ಗೋವಾದಲ್ಲಿ ಬಿಎಸ್‌ವೈ ವಿಶೇಷ ಪೂಜೆ
ಪಣಜಿ: ಕೆಜೆಪಿ ಸಂಸ್ಥಾಪಕ, ಕರ್ನಾಟಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಗೆ ವಾಪಸ್ಸು ಕರೆಸುವ ಉದ್ದೇಶದಿಂದ ಕರ್ನಾಟಕ ಬಿಜೆಪಿ ಹಲವು ನಾಯಕರು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದರೆ, ಇತ್ತ ಗೋವಾದಲ್ಲಿ ತಂಗಿರುವ ಯಡಿಯೂರಪ್ಪ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಕಳೆದ ಶನಿವಾರ ರಾತ್ರಿಯೇ ಆಗಮಿಸಿರುವ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಸೇರಿದಂತೆ ಕೆಲ ಕೆಜೆಪಿ ನಾಯಕರು, ಬಿಜೆಪಿ ಸೇರ್ಪಡೆಯ ಕುರಿತು ಮಾತುಕತೆ ನಡೆಸಲು ಗೋವಾಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ಅವರು ಮಡಗಾಂವ್ ಸಮೀಪದ 'ಲೀಲಾ ಸ್ಟಾರ್ ಹೊಟೇಲ್'ನಲ್ಲಿ ತಂಗಿದ್ದಾರೆ. ಗೋವಾಕ್ಕೆ ಯಡಿಯೂರಪ್ಪಅವರು ಬಂದಿರುವುದನ್ನು ಎಲ್ಲಿಯೂ ಬಹಿರಂಗಗೊಳಿಸುತ್ತಿಲ್ಲ. ಯಡಿಯೂರಪ್ಪನವರು ಯಾವುದೇ ಕೆಲಸಕ್ಕೆ ಮುನ್ನ ದೇವರ ಪೂಜೆ ಪುನಸ್ಕಾರ ನಡೆಸಿಯೇ ಮುಂದಿನ ಹೆಜ್ಜೆಯಿಡುವುದು ಪದ್ಧತಿ. ಅದರಂತೆಯೇ ಗೋವಾಕ್ಕೆ ಬಂದಾಗಲೂ ಕೂಡ ಭಾನುವಾರ ಇಲ್ಲಿಯ ಮಾರ್ದೋಳದಲ್ಲಿನ ಮಹಾಲಸಾ ನಾರಾಯಣಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂಪ್ಪನವರೊಂದಿಗೆ ಗೋವಾ ರಾಜ್ಯದ ಸ್ಥಳೀಯ ಬಿಜೆಪಿ ಧುರೀಣರಾದ ಉದಯ ದನಗೈ, ಶರ್ಮದ ರಾಯತೂರಕರ, ದುರ್ಗಾದಾಸ ಕಾಮತ ಸೇರಿದಂತೆ ಹಲವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.