ನಿರ್ಣಾಯಕ ದಿನ
ತಮಿಳುನಾಡಿಗೆ 6 ಟಿಎಂಸಿ ನೀರು ಹರಿಸಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಸುಪ್ರೀಂ ಕೋರ್ಟ್ ಕರ್ನಾಟಕವನ್ನು....
ನವದೆಹಲಿ: ತಮಿಳುನಾಡಿಗೆ 6 ಟಿಎಂಸಿ ನೀರು ಹರಿಸಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಸುಪ್ರೀಂ ಕೋರ್ಟ್ ಕರ್ನಾಟಕವನ್ನು ತುದಿಗಾಲಲ್ಲಿ ಆತಂಕದಿಂದ ನಿಲ್ಲುವಂತೆ ಮಾಡಿದೆ.
ಕಳೆದ 20 ವರ್ಷಗಳಲ್ಲಿ ಕರ್ನಾಟಕ ಕುಡಿಯಲು ಬಳಸಿರುವ ನೀರಿನ ವರ್ಷವಾರು ಪ್ರಮಾಣದ ವಿವರವನ್ನು ಸಲ್ಲಿಸುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ. ಮಂಗಳವಾರ ಕರ್ನಾಟಕದ ಪಾಲಿಗೆ ನಿರ್ಣಾಯಕ ದಿನ.
12 ಟಿಎಂಸಿ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಎಂ. ಲೋಧಾ ಮತ್ತು ನ್ಯಾಯಮೂರ್ತಿ ಚೆಲಮೇಶ್ವರ್ ಅವರಿದ್ದ ನ್ಯಾಯಪೀಠ, ಉಭಯ ರಾಜ್ಯಗಳಿಗೆ ಸಮಾನವಾಗಿ ನೀರು ಹಂಚಿಕೆ ಮಾಡುವ ಸೂತ್ರದ ಪ್ರಸ್ತಾಪ ಮಾಡಿ ಕರ್ನಾಟಕವನ್ನು ಆತಂಕಕ್ಕೆ ದೂಡಿದೆ.
ಒಂದು ವೇಳೆ ಸಮಾನ ಸೂತ್ರಕ್ಕೆ ನ್ಯಾಯಪೀಠ ಕಟ್ಟುಬಿದ್ದರೆ ಕರ್ನಾಟಕ ತನ್ನಲ್ಲಿರುವ ನೀರನ್ನು ತಮಿಳುನಾಡಿನೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಕುಡಿಯುವ ನೀರಿನ ಪೂರೈಕೆ ಅತಿಮುಖ್ಯ ಎಂಬ ಅಂಶವನ್ನು ಒತ್ತಿ ಹೇಳಿರುವ ನ್ಯಾಯಪೀಠವು ಉಭಯ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕ ತೀವ್ರ ವಿರೋಧ: ಸೋಮವಾರ ತಮಿಳುನಾಡು ಪರ ವಕೀಲ ವೈದ್ಯನಾಥನ್ ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ 12 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠದ ಮುಂದೆ ಮನವಿ ಮಾಡಿದರು.
ತಮಿಳುನಾಡು ಮನವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕರ್ನಾಟಕಪರ ವಕೀಲ ಫಾಲಿ ನಾರಿಮನ್ ಅವರು, 'ಕರ್ನಾಟಕದಲ್ಲಿ ಕಾವೇರಿ ಕಣಿವೆಯಲ್ಲಿರುವ ನಾಲ್ಕು ಜಲಾಶಯಗಳಲ್ಲಿರುವ ನೀರಿನ ಪ್ರಮಾಣ ಕೇವಲ 14 ಟಿಎಂಸಿ ಮಾತ್ರ. ಆದರೆ, ಕರ್ನಾಟಕದ ಕುಡಿಯುವ ನೀರಿನ ಅಗತ್ಯ ಮೇ ಅಂತ್ಯದವರೆಗೆ 23 ಟಿಎಂಸಿ. ಅದನ್ನು ಕಾವೇರಿ ನಿಗಾ ಸಮಿತಿಯೇ ಸ್ಪಷ್ಟ ಪಡಿಸಿದೆ. ಹೀಗಾಗಿ ನಾವು ನೀರುವ ಬಿಡುವ ಪರಿಸ್ಥಿತಿಯಲ್ಲಿ ಇಲ್ಲ' ಎಂದು ಸ್ಪಷ್ಟಪಡಿಸಿದರು.
ತ.ನಾಡು ಹಠ: ಈ ಹಂತದಲ್ಲಿ ತಮಿಳುನಾಡು ಪರ ವಕೀಲ, ಕರ್ನಾಟಕದ ಕುಡಿಯುವ ನೀರಿನ ಪ್ರಮಾಣದ ಬಗ್ಗೆ ಸಿಎಂಸಿ ತಪ್ಪು ಮಾಹಿತಿ ನೀಡಿದೆ. ಕರ್ನಾಟಕದ ಕುಡಿಯುವ ನೀರಿನ ಅಗತ್ಯ 18 ಟಿಎಂಸಿ ಮಾತ್ರ. ಸಂಕಷ್ಟ ಕಾಲದಲ್ಲಿ ಈ ಪ್ರಮಾಣವನ್ನು 7.5 ಟಿಎಂಸಿಗೆ ನಿಗದಿ ಮಾಡಲಾಗಿದೆ. ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪಿನಲ್ಲಿ 8 ಟಿಎಂಸಿ ನಿಗದಿ ಮಾಡಲಾಗಿದೆ. ಹೀಗಾಗಿ ಕರ್ನಾಟಕ ತನ್ನಲ್ಲಿರುವ ನೀರನ್ನು ಹರಿಸುವಂತೆ ನಿರ್ದೇಶನ ನೀಡಬೇಕು ಎಂದು ವಾದಿಸಿದರು. ಕರ್ನಾಟಕದ ಕುಡಿಯುವ ನೀರಿನ ಅಗತ್ಯದ ಪ್ರಮಾಣದ ಬಗ್ಗೆ ಫಾಲಿ ನಾರಿಮನ್ ನ್ಯಾಯಪೀಠಕ್ಕೆ ವಿವರಿಸಿದರು. ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಸಂಕಷ್ಟ ಎರಡೂ ರಾಜ್ಯಗಳಿಗೆ ಇರುವುದರಿಂದ ಉಭಯ ರಾಜ್ಯಗಳಿಗೆ ಇರುವ ನೀರನ್ನು ಹಂಚಿಕೆ ಮಾಡಬೇಕಿದೆ. ನೀವು (ಕರ್ನಾಟಕ) 6 ಟಿಎಂಸಿ ನೀರು ಹರಿಸಲು ಸಾಧ್ಯವೇ? ಎಂದು ನ್ಯಾಯಪೀಠ ಪ್ರಶ್ನಿಸಿತು.
ರಾಜ್ಯದ ಆಕ್ಷೇಪ: ಇದಕ್ಕೆ ಆಕ್ಷೇಪಿಸಿದ ಫಾಲಿ ನಾರಿಮನ್ ಅವರು ಕರ್ನಾಟಕ ಈಗಾಗಲೇ ತಮಿಳುನಾಡಿಗೆ ಸಾಕಷ್ಟು ನೀರು ಹರಿಸಿದೆ. ನಮ್ಮ ಸಂಗ್ರಹದಲ್ಲಿರುವ ನೀರಿನ ಪ್ರಮಾಣ ಕುಡಿಯುವ ಅಗತ್ಯವನ್ನು ಪೂರೈಸಲು ಸಾಕಾಗುವುದಿಲ್ಲ. ನಾವು ನೀರು ಬಿಡುವ ಸ್ಥಿತಿಯಲ್ಲಿ ಇಲ್ಲ. ಈ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯಿರಿ. ಇಲ್ಲವೇ ಕಾವೇರಿ ನಿಗಾ ಸಮಿತಿಗೆ ಈ ಜವಾಬ್ದಾರಿಯನ್ನು ವಹಿಸಿ, ತಮಿಳುನಾಡು ನಿಗಾ ಸಮಿತಿ ಆದೇಶ ಒಪ್ಪದಿದ್ದರೆ, ಕಾವೇರಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲಿ ಎಂದರು.
ಇದಕ್ಕೆ ಒಪ್ಪದ ನ್ಯಾಯಪೀಠ ಇಲ್ಲಿಂದ ಮತ್ತೆ ನಿಗಾ ಸಮಿತಿ, ಕಾವೇರಿ ಪ್ರಾಧಿಕಾರಕ್ಕೆ ಹೋಗಿ ಮತ್ತೆ ಇಲ್ಲಿಗೆ ಬರುತ್ತೀರಿ, ಅದರಿಂದ ಸಮಯವ್ಯರ್ಥ ಎಂದು ತಿಳಿಸಿತು.
20 ವರ್ಷದ ಮಾಹಿತಿ ಕೊಡಿ
ಕರ್ನಾಟಕ ಕಳೆದ 20 ವರ್ಷದಲ್ಲಿ ಕುಡಿಯುವ ನೀರಿಗೆ ಎಷ್ಟು ನೀರು ಬಳಕೆ ಮಾಡಿಕೊಂಡಿದೆ ಎಂಬ ವಿವರ ಸಲ್ಲಿಸಲು ಸೂಚಿಸಿ ಕೋರ್ಟ್ ವಿಚಾರಣೆಯನ್ನು ಮಂಗಳವಾರಕ್ಕೆ ಮಂದೂಡಿತು. ವಿಚಾರಣೆ ಆರಂಭವಾಗುವುದರೊಳಗೆ ಕರ್ನಾಟಕ 20 ವರ್ಷಗಳಲ್ಲಿ ಕುಡಿಯಲು ಬಳಸಿದ ನೀರಿನ ಪ್ರಮಾಣದ ಬಗ್ಗೆ ವಿವರ ನೀಡಬೇಕಿದೆ. ಈ ವಿವರ ಆಧರಿಸಿ ನ್ಯಾಯಪೀಠ ಆದೇಶ ನೀಡಲಿದೆ. ಕಾವೇರಿ ನಿಗಾ ಸಮಿತಿ ಕುಡಿಯುವ ನೀರಿನ ಪ್ರಮಾಣ ಮೇ ಅಂತ್ಯದವರೆಗೆ 23 ಟಿಎಂಸಿ ಎಂದು ತಿಳಿಸಿದೆ. ಇದುವೇ ಕರ್ನಾಟಕದ ಪಾಲಿಗೆ ಶ್ರೀರಕ್ಷೆ. ಕಳೆದ 2 ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದುಪ್ಪಟ್ಟಾಗಿದೆ. ಕುಡಿಯುವ ನೀರಿನ ಪ್ರಮಾಣವೂ ಹೆಚ್ಚಿದೆ. ಆದರೆ, ಬೆಂಗಳೂರಿನ ಎಲ್ಲಾ ಭಾಗಕ್ಕೂ ಕಾವೇರಿ ನೀರು ಸರಬರಾಜಾಗುತ್ತಿಲ್ಲ. ಈ ಎಲ್ಲಾ ಅಂಶಗಳನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಬೇಕಿದೆ.
-ರೇಣುಕಾಪ್ರಸಾದ್ ಹಾಡ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.