ಪರವಾನಗಿ ಭೂಮಾಪಕರ ಮುಷ್ಕರ; ಸರ್ವೆ ಸ್ಥಗಿತ
ಕ.ಪ್ರ.ವಾರ್ತೆ, ಬೆಂಗಳೂರು, ಜು. 8-
ರಾಜ್ಯ ಸರ್ಕಾರದ ನಿರ್ಲಕ್ಷ್ಯಭಾವದಿಂದ ಭೂಮಿ ಸರ್ವೆ ಕಾರ್ಯ ಸ್ಥಗಿತಗೊಂಡಿದೆ. ಸಿಬ್ಬಂದಿ ಕೊರತೆಯಿಂದ ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಭೂ ಮಾಲೀಕರಿಗೆ ಮತ್ತೊಂದು ಕಂಟಕ ಬಂದೊದಗಿದೆ.
ಭೂಮಿ ಸರ್ವೆಗೆ ಶುಲ್ಕ ನಿಗದಿ ಸೇರಿದಂತೆ ಭೂಮಾಪಕರ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದರೂ ಮೌನ ವಹಿಸಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದವರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ನಾಯಕರು ಇದೇ ಪರವಾನಗಿ ಭೂಮಾಪಕರ ಸಂಘ ಹಿಂದೆ ಪ್ರತಿಭಟನೆ ಮುಷ್ಕರ ನಡೆಸಿದ್ದಾಗ ಅವರ ಪರ ಧ್ವನಿ ಎತ್ತಿ, ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದ್ದರು. ಇಂದು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದು, ಅಂದಿನ ನಾಯಕರೇ ಇಂದು ಕಂದಾಯ ಸಚಿವರು ಸೇರಿದಂತೆ ಇತರೆ ಖಾತೆಯ ಮಂತ್ರಿಗಳಾಗಿದ್ದರೂ ಪರವಾನಗಿ ಭೂಮಾಪಕರ ಬೇಡಿಕೆ ಈಡೇರಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ.
ಸರ್ಕಾರಿ ಪರವಾನಗಿ ಭೂಮಾಪಕರ ತಮ್ಮ ಶುಲ್ಕ ಪರಿಷ್ಕರಣೆ ಸೇರಿದಂತೆ 2010ರಲ್ಲೇ ಬೇಡಿಕೆಗಳ ಈಡೇರಿಸಲು ಸಮ್ಮತಿಸಿದ್ದ ಸರ್ಕಾರ ಈವರೆಗೂ ಅದನ್ನು ಪೂರೈಸಿಲ್ಲ. ಹೀಗಾಗಿ ಸುಮಾರು 2500 ಸಂಖ್ಯೆಯಲ್ಲಿರುವ ಸರ್ಕಾರಿ ಪರವಾನಗಿ ಭೂಮಾಪಕರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ಆರಂಭಿಸಿದ್ದಾರೆ. ಆದ್ದರಿಂದ, ರಾಜ್ಯಾದ್ಯಂತ ನಕ್ಷೆ ತಯಾರಿ ಕಾರ್ಯ ಸಂಪೂರ್ಣ ಸ್ತಬ್ಧಗೊಂಡಿದೆ. ಇದು ರಾಜ್ಯ ಸರ್ಕಾರದ ಬೊಕ್ಕಸದ ಆದಾಯಕ್ಕೂ ಕತ್ತರಿ ಬೀಳಲಿದೆ.
ಒಂದು ಸರ್ವೆ ನಂಬರಿನ ಭೂಮಿಯ ಸರ್ವೆಗೆ 300 ಶುಲ್ಕವನ್ನು 1998ರಲ್ಲಿ ನಿಗದಿಪಡಿಸಲಾಗಿತ್ತು. ಈವರೆಗೂ ಅದನ್ನು ಪರಿಷ್ಕರಿಸಿಲ್ಲ. ಅಲ್ಲದೆ, ಮೋಜಿಣಿಯಲ್ಲಿ ಬಾಕಿ ಇರುವ ಅರ್ಜಿಗಳು ಬಹುತೇಕ ಪ್ರಾರಂಭಿಕ ತಪಾಸಣೆ ಹಂತದಲ್ಲೇ ಪಹಣಿ ತಿದ್ದುಪಡಿಯಾಗಬೇಕಿದ್ದು, ದಾಖಲೆ ನಿರ್ಮಾಣಕ್ಕೆ ಹಾಗೂ ಅಲಿನೇಷನ್ ಅರ್ಜಿಗಳು ಸರ್ಕಾರಿ ಭೂಮಾಪಕರಲ್ಲಿ ಎರಡು ವರ್ಷಗಳಿಂದ ಬಾಕಿ ಉಳಿದಿವೆ. ಈ ಬಗ್ಗೆ ಆಯುಕ್ತರು ಕ್ರಮ ಕೈಗೊಂಡಿಲ್ಲ. ಆದರೆ ಸಾರ್ವಜನಿಕರಲ್ಲಿ ಪರವಾನಗಿ ಭೂಮಾಪಕರು ಕೆಲಸ ಮಾಡುತ್ತಿಲ್ಲ ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಲೋಕೇಶ್ ಆರೋಪಿಸಿದ್ದಾರೆ.
ಮೂರು ವರ್ಷದಿಂದ ತತ್ಕಾಲ್ ಪೋಡಿ ಹಣವನ್ನೂ ಪರವಾನಗಿ ಭೂಮಾಪಕರಿಗೆ ನೀಡಿಲ್ಲ. ಈ ಎಲ್ಲ ವಿಷಯಗಳು ಭೂಮಾಪನ ಇಲಾಖೆ ಆಯುಕ್ತರಿಗೆ ಅರಿವಿದೆ. ಕಂದಾಯ ಕಾರ್ಯದರ್ಶಿಗಳ ಸಭೆಯಲ್ಲಿ ಆಗಿರುವ ತೀರ್ಮಾನಗಳನ್ನೂ ಕಾರ್ಯರೂಪಕ್ಕೆ ತರದೆ ಸಮಸ್ಯೆಗಳನ್ನು ನಿವಾರಿಸಿಲ್ಲ ಎಂದಿದ್ದಾರೆ.
ಇದಲ್ಲದೆ, ಭೂಮಾಪಕರ ನೇಮಕ ಪ್ರಕ್ರಿಯೆಯಲ್ಲಿ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮೊದಲೇ ಬಹಿರಂಗವಾಗಿತ್ತು. 1704 ಭೂಮಾಪಕರನ್ನು ಅಕ್ರಮವಾಗಿ ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದನ್ನು ರದ್ದುಗೊಳಿಸಬೇಕು. ಸರ್ಕಾರಿ ಪರವಾನಗಿ ಭೂಮಾಪಕರನ್ನು ವಿಲೀನಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪರವಾನಗಿ ಭೂಮಾಪಕರ ಬೇಡಿಕೆಗಳು
- ಸರ್ಕಾರಿ ಪರವಾನಗಿ ಭೂಮಾಪಕರನ್ನು ಸರ್ಕಾರಿ ಭೂಮಾಪಕರ ಹುದ್ದೆಗಳಿಗೆ ವಿಶೇಷ ನೇಮಕದ ಪ್ರಕಾರ ವಿಲೀನಗೊಳಿಸಬೇಕು.
- 1834 ಭೂಮಾಪಕರ ನೇಮಕಕ್ಕೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದ್ದು, ಇದರ ತನಿಖೆಯನ್ನು ಸಿಐಡಿಗೆ ವಹಿಸಬೇಕು.
- ಅಕ್ರಮದಿಂದ ಪ್ರಕಟಿಸಿರುವ 1704 ಭೂಮಾಪಕರ ಆಯ್ಕೆ ಪಟ್ಟಿ ರದ್ದುಗೊಳಿಸಬೇಕು.
- ಹೈಕೋರ್ಟ್ ಆದೇಶದಂತೆ ವಯೋವುತಿ ಸಡಿಲಿಕೆ ಜತೆಗೆ ಕೃಪಾಂಕ ನೀಡಿ ಪರವಾನಗಿ ಭೂಮಾಪಕರನ್ನು ನೇಮಕ ಮಾಡಲು ನಿಯಮಾವಳಿ ರೂಪಿಸಬೇಕು.
- ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ತತ್ಕಾಲ್ ಪೋಡಿ ಶುಲ್ಕವ್ನು ಕೂಡಲೇ ಪಾವತಿಸಬೇಕು.
-2008ರಲ್ಲಿ ಪ್ರಿ ಮ್ಯುಟೇಷನ್ ಶುಲ್ಕ 403ರಿಂದ 600ಕ್ಕೆ ಹೆಚ್ಚಿಸಿದ್ದು, ಬಾಕಿ ಉಳಿಸಿಕೊಂಡಿರುವ 176 ವಿತರಿಸಬೇಕು.
- ಹಾಲಿ ಪರವಾನಗಿ ಶುಲ್ಕವನ್ನು ಬೆಲೆ ಏರಿಕೆಯ ಇಂದಿನ ಸಮಯಕ್ಕೆ ಅನುಗುಣವಾಗಿ 2000ಕ್ಕೆ ಹೆಚ್ಚಿಸಬೇಕು.