ಕೊಡಗಿನಲ್ಲಿ ಮುಂಗಾರು ಚುರುಕು
ಬೆಂಗಳೂರು: ರಾಜ್ಯದ ಕರಾವಳಿ ಪ್ರದೇಶ ಹಾಗೂ ಕೊಡಗು ಪ್ರದೇಶದಲ್ಲಿ ಬುಧವಾರ ಧಾರಾಕಾರ ಮಳೆ ಸುರಿದಿದ್ದು, ಮಧ್ಯ ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ಚದುರಿದಂತೆ ಮಳೆಯಾಗಿದೆ. ಕೆಆರ್‌ಎಸ್‌ನಲ್ಲಿ ಈಗ ನೀರಿನ ಮಟ್ಟ 110 ಅಡಿಗೆ ಏರಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಕೃಷಿ ತೋಟಗಳು ಜಲಾವೃತವಾಗಿವೆ. ಕಾಂತಮಂಗಲ ಮಂಡೆಕೋಲು ರಸ್ತೆಯ ಅಪ್ಪಾಜಿರಾವ್ ವೃತ್ತದ ಬಳಿ ಭಾರಿ ಹೊಂಡವಾಗಿದ್ದು, ಕೆರೆಯಂತೆ ಕಾಣಿಸುತ್ತಿದೆ. ಜತೆಗೆ ಕೊಡಿಯಾಲ ಗ್ರಾಮದ ಪೊಟ್ರೆಯಲ್ಲಿ ಕಾಣಿಯೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೋರಿಯೊಂದು ಒಂದು ಬದಿ ಜರಿದುಹೋಗಿದ್ದು, ಕೊಡಿಯಾಲ-ಕಾಣಿಯೂರಿಗೆ ಸಂಪರ್ಕ ಕಡಿತಗೊಳ್ಳುವ ಹಂತ ತಲುಪಿದೆ. ಹೀಗಾಗಿ ವಾಹನಗಳ ಸಂಚಾರ ಸ್ತಬ್ಧಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಕೊಡಗಿನಲ್ಲಿಯೂ ಭಾರಿ ಮಳೆ ಸುರಿದಿದ್ದು, ವಿರಾಜಪೇಟೆ, ನಾಪೋಕ್ಲು, ಭಾಗಮಂಗಲದಲ್ಲಿ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಸುಮಾರು 20 ನಿಮಿಷಗಳ ಕಾಲ ಗಾಳಿ ಮಳೆಯಾಗಿದ್ದು, ಕೆಲವೆಡೆ ಮನೆಗಳು ಭಾಗಶಃ ಕುಸಿದಿವೆ. ಇನ್ನು ಬಾಗಲಕೋಟೆ, ರಾಯಚೂರಿನಲ್ಲಿ ಚದುರಿದಂತೆ ಮಳೆಯಾಗಿದೆ.