ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇಲ್ಲೊಬ್ಬ ಡಾ. ಎಸ್‌ಎಸ್‌ಎಲ್‌ಸಿ!

Vishwanath S
Updated On : 3 Jul 2013, 11:38 am

ಕನ್ನಡಪ್ರಭ ವಾರ್ತೆ ,  ಶಿವಮೊಗ್ಗ ,  ಜು.3
ಆಯುರ್ವೇದ ವೈದ್ಯರು ಅಲೋಪತಿ ಔಷಧ ನೀಡೋದು ಓಕೆ.., ನಾಟಿ ಹಾಗೂ ಸಾಂಪ್ರದಾಯಿಕ ವೈದ್ಯರು ಮನೆ ಮುಂದೆ 'ಡಾ.' ಎಂದು ಬೋರ್ಡ್ ಹಾಕಿಕೊಳ್ಳೋದೂ ಓಕೆ.., ಆದರೆ ಎಸ್‌ಎಸ್‌ಎಲ್‌ಸಿ ಓದಿರುವ ವ್ಯಕ್ತಿಗೆ ಡಾಕ್ಟರ್ ಪ್ರಮಾಣ ಕೊಟ್ಟರೆ, ಇದನ್ನೂ ಓಕೆ ಎನ್ನಲಾದಿತೇ...?
ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ಇಂಥ ವ್ಯಕ್ತಿಗೆ ಡಾಕ್ಟರ್ ಪದವಿಯ ಪ್ರಮಾಣಪತ್ರನೀಡಿ ವೈದ್ಯ ವೃತ್ತಿ ಮಾಡಲು ಅನುಮತಿ ನೀಡಿದೆ.
ಇಂಥ ಅಪರೂಪದ ಪ್ರಕರಣ ಪತ್ತೆಯಾಗಿರುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಇವನ ಬಳಿ 'ಇಂಡಿಯನ್ ಬೋರ್ಡ್ ಆಫ್ ಅಲ್ಟ್ರನೇಟಿವ್ ಮೆಡಿಸಿನ್ಸ್‌' ಎಂದು ಕೋಲ್ಕತಾ ವಿಳಾಸ ಹೊಂದಿರುವ ಸಂಸ್ಥೆಯಿಂದ ಪಡೆದ ದೂರ ಶಿಕ್ಷಣ ವೈದ್ಯ ಪದವಿ ಪ್ರಮಾಣಪತ್ರಗಳಿವೆ. ಇದನ್ನೇ ಆಧಾರವನ್ನಾಗಿಟ್ಟುಕೊಂಡು ವೈದ್ಯ ವೃತ್ತಿಗೆ ಅನುಮತಿ ನೀಡಲಾಗಿದೆ. ಇದನ್ನು ನೀಡಿರುವುದು ಸಕ್ಷಮ ಪ್ರಾಧಿಕಾರವಾಗಿರುವ ಜಿಲ್ಲಾಧಿಕಾರಿ ಅಧ್ಯಕ್ಷತೆಯ, ಜಿಲ್ಲಾ ಆರೋಗ್ಯಾಧಿಕಾರಿ ಕಾರ್ಯದರ್ಶಿಯಾಗಿರುವ ಸಮಿತಿ.
ತೀರ್ಥಹಳ್ಳಿ ತಾಲೂಕಿನ ಕಲ್ಕೊಪ್ಪ ಗ್ರಾಮದಲ್ಲಿ 'ಕ್ಲಿನಿಕ್‌' ಎಂಬ ಹೆಸರಿನ ಆಸ್ಪತ್ರೆ ನಡೆಸಲು ಸಂಜೀವ ಶೆಟ್ಟಿ ಎಂಬುವರಿಗೆ ಪ್ರಾಧಿಕಾರದಿಂದ  ಕೆಪಿಎಂಇ (ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್) ಪ್ರಮಾಣಪತ್ರ ಸಿಕ್ಕಿದೆ. 'ಇಂಡೋ ಅಲೋಪತಿ' ಚಿಕಿತ್ಸಾ ವಿಧಾನದಲ್ಲಿ ಈ ಪರವಾನಗಿ ದೊರಕಿದೆ.
ನಕಲಿ ಪ್ರಮಾಣ ಪತ್ರ: ಪ್ರಮಾಣಪತ್ರದಲ್ಲಿ ನೋಂದಣಿ ಸಂಖ್ಯೆ ನಮೂದಿಸುವಾಗ ಅವರು ಅನುಸರಿಸುತ್ತಿರುವ ಚಿಕಿತ್ಸಾ ವಿಧಾನ ಸೂಚಿಸಲು ಎರಡು ಆಂಗ್ಲ ಅಕ್ಷರಗಳಿರಬೇಕು.      
ಉದಾಹರಣೆಗೆ ಆಯುರ್ವೇದಕ್ಕೆ ಆಘ, ಡಯಾಗ್ಲೋಸ್ಟಿಕ್‌ಲ್ಯಾಬ್‌ಗೆ ಉಔ, ಅ ಲೋಪತಿಗೆ ಆಆ, ನರ್ಸಿಂಗ್ ಹೋಂಗೆ ಃಏ ಇತ್ಯಾದಿ. ಆದರೆ, ಸಂಜೀವ ಶೆಟ್ಟಿ ಅವರಿಗೆ ನೀಡಿರುವ ಪ್ರಮಾಣಪತ್ರದಲ್ಲಿ ಈ ಅಕ್ಷರಗಳೇ ಇಲ್ಲ. ಈ ರೀತಿ ನಕಲಿ, ದೋಷಪೂರಿತ ಪ್ರಮಾಣಪತ್ರವನ್ನು ಅನರ್ಹ ವ್ಯಕ್ತಿಗೆ ನೀಡಿದ್ದು ಪತ್ತೆಯಾಗಿರುವುದು ಅಪರೂಪದ ಪ್ರಕರಣಗಳಲ್ಲೊಂದು. ಆರೋಗ್ಯ ಇಲಾಖೆಯ ಅಧಿಕಾರಿಗಳೇ ಇದರಲ್ಲಿ ಪಾಲ್ಗೊಂಡಿರುವುದು ಪ್ರಕರಣವನ್ನು ಇನ್ನಷ್ಟು ಗಂಭೀರವಾಗಿಸಿದೆ.
ಆಗಿದ್ದು ಹೀಗೆ: ಸಂಜೀವ ಶೆಟ್ಟಿ ಆಸ್ಪತ್ರೆ ನಡೆಸಲು 2010ರ ಫೆಬ್ರವರಿ 22ರಂದು ಅರ್ಜಿ ಸಲ್ಲಿಸಿದ್ದರು. ಇದೇ ವರ್ಷ ಏಪ್ರಿಲ್ 7ರಂದು ಡಿಎಚ್‌ಒ (ಹಾಲಿ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಅಲ್ಲ) ಅವರು ಪತ್ರ ಬರೆದು 15 ದಿನಗಳಲ್ಲಿ ಸ್ಥಳ ಪರಿಶೀಲನೆಗೆ ಬರುವುದಾಗಿ ಹೇಳಿದ್ದರು. ಇದೇ ಏಪ್ರಿಲ್ 27ರಂದು ಕಲ್ಕೊಪ್ಪದಲ್ಲಿ 'ಕ್ಲಿನಿಕ್‌' ಎಂಬ ಹೆಸರಿನ ಆಸ್ಪತ್ರೆ ನಡೆಸಲು ಪರವಾನಗಿ ನೀಡಬಹುದೆಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಶಿಫಾರಸು ಮಾಡಿದ್ದು, ಇದನ್ನು ತಾಲೂಕು ವೈದ್ಯಾಧಿಕಾರಿಗಳು ಅನುಮೋದಿಸಿದ್ದಾರೆ.
ಕಲ್ಕೊಪ್ಪದಲ್ಲಿ ಇವರು ನಡೆಸುತ್ತಿರುವ ಆಸ್ಪತ್ರೆಯಲ್ಲಿ ಯಾವ ಸೌಲಭ್ಯವೂ ಇಲ್ಲ. ಸಂಜೀವ ಶೆಟ್ಟಿ ಅವರಿಗೆ ನೀಡಿರುವ ಪ್ರಮಾಣ ಪತ್ರದಲ್ಲಿ ಭಾರತೀಯ ವೈದ್ಯ ಪರಿಷತ್ತಿನ ಪ್ರತಿನಿಧಿ, ಡಿಎಚ್‌ಒ ಹಾಗೂ ಜಿಲ್ಲಾಧಿಕಾರಿಯವರ ಸಹಿಯೂ ಇದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಕ್ಷಮ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯವರನ್ನೂ ಯಾಮಾರಿಸಿ ಅವರ ಸಹಿ ಪಡೆದಿದ್ದಾರೆ.
ಸತತ ದಾಳಿ: ಶಿವಮೊಗ್ಗ ಜಿಲ್ಲೆಯಾದ್ಯಂತ ಹಾಲಿ ಡಿಎಚ್‌ಒ ಡಾ. ಶಿವಣ್ಣ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣರಾವ್ ಕಾಳೆ ಅವರ ನೇತೃತ್ವದಲ್ಲಿ ಇದುವರೆಗೆ ನೂರಾರು ದಾಳಿಗಳು ನಡೆದಿವೆ. ಬಹಳಷ್ಟು ಪ್ರಕರಣಗಳಲ್ಲಿ ಆಯುರ್ವೇದ ವೈದ್ಯರು ಅಲೋಪತಿ ಔಷಧಿ ಬಳಸುತ್ತಿರುವುದು, ಸುಳ್ಳು ಬೋರ್ಡ್ ಹಾಕಿಕೊಂಡು ವೈದ್ಯರೆಂದು ಹೇಳಿ ಜನರಿಗೆ ವಂಚಿಸುತ್ತಿರುವುದು, ಸುಮ್ಮನೆ ಕೊರಳಿಗೆ ಸ್ಟೆಥಾಸ್ಕೋಪ್ ನೇತು ಹಾಕಿಕೊಂಡು ರೋಗಿಗಳಿಗೆ ಸ್ಟೆರಾಯ್ಡ್‌ಗಳನ್ನು ನೀಡಿ ಕೈಗುಣ ಚೆನ್ನಾಗಿದೆ ಎನ್ನಿಸಿಕೊಳ್ಳುತ್ತಿರುವ ಅನೇಕ ಪ್ರಕರಣಗಳೂ ಪತ್ತೆಯಾಗಿವೆ. ಆದರೆ, ಇದೇ ಮೊದಲ ಬಾರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳೇ ಶಾಮೀಲಾಗಿ ಅನರ್ಹ ವ್ಯಕ್ತಿಗೆ ವೈದ್ಯ ವೃತ್ತಿ ನಡೆಸಲು ಪ್ರಮಾಣಪತ್ರ ನೀಡಿರುವುದು ಬೆಳಕಿಗೆ ಬಂದಿದೆ.
ಈ ವ್ಯಕ್ತಿಯ ಅನರ್ಹತೆ ಮೇಲ್ನೋಟಕ್ಕೆ ಗೊತ್ತಾಗಬೇಕೆಂದರೆ ಅವರು ನೋಂದಣಿಗಾಗಿ ಸಲ್ಲಿಸಿರುವ ಅರ್ಜಿಯನ್ನು ನೋಡಬೇಕು. ಅದರಲ್ಲಿ ಅವರು ಸಹಿ ಮಾಡುವಾಗ ಡಾಕ್ಟರ್ ಸಂಜೀವ ಶೆಟ್ಟಿ ಎಂದೇ ಸಹಿ ಮಾಡಿದ್ದಾರೆ.  ಯಾರಾದರೂ ಸಹಿಯಲ್ಲಿ ಡಾಕ್ಟರ್ ಎಂದು ಬಳಸುತ್ತಾರೆಯೇ?
ಈ ನಕಲಿ ಪ್ರಮಾಣಪತ್ರ ಪಡೆದಿರುವ ಬಗ್ಗೆ ಈಗ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

-ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement