ಗ್ರಾಮೀಣ ಸೇವೆ ಒಲ್ಲದ ವೈದ್ಯರಿಗೆ ದಂಡದ ಮೊತ್ತ ಹೆಚ್ಚಳ: ಖಾದರ್
ಮೈಸೂರು: ಗ್ರಾಮೀಣ ಸೇವೆ ಪೂರೈಸದ ವೈದ್ಯರಿಗೆ ವಿಧಿಸುತ್ತಿರುವ ದಂಡದ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, 5 ವರ್ಷಗಳ ವೈದ್ಯಕೀಯ ಶಿಕ್ಷಣ ಮುಗಿಸಿದವರು 1 ವರ್ಷ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಕಾನೂನಿದೆ. ಆದರೆ, ಕೆಲವು ಮಂದಿ ಗ್ರಾಮೀಣ ಭಾಗಕ್ಕೆ ತೆರಳಲಾಗದೆ ದಂಡ ಕಟ್ಟುತ್ತಿದ್ದಾರೆ. ಈಗ 9 ಕೋಟಿ ಆ ಮೂಲಕ ಸಂಗ್ರಹವಾಗಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ನೀಡಲು ಹಿಂಜರಿಯಬಾರದು. ನಾವೆಲ್ಲ ಗ್ರಾಮಾಂತರ ಭಾಗದಿಂದ ಬಂದವರೆ ಆಗಿದ್ದೇವೆ. ಗ್ರಾಮೀಣರು ಅಸಹಾಯಕರಾಗಿದ್ದು ಅವರ ಸೇವೆ ನಮ್ಮೆಲ್ಲರ ಹೊಣೆ ಎಂದು ಭಾವಿಸಬೇಕು. ಆದ್ದರಿಂದ ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದವರು ಗ್ರಾಮಾಂತರದಲ್ಲಿ ಸೇವೆ ನೀಡಲು ಉತ್ತೇಜಿಸಲಾಗುವುದು. ಹೆಚ್ಚು ಹೆಚ್ಚು ಆಸ್ಪತ್ರೆಗಳನ್ನು ನಿರ್ಮಿಸುವುದು ನಮ್ಮ ಉದ್ದೇಶವಲ್ಲ. ಅಂದರೆ ರೋಗಗಳಿಗೆ ಮದ್ದು ನೀಡುವ ಬದಲು ಅದನ್ನು ನಿಯಂತ್ರಿಸುವುದೇ ನಮ್ಮ ಗುರಿ ಎಂದರು.