ನಿರೀಕ್ಷೆಯೇ ಭಾಷಣ
ಬೆಂಗಳೂರು: ಸಾಮಾನ್ಯ ಜನ ಏನು ನಿರೀಕ್ಷಿಸುವರೋ ಅದುವೇ ನನ್ನ ಅಧ್ಯಕ್ಷೀಯ ಭಾಷಣದಲ್ಲಿರುತ್ತದೆ ಎಂದು ಎಂದು 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಕೋ.ಚನ್ನಬಸಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಈ ಗೌರವ ಸ್ಥಾನ ಸಿಗದೇ ಹೋಗಿದ್ದರೆ ಏನನ್ನೂ ಹೇಳಲು ಆಗುತ್ತಿರಲಿಲ್ಲ. ಆದ್ದರಿಂದ ಜನರ ನಿರೀಕ್ಷೆಯ ವಿಷಯಗಳು ನನ್ನ ಭಾಷಣದಲ್ಲಿರುತ್ತವೆ. ಆದರೆ ಇದನ್ನು ಕೇಳಿಸಿಕೊಂಡು ಅನುಷ್ಠಾನಕ್ಕೆ ತರುವ ಒಳ್ಳೆಯ ಜನರು ಕೂಡ ಅಧಿಕಾರದಲ್ಲಿರಬೇಕಾಗುತ್ತದೆ ಎಂದು ಅವರು ಬೆಂಗಳೂರು ಪ್ರೆಸ್ಕ್ಲಬ್ ಹಾಗೂ ವರದಿಗಾರರ ಕೂಟ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಬುಧವಾರ ಹೇಳಿದರು.
ಸಮ್ಮೇಳನದ ಅಧ್ಯಕ್ಷ ಎಂಬ ಗೌರವ ನೀಡಿದಾಗ ರಾಜ್ಯದ ಜನತೆಯ ಆಶಯಕ್ಕೆ ತಕ್ಕಂತೆ ಸರ್ಕಾರದ ಗಮನ ಸೆಳೆಯಲೇಬೇಕು. ಈ ಹಿಂದೆ ತೆಗೆದುಕೊಂಡಿರುವ ನಿರ್ಣಯಗಳನ್ನು ಸರ್ಕಾರ ಅನುಷ್ಠಾನ ಮಾಡಿಲ್ಲ ಎಂದು ಯಾವುದೇ ನಿರ್ಣಯವನ್ನು ಹೊಸದಾಗಿ ಮಾಡದಿದ್ದರೆ ಸರ್ಕಾರವೂ ಸುಮ್ಮನಾಗುತ್ತದೆ. ಇದರಿಂದ ಕನ್ನಡಕ್ಕೆ ನಷ್ಟವಾಗುತ್ತದೆ. ಕನ್ನಡಿಗರ ನಿರ್ಣಯಗಳನ್ನು ಸರ್ಕಾರಕ್ಕೆ ತಿಳಿಸುವುದು ನಮ್ಮ ಕರ್ತವ್ಯ. ಅದನ್ನು ಅನುಷ್ಠಾನಕ್ಕೆ ತರುವುದು ಆಡಳಿತ ನಡೆಸುವವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಚನ್ನಬಸಪ್ಪ ನುಡಿದರು.
ಸಾಹಿತ್ಯ ಸಮ್ಮೇಳನ ಅಥವಾ ಸಾಹಿತ್ಯ ಪರಿಷತ್ಗೆ ಯಾವುದೇ ಆಡಳಿತಾತ್ಮಕ ಅಧಿಕಾರವಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗುತ್ತದೆ. ಆದರೆ ಸಾಹಿತ್ಯ ಜಾತ್ರೆಯ ನೆಪದಲ್ಲಿ ಲಕ್ಷಾಂತರ ಜನರನ್ನು ಒಂದೇ ವೇದಿಕೆ ಮೂಲಕ ತಲುಪಲು ಸಾಧ್ಯವಿದೆ. ಜನರಲ್ಲಿ ಜಾಗೃತಿ ಮೂಡಿಸಲು ಇದೊಂದು ಉತ್ತಮ ವೇದಿಕೆ ಎಂದು ಅವರು ಅಭಿಪ್ರಾಯಪಟ್ಟರು.
ಅನ್ಯ ಭಾಷಿಕರ ಮೇಲೆ ದ್ವೇಷ ಬೇಡ: ಭಾರತದ ಪ್ರತಿಯೊಂದು ರಾಜ್ಯವು ಸಂವಿಧಾನವನ್ನು ಒಪ್ಪಿಕೊಂಡಿವೆ. ಹೀಗಿರುವಾಗ ಅನ್ಯ ರಾಜ್ಯದ ಜನರು ಕರ್ನಾಟಕಕ್ಕೆ ಬರದಂತೆ ತಡೆಯಲು ಸಾಧ್ಯವಿಲ್ಲ. ಬದಲಾಗಿ ಅವರು ನಮ್ಮವರಲ್ಲಿ ಒಬ್ಬರಾಗಿ ಬದುಕಬೇಕು. ಇಲ್ಲಿಯ ಭಾಷೆ, ಸಂಸ್ಕೃತಿ ಕಲಿತು ಜನರೊಂದಿಗೆ ಪ್ರೀತಿ, ವಿಶ್ವಾಸದಿಂದಿರಬೇಕು. ಧ್ವೇಷದಿಂದ ಏನು ಮಾಡಲೂ ಸಾಧ್ಯವಿಲ್ಲ ಎಂದು ಹೇಳಿದರು.
ಮನುಷ್ಯನ ಮನಸ್ಸು ತಿದ್ದಿ ಪ್ರೀತಿ ಬೆಸೆಯುವ ಕೆಲಸ ಮಾಡಬೇಕಿದೆ. ಕ್ರೌರ್ಯವನ್ನು ಬಿತ್ತುವುದರಿಂದ ಏನು ಮಾಡಲು ಸಾಧ್ಯವಿಲ್ಲ. ಮಾಧ್ಯಮಗಳು ಕೂಡ ಇದೇ ಜವಾಬ್ದಾರಿಯುತ ಕೆಲಸ ಮಾಡಬೇಕು ಎಂದು ತಿಳಿ ಹೇಳಿದರು.
ವಿದ್ಯಾರ್ಥಿಗಳು ಬರುವಂತಾಗಲಿ: ಶಾಲೆಗಳಲ್ಲಿ ಮಕ್ಕಳಿರದಿದ್ದರೆ ಮುಚ್ಚಲೇಬೇಕಾಗುತ್ತದೆ. ಸರ್ಕಾರದ ಮೇಲೆ ಗೂಬೆ ಕೂರಿಸುವ ಬದಲು ಮಕ್ಕಳು ಕನ್ನಡ ಶಾಲೆಗೆ ಬರುವಂತೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಇದರ ಜತೆಗೆ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ನೀಡುವ ಕೆಲಸವನ್ನು ಮಾಡಬೇಕು. ಇವೆರಡು ಅಂಶಗಳು ಒಂದಕ್ಕೊಂದು ಪರಸ್ಪರ ಸಂಬಂಧ ಹೊಂದಿವೆ ಎಂದು ಚನ್ನಬಸಪ್ಪ ಅಭಿಪ್ರಾಯಪಟ್ಟರು.
ದ್ವೇಷ ಬಿತ್ತುವ ಕೆಲಸ ಬೇಡ: ದೇಶದಲ್ಲಿನ ಮಾಧ್ಯಮಗಳು ಜವಾಬ್ದಾರಿಯುತವಾಗಿ ನಡೆದದ್ದರಿಂದ ಇಂದಿಗೂ ಪ್ರಜಾತಂತ್ರ ಸುಭದ್ರವಾಗಿದೆ. ಸರ್ಕಾರಗಳ ಸಾಕಷ್ಟು ಅವ್ಯವಹಾರಗಳು ಬಯಲಿಗೆ ಬಂದಿವೆ. ಜನರ ಆಶಯಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಿವೆ. ಆದರೆ ಜನಗಳಲ್ಲಿ ಎಂದಿಗೂ ದ್ವೇಷ ಹಾಗೂ ಉದ್ವೇಗ ಮೂಡಿಸುವ ಸುದ್ದಿ ಪ್ರಕಟಿಸಬಾರದು ಎಂದು ಅವರು ಮನವಿ ಮಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.