ಗ್ಯಾಂಗ್‌ರೇಪ್ ಪ್ರಕರಣ 6ನೇ ಆರೋಪಿ ಬಾಲಕ
ಅತ್ಯಾಚಾರ ನಡೆದ ದಿನ ಆತನಿಗಾಗಿದ್ದು 17 ವರ್ಷ, 6 ತಿಂಗಳು
ನವದೆಹಲಿ: ದೆಹಲಿಯಲ್ಲಿ ಕಳೆದ ಡಿ.16ರಂದು 23 ವರ್ಷದ ಯುವತಿಯ ಮೇಲೆ ನಡೆದ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ 6ನೇ ಆರೋಪಿ ಬಾಲಕ ಎಂದು ಬಾಲನ್ಯಾಯ ಮಂಡಳಿ ಸೋಮವಾರ ತೀರ್ಪು ನೀಡಿದೆ. ಬಾಲ ಆರೋಪಿಯ ನಿಜವಾದ ವಯಸ್ಸನ್ನು ತಿಳಿಯಲು ಮೂಳೆ ಪರೀಕ್ಷೆ ನಡೆಸಬೇಕು ಎಂದು ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಬಾಲ ನ್ಯಾಯಮಂಡಳಿ ತಿರಸ್ಕರಿಸಿದೆ.
ಬಾಲ ಆರೋಪಿಗೆ 17 ವರ್ಷ: ಬಾಲಕನ ಶಾಲಾ ಸರ್ಟಿಫಿಕೇಟ್‌ನ ವಿಶ್ವಾಸಾರ್ಹತೆ ಬಗ್ಗೆ ಯಾವುದೇ ಅನುಮಾನವಿಲ್ಲ. ಹಾಗಾಗಿ ಗ್ಯಾಂಗ್‌ರೇಪ್ ನಡೆದ ದಿನ ಡಿ.16ರಂದು ಆರೋಪಿ ಬಾಲಕನಿಗೆ 17 ವರ್ಷ 6 ತಿಂಗಳು 11 ದಿನಗಳಾಗಿತ್ತು ಎಂದು ಮಂಡಳಿ ಹೇಳಿದೆ. ಶಾಲಾ ಸರ್ಟಿಫಿಕೇಟ್ ಸರಿಯಾಗಿರುವ ಕಾರಣ ಮೂಳೆ ಪರೀಕ್ಷೆಯ ಅಗತ್ಯ ಬೀಳುವುದಿಲ್ಲ ಎಂದೂ ಮಂಡಳಿ ಹೇಳಿದೆ.
ಮೇಲ್ಮನವಿಗೆ ನಿರ್ಧಾರ: ನ್ಯಾಯ ಮಂಡಳಿ ತೀರ್ಪಿನ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ದೆಹಲಿ ಪೊಲೀಸರು ಮುಂದಾಗಿದ್ದಾರೆ. ಈ ತೀರ್ಪು ಸಮಾಧಾನ ತಂದಿಲ್ಲ ಎಂದು ದೆಹಲಿ ಪೊಲೀಸ್ ಇಲಾಖೆ ಹೇಳಿಕೊಂಡಿದೆ.
ಗರಿಷ್ಠ 3 ವರ್ಷ ಶಿಕ್ಷೆ
ಆರೋಪಿಯು ಬಾಲಕ ಎಂಬುದು ಸಾಬೀತಾಗಿರುವ ಕಾರಣ ಆತನನ್ನು ಬಾಲನ್ಯಾಯ ಕಾಯ್ದೆಯ ಅನ್ವಯವೇ ವಿಚಾರಣೆ ನಡೆಸಲಾಗುತ್ತದೆ. ಅಲ್ಲದೆ, ಆತನಿಗೆ ಗರಿಷ್ಠ 3 ವರ್ಷ ಶಿಕ್ಷೆಯಾಗಬಹುದು ಎಂದೂ ಬಾಲ ನ್ಯಾಯ ಮಂಡಳಿ ಹೇಳಿದೆ. ಬಾಲನ್ಯಾಯ ಕಾಯ್ದೆಯ ಪ್ರಕಾರ, ಬಾಲ ಆರೋಪಿಯನ್ನು ಆತನಿಗೆ 18 ವರ್ಷ ತುಂಬುವವರೆಗೆ ಮಾತ್ರ ಸ್ಪೆಷಲ್ ಹೋಂನಲ್ಲಿ ಇರಿಸಬಹುದು. ನಂತರ ಆತನನ್ನು ಜೈಲಿಗೆ ಕಳುಹಿಸುವಂತಿಲ್ಲ. ಹಾಗಾಗಿ ದೆಹಲಿ ಗ್ಯಾಂಗ್‌ರೇಪ್ ಪ್ರಕರಣದ ಬಾಲ ಆರೋಪಿಗೆ ಜೂನ್ 4ರಂದು 18 ವರ್ಷ ತುಂಬುತ್ತದೆ. ಆಗ ಕಾನೂನಿನ ಅನ್ವಯ ಆತನನ್ನು ಬಿಡುಗಡೆಗೊಳಿಸುವ ಅವಕಾಶವಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.