ಡೆಂಘೀ; ರಾಜ್ಯಾದ್ಯಂತ ಭಾರಿ ಅಬ್ಬರ...
ರಾಜ್ಯದಲ್ಲಿ ಡೆಂಘೀ ಜ್ವರ ಮತ್ತೆ ಅಬ್ಬರಿಸತೊಡಗಿದೆ. ಜನವರಿಯಿಂದ ಈವರೆಗೂ 30ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿರುವ...
ಕನ್ನಡಪ್ರಭ ಕಾಳಜಿ
ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಜ್ವರ ಮತ್ತೆ ಅಬ್ಬರಿಸತೊಡಗಿದೆ.
ಜನವರಿಯಿಂದ ಈವರೆಗೂ 30ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿರುವ ಡೆಂಘೀ ರಾಜ್ಯಾದ್ಯಂತ ಇನ್ನೂ ವ್ಯಾಪಕವಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಆದರೆ, ಆರೋಗ್ಯ ಇಲಾಖೆಯ ಲೆಕ್ಕದಲ್ಲಿ ಡೆಂಘೀ ಜ್ವರದಿಂದ ಸತ್ತವರ ಸಂಖ್ಯೆ ಬರೀ 8 ಮಂದಿ ಮಾತ್ರ.
ಏಕೆಂದರೆ, ಹೆಚ್ಚಿನ ಡೆಂಘೀ ಪಾಸಿಟಿವ್ ಮತ್ತು ಸಾವು ಪ್ರಕರಣಗಳು ಖಾಸಗಿ ಆಸ್ಪತ್ರೆಗಳಲ್ಲಿ ಪತ್ತೆಯಾಗುತ್ತಿವೆ. ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಇಲಾಖೆ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಡೆಂಘೀ ಜ್ವರದಿಂದ ಆಗುವ ಸಾವುಗಳಿಗೆ ಬೇರೆ ಕಾರಣ ಕೊಡುತ್ತಿದ್ದಾರೆ. ಜತೆಗೆ ಖಾಸಗಿ ಆಸ್ಪತ್ರೆಗಳು ಈ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನೂ ನೀಡುತ್ತಿಲ್ಲ.
ಹೀಗಾಗಿ ಆರೋಗ್ಯ ಇಲಾಖೆಗೆ 2012ರಲ್ಲಿ 3924 ಮಂದಿ ರೋಗಿಗಳ ಪೈಕಿ 21ಮಂದಿ ಸತ್ತಿದ್ದರು. ಈ ವರ್ಷ 2289 ರೋಗಿಗಳಲ್ಲಿ 8 ಮಂದಿ ಸತ್ತಿದ್ದಾರೆ ಎಂದು ಹೇಳುತ್ತಲೇ ಕುಳಿತಿದೆ.
ಡೆಂಘೀ ಏಕೆ ಹೆಚ್ಚಾಗುತ್ತಿದೆ ?: ಡೆಂಘೀ ಹೆಚ್ಚುತ್ತಿರುವುದಕ್ಕೆ ಪ್ರಮುಖ ಕಾರಣ ಹವಾಮಾನ ವೈಪರೀತ್ಯ. ಅಂದರೆ ಮಳೆ ಒಮ್ಮೆ ಬಂದು ನಾಲ್ಕೈದು ದಿನ ಬಾರದಿದ್ದರೆ ತೊಂದರೆಯಾಗುತ್ತದೆ. ಮಳೆ ನೀರು ತೆಂಗಿನ ಚಿಪ್ಪು, ಟಯರ್ ಚೂರು, ಖಾಲಿ ಕುಂಡದಂತ ಕಡೆ ಸಂಗ್ರಹವಾಗುತ್ತದೆ. ಇಂಥ ಕಡೆ ಈಡಿಸ್ ಈಜಿಪ್ಟಿ ಸೊಳ್ಳೆಗಳ ಸಂತಾನ ವೃದ್ಧಿಯಾಗಿ ರೋಗ ಹೆಚ್ಚಾಗುತ್ತಿದೆ.
ಇದರೊಂದಿಗೆ ರೋಗದ ಬಗ್ಗೆ ಆರೋಗ್ಯ ಇಲಾಖೆ ಮೂಡಿಸುತ್ತಿರುವ ಜಾಗೃತಿ ಏನೇನೂ ಸಾಲುತ್ತಿಲ್ಲ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಗಳು ರೋಗ ತಡೆಯುವ ಮತ್ತು ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿತ್ತು. ಅದೂ ಆಗುತ್ತಿಲ್ಲ.
ಇದರೊಂದಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗ ರೋಗ ಹರಡುತ್ತಿರುವ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಬೇಕು.
ತಕ್ಷಣದ ಕ್ರಮಕ್ಕೆ ಶಿಫಾರಸು ಮಾಡಬೇಕು. ಆದರೆ, ಈವರೆಗೂ ಯಾವುದೇ ಸಮೀಕ್ಷೆ ನಡೆದ ಉದಾಹರಣೆಗಳಿಲ್ಲ. ಇದೆಲ್ಲಕ್ಕಿಂತ ಜನರು ಕೂಡ ರೋಗದ ಬಗ್ಗೆ ಅಗತ್ಯ ಜಾಗ್ರತೆ ವಹಿಸಬೇಕಿದ್ದು, ಇದು ನಗರ ಪ್ರದೇಶಗಳನ್ನು ಬಿಟ್ಟರೆ ಇತರೆಡೆ ನಡೆಯುತ್ತಿಲ್ಲ.
30 ಮಂದಿ ಕಚ್ಚುತ್ತದೆ : ಸ್ವಚ್ಛ ನೀರಿನಲ್ಲಿ ಬೆಳೆದು ಹಗಲು ವೇಳೆ ಕಚ್ಚುವುದೇ ಈಡಿಸ್ ಈಜಿಪ್ಟಿ ಸೊಳ್ಳೆ ವಿಶೇಷ. ಆಶ್ಚರ್ಯ ಎಂದರೆ ಇದು 30 ಜನರಿಗೆ ಕಚ್ಚಿ ರೋಗ ಹರಡಿಸುವ ಸಾಮರ್ಥ್ಯ ಹೊಂದಿದೆ. ಈ ಸೊಳ್ಳೆ ಒಮ್ಮೆ ಡೆಂಘೀ ಬಂದಿದ್ದ ವ್ಯಕ್ತಿಗೆ ಕಚ್ಚಿದರೂ ರೋಗ ಬಹುಬೇಗ ಹರಡುತ್ತದೆ. ಅಲ್ಲದೆ. ಅಂಥವರು ಬದುಕುಳಿಯುವುದು ತೀರಾ ಕಷ್ಟ ಎನ್ನುತ್ತಾರೆ ವೈದ್ಯರು.
ರೋಗ ಲಕ್ಷಣಗಳು
- ವಿಪರೀತ ಜ್ವರ, ಮೈಕೈ ನೋವು
- ತಲೆನೋವು, ಹಣೆ ಭಾಗದಲ್ಲಿ ಭಾರ, ಹೊಟ್ಟೆ ನೋವು
- ಕಣ್ಣಿನ ಹಿಂಭಾಗದಲ್ಲಿ ನೋವು, ಕಣ್ಣಿನ ಚಲನೆ ಮಾಡಿದಾಗಲೂ ನೋವಾಗುತ್ತದೆ
- ಬಾಯಾರಿಕೆ, ರಕ್ತ ಸ್ರಾವ, ರಕ್ತ ವಾಂತಿಯೂ ಆಗಬಹುದು
- ಚರ್ಮ ಬಿಳಚಿಕೊಳ್ಳುವುದು. ಅಲ್ಲಲ್ಲಿ ಮಚ್ಚೆಯಂತೆ ಆಗುವುದು
ವೈರಸ್‌ನಲ್ಲಿ ವಿವಿಧ ರೀತಿಯ ಆಂಟಿಜನ್ ಇರುತ್ತದೆ. ಇದರಲ್ಲಿ ಒಂದಕ್ಕೆ ಔಷಧ ನೀಡಿದರೆ, ಮತ್ತೊಂದು ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಜನ ಜಾಗೃತರಾಗಬೇಕು. ಸೊಳ್ಳೆ ನಿಯಂತ್ರಿಸಬೇಕು. ಈ ಬಗ್ಗೆ ಸರ್ಕಾರ ಕೂಡ ಅಗತ್ಯ ಕ್ರಮಕೈಗೊಳ್ಳಬೇಕು. ಇದಲ್ಲದೆ ಬೇರೆ ಪರಿಹಾರವೇ ಇಲ್ಲ.
- ಡಾ.ಸುಧೀರ್, ಬೆಂಗಳೂರು
ಆಸ್ಪತ್ರೆಯ ಹಿರಿಯ ತಜ್ಞವೈದ್ಯ
ಡೆಂಘೀ ತಡೆಗೆ ಇಲಾಖೆ ಪ್ರಯತ್ನ ನಡೆಸುತ್ತಿದೆ. ಜ್ವರ ಇತ್ತೀಚಿಗೆ ಹೆಚ್ಚಾಗುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಇನ್ನೂ ಹೆಚ್ಚಿನ ಜಾಗೃತಿ ಮತ್ತು ರೋಗ ತಡೆಗೆ ಕ್ರಮಕೈಗೊಳ್ಳಲು ಸೂಚಿಸುತ್ತೇನೆ. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳು ಹೆಚ್ಚು ಜಾಗೃತಿ ಮೂಡಿಸುವಂತೆ ಮಾಡುತ್ತೇನೆ.
- ಯು.ಟಿ.ಖಾದರ್, ಆರೋಗ್ಯ ಸಚಿವ
ಮುಂಜಾಗ್ರತೆ ಏನು ?
- ಹೆಚ್ಚುಮಂದಿ ಸೊಳ್ಳೆ ನಿಯಂತ್ರಕಗಳನ್ನು ರಾತ್ರಿ ಬಳಸುತ್ತಾರೆ. ಡೇಂಘೀ ತಡೆಯಬೇಕಾದರೆ ಹಗಲಿನಲ್ಲೂ ಬಳಸಬೇಕು.
-ಮನೆಯಲ್ಲಿ ಮೂರು ದಿನಕ್ಕಿಂತ ಹೆಚ್ಚು ಕಾಲ ನೀರನ್ನು ಸಂಗ್ರಹಿಸಿಡಬಾರದು.
- ಮನೆ ಸುತ್ತ ತೆಂಗಿನ ಚಿಪ್ಪು, ಕುಂಡದಂತ ಕಡೆ ನೀರು ನಿಲ್ಲುವುದನ್ನು ಗುರುತಿಸಿ ಲಾರ್ವ, ಕ್ಯೂಪ ಬೆಳೆಯದಂತೆ ಮಾಡಬೇಕು.
- ವಿಪರೀತ ಜ್ವರ, ಮೈಕೈ ನೋವು ಕಾಣಿಸಿಕೊಂಡಾಗ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.
- ರಕ್ತದಲ್ಲಿರುವ ಪ್ಲೇಟ್‌ಲೆಟ್ ಪ್ರಮಾಣ 2.5ಲಕ್ಷಕ್ಕಿಂತ ಕಡಿಮೆಯಾಗದಂತೆ ನೋಡಿಕೊಳ್ಳಿ
-ಬಹುತೇಕ ಪ್ರಕರಣಗಳಲ್ಲಿ ಪ್ಲೇಟ್‌ಲೆಟ್ ಬರೀ 10ಸಾವಿರಕ್ಕೆ ಇಳಿದು ರೋಗಿಗಳು ಅಸುನೀಗಿರುವ ಉದಾಹರಣೆಗಳಿವೆ.
- ಶಿವಕುಮಾರ್ ಬೆಳ್ಳಿತಟ್ಟೆ