ಬಿಎಸ್‌ವೈ ಬಗ್ಗೆ ಮಾತಾಡಬೇಡಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡಬೇಡಿ ಎಂದು...
ಕನ್ನಡಪ್ರಭ ವಾತೆ, ಬೆಂಗಳೂರು, ಜು. 8-
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ರಾಜ್ಯದ ನಾಯಕರಿಗೆ ತಾಕೀತು ಮಾಡಿದ್ದಾರೆ.
ಸುಮ್ಮನಿರಿ, ಈ ವಿಷಯದ ಬಗ್ಗೆ ಬಹಿರಂಗವಾಗಿ ತುಟಿಕ್-ಪಿಟಿಕ್ ಅನ್ನಬೇಡಿ. ನಾವು ಈ ಬಗ್ಗೆ ನಿರ್ಧರಿಸಿ ಪ್ರಕಟಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರತರಬೇಕು, ಅವರಿಲ್ಲದಿದ್ದರೆ ಚುನಾವಣೆ ಎದುರಿಸುವುದು ಅಸಾಧ್ಯ. ಅವರನ್ನು ಕರೆತರುವ ಪ್ರಯತ್ನ ಬೇಗ ಆಗಬೇಕು ಎಂದು ರಾಜ್ಯದ ಬಿಜೆಪಿ ನಾಯಕರು ಆಗಾಗ್ಗೆ ಹೇಳುತ್ತಲೇ ಇದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರಿಗೆ ಅಂಕುಶ ಹಾಕಿದ್ದಾರೆ. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಕರೆತರುವ ಪ್ರಯತ್ನ ಹಾಗೂ ಆ ಬಗೆಗಿನ ಪ್ರಸ್ತಾಪ-ಚರ್ಚೆಗಳು ರಾಷ್ಟ್ರಮಟ್ಟದಲ್ಲಿ ನಡೆಯುತ್ತಿವೆ. ಈ ಬಗ್ಗೆ ರಾಜ್ಯದಲ್ಲಿ ನಾಯಕರು ಮಾತನಾಡುವ ಅಗತ್ಯ ಇಲ್ಲ. ಈ ಬಗ್ಗೆ ಯಾವ ಹೇಳಿಕೆಯನ್ನೂ ನೀಡಬಾರದು. ರಾಜ್ಯ ನಾಯಕರು ಇಂತಹ ವಿಚಾರಗಳ ಸೂಕ್ಷ್ಮತೆ ಅರಿಯಬೇಕು. ಯಡಿಯೂರಪ್ಪ ಅವರ ಬಗ್ಗೆ ಯಾರೂ ಮಾತನಾಡಬಾರದು ಎಂದು ರಾಜನಾಥ್ ಸಿಂಗ್ ತಾಕೀತು ಮಾಡಿದ್ದಾರೆ.