ಗೋಲ್‌ಮಾಲ್ ಡೀಲ್
ದೇಶದ ವಿಮಾನ ಯಾನ ಕ್ಷೇತ್ರದಲ್ಲಿ ಈಗ ವಿವಾದದ ಬಿರುಗಾಳಿ ಎದ್ದಿದೆ. ಖಾಸಗಿ ಕ್ಷೇತ್ರದಲ್ಲಿ ಅದ್ಧೂರಿತನ ಮೆರೆದಿದ್ದ ಕಿಂಗ್‌ಫಿಶರ್ ಏರ್‌ಲೈನ್ಸ್ ಈಗ ವಸ್ತುಶಃ ತೆರೆಮರೆಗೆ ಸರಿದಿದೆ. ಅದೇ ರೀತಿ ಖಾಸಗಿ ಕ್ಷೇತ್ರದ ಮತ್ತೊಂದು ಪ್ರಮುಖ ವಿಮಾನ ಯಾನ ಸಂಸ್ಥೆ ಜೆಟ್ ಏರ್‌ವೇಸ್ ಈಗ ಸುದ್ದಿಯಲ್ಲಿದೆ. ಅಬುಧಾಬಿ ಮೂಲದ ಎತಿಹಾದ್ ಏರ್‌ಲೈನ್ಸ್ ಜತೆಗೆ ಮಾಡಿದ ಒಪ್ಪಂದ ಈಗ ವಿವಾದಕ್ಕೆ ಕಾರಣವಾಗಿದೆ. ಒಪ್ಪಂದಿಂದಾಗಿ ದೇಶದ ವಾಯು ಯಾನ ಕ್ಷೇತ್ರವನ್ನು ವಿದೇಶಿ ಸಂಸ್ಥೆ ಕೈಗೆ ಒಪ್ಪಿಸಲಾಗುತ್ತದೆ ಎಂಬ ಆರೋಪ ವ್ಯಕ್ತವಾಗಿದೆ. ಸೆಬಿ, ಪ್ರಧಾನಮಂತ್ರಿಗಳ ಕಾರ್ಯಾಲಯ, ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) , ಸಂಸತ್‌ನ ಸ್ಥಾಯಿ ಸಮಿತಿ ಸೇರಿದಂತೆ ಪ್ರಮುಖ ಸಮಿತಿಗಳು ಒಪ್ಪಂದದ ಬಗ್ಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿವೆ. ಡೀಲ್‌ನಲ್ಲಿ ಗೋಲ್‌ಮಾಲ್ ನಡೆದಿದೆ ಎನ್ನುವುದು ಪ್ರಮುಖ ಆರೋಪ.
ಷೇರು ಮಾರಾಟಕ್ಕೆ ನಿರ್ಧಾರ
ಜಾಗತಿಕ ವ್ಯಾಪಾರ ವಹಿವಾಟಿನಲ್ಲಿ ಈಗ ಏರಿಳಿತದ ಹಾದಿ. ಅದು ವಿಮಾನ ಯಾನ ಕ್ಷೇತ್ರವನ್ನೂ ಬಿಟ್ಟಿಲ್ಲ. ಉದ್ಯಮಿ ವಿಜಯ ಮಲ್ಯ ನೇತೃತ್ವದ ಕಿಂಗ್‌ಫಿಶರ್ ಅದ್ಧೂರಿ ಕೊಡುಗೆಗಳನ್ನು ನೀಡಿ ಮತ್ತು ಇತರ ತೊಂದರೆಗಳಿಂದ ಸಾಲದ ಸುಳಿಗೆ ಸಿಲುಕಿ ದಿವಾಳಿಯಾಯಿತು. ಆದರೆ, ಮಾರುಕಟ್ಟೆಯ ಏರಿಳಿತದ ರಭಸಕ್ಕೆ ಸಿಕ್ಕಿದ ನರೇಶ್ ಗೋಯಲ್ ಒಡೆತನದ ವಿಮಾನ ಯಾನ ಸಂಸ್ಥೆ ಶೇ.24ರಷ್ಟು ಷೇರುಗಳನ್ನು ಅಬುಧಾಬಿ ಮೂಲದ ಎತಿಹಾದ್ ಏರ್ವೇಸ್ಗೆ ಮಾರಲು ನಿರ್ಧರಿಸಲಾಯಿತು. ಏ.24ಕ್ಕೆ ಈ ಬಗ್ಗೆ ನಿರ್ಧಾರ ಪ್ರಕಟಿಸಲಾಯಿತು.
ವಿವಾದ ಏನು?: ಭಾರತ ಮತ್ತು ಅಭುದಾಬಿ ನಡುವೆ 2007-2008ರಲ್ಲಿ ವಿಮಾನ ಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಜೆಟ್ ಮತ್ತು ಎತಿಹಾದ್ ನಡುವೆ ಒಪ್ಪಂದ ಏರ್ಪಟ್ಟಿದೆ. ಅದಕ್ಕೆ ಹಲವು ಕಡೆಗಳಿಂದ ಆಕ್ಷೇಪಗಳು ಕೇಳಿ ಬಂದಿವೆ. ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಆಕ್ಷೇಪ ವ್ಯಕ್ತಪಡಿಸಿದೆ.
ಸಚಿವರ ಆಕ್ಷೇಪ
ಹಣಕಾಸು ಸಚಿವ ಪಳನಿಯಪ್ಪನ್ ಚಿದಂಬರಂ ನೇತೃತ್ವದ ಸಮಿತಿ ಕೂಡ ಮಾಲೀಕತ್ವ , ಸಂಸ್ಥೆಯ ಸ್ವರೂಪ ಸೇರಿ ಮೂರು ಪ್ರಮುಖ ವಿಚಾರಗಳ ಬಗ್ಗೆ ಸ್ಪಷ್ಟನೆ ಕೋರಿದ್ದರು. ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಕೂಡ ಒಪ್ಪಂದದ ಸ್ವರೂಪಕ್ಕೆ ಆಕ್ಷೇಪವೆತ್ತಿದ್ದರು. ಸಂಸತ್‌ನ ಸ್ಥಾಯಿ ಸಮಿತಿ, ಜನತಾ ಪಕ್ಷದ ಅಧ್ಯಕ್ಷ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಡೀಲ್‌ಗೆ ಟೀಕೆ ಮಾಡಿದ್ದರು. ಡಾ.ಸ್ವಾಮಿ ಒಪ್ಪಂದದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸೆಬಿ ಆಕ್ಷೇಪ ಏನು
- ಜೆಟ್ ಷೇರುಗಳನ್ನು ಖರೀದಿಸಿದ ಬಳಿಕ ಎತಿಹಾದ್ ಭಾರತೀಯ ಸಂಸ್ಥೆಯ ಮೇಲೆ ಮೂವರು ನಿರ್ದೇಶಕರನ್ನು ನೇಮಿಸುವ ಅಧಿಕಾರ ಪಡೆದುಕೊಳ್ಳಬಹುದು.
- ಜಂಟಿ ಕಂಪನಿಯ ಪ್ರಮುಖ ಆಡಳಿತ ವ್ಯವಸ್ಥೆಯಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಕಂಪನಿಯ ಮಾತೇ ಮೇಲಾಗಬಹುದು.
ಪ್ರಧಾನ ಮಂತ್ರಿ ಕಚೇರಿ
- ವಿದೇಶಾಂಗ ಮತ್ತು ವಾಣಿಜ್ಯ ಸಚಿವಾಲಯ ಒಪ್ಪಂದದ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದವು. ಆದರೆ ಆರ್ಥಿಕ ವ್ಯವಹಾರಗಳ ಇಲಾಖೆ ಆಕ್ಷೇಪಿಸಿತ್ತು.
- ಒಪ್ಪಂದದ ಬಗ್ಗೆ ಕೆಲ ವಾಯು ಯಾನ ಸಂಸ್ಥೆಗಳು ಜೆಟ್-ಎತಿಹಾದ್ ಒಪ್ಪಂದದ ಬಗ್ಗೆ ಆತಂಕ ವ್ಯಕ್ತಪಡಿಸಿವೆ.
- ಮೆಟ್ರೋ ನಗರಗಳಲ್ಲಿ ಖಾಸಗಿ ವಿಮಾನ ಸಂಸ್ಥೆಗಳು ಬೃಹತ್ ಮೊತ್ತದಲ್ಲಿ ಹಣ ಹೂಡಿವೆ. ಅವುಗಳು ಮೆಟ್ರೋ ನಗರಗಳಲ್ಲಿ ವಾಯು ಯಾನ ಹಬ್ ಸ್ಥಾಪನೆಗೆ ಮುಂದಾಗಿವೆ.
- ಭಾರತ ಮತ್ತು ಐರೋಪ್ಯ ರಾಷ್ಟ್ರಗಳು ಮತ್ತು ಉತ್ತರ ಅಮೆರಿಕ ರಾಷ್ಟ್ರಗಳಿಗೆ ತೆರಳುವ ವಿಮಾನ ಸಂಚಾರ ಅಬುಧಾಬಿಗೆ ವರ್ಗಾವಣೆಯಾಗುವ ಸಾಧ್ಯತೆ
- ಅಬುಧಾಬಿ ಮತ್ತು ನವದೆಹಲಿ ನಡುವಿನ ವಿಮಾನ ಸಂಚಾರದ ಹೆಚ್ಚಿನ ಸೀಟುಗಳು ಜೆಟ್- ಎತಿಹಾದ್ ಸಮೂಹ ಸಂಸ್ಥೆಯ ವಿಮಾನಗಳಿಗೇ ಹೆಚ್ಚು ಸಿಗಬಹುದು.
- ಇತರ ದೇಶಗಳು ಕೂಡ ಇದೇ ಮಾದರಿಯ ಒಪ್ಪಂದ ಮಾಡಿಕೊಳ್ಳಲು ಅನುಮತಿ ಕೇಳಬಹುದು. ಆ ಸಂದರ್ಭದಲ್ಲಿ ಸಮಯೋಚಿತವಾದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಕೇಂದ್ರ ಸರ್ಕಾರಕ್ಕೆ ಬರಬಹುದು.