ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಿಟ್ಟಿ ಆಮಿಷ ಕೊಟ್ಟು ಬಕ್ರಾ ಮಾಡಬೇಡಿ...

ನಾವು ಅಧಿಕಾರಕ್ಕೆ ಬಂದರೆ ಲ್ಯಾಪ್‌ಟಾಪ್ ಕೊಡುತ್ತೇವೆ, ಕಲರ್ ಟಿವಿ, ಚಿನ್ನದ ತಾಳಿ ನೀಡುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ರಾಜಕೀಯ...

Vishwanath S
Updated On : 6 Jul 2013, 12:35 pm

ಪಿಟಿಐ,  ನವದೆಹಲಿ, ಜು.5-
ನಾವು ಅಧಿಕಾರಕ್ಕೆ ಬಂದರೆ ಲ್ಯಾಪ್‌ಟಾಪ್ ಕೊಡುತ್ತೇವೆ, ಕಲರ್ ಟಿವಿ, ಚಿನ್ನದ ತಾಳಿ ನೀಡುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಮರುಳು ಮಾಡುವ ಘೋಷಣೆಗಳಿಗೆ ಸುಪ್ರೀಂಕೋರ್ಟ್ ಆಕ್ಷೇಪಿಸಿದೆ.
'ಇಂಥ ಘೋಷಣೆಗಳು ಮುಕ್ತ, ನ್ಯಾಯ ಸಮ್ಮತ ಚುನಾವಣೆಗೇ ಕುಂದು' ಎಂದು ಶುಕ್ರವಾರ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾ.ಪಿ.ಸದಾಶಿವಂ ಮತ್ತು ನ್ಯಾ.ರಂಜನ್ ಗೊಗೊಯ್ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪೀಠದ ಅಭಿಮತ
- ರಾಜಕೀಯ ಪಕ್ಷಗಳು ಮತದಾರರಿಗೆ ನೀಡುವ ಕೊಡುಗೆಗಳನ್ನು ನಿಯಂತ್ರಿಸಲು ಸದ್ಯ ಕಾನೂನು ಇಲ್ಲ. ಹೀಗಾಗಿ, ಅದು ಭ್ರಷ್ಟಾಚಾರ ಎನ್ನಲು ಸಾಧ್ಯವಿಲ್ಲ.
- ಭಾರತದ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ವ್ಯಾಪ್ತಿಯಲ್ಲಿ ಪ್ರಣಾಳಿಕೆ ಘೋಷಣೆಯನ್ನು ತರಬಹುದು.
- ಈ ಬಗ್ಗೆ ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳ ಜತೆ ಚುನಾವಣಾ ಆಯೋಗ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಬೇಕು.  ಜತೆಗೆ ರಾಜಕೀಯ ಪಕ್ಷಗಳ ಪ್ರಣಾಳಿಕೆಗಾಗಿ ಮಾದರಿ ನೀತಿ ಸಂಹಿತೆ ಎಂಬ ವಿಭಾಗವನ್ನು ಸೇರಿಸಿಕೊಳ್ಳಬಹುದು.
- ಪ್ರಣಾಳಿಕೆಯ ಮೂಲಕ ವಿವಿಧ ಭರವಸೆ ನೀಡುವುದರಿಂದ ಮತದಾರರಿಗೆ ಆಮಿಷ ಒಡ್ಡಿದಂತೆ ಆಗುತ್ತದೆ. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಂಬ ಆಶಯವನ್ನೇ ಪ್ರಶ್ನೆ ಮಾಡಿದಂತಾಗುತ್ತದೆ.
- ಭರವಸೆಗಳ ಮೇಲೆ ನಿಯಂತ್ರಣ ತರುವ ಬಗ್ಗೆ ಸಂಸತ್‌ನ ಮೂಲಕ ಪ್ರಬಲ ಕಾನೂನು ಜಾರಿಗೆ ತರುವ ಬಗ್ಗೆಯೂ ಚಿಂತನೆ ನಡೆಸಬಹುದು.
- ಪ್ರಣಾಳಿಕೆ ಮೇಲೆ ನಿಯಂತ್ರಣ ಹೇರುವ ಬಗ್ಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಸರ್ಕಾರಕ್ಕೆ ನಿರ್ದೇಶನ ಕೊಡುವಂಥ ಬಿಕ್ಕಟ್ಟಿನ  ಪರಿಸ್ಥಿತಿ ಉಂಟಾಗಿಲ್ಲ

ಆಕ್ಷೇಪ ಯಾಕೆ?
ತಮಿಳುನಾಡು ವಿಧಾನಸಭೆಗೆ ಕಳೆದ ಬಾರಿ ನಡೆದಿದ್ದ ಚುನಾವಣೆಯಲ್ಲಿ ಸದ್ಯ ಅಧಿಕಾರದಲ್ಲಿರುವ ಅಣ್ಣಾಡಿಎಂಕೆ ಅಧಿಕಾರಕ್ಕೆ ಬಂದರೆ ಮಿಕ್ಸರ್ ಗ್ರೈಂಡರ್, ಲ್ಯಾಪ್‌ಟಾಪ್, ಫ್ಯಾನ್‌ಗಳನ್ನು ಕೊಡುವ ವಾಗ್ದಾನ ಮಾಡಿತ್ತು. ಇಂಥ ಘೋಷಣೆಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ. ರಾಜಕೀಯ ಪಕ್ಷಗಳ ಇಂಥ ಘೋಷಣೆಗಳ ಮೇಲೆ ನಿಯಂತ್ರಣ  ಹೇರಬೇಕೆಂದು ನ್ಯಾಯವಾದಿ ಎಸ್.ಸುಬ್ರಹ್ಮಣ್ಯನ್ ಬಾಲಾಜಿ ಸುಪ್ರೀಂ ಮೆಟ್ಟಿಲೇರಿದ್ದರು.

ಪರಿಣಾಮವೇನು?
- ಮಿಕ್ಸರ್ ಗ್ರೈಂಡರ್, ಲ್ಯಾಪ್‌ಟಾಪ್ ನೀಡಿಕೆ ಮುಂತಾದ ಪಕ್ಷಗಳ ಭರವಸೆ ಮೇಲೆ ಕಡಿವಾಣ ಬೀಳಬಹುದು
- ಭಾರತದ ಚುನಾವಣಾ ಆಯೋಗ ಮುಂದಿನ ದಿನಗಳಲ್ಲಿ ಪ್ರಣಾಳಿಕೆಗಳ ಮೇಲೆ ನಿಯಂತ್ರಣ ಸಾಧಿಸಬಹುದು.
- ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆಯಡಿಯಲ್ಲಿ ಬರುತ್ತದೆ ಎಂಬ ಆದೇಶ ಜಾರಿಗೆ ತರಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement