ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಟ ಇನ್ನೂ ಇದೆ

ರಾಜಿನಾಮೆ ಪ್ರಕರಣದ ಮೊದಲ ಹಂತಕ್ಕೆ ತೆರೆ ಬೀಳುತ್ತಿದ್ದಂತೆ ಇನ್ನೊಂದು ಸುತ್ತಿನಲ್ಲಿ ಶಾಸಕರಿಂದ ರಾಜಿನಾಮೆ ಕೊಡಿಸಿ ಸರ್ಕಾರ ಉರುಳಿಸುವ ತಂತ್ರಕ್ಕೆ ಕೆಜೆಪಿ ಕೈಹಾಕಿದೆ.

Parashurama
Updated On : 31 Jan 2013, 1:37 am

ಕನ್ನಡಪ್ರಭ ವಾರ್ತೆ ಬೆಂಗಳೂರು ಜ.30
ಕೆಜೆಪಿ ಬೆಂಬಲಿತ ಬಿಜೆಪಿ ಶಾಸಕರ ರಾಜಿನಾಮೆಯ ಎರಡನೇ ಆಟ ಶೀಘ್ರದಲ್ಲೇ ಆರಂಭವಾಗಲಿದೆ.
ರಾಜಿನಾಮೆ ಪ್ರಕರಣದ ಮೊದಲ ಹಂತಕ್ಕೆ ತೆರೆ ಬೀಳುತ್ತಿದ್ದಂತೆ ಇನ್ನೊಂದು ಸುತ್ತಿನಲ್ಲಿ ಶಾಸಕರಿಂದ ರಾಜಿನಾಮೆ ಕೊಡಿಸಿ ಸರ್ಕಾರ ಉರುಳಿಸುವ ತಂತ್ರಕ್ಕೆ ಕೆಜೆಪಿ ಕೈಹಾಕಿದೆ.
ಇನ್ನೊಂದೆಡೆ, ಶಾಸಕರು ರಾಜಿನಾಮೆ ನೀಡದಂತೆ ತಡೆದು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ ನಿರತವಾಗಿದ್ದು, ಬಹುಮತವೆಂಬ ಹಗ್ಗದ ಮೇಲಿನ ನಡಿಗೆಯೊಂದಿಗೆ ಬಜೆಟ್ ಮಂಡಿಸಲು  ಜಗದೀಶ್ ಶೆಟ್ಟರ್  ಸಿದ್ಧತೆ ಅಂತಿಮಗೊಳಿಸುತ್ತಿದ್ದಾರೆ. ಇನ್ನೊಂದೆಡೆ, ಸರ್ಕಾರ ಬಹುಮತ ಕಳೆದುಕೊಳ್ಳುವ ಪರಿಸ್ಥಿತಿ ಬಂದರೆ ವಿಧಾನಸಭೆ ವಿಸರ್ಜಿಸುವ ಬಗ್ಗೆಯೂ ನಿರ್ಧರಿಸಲಾಗಿದೆ.
ಹೀಗಾಗಿ 12 ಶಾಸಕರ ರಾಜಿನಾಮೆಯೊಂದಿಗೆ ಮಂಗಳವಾರ ಆರಂಭವಾಗಿರುವ ರಾಜಕೀಯ ದೊಂಬರಾಟ ಇನ್ನೂ ನಾಲ್ಕೈದು ದಿನ ಮುಂದುವರಿಯಲಿದೆ. ಏಕೆಂದರೆ, ಸರ್ಕಾರ ಉರುಳಿಸುತ್ತೇವೆ ಎಂದು ಕೆಜೆಪಿಗಾಗಲೀ, ಸರ್ಕಾರಕ್ಕೆ ಯಾವುದೇ ಅಪಾಯವಾಗದಂತೆ ಬಜೆಟ್ ಮಂಡಿಸುತ್ತೇವೆ ಎಂದು ಬಿಜೆಪಿಗಾಗಲೀ ಇನ್ನೂ ಪೂರ್ಣ ವಿಶ್ವಾಸವಿಲ್ಲ.
ಶೆಟ್ಟರ್ ಬಜೆಟ್ ಮಂಡಿಸಬಾರದು: ಸರ್ಕಾರ ಉರುಳಿಸುವ ಉದ್ದೇಶ ತಮಗಿಲ್ಲ. ಸಿಎಂ ಶೆಟ್ಟರ್ ಬಜೆಟ್ ಮಂಡಿಸಲು ಅಡ್ಡಿಪಡಿಸುವುದಿಲ್ಲ ಎಂದು  ಯಡಿಯೂರಪ್ಪ ಬಹಿರಂಗವಾಗಿ ಹೇಳಿದ್ದರೂ ಯಾವುದೇ ಕಾರಣಕ್ಕೂ ಅವರು ಬಜೆಟ್ ಮಂಡಿಸದಂತೆ ನೋಡಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.               
ಹೀಗಾಗಿ ಫೆ. 4ರಂದು ವಿಧಾನ ಮಂಡಲದ ಅಧಿವೇಶನ ಆರಂಭವಾಗುವುದರೊಳಗೆ ಇನ್ನಷ್ಟು ಶಾಸಕರಿಂದ ರಾಜಿನಾಮೆ ಕೊಡಿಸಿ ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ಮಾಡಬೇಕು ಎಂಬ ಉದ್ದೇಶದೊಂದಿಗೆ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.
ಈಗಾಗಲೇ ಯಡಿಯೂರಪ್ಪ ಅವರು 10ಕ್ಕೂ ಹೆಚ್ಚು ಶಾಸಕರನ್ನು ಸಂಪರ್ಕಿಸಿದ್ದಾರೆ. ಮಂಗಳವಾರ ಶಾಸಕರ ರಾಜಿನಾಮೆ ಪ್ರಕ್ರಿಯೆ ಸುಖಾಂತ್ಯ ಕಂಡಿರುವುದರಿಂದ ಈ ಪೈಕಿ ಬಹುತೇಕರು ರಾಜಿನಾಮೆ ಸಲ್ಲಿಸಲು ಒಪ್ಪಿಗೆ ಸೂಚಿಸಿದ್ದಾರೆ. ಶುಕ್ರವಾರವೇ ಇವರು ರಾಜಿನಾಮೆ ನೀಡುವ ಸಾಧ್ಯತೆ ಇದೆ. ಅದು ಸಾಧ್ಯವಾಗದೇ ಇದ್ದರೆ ಸೋಮವಾರ ಸದನ ಆರಂಭವಾಗುವುದರೊಳಗೆ ಈ ಶಾಸಕರು ರಾಜಿನಾಮೆ ಸಲ್ಲಿಸುವುದು ಖಚಿತ ಎಂದು ಕೆಜೆಪಿ ಮೂಲಗಳು ಹೇಳಿವೆ.
ಆ ಮೂಲಗಳು ಹೇಳುವ ಪ್ರಕಾರ ಆರರಿಂದ ಎಂಟು ಶಾಸಕರು ರಾಜಿನಾಮೆಗೆ ಮುಂದಾಗಿದ್ದಾರೆ. ಆದರೆ, ಅವರ ಹೆಸರು ಬಹಿರಂಗಗೊಳಿಸಿದರೆ ಬಿಜೆಪಿಯವರು ಶಾಸಕರನ್ನು ಪಕ್ಷ ತ್ಯಜಿಸದಂತೆ ಕಟ್ಟಿಹಾಕಿ ಮನವೊಲಿಸುವ ಪ್ರಯತ್ನ ಮಾಡಬಹುದು ಎಂಬ ಕಾರಣಕ್ಕೆ ಹೆಸರು ಗೌಪ್ಯವಾಗಿಡಲಾಗಿದೆ.

ಮನವೊಲಿಕೆ ಯತ್ನ
ಕೆಜೆಪಿ, ಕಾಂಗ್ರೆಸ್‌ನತ್ತ ಮುಖ ಮಾಡಿರುವ ಶಾಸಕರ ಜತೆ ಸಂಪರ್ಕದಲ್ಲಿರುವ ಬಿಜೆಪಿ ಅವರ ಮನವೊಲಿಸುವ ಕಾರ್ಯ ಮಾಡುವುದರ ಜತೆಗೆ ಅವರ ನಡೆಗಳ ಬಗ್ಗೆ ನಿಗಾ ಇಟ್ಟಿದೆ.
ಸಚಿವರಾದ  ಅಸ್ನೋಟಿಕರ್, ರಾಜೂಗೌಡ, ಶಾಸಕರಾದ ಶ್ರೀಶೈಲಪ್ಪ ಬಿದರೂರು, ಪ್ರತಾಪಗೌಡ ಪಾಟೀಲ್‌ರನ್ನು ಪಕ್ಷದ ಮುಖಂಡರು ಸಂಪರ್ಕಿಸಿದ್ದಾರೆ. ಪಕ್ಷ ತ್ಯಜಿಸುವುದಿಲ್ಲ ಎಂದು  ಸಚಿವರು ಮತ್ತು ಶಾಸಕರು ಭರವಸೆ ನೀಡಿದ್ದಾರೆ. ಮಂಗಳವಾರ ರಾಜಿನಾಮೆ ನೀಡಬೇಕಾಗಿದ್ದ ತರೀಕೆರೆ ಶಾಸಕ ಡಿ.ಎಸ್. ಸುರೇಶ್‌ರನ್ನೂ ಪಕ್ಷ ಸಂಪರ್ಕಿಸಿದೆ. ಶಿರಡಿಯಲ್ಲಿರುವ ಇವರನ್ನು ಸದ್ಯಕ್ಕೆ ಬೆಂಗಳೂರಿಗೆ ಬಂದು ರಾಜಿನಾಮೆ ನೀಡದಂತೆ ಮನವಿ ಮಾಡಿದೆ.

ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ಸಂಭವ
ಶಾಸಕರ ರಾಜಿನಾಮೆ ಸೇರಿದಂತೆ ಸರ್ಕಾರ ಉಳಿಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಈಗಾಗಲೇ 12 ಶಾಸಕರು ರಾಜಿನಾಮೆ ನೀಡಿರುವುದರಿಂದ ಆಗುವ ಪರಿಣಾಮ, ಇನ್ನಷ್ಟು ಶಾಸಕರು ರಾಜಿನಾಮೆನೀಡುವ ಕುರಿತು ಎದ್ದಿರುವ ಊಹಾಪೋಹಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಇದರ ಜತೆಗೆ ಬುಧವಾರ ಕೋರ್ ಕಮಿಟಿ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನಗಳ ಬಗ್ಗೆಯೂ ಸಮಾಲೋಚಿಸಿ ಮುಂದೇನು ಮಾಡಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಸರ್ಕಾರ ಉಳಿಸಿಕೊಳ್ಳಲು ಸಾಹಸ
ಇನ್ನಷ್ಟು ಶಾಸಕರು ರಾಜಿನಾಮೆ ನೀಡದಂತೆ ನೋಡಿಕೊಂಡು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದ್ದು, ಬುಧವಾರ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ  ಸಮಾಲೋಚನೆ ನಡೆಸಲಾಗಿದೆ. ಸಭೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಮಾಡಬೇಕಾದ ಪ್ರಯತ್ನಗಳು ಹಾಗೂ ಸರ್ಕಾರ ಉರುಳುವ ಪರಿಸ್ಥಿತಿ ಬಂದರೆ ಏನು ಮಾಡಬೇಕು ಎಂಬ ಕುರಿತಾಗಿ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ರಾಜಿನಾಮೆ ನೀಡದಂತೆ ಸರ್ಕಾರದಲ್ಲಿರುವ ಯಡಿಯೂರಪ್ಪ ಅವರ ಬೆಂಬಲಿಗ ಶಾಸಕರ ಮನವೊಲಿಸುವ ಕಾರ್ಯವನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿದೆ.

ವಿಧಾನಸಭೆ ವಿಸರ್ಜಿಸಲೂ ಇಂಗಿತ
ಮನವಿಗೆ ಶಾಸಕರು ಸ್ಪಂದಿಸದೆ ರಾಜಿನಾಮೆ ನೀಡುವುದು ಖಚಿತ ಎಂದಾದರೆ ಮುಂದಿನ ಅಪಾಯ ಎದುರಿಸುವ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ. ಸದ್ಯಕ್ಕೆ 18 ಶಾಸಕರು ರಾಜಿನಾಮೆ ನೀಡಿದರೆ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಏಕೆಂದರೆ, ಸಚಿವ ವರ್ತೂರು ಪ್ರಕಾಶ್ ಮತ್ತು ಪಕ್ಷೇತರ ಸದಸ್ಯ, ಬಿಎಸ್‌ಆರ್ ಕಾಂಗ್ರೆಸ್‌ನ ಶ್ರೀರಾಮುಲು  ಸರ್ಕಾರಕ್ಕೆ ಬೆಂಬಲಿಸಲಿದ್ದಾರೆ. 4 ಪಕ್ಷೇತರ ಶಾಸಕರು ಪರೋಕ್ಷವಾಗಿ ರಾಜಿನಾಮೆ ನೀಡುವ ಶಾಸಕರ ಸಂಖ್ಯೆ 18 ದಾಟಿದರೆ ಕಾಂಗ್ರೆಸ್, ಜೆಡಿಎಸ್ ಸದಸ್ಯರನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ಆದರೆ, ಇಂತಹ ಸಾಹಸಕ್ಕೆ ಕೈಹಾಕದೆ ಸರ್ಕಾರ ವಿಸರ್ಜಿಸುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.
ಈ ನಿರ್ಧಾರಗಳನ್ನು ಬಿಜೆಪಿ ರಾಷ್ಟ್ರೀಯ ನಾಯಕರಿಗೂ ತಲುಪಿಸಲಾಗಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments