371ಜೆ ಕಲಂ ಜಾರಿ: ಶೀಘ್ರವೇ ಸಿಎಂಗೆ ವರದಿ-ಎಚ್.ಕೆ.ಪಾಟೀಲ್
ಗದಗ: ಹೈದ್ರಾಬಾದ್ ಕರ್ನಾಟಕ 371ಜೆ ಕಲಂ ಜಾರಿ ಕುರಿತು ಮುಖ್ಯಮಂತ್ರಿಗಳಿಗೆ ಶೀಘ್ರವೇ ವರದಿ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಸಂಪುಟದ ಉಪಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೈದ್ರಾಬಾದ್ ಕರ್ನಾಟ ಭಾಗದ ಜನರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸರ್ಕಾರ ನೇಮಿಸಿರುವ ಸಚಿವ ಸಂಪುಟ ಉಪಸಮಿತಿ ಈಗಾಗಲೇ ಈ ಭಾಗದ ಜನರ ಅಭಿಪ್ರಾಯ ಸಂಗ್ರಹಿಸಿದೆ.
ಉಪಸಮಿತಿ ಸರ್ವ ಸದಸ್ಯರು ಹಲವಾರು ಬಾರಿ ಸಭೆ ಸೇರಿ ಈ ಕುರಿತು ಸಮಗ್ರ ವರದಿ ತಯಾರಿಸಿದ್ದಾರೆ. ಗುರುವಾರ ಸಂಜೆ ಬೆಂಗಳೂರಿನಲ್ಲಿ ಮತ್ತೊಮ್ಮೆ ಸಭೆ ಸೇರಿ ವರದಿಗೆ ಅಂತಿಮ ರೂಪರೇಷೆ ನೀಡಿ ಶೀಘ್ರ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು. ಸರ್ಕಾರ ನನಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂದರು.
ಸಿಎಂ ಹದ್ದುಬಸ್ತಿನಲ್ಲಿಡುವ ಅಸ್ತ್ರವಲ್ಲ: ರಾಜ್ಯ ಕಾಂಗ್ರೆಸ್ ಹೊಣೆಗಾರಿಕೆ ಹೊಂದಿರುವ ಹಿರಿಯ ಕಾಂಗ್ರೆಸ್ ನಾಯಕರ ನೇತೃತ್ವದ ಸಮನ್ವ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯವರನ್ನು ಹದ್ದುಬಸ್ತಿನಲ್ಲಿಡುವ ಅಸ್ತ್ರವಲ್ಲ. ಇದು ಮಾಧ್ಯಮಗಳ ಸೃಷ್ಟಿಯಾಗಿದೆ ಎಂದರು. ಪ್ರಾರಂಭದಲ್ಲಿ ಸಿದ್ದರಾಮಯ್ಯ ತೆಗೆದುಕೊಂಡ ನಿರ್ಧಾರಗಳ ಕುರಿತು ನಿಮ್ಮ ಪಕ್ಷದಲ್ಲಿಯೇ ಅಪಸ್ವರವಿದೆಯೇ ಎಂದಾಗಲೂ ಅದೂ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.