ಯೋಧನ ಅಂತ್ಯ ಸಂಸ್ಕಾರ
ಗದಗ: ಉತ್ತರಾಖಂಡದ ಜಲಪ್ರಳಯದಲ್ಲಿ ಸಿಲುಕಿದವರ ರಕ್ಷಣೆಗೆ ತೆರಳಿದಾಗ ಕಾಪ್ಟರ್ ಪತನದಲ್ಲಿ ಮೃತರಾದ ಜಿಲ್ಲೆಯ ನರಗುಂದ ತಾಲೂಕು ಜಗಾಪುರ ಗ್ರಾಮದ ಯೋಧ ಬಸವರಾಜ್ ಯರಗಟ್ಟಿಯವರ ಅಂತ್ಯಕ್ರಿಯೆ ಬುಧವಾರ ಅವರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಅವರ ಸಾವಿನ ಸುದ್ದಿ ತಿಳಿದು 9 ದಿನ ಕಳೆದರೂ ಪಾರ್ಥಿವ ಶರೀರ ಬರದಿದ್ದರಿಂದ ಇಡೀ ಗ್ರಾಮ, ಕುಟುಂಬ ಶೋಕ ಸಾಗರದಲ್ಲಿ ಮುಳುಗಿತ್ತು. ಮಗನ ಕಳೆಬರವನ್ನು ಎದುರು ನೋಡುತ್ತಿದ್ದ ತಂದೆ-ತಾಯಿಗೆ ಬುಧವಾರ ನೋಡಲು ಸಿಕ್ಕಿದ್ದು ಬಸವರಾಜನ ಶವದ ಪೆಟ್ಟಿಗೆ ಮಾತ್ರ. ಯೋಧನ ಶವಪೆಟ್ಟಿಗೆ ಜಗಾಪುರ ಗ್ರಾಮಕ್ಕೆ ಬರುತ್ತಿದ್ದಂತೆ ಜನ ಸಾಗರವೇ ಹರಿದು ಬಂತು. ದೇಶಕ್ಕಾಗಿ ಮಡಿದ ತಮ್ಮ ಊರಿನ ಯೋಧನಿಗೆ ಜೈಕಾರ ಹಾಕುತ್ತಾ ಕಂಬನಿ ಸುರಿಸಿದರು. ಯೋಧನ ತಂದೆ-ತಾಯಿ, ಸಹೋದರಿಯರು, ಮಡದಿಯ ಆಕ್ರಂದನವಂತೂ ಮುಗಿಲು ಮುಟ್ಟಿತ್ತು.
ಗ್ರಾಮದಲ್ಲಿ ಅಂತ್ಯಕ್ರಿಯೆ: ಜಗಾಪುರ ಗ್ರಾಮದಲ್ಲಿ ಮೆರವಣಿಗೆ ಮಾಡಿ ಬಳಿಕ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.