ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಲಿಸೋದಷ್ಟೇ ಅಲ್ಲ, ಕಾಸೂ ಕೊಡ್ತಾರೆ!

ವೇತನ ಹೆಚ್ಚಳಕ್ಕಾಗಿ ಸರ್ಕಾರಿ ನೌಕರರು ಪ್ರತಿಭಟನೆ ನಡೆಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಬರುವ ವೇತನದಲ್ಲೇ ಶಾಲಾ ಮಕ್ಕಳ ಹೆಸರಿನಲ್ಲಿ...

Mainashree
Updated On : 10 Jul 2013, 10:23 am

ಕ.ಪ್ರ.ವಾರ್ತೆ  ಕಾರವಾರ  ಜು.10
ವೇತನ ಹೆಚ್ಚಳಕ್ಕಾಗಿ ಸರ್ಕಾರಿ ನೌಕರರು ಪ್ರತಿಭಟನೆ ನಡೆಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಬರುವ ವೇತನದಲ್ಲೇ ಶಾಲಾ ಮಕ್ಕಳ ಹೆಸರಿನಲ್ಲಿ ಪ್ರತಿ ತಿಂಗಳು ಠೇವಣಿ ಇಡುವ ಶಿಕ್ಷಕರೂ ಇದ್ದಾರೆ! ಇದು ಆಶ್ಚರ್ಯವಾದರೂ ನಿಜ.
ಹೌದು. ಈ ಶಾಲೆಯ ವಿದ್ಯಾರ್ಥಿಗಳು ಸದ್ಯ ಶಿಕ್ಷಣವನ್ನಷ್ಟೇ ಅಲ್ಲ, ಭವಿಷ್ಯದ ಶಿಕ್ಷಣಕ್ಕಾಗಿ ಆರ್ಥಿಕ ಭದ್ರತೆಯನ್ನೂ ಹೊಂದುತ್ತಿದ್ದಾರೆ. ಇಂತಹ ಹಲವು ಯೋಜನೆಗಳು ಈ ಶಾಲೆಯಲ್ಲಿವೆ. ಇದು ಕಾರವಾರ ನಗರದಲ್ಲಿನ ಸಾವಂತವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಶೇಷ.
ಅಚ್ಚರಿ ಎಂದರೆ ವಿದ್ಯಾರ್ಥಿಗಳು ಹಾಗೂ ಪಾಲಕರ ಜಂಟಿ ಖಾತೆಯಲ್ಲಿ ಠೇವಣಿ ಇಡುವ ಈ ಯೋಜನೆಯನ್ನು ಶಾಲೆಯ ಶಿಕ್ಷಕರು ಪ್ರಕಟಿಸುತ್ತಿದ್ದಂತೆ ಶಾಲೆಯ ಹಾಜರಾತಿಯಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದೆ. ಚಿಕ್ಕ ಮಕ್ಕಳಲ್ಲೂ ಈ ಠೇವಣಿ ಪ್ರಯೋಜನ ಏನು ಎನ್ನುವುದು ಅರಿವಾಗಿದೆ.
ಈ ಶಾಲೆಯಲ್ಲೀಗ ಬರೋಬ್ಬರಿ 17 ಮಕ್ಕಳಿದ್ದಾರೆ. 1ನೇ ತರಗತಿಗೆ ಬಂದ ಮಗು ಏಳನೇ ತರಗತಿ ಮುಗಿಸಿ ಪ್ರೌಢಶಾಲೆಗೆ ಪ್ರವೇಶ ಪಡೆಯುವಾಗ ಆ ವಿದ್ಯಾರ್ಥಿಯ ಹೆಸರಿನಲ್ಲಿ 11,300 ಜಮಾ ಆಗಿರುತ್ತದೆ. ಆ ಹಣವನ್ನು ವಿದ್ಯಾರ್ಥಿ ಮುಂದಿನ ಶಿಕ್ಷಣಕ್ಕೆ ಉಪಯೋಗಿಸಿಕೊಳ್ಳಬಹುದು.
ಶಾಲೆ ಮುಚ್ಚುವುದನ್ನು ತಪ್ಪಿಸಲು: ಸಾವಂತವಾಡ ಶಾಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಕಡುಬಡವರು. ಅವರ ಪಾಲಕರು ಕೂಲಿ ಕಾರ್ಮಿಕರು. ಆದರೆ, ಈ ಶಿಕ್ಷಕರಿಗೆ ಇಲ್ಲಿನ ಜನತೆ ಹಾಗೂ ಮಕ್ಕಳೊಂದಿಗೆ ಆತ್ಮೀಯತೆ ಬೆಳೆದುಬಿಟ್ಟಿತ್ತು. ಹಿಂದಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆ ಮುಚ್ಚಲು ನಿರ್ಧಾರ ಕೈಗೊಂಡಾಗ ಇಲ್ಲಿನ ಮಕ್ಕಳ ಸಂಖ್ಯೆ 12 ಇತ್ತು. ಶಾಲೆ ಮುಚ್ಚಿದರೆ ಇಲ್ಲಿಯ ಶಿಕ್ಷಕರು ಸಮೀಪದ ಶಾಲೆಗೆ ಸೇರ್ಪಡೆ ಆಗಬಹುದಿತ್ತು. ಆದರೆ, ಊರಿನವರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಇದ್ದ ಅನ್ಯೋನ್ಯತೆ ಇಂತಹ ಹೊಸ ಯೋಜನೆಗೆ ನಾಂದಿ ಹಾಡಿತು. ಅದರ ಫಲವೇ ಠೇವಣಿ ಯೋಜನೆ.
ಈ ಶಾಲೆಯಲ್ಲಿ ಮೂವರು ಶಿಕ್ಷಕರಿದ್ದಾರೆ.             

ಒಬ್ಬರು ಅಖ್ತರ ಜಾಫರ ಸೈಯದ್. ಮತ್ತೊಬ್ಬರು ಮುಖ್ಯಾಧ್ಯಾಪಕಿ ಕುಸುಮಾಬಾಯಿ ಪಾಲೇಕರ, ಇನ್ನೊಬ್ಬರು ಸರುಬಾಯಿ ಗಾಂವಕರ. ಈ ಮೂವರೂ ಠೇವಣಿಗಾಗಿ ತಮ್ಮ ತಮ್ಮ ವೇತನದಲ್ಲಿ ಹಣ ನೀಡಲು ಮುಂದಾದರು. ಅಖ್ತರ ಸೈಯದ್ ಪ್ರತಿ ತಿಂಗಳು ರು. 1500, ಕುಸುಮಾಬಾಯಿ ಹಾಗೂ ಸರುಬಾಯಿ ಇವರಿಬ್ಬರೂ ತಲಾ 1 ಸಾವಿರ ನೀಡಲು ತೀರ್ಮಾನಿಸಿದರು. ಅದರಂತೆ ಪ್ರತಿ ತಿಂಗಳು ವೇತನದ ಹಣದಲ್ಲಿ ಇವರು ವಿದ್ಯಾರ್ಥಿಗಳಿಗಾಗಿ ಹಣ ಮೀಸಲಿಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಪ್ರತಿ ವಿದ್ಯಾರ್ಥಿ ಖಾತೆಗೆ ತಿಂಗಳು ತಲಾ 100ರಂತೆ ಜಮಾ ಆಗುತ್ತಿದೆ.
ಶಿಕ್ಷಣ ಹೊರೆಯಾಗದು: 'ಕನ್ನಡಪ್ರಭ' ಈ ಕುರಿತು ಶಿಕ್ಷಣ ಅಖ್ತರ ಸೈಯದ್ ಅವರನ್ನು ಪ್ರಶ್ನಿಸಿದಾಗ, ಠೇವಣಿ ಯೋಜನೆಯಿಂದ ಮಕ್ಕಳಿಗೆ ತುಂಬಾ ಅನುಕೂಲ ಉಂಟಾಗಲಿದೆ. ಬಡ ಪಾಲಕರಿಗೆ ಮಕ್ಕಳ ಶಿಕ್ಷಣ ಹೊರೆಯಾಗಲಾರದು. ಇನ್ನೂ ಹಲವು ಯೋಜನೆಗಳನ್ನು ಶಾಲೆಯಲ್ಲಿ ಈ ವರ್ಷದಿಂದ ಹಮ್ಮಿಕೊಳ್ಳಲಿದ್ದೇವೆ ಎಂದರು. ಈ ಶಾಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ಪ್ರೋತ್ಸಾಹಿಸುವ ಪಾಲಕರಿಗೆ ರು. 300 ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೊಂಡಿದೆ. ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. 2 ಜತೆ ಶೂ (ಪಾದರಕ್ಷೆ), ಸ್ಕೂಲ್‌ಬ್ಯಾಗ್, ಸ್ಲೇಟ್, ಕಂಪಾಸ್, ಪೆನ್, ನೋಟ್‌ಬುಕ್ ನೀಡಲಾಗುತ್ತದೆ. ವಾರಕ್ಕೊಮ್ಮೆ ಸಂಗೀತ, ಕಲೆ ಹಾಗೂ ಈಜು ಕಲಿಸಲು ವಿಶೇಷ ಸಂಪನ್ಮೂಲ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ವಾರದಲ್ಲಿ 2 ದಿನ ವಿಶೇಷ ಸಂಪನ್ಮೂಲ ಶಿಕ್ಷಕರಿಂದ ಇಂಗ್ಲಿಷ್ ಕಲಿಕೆ ಮತ್ತಿತರ ಯೋಜನೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಿವೆ. ಕಾರವಾರದಲ್ಲೇ ಮಾದರಿ ಶಾಲೆಯನ್ನಾಗಿಸುವುದು ನಮ್ಮ ಉದ್ದೇಶ ಎಂದು ಎಸ್‌ಡಿಎಂಸಿ ಅಧ್ಯಕ್ಷ ದೀಪಕ ಗಾಂವಕರ ಹೇಳುತ್ತಾರೆ. ನಗರದ ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆಯ ನಡುವೆ ಸಾವಂತವಾಡ ಶಾಲೆ ಸದ್ದಿಲ್ಲದೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಗಮನ ಸೆಳೆಯುತ್ತಿದೆ. ಇಲ್ಲಿನ ಶಿಕ್ಷಕರು ಮಾದರಿಯಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಆ ಶಾಲೆ ಈಗ ಆಶಾಕಿರಣವಾಗಿದೆ.

 ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement