ಭಿಕ್ಷಾಟನೆಯಲ್ಲಿದ್ದ ಬಾಲಕ ಈಗ ಕಾಲೇಜು ವಿದ್ಯಾರ್ಥಿ
ಕ.ಪ್ರ. ವಾರ್ತೆ ಕೊಪ್ಪಳ ಜು.9-
ಅಮ್ಮಾ, ತಾಯಿ ಒಂದು ರುಪಾಯಿ ಹಾಕಿ. ಭಿಕ್ಷೆ ಕೊಟ್ಟು ಪುಣ್ಯಕಟ್ಟಿಕೊಳ್ಳಿ. ಅಮ್ಮಾ ತಾಯಿ... ಎಂದು ಮೂರು ವರ್ಷದ ಭಿಕ್ಷೆ ಬೇಡುತ್ತಿದ್ದ ಬಾಲಕ ಈಗ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿ, ವಾಣಿಜ್ಯ ವಿಭಾಗದಲ್ಲಿ ಪಿಯುಸಿಗೆ ಪ್ರವೇಶ ಪಡೆದಿದ್ದಾನೆ!
ಅಷ್ಟೇ ಅಲ್ಲ, ಇಡೀ ಕಾಲೇಜಿನಲ್ಲಿ ಮಾದರಿ ವಿದ್ಯಾರ್ಥಿಯಾಗುವ ಕನಸು ಕಟ್ಟಿಕೊಂಡಿದ್ದಾನೆ. ಈಗಾಗಲೇ ಹೈಸ್ಕೂಲ್‌ನಲ್ಲಿ ಅತ್ಯುತ್ತಮ ವಿದ್ಯಾರ್ಥಿ ಎಂದು ಪ್ರಸಂಶೆಗೆ ಪಾತ್ರವಾಗಿದ್ದಾನೆ.
ಈತನ ಹೆಸರು ಶಿವಾನಂದ ಪತ್ರೆಪ್ಪ. ಕೊಪ್ಪಳ ನಗರದ ಕಾಳಿದಾಸ ನಗರದ ಬಡಾವಣೆಯಲ್ಲಿರುವ ಜೋಪಡಿಯ ನಿವಾಸಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. 7ನೇ ತರಗತಿವರೆಗೆ ಓದಿದ್ದ ಶಿವಾನಂದ ಮುಂದೆ ಓದಲು ಆರ್ಥಿಕ ಸಮಸ್ಯೆಯಾಗಿ ಶಾಲೆಯನ್ನೇ ಬಿಟ್ಟ. ಅಷ್ಟೇ ಅಲ್ಲ, ಮನೆಯ ಕುಟುಂಬದ ನಿರ್ವಹಣೆಗೆ ತಂದೆ, ತಾಯಿ ಜತೆ ಕೈ ಜೋಡಿಸಲು ಭಿಕ್ಷಾಟನೆಗೆ ಇಳಿದ. ಭಿಕ್ಷಾಟನೆ ಮಾಡುತ್ತಲೇ ಓದಬೇಕು ಎನ್ನುವ ಆಸೆಗೂ ಮನೆಯಲ್ಲಿ ಸಮ್ಮತಿ ನೀಡಲಿಲ್ಲ. ನೀನು ಭಿಕ್ಷೆ ಬೇಡುವುದು ನಿನ್ನ ಓದಿಗಲ್ಲ, ಮನೆಯಲ್ಲಿರುವ ತಂಗಿ, ನಮ್ಮನ್ನು ಜೋಪಾನ ಮಾಡಲು ಎಂದು ಹೇಳಿ ಶಾಲೆಯನ್ನೇ ಬಿಡಿಸಿದರು.
ಅಷ್ಟೇ ಅಲ್ಲ, ಯಾರಾದರೂ ನಿನಗೆ ಅಪ್ಪ-ಅಮ್ಮ ಇದ್ದಾರೆ ಎಂದು ಕೇಳಿದರೇ ಇಲ್ಲ ಎಂದು ಹೇಳು. ಇದ್ದಾರೆ ಅಂತ ಹೇಳಿದರೇ ಯಾರೂ ಭಿಕ್ಷೆ ಹಾಕುವುದಿಲ್ಲ ಎಂದು ಶಿವಾನಂದನಿಗೆ ಪಾಲಕರು ಹೇಳಿ ಕಳುಹಿಸಿ, ಭಿಕ್ಷಾಟನೆಗೆ ದೂಡಿದರು. ಓದುವ ಮಹಾದಾಸೆಯ ಕನಸಿನ ಬುತ್ತಿಯನ್ನು ಮೂಲೆಯಲ್ಲಿ ಕಟ್ಟಿಟ್ಟು ಶಿವಾನಂದ ಭಿಕ್ಷೆಗೆ ಇಳಿದಿದ್ದ.
ಯುನಿಸೆಫ್ ಗಾಳ: ಕೊಪ್ಪಳ ನಗರದ ಗಡಿಯಾರ ಕಂಬದ ಬಳಿ ಭಿಕ್ಷೆ ಬೇಡುತ್ತಿರುವ ವೇಳೆಯಲ್ಲಿ ಯುನಿಸೆಫ್ ಮಕ್ಕಳ ರಕ್ಷಣಾ ಘಟಕದ ಸದಸ್ಯರ ಕಣ್ಣಿಗೆ ಬಿದ್ದ. ಇವರು ಅವನ ಹತ್ತಿರ ಹೋದಾಗ ಭಿಕ್ಷೆ ಹಾಕಲು ಬಂದರು ಎಂದು ಖುಷಿ ಪಟ್ಟ. ನನಗೆ ಯಾರೂ ಇಲ್ಲ. ಅಪ್ಪ, ಅಮ್ಮ ತೀರಿ ಹೋಗಿದ್ದಾರೆ. ಈಗ ನಾನು ಭಿಕ್ಷೆ ಬೇಡಿಯೇ ಬದುಕುತ್ತಿದ್ದೇನೆ. ಭಿಕ್ಷೆ ಹಾಕಿ ಎಂದು ಅಂಗಲಾಚಿದ. ಮನೆಯವರ ಕುರಿತು ಕೇಳಿದರೆ ಕತೆ ಕಟ್ಟಿ ಹೇಳಿದ. ಎಲ್ಲಿರುವುದು ಎಂದು ಕೇಳಿದಾಗ ತಾನಿರುವ ಸ್ಥಳವನ್ನು ತೋರಿಸಿದಾಗ ಅಲ್ಲಿ ಪಾಲಕರಿರುವುದು ಪತ್ತೆಯಾಯಿತು.
ಯುನಿಸೆಫ್ ತಂಡ ಪಾಲಕರ ಮನವೊಲಿಸಿ, ಶಿವಾನಂದನನ್ನು ಶ್ರೀ ಗವಿಸಿದ್ಧೇಶ್ವರ ಹೈಸ್ಕೂಲ್‌ಗೆ ಸೇರಿಸಿ ಮತ್ತು ವಸತಿ ನಿಲಯದಲ್ಲಿಯೂ ಇರಿಸುವ ಏರ್ಪಾಟು ಮಾಡಿತು.
ಮೂರು ವರ್ಷದ ಬಳಿಕ ಈಗ ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕಕ್ಕೆ 356 ಅಂಕ ಗಳಿಸಿ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿದ್ದು, ಈಗ ಶ್ರೀ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷಕ್ಕೆ ವಾಣಿಜ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿದ್ದಾನೆ.
- ಸೋಮರಡ್ಡಿ ಅಳವಂಡಿ