ಮಳೆಗೆ ಪ್ರಾರ್ಥನೆ: ಕತ್ತೆಗಳಿಗೂ ಕೂಡಿ ಬಂತು ಕಂಕಣ ಭಾಗ್ಯ
ಕ.ಪ್ರ. ವಾರ್ತೆ ಹೂವಿನಹಡಗಲಿ ಜು.10
ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿ, ಕತ್ತೆಗಳ ಮದುವೆ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿರುವ ಪ್ರಸಂಗ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಬುಧವಾರ ಜರುಗಿದೆ.
ಆರಂಭದಲ್ಲಿ ಅಬ್ಬರಿಸಿದ ಮುಂಗಾರು ಮಳೆ ಕಂಡು ಬಹುತೇಕ ಕಡೆಗಳಲ್ಲಿ ಶೇ.75ರಷ್ಟು ರೈತರು ಬಿತ್ತನೆ ಮಾಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಸುರಿದ ಸಣ್ಣ ಪ್ರಮಾಣದ ಮಳೆಗೆ ಜೀವ ಹಿಡಿಕೊಂಡಿರುವ ವಿವಿಧ ಬೆಳೆಗಳಿಗೆ ಈಗ ಮಳೆ ಕೃಪೆ ತೋರಬೇಕಿದೆ. ಆದರೆ, ಬಿತ್ತನೆ ಮಾಡಿ ತಿಂಗಳು ಕಳೆಯುತ್ತಾ ಬಂದರೂ ಮಳೆ ಮಾತ್ರ ಬಂದಿಲ್ಲ. ಇಂತಹ ಪರಿಸ್ಥಿತಿಗಳಿಂದ ಪಾರಾಗಲು ಹೊಳಗುಂದಿ ಗ್ರಾಮಸ್ಥರು ಮಳೆರಾಯನಿಗೆ ಪೂಜೆ ಸಲ್ಲಿಸಲು ತೀರ್ಮಾನಿಸಿ, ಬುಧವಾರ ಬೆಳಗ್ಗೆ ಗ್ರಾಮದ ಪ್ರಸಿದ್ಧ ಸಿದ್ಧಲಿಂಗೇಶ್ವರನ ಸನ್ನಿದಿಗೆ ಗಂಡು ಮತ್ತು ಹೆಣ್ಣು ಕತ್ತೆಗಳನ್ನು ಕರೆ ತಂದು ಮದುವೆ ಸಮಾರಂಭಗಳಲ್ಲಿ ನಡೆಯುವಂತೆ ಎಲ್ಲ ಕಾರ್ಯಗಳನ್ನು ಸಂಪ್ರದಾಯ ಬದ್ಧವಾಗಿ ಸುರಿಗೆ ನೀರಿನಿಂದ ಸ್ನಾನ ಮಾಡಿಸಿ, ತಲೆಗೆ ಬಾಸಿಂಗ ಕಟ್ಟಿ, ಹೂವಿನ ಹಾರಗಳನ್ನು ಹಾಕಿ ಎಲ್ಲರ ಗಮನ ಸೆಳೆಯುವಂತೆ ಸಿಂಗರಿಸಲಾಯಿತು.
ಮಳೆಯ ಸಿಂಚನ: ಕತ್ತೆಗಳ ಮದುವೆಯ ಪೌರೋಹಿತ್ಯ ವಹಿಸಿದ್ದ ಮಹಾಸ್ವಾಮಿ ಮಲ್ಲಪ್ಪ ವೇದಘೋಷ ಮಂತ್ರ ನೆರವೇರಿಸಿದ ನಂತರ ಕತ್ತೆಗಳಿಗೆ ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿಸಲಾಯಿತು. ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗ್ರಾಮಸ್ಥರು ಅಕ್ಷತೆ ಹಾಕಿ ಕತ್ತೆಗಳನ್ನು ಹರಸಿ, ಉತ್ತಮ ಮಳೆಯಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು. ನಂತರ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.
ಮದುವೆ ಕಾರ್ಯ ಪೂರ್ಣಗೊಂಡ ಸ್ವಲ್ಪ ಸಮಯದಲ್ಲೇ ಅಲ್ಲಲ್ಲಿ ಮೋಡ ಕವಿದ ವಾತವರಣ ಕವಿದು ಮಳೆಯ ಸಿಂಚನವಾಗಿದ್ದೂ ವಿಶೇಷ!