ಬಡವರ ಪರ ಕಾರ್ಯಕ್ರಮಕ್ಕೆ ತರಾತುರಿ ಬೇಡವೇ?
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಅನ್ನಭಾಗ್ಯ' ಯೋಜನೆಗೆ ಬುಧವಾರ ಚಾಲನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 'ಬಡವರ ಪರವಾದ ಕಾರ್ಯಕ್ರಮ...
ಕನ್ನಡಪ್ರಭವಾರ್ತೆ ಬೆಂಗಳೂರು ಜು.10
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಅನ್ನಭಾಗ್ಯ' ಯೋಜನೆಗೆ ಬುಧವಾರ ಚಾಲನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 'ಬಡವರ ಪರವಾದ ಕಾರ್ಯಕ್ರಮ ಜಾರಿಗೊಳಿಸುವುದಕ್ಕಲ್ಲದೆ ಇನ್ಯಾವುದಕ್ಕೆ ತರಾತುರಿ ಮಾಡಬೇಕು' ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಆಡಳಿತ ವೈಖರಿ ಬಗ್ಗೆ ಅಪಸ್ವರ ಎತ್ತಿದವರನ್ನು ಈ ರೀತಿ ಪ್ರಶ್ನಿಸಿದರು.
ತಮ್ಮ ಮಾತಿನುದ್ದಕ್ಕೂ ಅನ್ನಭಾಗ್ಯ ಯೋಜನೆ ಟೀಕಾಕಾರರಿಗೆ ಸೂಕ್ತ ಉತ್ತರ ನೀಡಿರುವ ಅವರು, ಬಡವರ ಬಗ್ಗೆ ಕಾಳಜಿ ಇಲ್ಲದವರು ಮಾತ್ರ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಚಪ್ಪಲಿ ಇರಲಿಲ್ಲ: 'ಹೊಟ್ಟೆ ತುಂಬ ಹಿಟ್ಟು, ಬಾಯಿ ತುಂಬ ಅನ್ನ' ಎಂಬ ಮಾತು ಹಳ್ಳಿಗಾಡಿನಲ್ಲಿದೆ.ಈ ಮಾತಿನ ಹಿಂದೆ ಎಂಥ ನೋವಿದೆ ಎಂಬ ಅನುಭವವಿದೆ. ದ್ವಿತೀಯ ಪಿಯುಸಿಗೆ ಹೋಗುವವರೆಗೂ ಚಪ್ಪಲಿ ಹಾಕದೆ ಶಾಲೆಗೆ ಹೋದ ನನಗೆ ಬಡವರ ಕಷ್ಟ ಏನು ಎಂಬುದು ಗೊತ್ತು. ಹಸಿದವರಿಗೆ ಅನ್ನ ನೀಡುವುದಕ್ಕಿಂತ ಬೇರೆ ಪುಣ್ಯದ ಕೆಲಸ ಇಲ್ಲ ಎಂದು ಈ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಭಾವುಕರಾಗಿ ನುಡಿದರು.
ಕಾಂಗ್ರೆಸ್‌ನ ದೂರದೃಷ್ಟಿತ್ವದ ಆಡಳಿತದಿಂದ ದೇಶ ಆಹಾರ ಸ್ವಾವಲಂಬನೆ ಸಾಧಿಸಿದೆ. ಆದರೆ ಇದು ಸಾರ್ಥಕವಾಗಬೇಕಿದ್ದರೆ ಗೋದಾಮಿನಲ್ಲಿ ಸಂಗ್ರಹಗೊಂಡ ಆಹಾರ ಪದಾರ್ಥಗಳು ಬಡವರ ಹೊಟ್ಟೆಗೆ ತಲುಪಬೇಕು. ಹಸಿದವರು, ನಿರ್ಗತಿಕರು ಹಾಗೂ ಶೋಷಿತ ವರ್ಗಕ್ಕೆ ಸ್ಪಂದಿಸುವುದೇ ಸರ್ಕಾರದ ಕರ್ತವ್ಯ. ಹಿಂದೆ ಇಂದಿರಾ ಗಾಂಧಿಯವರು ಗರೀಬಿ ಹಟಾವೋ ಯೋಜನೆ ಜಾರಿಗೆ ತಂದಾಗಲೂ ಟೀಕೆ ವ್ಯಕ್ತವಾಗಿತ್ತು. ಈಗಲೂ ಮಾಡುತ್ತಿದ್ದಾರೆ. ಇಂಥ ಮಾತುಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಾನಂಥೂ ತಲೆ ಕೆಡಿಸಿಕೊಂಡಿಲ್ಲ ಎಂದರು.
ಅಗ್ಗದ ದರದಲ್ಲಿ ಅಕ್ಕಿ ಪಡೆಯುವ ಯೋಜನೆಯ ಫಲಾನುಭವಿಗಳು ಬಡವರು. ಅವರಿಗೆ ಧ್ವನಿ ಇಲ್ಲ. ಬರೆಯುವುದಕ್ಕೆ ಬರುವುದಿಲ್ಲ. ಹೀಗಾಗಿಯೇ ಬಡವರ ಪರ ಯೋಜನೆಗೆ ಆರೋಪ ಬರುತ್ತಿದೆ. ಅವರಿಗೇನಾದರೂ ಪ್ರತಿಭಟಿಸುವ ಶಕ್ತಿ ಇದ್ದರೆ. ಯಾರು ಇಂಥ ಆರೋಪ ಮಾಡುತ್ತಿರಲಿಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲದವರಿಂದ ಮಾತ್ರ ಇಂಥ ಕೊಂಕು ಮಾತುಗಳು ಹೊರ ಬೀಳಲು ಸಾಧ್ಯ. ಕಾಂಗ್ರೆಸ್ ಮಾತ್ರ ಬಡವರ ಬಗ್ಗೆ ನಿಜವಾದ ಕಾಳಜಿ ಹೊಂದಿದೆ. ಇದಕ್ಕಾಗಿಯೇ ಆಹಾರ ಭದ್ರತೆ ಕಾಯಿದೆ ಜಾರಿಗೆ ತರಲಾಗುತ್ತಿದೆ. ಇಂಥ ಜನಪರ ಯೋಜನೆಯನ್ನೂ ವಿರೋಧಿಸುವ ಪ್ರತಿಪಕ್ಷಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಭಿಪ್ರಾಯಪಟ್ಟರು.
ತಮಿಳುನಾಡಿನವರು ಸೋಮಾರಿಗಳಾ ? : ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಹೆಚ್ಚು ಬಡವರಿದ್ದಾರೆ. ನಮ್ಮಲ್ಲಿ ಶೇ.23.6 ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಆಂಧ್ರದಲ್ಲಿ ಶೇ.21, ತಮಿಳುನಾಡಿನಲ್ಲಿ ಶೇ.17 ಹಾಗೂ ಕೇರಳದಲ್ಲಿ ಶೇ.12 ರಷ್ಟು ಬಡವರಿದ್ದಾರೆ ಎಂದರು. 1ಕ್ಕೆ ಅಕ್ಕಿ ಕೊಡುವುದರಿಂದ ರಾಜ್ಯದ ಜನರು ಸೋಮಾರಿಗಳಾಗುತ್ತಾರೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆದರೆ ಆಂಧ್ರಪ್ರದೇಶದಲ್ಲಿ 1ಗೆ 20 ಕೆಜಿ, ತಮಿಳುನಾಡಿನಲ್ಲಿ ಪುಕ್ಕಟೆಯಾಗಿ 20 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಹಾಗಾದರೆ ತಮಿಳುನಾಡಿನ ಜನರೆಲ್ಲರೂ ಸೋಮಾರಿಗಳಾಗಿದ್ದಾರೆಯೇ ? ಇದೆಲ್ಲ ಬಡವರ ಪರ ಕಾಳಜಿ ಇಲ್ಲದ ಗೋಸುಂಬೆಗಳು ಮಾಡುವ ಆರೋಪ ಎಂದು ಹರಿಹಾಯ್ದರು.
ಅರ್ಹರಿಗೆ ತಪ್ಪಿಸಬೇಡಿ : ಒಬ್ಬ ಅನರ್ಹನಿಗೆ ಈ ಸೌಲಭ್ಯ ದೊರಕಿದರೂ ತೊಂದರೆ ಇಲ್ಲ. ಆದರೆ ಅರ್ಹನಿಗೆ ಯಾವುದೇ ಕಾರಣಕ್ಕೂ ಅಕ್ಕಿ ತಪ್ಪಿಸಬೇಡಿ. ಈಗಾಗಲೇ 12 ಲಕ್ಷ ಹೊಸ ಅರ್ಜಿ ಬಂದಿದ್ದು, ಪ್ರತಿಯೊಬ್ಬರಿಗೂ ಕಾರ್ಡ್ ನೀಡಿ. ಅದೇ ರೀತಿ ತೂಕದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಗಮನ ಹರಿಸಿ ಎಂದು ಆಹಾರ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ಈ ಯೋಜನೆಯಿಂದ ಸರ್ಕಾರಕ್ಕೆ ರು. 4400 ಕೋಟಿ ಹೊರೆಯಾಗುತ್ತದೆ. ಆದರೂ ಚಿಂತೆಯಿಲ್ಲ. ಸರ್ಕಾರ ಇರುವುದೇ ಹಸಿದವರಿಗೆ ಅನ್ನ ನೀಡುವುದಕ್ಕೆ ಹಾಗೂ ಸೂರು ಕೊಡುವುದಕ್ಕೆ ಹಸಿವು ಮಕ್ತ ಹಾಗೂ ಗುಡಿಸಲು ರಹಿತ ಕರ್ನಾಟಕ ನಿರ್ಮಾಣವೇ ನನ್ನ ಗುರಿ ಎಂದರು.
ನಾವೇ ಖರೀದಿಸುತ್ತೇವೆ: ಅಕ್ಕಿಯ ಜತೆಗೆ ರಾಗಿ ಹಾಗೂ ಜೋಳ ನೀಡುವಂತೆಯೂ ಬೇಡಿಕೆ ಬರುತ್ತಿದೆ. ಹೀಗಾಗಿ ನಾನು ನಮ್ಮ ರೈತ ಸಮುದಾಯದವರಲ್ಲಿ ಮನವಿ ಮಾಡುತ್ತೇನೆ. ಯಥೇಚ್ಚವಾಗಿ ಅಕ್ಕಿ, ರಾಗಿ, ಜೋಳ ಬೆಳೆಯಿರಿ. ಯೋಜನೆಗೆ ಬೇಕಾದ ಎಲ್ಲ ವಸ್ತುಗಳನ್ನು ನಮ್ಮ ರಾಜ್ಯದಲ್ಲೇ ಖರೀದಿ ಮಾಡುತ್ತೇವೆ. ಮುಕ್ತ ಮಾರುಕಟ್ಟೆಯ ಬೆಲೆಯನ್ನು ಕೊಟ್ಟು ಸರ್ಕಾರವೇ ಖರೀದಿ ಮಾಡುತ್ತದೆ. ಈ ಮೂಲಕ ರೈತ ವರ್ಗವನ್ನು ಇನ್ನಷ್ಟು ಸದೃಢಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
3 ಲೀಟರ್ ಸೀಮೆ ಎಣ್ಣೆ: ಬೆಂಗಳೂರು ನಗರದಲ್ಲಿ ಪಡಿತರ ವ್ಯವಸ್ಥೆ ಮೂಲಕ 7 ಲೀಟರ್ ಸೀಮೆ ಎಣ್ಣೆ ನೀಡಲಾಗುತ್ತಿದೆ. ಪಟ್ಟಣ ಪ್ರದೇಶದಲ್ಲಿ 5 ಲೀಟರ್ ಕೊಡುತ್ತಿದ್ದಾರೆ. ಆದರೆ ಹಳ್ಳಿಗಾಡಿನಲ್ಲಿ ಮಾತ್ರ 3 ಲೀಟರ್ ನೀಡಲಾಗುತ್ತಿದೆ. ಈ ತಾರತಮ್ಯ ನಿವಾರಿಸಲು ಎಲ್ಲ ಪ್ರದೇಶಗಳಿಗೂ 3 ಲೀಟರ್ ಸೀಮೆ ಎಣ್ಣೆ ಕೊಡುವಂತೆ ಆದೇಶ ನೀಡುತ್ತೇನೆ ಎಂದರು. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ನಾನು ಉಪಮುಖ್ಯಮಂತ್ರಿಯಾಗಿದ್ದೆ. ಆಗ 3 ಗೆ 1 ಕೆಜಿ ಅಕ್ಕಿಬಡವರಿಗೆ ನೀಡುವ ಯೋಜನೆ ಜಾರಿಗೆ ತರಲಾಗಿತ್ತು. ಇದು ಕೂಡಾ ಕಾಂಗ್ರೆಸ್ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ಕೃಷಿ ಸಚಿವ ಕೃಷ್ಣಭೈರೇಗೌಡ, ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಆರ್.ವಿ.ವೆಂಕಟೇಶ್, ಆರ್.ವಿ.ದೇವರಾಜ್, ಶಾಸಕರಾದ ಆರ್.ವಿ.ವೆಂಕಟೇಶ್, ರೋಶನ್‌ಬೇಗ್, ಹ್ಯಾರೀಸ್, ಮುನಿರತ್ನ ನಾಯ್ಡು, ಇಲಾಖೆ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ, ಆಯುಕ್ತ ಹರ್ಷಗುಪ್ತ ಮೊದಲಾದವರು ಹಾಜರಿದ್ದರು.