ಸಿಇಟಿ ಧರ್ಮದೇಟು ಖಾಸಗಿಗೆ ವೃತ್ತಿ ಸೀಟು
ವೃತ್ತಿಪರ ಕೋರ್ಸ್‌ಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಕ್ಕಿಂತ ಮೊದಲೇ ಕಾಮೆಡ್-ಕೆ ಕೌನ್ಸೆಲಿಂಗ್ ಪ್ರಾರಂಭವಾಗುತ್ತಿದೆ.
ಕನ್ನಡಪ್ರಭ ವಾರ್ತೆ , ಬೆಂಗಳೂರು , ಜು. 1
ವೃತ್ತಿಪರ ಕೋರ್ಸ್‌ಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಕ್ಕಿಂತ ಮೊದಲೇ ಕಾಮೆಡ್-ಕೆ ಕೌನ್ಸೆಲಿಂಗ್ ಪ್ರಾರಂಭವಾಗುತ್ತಿದೆ.
ಖಾಸಗಿ ಆಡಳಿತ ಮಂಡಳಿಗಳ ಜತೆ ಸೇರಿಕೊಂಡು ಉನ್ನತ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯದ 1.03 ಲಕ್ಷ ವಿದ್ಯಾರ್ಥಿಗಳ ಭವಿಷ್ಯದೊಡನೆ ಚೆಲ್ಲಾಟವಾಡುತ್ತಿವೆ. ಕೌನ್ಸೆಲಿಂಗ್‌ನ ಜವಾಬ್ದಾರಿ ಹೊತ್ತಿರುವ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳ ಅರೆಬರೆ ಮಾಹಿತಿ ಪಡೆದು ಮಾತನಾಡುತ್ತಿದ್ದಾರೆ.
ಇದೆಲ್ಲದರ ಪರಿಣಾಮವಾಗಿ ಕಾಮೆಡ್- ಕೆ ಮೂಲಕ ಖಾಸಗಿ ಕೋಟಾದ ಸೀಟು ಪಡೆಯಬೇಕೋ ಅಥವಾ ಸರ್ಕಾರಿ ಕೋಟಾ ಸೀಟುಗಳಿಗೆ ಕಾಯಬೇಕೋ ಎಂಬ ಗೊಂದಲದಲ್ಲಿ ವಿದ್ಯಾರ್ಥಿಗಳು ಕೂತಿದ್ದಾರೆ. ಪ್ರತಿವರ್ಷ ಸರ್ಕಾರಿ ಸೀಟುಗಳು ಖಾಲಿಯಾದ ಬಳಿಕ ಕಾಮೆಡ್- ಕೆ ಸೀಟುಗಳತ್ತ ಮುಖಮಾಡುವ ಸಂಪ್ರದಾಯವಿತ್ತು. ಆದರೆ ಪ್ರಸಕ್ತ ವರ್ಷ ಸರ್ಕಾರದ ನಾನಾ ಇಲಾಖೆಯಲ್ಲಿನ ಅಧಿಕಾರಿಗಳ ಆಲಸ್ಯ ಹಾಗೂ ಕೇಂದ್ರ ಸರ್ಕಾರಿ ಸಂಸ್ಥೆಗಳ ಬೇಜವಾಬ್ದಾರಿಯಿಂದ ರಾಜ್ಯದಲ್ಲಿ ಕೌನ್ಸೆಲಿಂಗ್ ಎಂದು ಆರಂಭವಾಗುತ್ತದೆ ಎನ್ನುವುದರ ಬಗ್ಗೆ ಯಾವೊಬ್ಬ ವಿದ್ಯಾರ್ಥಿಗೂ ತಿಳಿದಿಲ್ಲ.
ಖಾಸಗಿ ದರ್ಬಾರ್: ಶಿಕ್ಷಣ ಇಲಾಖೆಯ ನಾನಾ ಅಧಿಕಾರಿಗಳು ಖಾಸಗಿ ಕಾಲೇಜುಗಳ ಜತೆ ಸೇರಿ ಕೌನ್ಸೆಲಿಂಗ್‌ನಲ್ಲಿ ಆಟವಾಡುತ್ತಿದ್ದಾರೆ.
ಪ್ರಾಥಮಿಕ ಆದೇಶದ ಪ್ರಕಾರ ಜೂ.15ರಿಂದಲೇ ಆಪ್ಶನ್ ಎಂಟ್ರಿ ಆರಂಭವಾಗಬೇಕಿತ್ತು. ಇಬ್ಬರೂ ಸಚಿವರು ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ರಾಜ್ಯದ 4 ವೈದ್ಯ ಹಾಗೂ ಐಎಸ್‌ಎಂಎಚ್ ಕೋರ್ಸ್‌ಗಳ ಸೀಟುಗಳು ಯಾವುದೇ ಕಾರಣಕ್ಕೂ ಜುಲೈ ಮೊದಲ ವಾರದೊಳಗೆ ಸಿಗುವುದಿಲ್ಲ ಎಂದು ತಿಳಿದಿತ್ತು.
ಇದಲ್ಲದೇ ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಜು.31ರೊಳಗೆ ಪ್ರವೇಶ ಪ್ರಕ್ರಿಯೆ ಮುಗಿಸಬೇಕು ಎನ್ನುವುದು ಎಲ್ಲ ಅಧಿಕಾರಿಗಳಿಗೆ ತಿಳಿದಿದೆ. ಆದಾಗ್ಯೂ ಅಂತಿಮ ಗಡುವಿಗೆ ಕೇವಲ 30 ದಿನಗಳು ಬಾಕಿಯಿದ್ದರೂ ಅಧಿಕಾರಿಗಳು ನಿದ್ರೆ ಮಂಪರಿನಲ್ಲಿದ್ದಾರೆ. ಪ್ರಶ್ನಿಸಿದರೇ ಎಂಸಿಐ ಹಾಗೂ ಎಐಸಿಟಿಇನಿಂದ ಲಭ್ಯ ಸೀಟುಗಳ ಮಾಹಿತಿಯಿಲ್ಲ ಎಂಬ ನೆಪ ಹೇಳುತ್ತಿದ್ದಾರೆ. ಆದರೆ ಎಂಸಿಐ ಹಾಗೂ ಎಐಸಿಟಿಇ ಅಧಿಕಾರಿಗಳಿಗೆ ಪ್ರಸ್ತುತ ದಿನದಲ್ಲಿ ಲಭ್ಯವಿರುವ ಸೀಟುಗಳ ಮಾಹಿತಿಯನ್ನು ಒದಗಿಸಿ ಎಂದು ಕಳೆದ 3 ವಾರಗಳಿಂದ ಯಾವುದೇ ಅಧಿಕೃತ ಮನವಿಯನ್ನು ಸರ್ಕಾರ ಮಾಡಿಲ್ಲ. ದೆಹಲಿಯಲ್ಲಿನ ಎಂಸಿಐ ಹಾಗೂ ಎಐಸಿಟಿಇ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸೀಟ್ ಬ್ಲಾಕಿಂಗ್‌ಗೆ ಇದು ರಹದಾರಿ: 'ವೃತ್ತಿಪರ ಕೋರ್ಸ್‌ಗಳ ಪ್ರವೇಶ ಶುಲ್ಕ ಹೆಚ್ಚಳ ಮಾಡದೇ ಪ್ರವೇಶ ಪ್ರಕ್ರಿಯೆ ನಡೆಸುತ್ತಿದ್ದೇವೆ' ಎಂದು ರಾಜ್ಯ ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ ರಾಜ್ಯ ಸರ್ಕಾರವು ವಾಮ ಮಾರ್ಗದ ಮೂಲಕ ಸೀಟ್ ಬ್ಲಾಕಿಂಗ್‌ಗೆ ಅವಕಾಶ ಮಾಡಿಕೊಡುತ್ತಿದೆ. ಈ ಮೂಲಕ ಹೆಚ್ಚಳವಾಗದಿರುವ ಶುಲ್ಕವನ್ನು ತುಂಬಿಕೊಡುವ ಪ್ರಯತ್ನ ಮಾಡುತ್ತಿದೆ.
ಹಿಂದಿನ ಶೈಕ್ಷಣಿಕ ವರ್ಷದ ಕೌನ್ಸೆಲಿಂಗ್ ಸಂದರ್ಭದಲ್ಲಿಯೂ ಸರ್ಕಾರಿ ಕೌನ್ಸೆಲಿಂಗ್ ಮುಂಚೆ ಕಾಮೆಡ್- ಕೆ ಕೌನ್ಸೆಲಿಂಗ್ ಪ್ರಾರಂಭವಾದಾಗ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದರಿಂದ ಸೀಟ್ ಬ್ಲಾಕಿಂಗ್ ನಡೆಯುತ್ತದೆ ಎಂದ ಅರ್ಜಿಯಲ್ಲಿ ವಾದಿಸಲಾಗಿತ್ತು. ಇದಕ್ಕೆ ಮನ್ನಣೆ ನೀಡಿದ ಹೈಕೋರ್ಟ್ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದೂಡಲು ಕಾಮೆಡ್- ಕೆಗೆ ಸೂಚಿಸಿತ್ತು. ಕಾಮೆಡ್- ಕೆನಲ್ಲಿ ಸೀಟು ಪಡೆದ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿಯೂ ಸೀಟು ಪಡೆಯುತ್ತಾರೆ. ಆ ಬಳಿಕ ಯಾವುದಾದರೊಂದು ಸೀಟುಗಳನ್ನು ಬ್ಲಾಕ್ ಮಾಡಿ ಮಾರಾಟ ಮಾಡುವ ಜಾಲ ರಾಜ್ಯದಲ್ಲಿದೆ. ಇದಕ್ಕೆ ಪೂರಕವಾಗಿ ಈ ವರ್ಷದ ಕೌನ್ಸೆಲಿಂಗ್ ಕೂಡ ವಿಳಂಬವಾಗಿದೆ. ಆದರೆ ಈ ಬಗ್ಗೆ ಏನು ತಿಳಿಯದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕ ಚಕ್ರವರ್ತಿ ಮೋಹನ್ ಹಾಗೂ ಆಡಳಿತಾಧಿಕಾರಿ ಎಸ್.ಪಿ. ಕುಲಕರ್ಣಿ ವರ್ತಿಸುತ್ತಿದ್ದಾರೆ.
ಸಮಸ್ಯೆ ಪತ್ರಿಕೆಗಳದ್ದು?
ಸೀಟು ಹಂಚಿಕೆ ಹಾಗೂ ಕೌನ್ಸೆಲಿಂಗ್ ವಿಳಂಬ ಕುರಿತಂತೆ ಆಯುಷ್ ಇಲಾಖೆಯ ನಿರ್ದೇಶಕ ವಿಜಯಕುಮಾರ್ ಬೋಗಿ ಅವರನ್ನು ಸಂಪರ್ಕಿಸಿದಾಗ ಈ ಉತ್ತರ ಬಂತು. 'ಕೌನ್ಸೆಲಿಂಗ್ ವಿಳಂಬ ರಾಜ್ಯದ ಯಾವುದೇ ವಿದ್ಯಾರ್ಥಿಯ ಸಮಸ್ಯೆಯಲ್ಲ. ಇದು ಕೇವಲ 'ಕನ್ನಡಪ್ರಭ'ದ ಸಮಸ್ಯೆ.
ಇಂಡಿಕೇಟಿವ್ ವೇಕೆನ್ಸಿ ಆಧರಿಸಿ ಕೌನ್ಸೆಲಿಂಗ್‌ಗೆ ಏನು ಸಮಸ್ಯೆ?
ಕಳೆದ ಜೂ.4ರಿಂದ ರಾಷ್ಟ್ರಮಟ್ಟದಲ್ಲಿ ನೀಟ್ ಪರೀಕ್ಷೆ ಮೂಲಕ ವೈದ್ಯ ಸ್ನಾತಕೋತ್ತರ ಕೋರ್ಸ್‌ಗಳ ಕೌನ್ಸೆಲಿಂಗ್ ನಡೆಯಿತು. ಅಂತಿಮ ಸೀಟು ಹಂಚಿಕೆಯ ವಿವರ ಲಭ್ಯವಿರದ ಕಾರಣ ಇಂಡಿಕೇಟಿವ್ ವೇಕೆನ್ಸಿ (ಲಭ್ಯ ಸೀಟುಗಳು) ಆಧರಿಸಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿತ್ತು. ಇದಾದ ಬಳಿಕ ನಮ್ಮದೇ ರಾಜ್ಯದ ಕಾಮೆಡ್-ಕೆ ಕೂಡ ಇಂಡಿಕೇಟಿವ್ ವೇಕೆನ್ಸಿ ಆಧರಿಸಿ ಜು.2ರಿಂದ ಕೌನ್ಸೆಲಿಂಗ್ ಆರಂಭಿಸುತ್ತಿದೆ. ಇವೆಲ್ಲ ಸಂಸ್ಥೆಗಳಿಗೆ ಇಂಡಿಕೇಟಿವ್ ವೇಕೆನ್ಸಿ ಆಧಾರದ ಕೌನ್ಸೆಲಿಂಗ್ ಕಾನೂನು ಬಾಹಿರವಾಗಿರದಿದ್ದಾಗ ರಾಜ್ಯದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳಿಗೆ ಮಾತ್ರ ಇದು ಕಾನೂನು ಬಾಹಿರ ಹಾಗೂ ಅವೈಜ್ಞಾನಿಕವಾಗಿ ಕಾಣುತ್ತಿದೆ. ಈ ಬಗ್ಗೆ ಇಲಾಖೆಯ ಹಿರಿಯ ಹಾಗೂ ನಿವೃತ್ತ ಅಧಿಕಾರಿಗಳ ಸಲಹೆ ಪಡೆಯುವ ಕೆಲಸವನ್ನು ಸಚಿವರು ಮಾಡುತ್ತಿಲ್ಲ. ಖಾಸಗಿ ಆಡಳಿತ ಮಂಡಳಿಗಳ 'ಮಧ್ಯವರ್ತಿ'ಗಳಂತೆ ವರ್ತಿಸುತ್ತಿರುವ ಅಧಿಕಾರಿಗಳ ಮಾತು ಕೇಳಿ ಶೀಘ್ರವೇ ಕೌನ್ಸೆಲಿಂಗ್ ನಡೆಸುತ್ತೇವೆ ಎಂದಷ್ಟೇ ಹೇಳುತ್ತಿದ್ದಾರೆ.
-ರಾಜೀವ ಹೆಗಡೆ