ್ ಇಲ್ಲದ ಕಾರಣ ವಾಪಸಾಗಿದ್ದರು. ಇವರೊಂದಿಗೆ ತಾವು ಕೂಡ ರಾಜಿನಾಮೆ ನೀಡುವುದಾಗಿ ಮಾಜಿ ಸಚಿವರೂ ಆಗಿರುವ ಸುನೀಲ್ ವಲ್ಯಾಪುರೆ ಅವರು ಹೇಳಿದ್ದರಿಂದ ರಾಜಿನಾಮೆ ನೀಡುವ ಶಾಸಕರ ಸಂಖ್ಯೆ 14ಕ್ಕೆ ತಲುಪಿತ್ತು.
ಆದರೆ, ರಾಜಿನಾಮೆ ನೀಡಲು ಮುಂದಾಗಿರುವ 12 ಶಾಸಕರನ್ನು ಅನರ್ಹಗೊಳಿಸುವಂತೆ ವಿಧಾನಸಭೆ ಕಾರ್ಯದರ್ಶಿಗಳಿಗೆ ನೀಡಿರುವ ದೂರಿನಲ್ಲಿ 14 ಮಂದಿಯ ಪೈಕಿ ಚಳ್ಳಕೆರೆ ಶಾಸಕ ತಿಪ್ಪೇಸ್ವಾಮಿ ಮತ್ತು ನಾಗಠಾಣಾ ಶಾಸಕ ವಿಠಲ ಕಟಕದೊಂಡ ಅವರ ಹೆಸರನ್ನು ದೂರುದಾರರು ಕೈಬಿಟ್ಟಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.      
ಅಲ್ಲದೆ, ಈ ಇಬ್ಬರು ಶಾಸಕರು ಮಂಗಳವಾರ ರಾಜಿನಾಮೆ ನೀಡುವ ಬಗ್ಗೆ ಅನುಮಾನವೂ ಸೃಷ್ಟಿಯಾಗಿದೆ. ಹಾಗೇನಾದರೂ ಆದರೆ ರಾಜಿನಾಮೆ ನೀಡುವವರ ಸಂಖ್ಯೆ 12ಕ್ಕೆ ಕುಸಿಯಲಿದ್ದು, ಸರ್ಕಾರಕ್ಕೆ ಯಾವುದೇ ಅಪಾಯ ಎದುರಾಗುವುದಿಲ್ಲ. ಈ ಮಧ್ಯೆ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಅನುಸರಿಸಿದ ತಂತ್ರಗಳು ಕೂಡ ಯಶಸ್ವಿಯಾಗಿವೆ. ಶ್ರೀರಾಮುಲು ಸೇರಿದಂತೆ ಐವರು ಪಕ್ಷೇತರ ಶಾಸಕರು ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡಲು ಒಪ್ಪಿದ್ದಾರೆ. ಹೀಗಾಗಿ ಬಿಜೆಪಿ- ಕೆಜೆಪಿ ನಡುವಿನ ಸಮರದಲ್ಲಿ ಗೆಲುವು ಯಾರಿಗೆ, ಸೋಲು ಯಾರಿಗೆ ಎಂಬುದು ಮಂಗಳವಾರ ನಿರ್ಧಾರವಾಗಲಿದೆ.
ಗಮನಿಸುತ್ತಿರುವ ರಾಜ್ಯಪಾಲರು: ಶಾಸಕರ ರಾಜಿನಾಮೆ ಪ್ರಕರಣವನ್ನು ರಾಜ್ಯಪಾಲ ಭಾರದ್ವಾಜ್ ಗಂಭೀರವಾಗಿ ಗಮನಿಸುತ್ತಿದ್ದಾರೆ. 14 ಶಾಸಕರು ರಾಜಿನಾಮೆ ನೀಡಿದರೆ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಸರ್ಕಾರ ಬಹುಮತ ಹೊಂದಿರುತ್ತದೆ ಎಂದು ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅದಕ್ಕಿಂತ ಹೆಚ್ಚು ಸಂಖ್ಯೆಯ ಶಾಸಕರು ರಾಜಿನಾಮೆ ನೀಡಿ ಅದನ್ನು ಸ್ಪೀಕರ್ ಅಂಗೀಕರಿಸಿದರೆ ಮಧ್ಯೆ ಪ್ರವೇಶಿಸಲು ಸಿದ್ಧರಾಗಿದ್ದಾರೆ.
ಕುತೂಹಲಕಾರಿ ಬೆಳವಣಿಗೆ: ಕೆಜೆಪಿಗೆ ಸೇರಲಿರುವ ಶಾಸಕರು ರಾಜಿನಾಮೆ ನೀಡಲು ಮುಂದಾಗುತ್ತಿದ್ದಂತೆ ಈ ಪೈಕಿ 12 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಶಾಸಕರಾದ ಬೇಳೂರು ಗೋಪಾಲಕೃಷ್ಣ ಮತ್ತು ಎಂ.ವಿ. ನಾಗರಾಜ್ ವಿಧಾನಸಭೆ ಕಾರ್ಯದರ್ಶಿಗಳಿಗೆ ದೂರು ನೀಡಿರುವುದು ಕುತೂಹಲ ಕೆರಳಿಸಿದೆ. ಈ 12 ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಪಕ್ಷದಲ್ಲಿದ್ದುಕೊಂಡೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ಹಾವೇರಿಯಲ್ಲಿ ನಡೆದ ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಪಕ್ಷ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ವಿರುದ್ಧ ಕಠಿಣ ಪದಗಳನ್ನು ಬಳಸಿ ಟೀಕೆ ಮಾಡಿದ್ದಾರೆ. ಜತೆಗೆ ಯಡಿಯೂರಪ್ಪ ಅವರ ಕೆಜೆಪಿ ಪಕ್ಷಕ್ಕೆ ನಿಷ್ಠೆ ತೋರಿಸಿ ಆ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಜತೆಗೆ ತಾವು ಕೆಜೆಪಿ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡು ಆ ಪಕ್ಷದ ಜತೆ ಗುರುತಿಸಿಕೊಂಡಿರುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಉದಾಸಿ ನಿವಾಸದಲ್ಲಿ ಸಭೆ : ಸರ್ಕಾರಕ್ಕೆ ರಾಜಿನಾಮೆ ನೀಡಲಿರುವ ಕೆಲವು ಶಾಸಕರು ಸೋಮವಾರ ಬೆಳಗ್ಗೆ ಮಾಜಿ ಸಚಿವ ಸಿ.ಎಂ. ಉದಾಸಿ ಅವರ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments