ಎಪಿಎಂಸಿ ನಿವೇಶನ ಬರೀ ಲಕ್ಷ ಲೆಕ್ಕದಲ್ಲಿ ಮಾರಾಟ!
ಗಂಗಾವತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಕೋಟ್ಯಂತರ ರುಪಾಯಿ ಆಸ್ತಿಯನ್ನು ನಿಯಮ...
ಕನ್ನಡಪ್ರಭ ವಾರ್ತೆ , ಕೊಪ್ಪಳ , ಜು. 7
ಗಂಗಾವತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಕೋಟ್ಯಂತರ ರುಪಾಯಿ ಆಸ್ತಿಯನ್ನು ನಿಯಮ ಉಲ್ಲಂಘಿಸಿ ಬರೀ ಲಕ್ಷಾಂತರ ರುಪಾಯಿಗೆ ಮಾರಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಈ ಅವ್ಯವಹಾರದ ವಿರುದ್ಧ ಹಾಲಿ ಎಪಿಎಂಸಿ ಆಡಳಿತ ಮಂಡಳಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದು, ಅದನ್ನು ಪ್ರಭಾವಿ ಶಕ್ತಿಯೊಂದು ತಡೆಯಲು ಯತ್ನಿಸುತ್ತಿದೆ. ಈ ಎಲ್ಲ ಬೆಳವಣಿಗೆಗೆ ಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿಯೂ ಆಗಿರುವ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿಯತ್ತ ಎಪಿಎಂಸಿ ಆಡಳಿತ ಮಂಡಳಿಯ ಮಾಜಿ ಸದಸ್ಯರು ಬೊಟ್ಟು ಮಾಡುತ್ತಿದ್ದಾರೆ. ಆದರೆ, ಇದನ್ನು ತಳ್ಳಿ ಹಾಕಿರುವ ತಂಗಡಗಿ, ಈ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಎಪಿಎಂಸಿ ನಿವೇಶನ ಮಾರಾಟ ನಾನಾ ಮಜಲು ಪಡೆದುಕೊಳ್ಳುತ್ತಿದ್ದು, ಇದರ ಸಮಗ್ರ ತನಿಖೆ ಅಗತ್ಯವಿದೆ.
ಏನಿದು ಪ್ರಕರಣ?: ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿರುವ ಸಿಬಿಎಸ್ ಗಂಜ್ ಬಹಳ ವಿಸ್ತಾರವಾದ ಜಾಗವನ್ನು ಹೊಂದಿದೆ. ಇಲ್ಲಿಯ ಕಾರ್ನರ್ ನಿವೇಶನವನ್ನು 2012ರಲ್ಲಿ ಮಾರಲಾಗಿತ್ತು. 44 ಸಾವಿರ ಚದರ ಅಡಿಯ ಈ ನಿವೇಶನವನ್ನು ಮೇಲ್ನೋಟಕ್ಕೆ ಪೆಟ್ರೋಲ್ ಬಂಕ್ ಸ್ಥಾಪಿಸಲು ಮಾರಲಾಗಿದೆ. ಆದರೆ, ಈ ಜಾಗದಲ್ಲಿ ಬಾರ್, ರೆಸ್ಟೋರೆಂಟ್ ಮಾಡುವ ಹುನ್ನಾರ ಅಡಗಿದ್ದು, ಎಲ್ಲವನ್ನೂ ಗೌಪ್ಯವಾಗಿ ಇಡಲಾಗಿದೆ.
44 ಸಾವಿರ ಚದರ ಅಡಿ ನಿವೇಶನವನ್ನು ನಿಯಮಾನುಸಾರ ಟೆಂಡರ್ ಮೂಲಕ ಮಾರಲಾಗಿದ್ದರೂ, ಟೆಂಡರ್ ಸ್ಥಳವನ್ನು ಕೊನೆ ಗಳಿಗೆಯಲ್ಲಿ ಬದಲಾಯಿಸಲಾಗಿದೆ. ಹಾಗೂ ಕೆಲವೇ ಕೆಲವರು ಭಾಗವಹಿಸಿ ಟೆಂಡರ್ ಅನ್ನು ಹೈಜಾಕ್ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಉಪನೋಂದಣಾಧಿಕಾರಿ ಕಚೇರಿಯ ಪ್ರಕಾರ ಇಲ್ಲಿ ಪ್ರತಿ ಚದರ ಅಡಿ 650 ಬೆಲೆ ಇದ್ದರೆ, ಖಾಸಗಿ ಮಾರುಕಟ್ಟೆಯಲ್ಲಿ ಇದರ ಬೆಲೆ ಪ್ರತಿ ಚದರ ಅಡಿಗೆ 1 ಸಾವಿರ ಇದೆ. ಉಪನೋಂದಣಾಧಿಕಾರಿ ಲೆಕ್ಕದ ಪ್ರಕಾರವೇ ಆದರೂ, ಈ ನಿವೇಶನಕ್ಕೆ ಏನಿಲ್ಲವೆಂದರೂ 6-7 ಕೋಟಿ ಆಗುತ್ತದೆ. ಆದರೆ, ಕೇವಲ 1 ಕೋಟಿಗೂ ಕಡಿಮೆ ಬೆಲೆಗೆ ಮಾರಲಾಗಿದೆ. ಅಚ್ಚರಿ ಎಂದರೆ ಬಿಡ್ ವೇಳೆ 121ರಿಂದ 5 ಪೈಸೆ, ಹತ್ತು ಪೈಸೆ ಏರಿಸಿ, 125ಕ್ಕೆ ಚದರ ಅಡಿಯಂತೆ ಹರಾಜು ಮಾಡಿದ ದಾಖಲೆ ಸೃಷ್ಟಿಸಲಾಗಿದೆ.
ಹಸ್ತಕ್ಷೇಪ: ಈ ಮಧ್ಯೆ 2013ರಲ್ಲಿ ಬಂದ ಆಡಳಿತ ಮಂಡಳಿ ನಿವೇಶನ ಮಾರಾಟ ತಡೆ ಹಿಡಿಯುವ ನಿರ್ಣಯ ಕೈಗೊಂಡಿತು. ಆಗ ಕೃಷಿ ಮಾರುಕಟ್ಟೆ ಸಚಿವರಾಗಿದ್ದ ಎಸ್.ಕೆ. ಬೆಳ್ಳುಬ್ಬಿ ಅವರ ಮೇಲೆ ಯಾರೋ ಪ್ರಭಾವ ಬೀರಿ, ಇದನ್ನು ಯಥಾವತ್ತಾಗಿ ಆದೇಶಿಸುವಂತೆ ಕಾರ್ಯದರ್ಶಿಗಳ ಸಭೆಯಲ್ಲಿ ಸಚಿವರು ಒತ್ತಡ ಹಾಕಿದರು. ಆದರೆ, ಇದನ್ನು ಗಂಗಾವತಿ ಎಪಿಎಂಸಿ ಆಡಳಿತ ಮಂಡಳಿಯೇ 2013ರ ಮೇ 17ರಂದು ತಿರಸ್ಕರಿಸಿ, ಇದರ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಿದೆ.
ತಡೆಹಿಡಿಯುವ ಹುನ್ನಾರ: ಈಗ ಹಿಂದಿನ ಎಪಿಎಂಸಿ ಆಡಳಿತ ಮಂಡಳಿ ಅಧಿಕಾರ ಕಳೆದುಕೊಂಡಿರುವುದರಿಂದ ಪುನಾ ಹಿಂದಿನ ಅವಧಿಯಲ್ಲಾಗಿದ್ದ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಲು ಯತ್ನಿಸಲಾಗುತ್ತಿದೆ. ಮೇಲ್ಮನವಿ ಸಲ್ಲಿಸಲು ಸಕಲ ತಯಾರಿ ನಡೆದಿದ್ದರೂ, ಇನ್ನೂ ಸಲ್ಲಿಕೆಯಾಗಿಲ್ಲ. ಇದನ್ನು ತಡೆಯುವ ನಿಟ್ಟಿನಲ್ಲಿ ತಂಗಡಗಿ ಕೈವಾಡವೂ ಇದೆ ಎನ್ನಲಾಗುತ್ತಿದೆ.
ಕಾನೂನು ಉಲ್ಲಂಘನೆ ಆಗಿದ್ದೆಲ್ಲಿ?
ಎಪಿಎಂಸಿ ನಿಯಮಾವಳಿಯನ್ವಯ ಎಪಿಎಂಸಿ ನಿವೇಶನವನ್ನು ಎಪಿಎಂಸಿ ದಲ್ಲಾಳಿ ಪರವಾನಗಿ ಇರುವವರಿಗೆ ಮಾತ್ರ ನೀಡಬೇಕು. ಬೇರೆ ಯಾರಿಗೂ ಎಪಿಎಂಪಿ ನಿವೇಶನ ನೀಡಲು ಬರುವುದಿಲ್ಲ. ಆದರೆ, ಇಲ್ಲಿ ದಲ್ಲಾಳಿಯಲ್ಲದವರಿಗೆ ಮತ್ತು ಬೇರೆ ಉದ್ದೇಶಕ್ಕಾಗಿ ನಿವೇಶನ ನೀಡಿದ್ದಾರೆ ಎನ್ನುವುದು ಕಾನೂನುಬಾಹಿರ ಸಂಗತಿ. ಮಾಜಿ ಶಾಸಕರೊಬ್ಬರು ಬೇನಾಮಿ ಹೆಸರಲ್ಲಿ ಈ ಟೆಂಡರ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಅವರು ತಾವೇ ನೇರವಾಗಿ ಕಣಕ್ಕಿಳಿಯದೇ ತಮ್ಮ ಬೆಂಬಲಿಗರೊಬ್ಬರ ಹೆಸರಿನಲ್ಲಿ ಖರೀದಿಸಿದ್ದಾರೆ ಎನ್ನಲಾಗುತ್ತದೆ. ಈ ಬಗ್ಗೆಯೂ ತನಿಖೆಯಾಗುವ ಅಗತ್ಯವಿದೆ.
ಈಗಾಗಲೇ ಎಪಿಎಂಸಿ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಇದನ್ನು ಪಾರು ಮಾಡಲು ಇಂಥ ಆಸ್ತಿಯನ್ನು ಸಾರ್ವಜನಿಕವಾಗಿ ವ್ಯಾಪಕ ಪ್ರಚಾರ ಮಾಡಿ ಹರಾಜು ಮಾಡಿದ್ದರೆ 6-8 ಕೋಟಿಗೆ ಬೆಲೆ ಬಾಳುತ್ತಿತ್ತು. ಆದರೆ, ಅದರಲ್ಲಿ ಏನೋ ಮಸಲತ್ತು ನಡೆಸಿ, ಟೆಂಡರ್ ಪ್ರಕ್ರಿಯೆ ನಡೆಸಿರುವುದರಿಂದ ಅನುಮಾನ ಬಂದಿದೆ.
- ತಿಪ್ಪೆರುದ್ರಸ್ವಾಮಿ,
ಮಾಜಿ ಅಧ್ಯಕ್ಷರು, ಎಪಿಎಂಸಿ, ಗಂಗಾವತಿ
ಗಂಗಾವತಿ ಎಂಪಿಎಂಸಿ ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಅದು ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಮೂಲಕವೇ ನಡೆದಿದೆ. ಹೀಗಾಗಿ, ಆ ಕುರಿತು ನಾನು ಏನೂ ಹೇಳಲಾರೆ.
- ಶಿವರಾಜ ತಂಗಡಗಿ,
ಉಸ್ತುವಾರಿ ಸಚಿವರು, ಕೊಪ್ಪಳ ಜಿಲ್ಲೆ
-ಸೋಮರಡ್ಡಿ ಅಳವಂಡಿ