ಬಿಎಸ್‌ವೈಗೆ ಅಡ್ಡವಾಣಿ?
ಮಾಜಿ ಮುಖ್ಯಮಂತ್ರಿ ಬಿ..ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರುವ ವಿಚಾರದಲ್ಲಿ ಪಕ್ಷದ ರಾಜ್ಯ ಸಂಸದರೊಂದಿಗೆ ಚರ್ಚಿಸಲು...
ಕನ್ನಡಪ್ರಭ ವಾರ್ತೆ , ಬೆಂಗಳೂರು , ಜು. 6
ಮಾಜಿ ಮುಖ್ಯಮಂತ್ರಿ ಬಿ..ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರುವ ವಿಚಾರದಲ್ಲಿ ಪಕ್ಷದ ರಾಜ್ಯ ಸಂಸದರೊಂದಿಗೆ ಚರ್ಚಿಸಲು ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ನಿರಾಕರಿಸಿದ್ದಾರೆ. ಸದ್ಯಕ್ಕೆ ಪಕ್ಷದ ವಿಚಾರದಲ್ಲಿ ಯಾವುದೇ ಚರ್ಚೆಗೆ ತಾವು ಸಿದ್ಧರಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಏತನ್ಮಧ್ಯೆ, ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆಸಿಕೊಳ್ಳುವ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಲು ಸೋಮವಾರ ಮುಹೂರ್ತ ನಿಗದಿಯಾಗಿದೆ. ಆದರೆ, ಆಡ್ವಾಣಿ ಅವರು ಈ ನಿಯೋಗದ ಜತೆ ಮಾತುಕತೆ ನಡೆಸಲು ನಿರಾಕರಿಸಿದ್ದರಿಂದ, ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಲೋಕಸಭೆ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಸಂಸದರಾದ ಡಿ.ಬಿ. ಚಂದ್ರೇಗೌಡ, ಜನಾರ್ದನ ಸ್ವಾಮಿ, ಜಿ.ಎಂ. ಸಿದ್ದೇಶ್ವರ, ಶಾಸಕರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಲು ದೆಹಲಿಗೆ ತೆರಳಲಿದ್ದಾರೆ.
ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆಸಿಕೊಳ್ಳುವ ಬಗ್ಗೆ ಆ ಪಕ್ಷದ ರಾಜ್ಯ ಮುಖಂಡರು ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ಈ ವಿಚಾರವನ್ನು ಯಡಿಯೂರಪ್ಪ ಅವರಿಗೂ ತಲುಪಿಸಿದ್ದರು. ನಿಮ್ಮ ಪ್ರಯತ್ನ ಮಾಡಿ ಎನ್ನುವ ಮೂಲಕ ಯಡಿಯೂರಪ್ಪ ಅವರು ಬಿಜೆಪಿಗೆ ಸೇರಲು ತಮ್ಮ ವಿರೋಧವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಥಾವರ್‌ಚಂದ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಚರ್ಚೆಯಲ್ಲಿ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಕರೆಸಿಕೊಳ್ಳುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸದೆ ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ ಎಂಬ ಕಾರಣಕ್ಕಾಗಿ ಪ್ರಸ್ತಾಪವನ್ನು ಅಲ್ಲಿಗೆ ಕೈಬಿಡಲಾಗಿತ್ತು.
ಈ ಮಧ್ಯೆ ಕೋರ್ ಕಮಿಟಿ ಸಭೆ ನಂತರ, ಯಡಿಯೂರಪ್ಪ ಅವರು ಬಿಜೆಪಿಗೆ ಬರುವುದಾದರೆ ಅವರಾಗಿಯೇ ಅರ್ಜಿ ಹಾಕಲಿ ಎಂದು ಗೆಹ್ಲೋಟ್ ನೀಡಿದ್ದ ಹೇಳಿಕೆ ಯಡಿಯೂರಪ್ಪ ಅವರನ್ನು ಕೆರಳಿಸಿತ್ತು. ಬಿಜೆಪಿಗೆ ತಾವು ಅರ್ಜಿ ಹಾಕುವುದಿಲ್ಲ. ಬೇಕಿದ್ದರೆ ಅವರೇ ಆಹ್ವಾನಿಸಲಿ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ಈ ಹಿನ್ನೆಲೆಯಲ್ಲಿ ಸಂಸದ ಡಿ.ಬಿ. ಚಂದ್ರೇಗೌಡ ಅವರ ನಿವಾಸದಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಪರ ಇರುವ ಮುಖಂಡರು ಮತ್ತೊಂದು ಸುತ್ತಿನ ಸಭೆ ಸೇರಿ ಈ ಕುರಿತು ರಾಷ್ಟ್ರೀಯ ನಾಯಕರೊಂದಿಗೆ ನೇರವಾಗಿ ಪ್ರಸ್ತಾಪಿಸಲು ತೀರ್ಮಾನಿಸಿದ್ದರು. ಇದಕ್ಕಾಗಿ ಕಾಲಾವಕಾಶ ನೀಡುವಂತೆ ಕೋರಲು ಮುಂದಾಗಿದ್ದರು.
ಈ ಮಧ್ಯೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಯಡಿಯೂರಪ್ಪ ಪಕ್ಷಕ್ಕೆ ಬರುತ್ತಾರೆ ಎಂಬ ವಿಶ್ವಾಸ ತಮಗಿದೆ ಎನ್ನುವ ಮೂಲಕ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ಧವಿರುವುದಾಗಿ ಸಂದೇಶ ರವಾನಿಸಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ಈ ಪ್ರತಿಕ್ರಿಯೆ ಬರುತ್ತಿದ್ದಂತೆ ಚುರುಕಾದ ರಾಜ್ಯ ಮುಖಂಡರು ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ವಿಚಾರ ಚರ್ಚಿಸಲು ತಾವು ಬರುತ್ತಿರುವ ಸಂದೇಶ ತಿಳಿಸಿ, ಭೇಟಿಗೆ ಸಮಯ ನಿಗದಿಪಡಿಸುವಂತೆ ಲಾಲ್‌ಕೃಷ್ಣ ಆಡ್ವಾಣಿ, ರಾಜನಾಥ್ ಸಿಂಗ್ ಮತ್ತು ಮೋದಿ ಅವರಲ್ಲಿ ಕೋರಿದ್ದರು. ಅದರಂತೆ ಸೋಮವಾರ ಮುಹೂರ್ತ ನಿಗದಿಯಾಗಿದೆ.
ಆದರೆ, ಆಡ್ವಾಣಿ ಮಾತ್ರ ಈ ಕುರಿತು ಚರ್ಚಿಸಲು ನಿರಾಕರಿಸಿದ್ದಾರೆ. ಸದ್ಯಕ್ಕೆ ಪಕ್ಷದ ವಿಚಾರದಲ್ಲಿ ಯಾವುದೇ ಚರ್ಚೆಗೆ ತಾವು ಸಿದ್ಧರಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್, ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಯಡಿಯೂರಪ್ಪ ಅವರ ವಿಚಾರ ಚರ್ಚಿಸಲಿದ್ದಾರೆ. ಯಡಿಯೂರಪ್ಪ ಅವರೂ ಇದಕ್ಕೆ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
- ಬಿಜೆಪಿಗೆ ಬಿಎಸ್‌ವೈ ಕರೆತರಲು ದೆಹಲಿಯಲ್ಲಿ ಅಧಿಕೃತವಾಗಿ ಆರಂಭವಾದ ಯತ್ನ
- ಸೋಮವಾರ ರಾಜನಾಥ್, ಮೋದಿ ಜೊತೆ ರಾಜ್ಯ ಸಂಸದರು, ಶಾಸಕರ ಚರ್ಚೆ
- ರಾಜ್ಯದಲ್ಲಿನ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಕುರಿತು ವರಿಷ್ಠರಿಗೆ ಮನವರಿಕೆ
- ಬಿಜೆಪಿ ಸೇರಲು ವಿರೋಧವಿಲ್ಲ ಎಂದು ಅಭಿಪ್ರಾಯ ನೀಡಿರುವ ಬಿ.ಎಸ್.ಯಡಿಯೂರಪ್ಪ