ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಳೆಯಾದ್ರೂ ತುಂಬಿಲ್ಲ ಇನ್ನೂ 13 ಜಲಾಶಯ!

Mainashree
Updated On : 10 Jul 2013, 12:33 pm

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿದೆಯಾದರೂ ನದಿಗಳ ಪಾಲಿಗೆ ಮಾತ್ರ ಅದು 'ಅರೆಕಾಸಿನ ಮಜ್ಜಿಗೆ'.
ರಾಜ್ಯದ ದಕ್ಷಿಣ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ರಾಜ್ಯದ ಪ್ರಮುಖ 15 ನದಿಗಳ ಪೈಕಿ ಸದ್ಯಕ್ಕೆ ಭರ್ತಿಯಾಗಿರುವುದು ಬರೀ ಹಾರಂಗಿ ಮತ್ತು ಕಬಿನಿ ಮಾತ್ರ. ಕೆಆರ್‌ಎಸ್ ಭರ್ತಿಯಾಗಲೂ ಇನ್ನೂ 18 ಅಡಿ ಬಾಕಿ ಇದೆ.
ಇನ್ನು ಉತ್ತರ ಕರ್ನಾಟಕ ಭಾಗದ ಬಹುತೇಕ ನದಿಗಳು ಮೈದುಂಬಿಕೊಳ್ಳಲು ಹಪಹಪಿಸತ್ತಿವೆ. ಅಲ್ಲಿನ ಕೆಲವು ನದಿಗಳ ಒಳಹರಿವು ಉತ್ತಮವಾಗಿದ್ದರೂ ಭರ್ತಿಯಾಗಲು ತಿಂಗಳಿಗೂ ಹೆಚ್ಚು ಸಮಯ ಬೇಕು. ಅದೂ ಮಳೆ ಧಾರಾಕಾರವಾಗಿ ನಿರಂತರವಾಗಿ ಸುರಿದರೆ ಮಾತ್ರ. ಇಲ್ಲವಾದರೆ ರಾಜ್ಯದ ನದಿಗಳು 2002ರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆಗ ಜೂನ್‌ನಲ್ಲಿ ಮುಂಗಾರು ಉತ್ತಮವಾಗಿ ಆರಂಭವಾಗಿತ್ತಾದರೂ ನಂತರ ಕೈಕೊಟ್ಟಿತ್ತು. ಹೀಗಾಗಿ ರಾಜ್ಯವ್ಯಾಪಿ ಬರ ಆವರಿಸಿತ್ತು.
ಕಳೆದ 7 ದಿನಗಳ ಅಂಕಿ- ಅಂಶ ನೋಡಿದರೆ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.69ರಷ್ಟು ಹೆಚ್ಚು ಮಳೆಯಾಗಿದೆ. ಮಲೆನಾಡಿನಲ್ಲಿ ಶೇ.71ರಷ್ಟು ಮಳೆಯಾಗಿದೆ. ಇದೇ ರೀತಿ ಕರಾವಳಿಯಲ್ಲಿ ಶೇ.69ರಷ್ಟು  ಮಳೆಯಾಗಿದ್ದು ದಾಖಲೆಯಾಗಿದೆ.  ಆದರೆ, ಮಳೆ ಕೈಕೊಟ್ಟಿರುವುದು ಉತ್ತರ ಒಳನಾಡಿನಲ್ಲಿ. ಇಲ್ಲಿ ವಾಡಿಕೆಗಿಂತಲೂ ಶೇ.38ರಷ್ಟು ಕೊರತೆ ಆಗಿದೆ. ಆದರೂ ಒಟ್ಟಾರೆ ರಾಜ್ಯಾದ್ಯಂತ ಶೇ.18ರಷ್ಟು ಮಳೆಯಾಗಿದ್ದು, ಇದನ್ನು ಜಲಾಶಯಗಳು ಮೈದುಂಬಲು ಆಗಿರುವ ಶುಭಾರಂಭ ಎನ್ನಬಹುದಾಗಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಗಮನಿಸಿದರೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಪ್ರಮಾಣ ಇನ್ನೆರಡು ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದ್ದು, ಉತ್ತರ ಭಾಗದಲ್ಲಿ ಆ ಲಕ್ಷಣ ಕಾಣುತ್ತಿಲ್ಲ. ಆದರೆ, ಜುಲೈ 15ರ ನಂತರ ಮಳೆ ಪ್ರಮಾಣ ಹೆಚ್ಚಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಹವಾಮಾನ ತಜ್ಞರು.

ಸದ್ಯ ಬಜಾವ್: ಒಂದು ತಿಂಗಳಿನಿಂದ ಸುರಿದ ಮಳೆ ರಾಜ್ಯದ್ಯಂತ ಸಮಪ್ರಮಾಣದಲ್ಲಿ ಇಲ್ಲದಿದ್ದರೂ ಬಿತ್ತನೆ ಮಾಡುವ ರೈತರು ಸಂಭ್ರಮಿಸುವಂತೆ ಮಾಡಿರುವುದಂತೂ ನಿಜ. ಇನ್ನೂ ಬರದಿಂದ ತತ್ತರಿಸಿದ್ದ ರಾಜ್ಯಕ್ಕೆ ಸದ್ಯ ಅರೆಬರೆ ತುಂಬಿರುವ ನದಿಗಳು ಕುಡಿಯುವ ನೀರು ಒದಗಿಸಲಾರಂಭಿಸಿವೆ. ಬಹುತೇಕ ಕಡೆ ಮೇವಿನ ಸಮಸ್ಯೆ ಪರಿಹಾರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜೂನ್‌ನಲ್ಲಿ 10ಟಿಎಂಸಿ ಕಾವೇರಿ ನೀರು ಬಿಡಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ಈಡೇರಿಸಿ ಆ ಸರ್ಕಾರದ ಕಾಟ ತಪ್ಪಿಸಿಕೊಂಡಂತಾಗಿದೆ. 

ಎಲ್ಲೆಲ್ಲಿ ಒಳಹರಿವು ಹೆಚ್ಚು?
ಹಾರಂಗಿ ನದಿ ಈಗಾಗಲೇ ತುಂಬಿ ಹರಿಯುತ್ತಿದ್ದು, ಇಲ್ಲಿ 7020 ಕ್ಯುಸೆಕ್ ಒಳಹರಿವಿದೆ. ಕಬಿನಿ ಕೂಡ ಭರ್ತಿಯಾಗಿದ್ದು, ಒಳಹರಿವು 2282 ಕ್ಯುಸೆಕ್ ಇದೆ.  ಉಳಿದಂತೆ ಸೂಫಾ ನದಿಯಲ್ಲಿ 27,067 ಕ್ಯುಸೆಕ್ ಒಳಹರಿವಿದ್ದು, ಭದ್ರಾ ನದಿಯಲ್ಲಿ 1,800 ಕ್ಯುಸೆಕ್ ಇದೆ. ತುಂಗಭದ್ರಾಗೆ 58,323 ಕ್ಯುಸೆಕ್ ನೀರು ಒಳಬರುತ್ತಿದೆ. ಆಲಮಟ್ಟಿ ನದಿಗೆ 47,260 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಆದರೂ ಜಲಾನಯನ ಪ್ರದೇಶಲ್ಲಿ ಮಳೆ ಪ್ರಮಾಣ ನಿರೀಕ್ಷಿತವಾಗಿಲ್ಲ. ವಾರದಲ್ಲಿ ಸುರಿದ ಮಳೆ ಪ್ರಮಾಣ ಗಮನಿಸಿದರೆ, ಉತ್ತರ ಒಳನಾಡಿನಲ್ಲಿ ಶೇ.38ರಷ್ಟು ಕೊರತೆಯಾಗಿರುವುದರಿಂದ ನದಿಗಳಿಗೆ ಹರಿದು ಬರುವ ನೀರಿನ ಪ್ರಮಾಣ ಕೂಡ ಕಡಿಮೆಯಾಗಿದೆ. ಇದು ಉತ್ತರದ ರೈತರಲ್ಲಿ ಕೊಂಚ ಆತಂತಕ ತಂದಿರುವುದಂತೂ ನಿಜ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಮುಖ ನದಿ    ನೀರಿನ ಮಟ್ಟ    ಭರ್ತಿಗೆ ಬಾಕಿ (ಅಡಿಗಳು)
ಆಲಮಟ್ಟಿ     1690    14
ಮಲಪ್ರಭಾ    2644    35
ಘಟಪ್ರಭಾ    2107    68
ತುಂಗಭದ್ರಾ    1618    15
ಭದ್ರಾ     2126    35
ಕಬಿನಿ    2284    ತುಂಬಿದೆ
ಕೆಆರ್‌ಎಸ್    108    18
ಹೇಮಾವತಿ    2900    22
ಹಾರಂಗಿ    2858      ತುಂಬಿದೆ
ವರಾಹಿ    1907    42
ಸೂಫಾ     1751    98
ಲಿಂಗನಮಕ್ಕಿ    1785    34

ಮಳೆ ಪ್ರಮಾಣ ಈಗ ಕಡಿಮೆಯಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಉತ್ತರ ಭಾಗದಲ್ಲಿ ಮಳೆ ಪರಿಸ್ಥಿತಿ ವಾಡಿಕೆಯಂತೆ ಮುಂದುವರಿದರೆ ಪ್ರಮುಖ ನದಿಗಳು ತುಂಬಲು ಇನ್ನೂ ಒಂದು ತಿಂಗಳು ಬೇಕಾಗುತ್ತದೆ.
- ಡಾ. ಪ್ರಕಾಶ್, ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ನಿರ್ದೇಶಕ

- ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement