ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಮ್ಮ ಗೋಳು ಕೇಳೋರೇ ಇಲ್ಲ

Parashurama
Updated On : 29 Jan 2013, 12:08 pm

ಬೆಂಗಳೂರು : 'ಇಂದು ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಅನ್ಯಾಯ ಆಗುತ್ತೆ ಎಂದರೆ ಇಡೀ ಪ್ರಪಂಚವೇ ಅವರ ಪರವಾಗಿ ನಿಲ್ಲುತ್ತೆ. ಆದ್ರೆ ಗಂಡುಮಕ್ಕಳಿಗೆ ಆಗೋ ಅನ್ಯಾಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದಿಲ್ಲವೇಕೆ ?'.
-ಇದು ನಟ ದುನಿಯಾ ವಿಜಯ್ ಪ್ರಶ್ನೆ.
'ನನ್ನ ತಂದೆ-ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಸರಳವಾಗಿ ಹೇಳಿ ವಿಚ್ಛೇದನ ಕೇಳಿ, ನನ್ನ ಹೆಂಡತಿ (ಹಾಗಂತ ಕರೆಯಲು ನನಗೆ ಮನಸ್ಸಿಲ್ಲ, ಆದರೂ ಕೂಡ ) ಮತ್ತು ಆಕೆಯ ಸಂಬಂಧಿಕರ ಹುಳುಕುಗಳನ್ನು ಎಲ್ಲರ ಮುಂದೆ ಹೇಳದೆ ಮುಚ್ಚಿಟ್ಟಿದ್ದಕ್ಕೆ ಇಂದು ನಾನು ಎಲ್ಲರಿಗೂ ಅಪರಾಧಿಯಂತೆ ಕಾಣಿಸುತ್ತಿದ್ದೇನೆ. ಆದರೆ, ನನ್ನ ಪತ್ನಿ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದರಿಂದ ನಾನು ಈಗ ಎಲ್ಲ ವಿಷಯಗಳನ್ನೂ ಬಹಿರಂಗಪಡಿಸಬೇಕೆಂದು ನಿರ್ಧರಿಸುತ್ತಿದ್ದೇನೆ' ಎನ್ನುತ್ತಾರೆ ವಿಜಯ್.
ತಮ್ಮ ತಂದೆ-ತಾಯಿ, ಅಕ್ಕ ಎಲ್ಲರ ಮೇಲೂ ಪತ್ನಿ ನಾಗರತ್ನ ತೋರಿಸುತ್ತಿದ್ದ ಅಸಹಕಾರ ಮತ್ತು ಮಾಡಿದ ಅವಮಾನಗಳ ಬಗ್ಗೆ ಮತ್ತು ಅದರ ಹಿಂದಿರುವ ಕಾರಣಗಳನ್ನು ವಿಜಯ್ ಶೀಘ್ರದಲ್ಲೇ ಬಹಿರಂಗಪಡಿಸಲಿದ್ದಾರಂತೆ.
ಕಷ್ಟದಲ್ಲಿರುವವರಿಗೆ ವಿಜಯ್ ಕೈಲಾದ ಸಹಾಯ ಮಾಡಿದ್ದುಂಟು. ಆದರೆ ಈ ಮಾನವೀಯತೆಯ ವಿಷಯದಲ್ಲಿ ನಾಗರತ್ನರ ಸಂಬಂಧಿಕರ ವಿಷಯದಲ್ಲೂ ವಿಜಿ ನಿಷ್ಠುರವಾಗಿ ನಡೆದುಕೊಂಡಿದ್ದೇ ಮನೆಯಲ್ಲಿ ಕುಟುಂಬದ ವಿರುದ್ಧ ಪತ್ನಿ ತಿರುಗಿಬೀಳಲು ಕಾರಣವಾಗಿದೆ.               
ಇದಕ್ಕೆ  ವಿಜಯ್ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತಾರೆ. ಮತ್ತು ಇತ್ತೀಚಿನ ದಿನಗಳಲ್ಲಿ ಪತ್ನಿ ನಾಗರತ್ನ ತಮ್ಮ ಮೇಲೆ ಮಾಡಿರುವ ಆಪಾದನೆಗಳಲ್ಲಿ ಹುರುಳಿಲ್ಲ ಎಂಬುದನ್ನು ನಿರೂಪಿಸಲೂ ಕೂಡ ದಾಖಲೆಗಳನ್ನು ತೋರಿಸುತ್ತಾರೆ.

ಪತ್ನಿ ನಾಗರತ್ನ ವರ್ತನೆಗೆ ವಿಜಯ್ ಕೊಡುವ ಕಾರಣಗಳು
ನಾಗರತ್ನ ಅವರ ಸೋದರ ಆನಂದಕುಮಾರ್ ಎಂಬುವರು ರಮ್ಯಾ (ಹೆಸರು ಬದಲಿಸಲಾಗಿದೆ) ಎಂಬ ಹುಡುಗಿಯನ್ನು ಪ್ರೀತಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು. ಅದರೆ, ಆಕೆಯನ್ನು ಮದುವೆಯಾಗಲು ನಿರಾಕರಿಸಿದಾಗ ಅವರಿಬ್ಬರ ಮದುವೆ ಮಾಡಿಸಲು ಪ್ರಯತ್ನಿಸಿದರು ಎಂಬುದು ನಾಗರತ್ನ ಮತ್ತು ಸಂಬಂಧಿಕರಿಗೆ ವಿಜಯ್ ಮೇಲಿರುವ ಕೋಪ. ಆ ಮದುವೆಯನ್ನು ತಡೆದು ನಿಲ್ಲಿಸಿದ್ದರ ಬಗ್ಗೆ ನಾಗರತ್ನ ಮತ್ತವರ ಸಂಬಂಧಿಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಗರತ್ನ ಅವರ ಸೋದರಿ ರಾಧ ಅವರ ಗಂಡ ಕೃಷ್ಣಪ್ಪರ ಸೋದರ ನಾಗರಾಜು, ಜಯಂತಿ (ಹೆಸರು ಬದಲಿಸಲಾಗಿದೆ) ಎಂಬಾಕೆಯೊಂದಿಗೆ ಸಂಬಂಧ ಹೊಂದಿದ್ದರು. ಆಕೆಗೆ ತಾಯಿಭಾಗ್ಯವನ್ನೂ ಕರುಣಿಸಿದ್ದರು. ಈ ವಿಚಾರದಲ್ಲಿ ಜಗಳವಾಗಿ ಆಕೆ ನಾಗರಾಜ್‌ರ ಎರಡನೇ ಪತ್ನಿ ಎಂದು ಅಫಿಡವಿಟ್ ಕೂಡ ಮಾಡಿಸಲಾಗಿದೆ. ಈ ವಿಷಯದಲ್ಲೂ ಜಯಂತಿಗೆ ಸಹಾಯ ಮಾಡಿರುವುದು ವಿಜಯ್ ಬಗೆಗಿರುವ ಇನ್ನೊಂದು ಅಸಮಾಧಾನ.
ಸದ್ಯಕ್ಕೆ ರಮ್ಯಾ ಮತ್ತು ಜಯಂತಿ  ವಿಜಯ್ ಅವರ ಅಕ್ಕನ ಮನೆಯಲ್ಲಿ ಆಶ್ರಯ  ಪಡೆದಿದ್ದಾರೆ.

 ಈ ಎರಡೂ ವಿಷಯಗಳನ್ನು ಉಲ್ಲೇಖಿಸಿ ವಿಜಯ್ ಕೇಳುವುದಿಷ್ಟು
ನಾನು ಸೆಲೆಬ್ರೆಟಿ ಆದ ಕಾರಣಕ್ಕೆ ನಾಗರತ್ನ ಪರ ಎಲ್ಲರೂ ಕನಿಕರ ತೋರಿಸುತ್ತಿದ್ದಾರೆ. ನನ್ನ ವಿಷಯ ಬಿಟ್ಟುಬಿಡಿ. ಆದರೆ ಈ ಎರಡು ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿ. ನಾಗರತ್ನನಿಗೆ ಆದರೆ ಅದು ಅನ್ಯಾಯ. ಈ ಎರಡು ಹೆಣ್ಣುಮಕ್ಕಳಿಗೆ ಆಗಿರುವ ಅನ್ಯಾಯ ಅನ್ಯಾಯವಲ್ಲವೇ ?

ನಾಗರತ್ನ ಹೇಳಿಕೆ ಬಗ್ಗೆ ವಿಜಯ್ ಸ್ಪಷ್ಟೀಕರಣ
ಟಿವಿ ಚಾನೆಲ್‌ನಲ್ಲಿ ಕುಳಿತು ನನಗೆ ಅಪ್ಪ ಏನೂ ಕೊಡಿಸೊಲ್ಲ, ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮಗಳ ಬಾಯಲ್ಲಿ ಹೇಳಿಸುತ್ತಾಳೆ ನನ್ನ ಹೆಂಡತಿ. ಇದೇ ಸಂಕ್ರಾಂತಿ ಹಬ್ಬಕ್ಕೆ ಮುನ್ನ ಇದೇ ಮಗಳು ಮಾಲ್ ಒಂದರಲ್ಲಿ ಶಾಪಿಂಗ್ ಮಾಡಿದ್ದು, ನಾನು ಬಿಲ್ ಕೊಟ್ಟಿದ್ದೂ ಎಲ್ಲವೂ ದಾಖಲಾಗಿರುವ ಸಿಸಿಟಿವಿ ವಿಡಿಯೋ ನನ್ನ ಬಳಿ ಇದೆ. ನನ್ನನ್ನು ಗೃಹ ಬಂಧನದಲ್ಲಿಟ್ಟಿದ್ದಾರೆ ಎಂದು ಹೇಳುವ ನಾಗರತ್ನ ಗೋವಾಗೆ ಹೋದಾಗ ಖರೀದಿ ಮಾಡಿರುವ ವಿಮಾನ ಪ್ರಯಾಣದ ಟಿಕೇಟ್‌ಗಳು ನನ್ನ ಬಳಿ ಇವೆ. ನನಗೆ ಒಡವೆ ಮಾಡಿಸಿಕೊಟ್ಟಿಲ್ಲ ಎಂದು ಟಿವಿ ಚಾನೆಲ್‌ಗಳಲ್ಲಿ ನಾಗರತ್ನ ಹೇಳಿಕೊಂಡಿದ್ದಾರೆ. ನನಗೆ ಆದಾಯ ತೆರಿಗೆ ಸಮಸ್ಯೆ ಆದರೂ ಪರವಾಗಿಲ್ಲ, ಅವಳ ಹೆಸರಲ್ಲಿ ಎಷ್ಟು ಒಡವೆ ಇದೆ ಅನ್ನೋದನ್ನು ತೋರಿಸುತ್ತೇನೆ. ಕಳೆದ ಒಂದೆರಡು ವರ್ಷಗಳಲ್ಲಿ ನಾಗರತ್ನ ಭಾಗವಹಿಸಿದ ಕೌಟುಂಬಿಕ ಸಮಾರಂಭಗಳಲ್ಲಿ ಅವಳು ಧರಿಸಿರುವ ಒಡವೆಗಳನ್ನು ತೋರಿಸುವ ಪೋಟೋಗಳು ನನ್ನ ಬಳಿ ಇವೆ. ಆಕೆಯ ಬ್ಯಾಂಕ್ ಅಕೌಂಟ್‌ನಲ್ಲಿ ಎಷ್ಟು ಕ್ಯಾಷ್ ಇಟ್ಟಿದ್ದೇನೆ ಎಂಬುದನ್ನು ಚೆಕ್ ಮಾಡಲಿ. ನನ್ನ ಮನೆ ಕೂಡಾ ಅವರ ಹೆಸರಲ್ಲೇ ಇದೆ. ನಾನು ಆಕೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಿದ್ದೇನೆ. ವಿಚ್ಛೇದನ ಕೊಡುವ ಮನಸ್ಸಿದ್ದಿದ್ದರೆ ನಾಲ್ಕನೇ ತರಗತಿ ವರೆಗೆ ಓದಿರುವ ಆಕೆಗೆ ಒಬ್ಬ ಟೀಚರ್ ಇಟ್ಟು ವಿದ್ಯೆ ಕಲಿಸಲು ಪ್ರಯತ್ನಪಡುತ್ತಿದ್ದೆನೆ?
ಮಕ್ಕಳಿಗಾಗಿ ನಾನು ಏನೂ ಮಾಡಿಲ್ಲ ಎಂದು ಹೇಳುವ ಇವರಿಗೆ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅವರ ಹೆಸರಿನಲ್ಲಿ ಮಾಡಿಸಿರುವ ಎಲ್‌ಐಸಿ ಪಾಲಿಸಿಗಳು, ಭೀಮಾ ಜ್ಯುಯೆಲ್ಲರೀಸ್‌ನಲ್ಲಿ ಒಡವೆ ಖರೀದಿಸಿದ ಬಿಲ್‌ಗಳನ್ನು  ತೋರಿಸುತ್ತೇನೆ.  ನನ್ನ ತಾಯಿ-ತಂದೆಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತ್ತಿದ್ದೇನೆ ಎಂದು ಹೇಳಿಕೆ ನೀಡಿರುವ ನಾಗರತ್ನ, ನನ್ನ ತಾಯಿಯನ್ನು ವೇಶ್ಯೆ ಎಂದು ಕರೆದು ಪೊರಕೆಯಲ್ಲಿ ಹೊಡೆದಿದ್ದಾಳೆ. ನಾನು ಇಲ್ಲದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯಿಂದ ಹೊರಗೆ ತಳ್ಳಿದ್ದಾಳೆ. ಈ ಬಗ್ಗೆ, ನನ್ನ ಅಪ್ಪ- ಅಮ್ಮ ಚೆನ್ನಮ್ಮನಕೆರೆ ಪೊಲೀಸ್ ಠಾಣೆಯಲ್ಲಿ ಸೊಸೆ ವಿರುದ್ಧ ದೂರು ದಾಖಲಿಸಿದ್ದಾರೆ.

-ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments