ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮುಜರಾಯಿ ದೇವರಿಗಿನ್ನು ನಿತ್ಯ ಪೂಜೆ

Mainashree
Updated On : 9 Jul 2013, 12:35 pm

ಕ.ಪ್ರ. ವಾರ್ತೆ,  ಬೆಂಗಳೂರು,  ಜು.8-
ಆದಾಯ ಕಡಿಮೆ ಇರುವ ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಇನ್ನು ಮುಂದೆ ನಿತ್ಯ ಪೂಜೆ, ಪುನಸ್ಕಾರ, ಅಭಿಷೇಕ ನಡೆಯಲಿದೆ.
ಇಷ್ಟು ದಿನ ನಡೆಯುತ್ತಿರಲಿಲ್ಲವೇ? ಎಂಬ ಪ್ರಶ್ನೆ ಮೂಡಬಹುದು. ರಾಜ್ಯದ 34,000 ದೇವಸ್ಥಾನಗಳ ಪೈಕಿ 20,000ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಾರಕ್ಕೊಮ್ಮೆ ಪೂಜೆ ಸಲ್ಲಿಸುವುದೂ ಕಷ್ಟವಾಗಿತ್ತು. ಏಕೆಂದರೆ, ಆದಾಯದ ಕೊರತೆ. ಸರ್ಕಾರ ಈಗ ದೇವಸ್ಥಾನಗಳ ನಿರ್ವಹಣೆಗೆಂದು ಅರ್ಚಕರಿಗೆ ನೀಡುತ್ತಿದ್ದ ವಾರ್ಷಿಕ ತಸ್ತಿಕ್ ಹಣವನ್ನು 12,000ದಿಂದ 24,000ಕ್ಕೆ ಏರಿಸಿದೆ. ಹೀಗಾಗಿ ಪೂಜೆ, ಪುನಸ್ಕಾರಗಳಿಗೆ ಯಾವುದೇ ಅಡಚಣೆ ಇರದು.
ಎಷ್ಟೋ ಕಡೆ ಅರ್ಚಕರು ದೇವರಿಗೆ ದೀಪ ಹಚ್ಚಲು ಎಣ್ಣೆ ಬತ್ತಿಗೂ ಪರದಾಡುವ ಪರಿಸ್ಥಿತಿ ಇದೆ. ಸಾಮಾನ್ಯ ಶಿವನ ದೇಗುಲದಲ್ಲಿ ಸೋಮವಾರ, ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಪೂಜೆ ನಡೆಯಲೇಬೇಕು. ಆದರೆ, ವಾರಕ್ಕೊಮ್ಮೆ ಪೂಜೆ ಕೂಡ ಕಷ್ಟವಾಗಿದೆ.
ದೇವಸ್ಥಾನಗಳ ನಿರ್ವಹಣೆಗೆ ಸರ್ಕಾರ ನೀಡುವ ತಸ್ತಿಕ್ ಹಣ ಮಾಸಿಕ ಕೇವಲ 1000 ಆಗಿರುವುದರಿಂದ ಅರ್ಚಕರು ತಿಂಗಳು ಪೂರ್ತಿ ದೇವಸ್ಥಾನ ನಿರ್ವಹಣೆಗೆ ಆರತಿ ತಟ್ಟೆಗೆ ಬೀಳುವ ಕಾಣಿಕೆಗೇ ಕಾಯುವಂತಾಗಿತ್ತು.

ಹೋರಾಡಿ ಸುಸ್ತಾಗಿದ್ದರು: ಹೀಗಾಗಿ ದೇವಸ್ಥಾಗಳ ಅರ್ಚಕರು ತಸ್ತಿಕ್ ಹೆಚ್ಚಿಸಬೇಕೆಂದು ಏಳೆಂಟು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರು. ಇದಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೊಂಚ ಕಿಮ್ಮತ್ತು ಬಂದಿತ್ತಾದರೂ ಹಣಕಾಸು ಇಲಾಖೆ ಒಪ್ಪಿಗೆ ಇಲ್ಲದೆ ನೆನೆಗುದಿಗೆ ಬಿದ್ದಿತ್ತು. ನಂತರ ತಸ್ತಿಕ್ ಹೆಚ್ಚಳಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಚಿವರಾಗಿದ್ದಾಗ ಹೆಚ್ಚಿನ ಆಸಕ್ತಿ ತೋರಿಸಿದರು. ಅದನ್ನು ಮುಂದುವರಿಸಿದ ಹಾಲಿ ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ ತಸ್ತಿಕ್ ಹಣವನ್ನು ದುಪ್ಪಟ್ಟು ಮಾಡಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲಿರುವ 30,000ಕ್ಕೂ ಹೆಚ್ಚಿನ ದೇವಸ್ಥಾನಗಳಿಗೆ ಅನುಕೂಲವಾಗಲಿದೆ.

ಅರ್ಚಕರು ಸ್ವಂತಕ್ಕೆ ಬಳಸುವಂತಿಲ್ಲ: ಪ್ರತಿ ದೇವಸ್ಥಾನದಲ್ಲೂ ಒಬ್ಬ ಅರ್ಚಕರಿಗೆ ಮಾತ್ರ ತಸ್ತಿಕ್ ಸಿಗಲಿದ್ದು, ಕೆಲವು ದೇವಸ್ಥಾನಗಳಲ್ಲಿ ಹೆಚ್ಚು ಅರ್ಚಕರಿದ್ದರೂ ಅವರಲ್ಲಿ ಒಬ್ಬರು ಮಾತ್ರ ಇದನ್ನು ಪಡೆದು ದೇವಸ್ಥಾನ ನಿರ್ವಹಿಸಲು ಅರ್ಹರಿರುತ್ತಾರೆ. ಅರ್ಚಕರು ತಸ್ತಿಕ್ ಹಣವನ್ನು ದೇವಸ್ಥಾನದ ಸ್ವಚ್ಛತೆ, ಪೂಜೆ, ನೈವೇದ್ಯ ಮತ್ತು ಅಭಿಷೇಕದ ವೆಚ್ಚಕ್ಕೆ ಮಾತ್ರ ಬಳಸಬೇಕೇ ಹೊರತು, ಸ್ವಂತಕ್ಕೆ ಬಳಸಿಕೊಳ್ಳುವಂತಿಲ್ಲ. ಆದರೆ, ಪೂಜೆ ವೇಳೆ ಭಕ್ತರು ಆರತಿ ತಟ್ಟೆಗೆ ಹಾಕುವ ಹಣ ಅರ್ಚಕರಿಗೇ ಸೇರುತ್ತದೆ.  ಇದು ಹಿಂದಿನಿಂದಲೂ ನಡೆದು ಕೊಂಡು ಬಂದಿರುವ ಮುಜರಾಯಿ ಇಲಾಖೆ ನಿಯಮ.

ನೆರೆ ರಾಜ್ಯದಲ್ಲಿ ಯಾತ್ರಿನಿವಾಸ
ಪುಣ್ಯಕ್ಷೇತ್ರಗಳ ಪ್ರವಾಸ ಪ್ರೋತ್ಸಾಹಿಸಲು ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದರಲ್ಲಿ ಮೊದಲಿಗೆ ಹೊರ ರಾಜ್ಯಗಳಲ್ಲಿರುವ ದೇವಸ್ಥಾನಗಳ ಸಮೀಪ ರಾಜ್ಯದ ಭಕ್ತರಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಿದೆ. ಅದರಲ್ಲೂ ಶಬರಿಮಲೆ, ಶ್ರೀಶೈಲ, ಮಂತ್ರಾಲಯ, ತಿರುಪತಿ, ಪಂಡರಾಪುರ, ಅಥಣಿ ಸಮೀಪದ ದಾನಮ್ಮ ದೇವಿ ಸೇರಿದಂತೆ ಪ್ರಮುಖ 8 ಕ್ಷೇತ್ರಗಳಲ್ಲಿ ಭಕ್ತರ ವಾಸ್ತವ್ಯಕ್ಕಾಗಿ ವಸತಿಗೃಹಗಳು, ಯಾತ್ರಿ ನಿವಾಸಗಳನ್ನು ನಿರ್ಮಿಸಲು ನಿರ್ಧರಿಸಿದೆ. ಇದಕ್ಕಾಗಿ ಆ ಕ್ಷೇತ್ರಗಳ ಸಮೀಪದ ಜಮೀನು ಪಡೆಯಲು ಯತ್ನಿಸಲಾಗುತ್ತಿದ್ದು, ಅಲ್ಲಿನ ಸರ್ಕಾರಗಳ ನೆರವು ಕೊರಲಾಗಿದೆ. ಈ ಯೋಜನೆಗೆ ಇಲಾಖೆಗೆ 25ಕೋಟಿಗಳ ಪ್ರಸ್ತಾಪ ಸಲ್ಲಿಸಲಾಗಿತ್ತಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯಕ್ಕೆ ರು. 15ಕೋಟಿ ಮಂಜೂರು ಮಾಡಲು ಒಪ್ಪಿದ್ದಾರೆ. ಹೀಗಾಗಿ ಯೋಜನೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ತಸ್ತಿಕ್ ಹೆಚ್ಚಿಸಬೇಕೆಂಬ ಬೇಡಿಕೆ ಬಹು ವರ್ಷಗಳಿಂದ ಇತ್ತು. ದೇವಸ್ಥಾನಗಳ ಸಮಸ್ಯೆಗಳನ್ನು ಹಣಕಾಸು ಇಲಾಖೆಗೆ ಮನವರಿಕೆ ಮಾಡಿ ತಸ್ತಿಕ್ ಹೆಚ್ಚಾಗುವಂತೆ ಮಾಡಿದ್ದೇನೆ. ಈ ಬಗ್ಗೆ ಸರ್ಕಾರ ಆದೇಶವನ್ನೂ ಹೊರಡಿಸಿದೆ.
-ಪ್ರಕಾಶ್ ಹುಕ್ಕೇರಿ, ಮುಜರಾಯಿ ಸಚಿವ

- ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement