ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಖಾಸಗಿ ಹಗಲು ದರೋಡೆಗೆ ಸರ್ಕಾರ ಸಹಕಾರ!

Mainashree
Updated On : 12 Jul 2013, 12:04 pm

ಬೆಂಗಳೂರು: ಪ್ರಥಮ ಪಿಯುಸಿ ಪಠ್ಯ ಪುಸ್ತಕ ಮಾರಾಟ ವಿಚಾರದಲ್ಲಿ ಖಾಸಗಿ ಪ್ರಕಾಶನ ಸಂಸ್ಥೆಗಳು ಹಗಲು ದರೋಡೆ ಪ್ರಾರಂಭಿಸಿವೆ. ಇದಕ್ಕೆ ಒಂದು ರೀತಿಯಲ್ಲಿ ಸರ್ಕಾರವೇ ನೇರ ಕಾರಣ.
ಬದಲಾದ ಪಠ್ಯಕ್ರಮದಂತೆ ಸರ್ಕಾರದ ಪುಸ್ತಕಗಳು ಬರುವ ಮುಂಚೆಯೆ ಖಾಸಗಿ ಪ್ರಕಾಶನ ಹಾಗೂ ಇತರ ಲೇಖಕರ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿರುವ ಪುಸ್ತಕದ ಬೆಲೆ ಕೇವಲ 49 ಆಗಿದ್ದರೆ, ಖಾಸಗಿ ಮುದ್ರಣಾಲಯಗಳ ಪುಸ್ತಕಗಳಿಗೆ 150ರಿಂದ 360ರವರೆಗೆ ಬೆಲೆ ಇದೆ. ಮತ್ತೊಂದೆಡೆ ಕಾಲೇಜು ಪ್ರಾರಂಭವಾಗಿ ಒಂದೂವರೆ ತಿಂಗಳು ಕಳೆದ ಬಳಿಕ 34 ವಿಷಯಗಳಲ್ಲಿ 10 ಪುಸ್ತಕಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿದೆ.

24 ವಿಷಯಗಳ ಪುಸ್ತಕ ಪ್ರಕಟವಾಗಿಲ್ಲ: ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಚಕ್ರವರ್ತಿ ಮೋಹನ್ ಅವರು ಹೇಳಿರುವ ಪ್ರಕಾರ ಜು.4ರೊಳಗೆ ಎಲ್ಲ 34 ಪುಸ್ತಕಗಳನ್ನು ಮಾರುಕಟ್ಟೆಗೆ ಬಿಡಬೇಕಿತ್ತು. ಇದರಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಗಳ ಪುಸ್ತಕಗಳು ಸೇರಿರುತ್ತವೆ. ವಿಪರ್ಯಾಸವೆಂದರೆ 24 ವಿಷಯಗಳ ಯಾವೊಂದು ಮಾಧ್ಯಮದ ಪುಸ್ತಕ ಪ್ರಕಟವಾಗಿಲ್ಲ. ಉಳಿದ 5 ವಿಷಯಗಳ ಪುಸ್ತಕಗಳು ಒಂದು ಮಾಧ್ಯಮದಲ್ಲಿ ಮಾತ್ರ ಬಂದಿದೆ.
ಹೆಚ್ಚುವರಿಯಾಗಿ 30 ರಿಂದ 50 ತರಗತಿಗಳನ್ನು ನಡೆಸಬೇಕಿರುವ ಉಪನ್ಯಾಸಕರು ಪುಸ್ತಕಗಳಿಲ್ಲದೆ ಸುಮಾರು 35 ಅವಧಿ ಕಳೆದಿದ್ದಾರೆ. ಇದೇ ರೀತಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಮುಂದುವರೆದರೆ ನಿಗದಿತ ಪಠ್ಯವನ್ನು ಮುಗಿಸುವುದೇ ಇನ್ನಷ್ಟು ಕಷ್ಟವಾಗಲಿದೆ.

ಖಾಸಗಿ ಪ್ರಕಾಶನದ ಜತೆ ರಹಸ್ಯ ಒಪ್ಪಂದವೇ?: ರಾಜ್ಯ ಸರ್ಕಾರ ಪ್ರಕಟಿಸಬೇಕಿರುವ ಪುಸ್ತಕಗಳು ಮಾರುಕಟ್ಟೆಗೆ ಬರುವ ಮುಂಚೆ ಖಾಸಗಿ ಪ್ರಕಾಶನದ ಪುಸ್ತಕಗಳು ಮಾರುಕಟ್ಟೆಗೆ ಬಂದಿರುವುದನ್ನು ಗಮನಿಸಿದರೇ ಉದ್ದೇಶ ಪೂರ್ವಕವಾಗಿ ಪುಸ್ತಕ ಪ್ರಕಟಣೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅಕೌಂಟನ್ಸಿ ಹಾಗೂ ಬ್ಯುಸಿನೆಸ್ ಸ್ಟಡೀಸ್ ಪುಸ್ತಕಗಳ ಬೆಲೆಯು 150ರಿಂದ 360ರಷ್ಟಿದೆ. ಇದರರ್ಥ ಸರ್ಕಾರಿ ಪುಸ್ತಕಗಳ ಬೆಲೆಗಿಂತ ಸುಮಾರು 8 ಪಟ್ಟು ಹೆಚ್ಚಿನ ದರ ನೀಡಿ ವಿದ್ಯಾರ್ಥಿಗಳು ಖರೀದಿಸಬೇಕಿದೆ. ಖಾಸಗಿ ಪ್ರಕಾಶನಗಳಿಗೆ ಪಠ್ಯಪುಸ್ತಕದ ಹಕ್ಕುಗಳನ್ನು 'ಮಾರಾಟ' ಮಾಡುವ ಪಪೂ ಇಲಾಖೆ ರಾಜ್ಯದ ಉಪನ್ಯಾಸಕರಿಗೆ ಪುಸ್ತಕಗಳ ಸಾಫ್ಟ್ ಕಾಪಿಯನ್ನು ನೀಡುವ ಔದಾರ್ಯ ತೋರಿಲ್ಲ. ಉಪನ್ಯಾಸಕರಿಗೆ ನೀಡಿದರೆ ಖಾಸಗಿ ಪ್ರಕಾಶನಗಳು ದುರುಪಯೋಗ ಪಡಿಸಿಕೊಳ್ಳುತ್ತವೆ ಎಂಬ ನೆಪವನ್ನು ಇಲಾಖೆಯ ಅಧಿಕಾರಿಗಳು ಒಡ್ಡಿದ್ದರು. ಆದರೆ ಈಗ ಇಲಾಖೆಯೇ ಮಾರಾಟಮಾಡಿಕೊಂಡಿದೆ.

ಸಚಿವರೇ ಸ್ವಲ್ಪ ಇತ್ತ ಗಮನಿಸಿ...: ಪುಸ್ತಕಗಳ ಹಂಚಿಕೆ ಕುರಿತಂತೆ ಹಿಂದಿನ ಸರ್ಕಾರದ ವೈಫಲ್ಯದ ಬಗ್ಗೆ ಸಚಿವರು ಇನ್ನು ಹೇಳಿಕೆ ನೀಡುತ್ತಿದ್ದರೆ ಯಾವುದೇ ಪ್ರಯೋಜನವಿಲ್ಲ. ಮುದ್ರಣ ಹಾಗೂ ಮಾರಾಟವನ್ನು ಉದ್ದೇಶ ಪೂರ್ವಕವಾಗಿ ವಿಳಂಬಮಾಡುತ್ತಿರುವ ಮುದ್ರಣಾಲಯಗಳಿಗೆ ನೋಟಿಸ್ ನೀಡುವ ಕೆಲಸವನ್ನು ಇಲಾಖೆ ಮಾಡುತ್ತಿಲ್ಲ. ಕಾಲೇಜು ಪ್ರಾರಂಭವಾಗಿ ಒಂದೂವರೆ ತಿಂಗಳಾದರೂ ಶೇ.30ರಷ್ಟು ಪುಸ್ತಕಗಳು ಮಾರುಕಟ್ಟೆಗೆ ಬಂದಿಲ್ಲ. ಪಠ್ಯಕ್ರಮ ಹೆಚ್ಚಾಗಿರುವ ಬಗ್ಗೆ ಈಗಾಗಲೇ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆತಂಕಗೊಂಡಿದ್ದಾರೆ ಹಾಗೂ ತಮ್ಮ ಜವಾಬ್ದಾರಿಗೆ ಪ್ರಾಥಮಿಕ ಶಿಕ್ಷಣದ ಜತೆ ಪದವಿಪೂರ್ವ ಶಿಕ್ಷಣ ಸಂಸ್ಥೆಗಳು ಬರುತ್ತವೆ ಎನ್ನುವುದು ಸಚಿವ ಕಿಮ್ಮನೆ ರತ್ನಾಕರ ಅವರ ಗಮನದಲ್ಲಿರಲಿ.

ಪುಸ್ತಕ ಓದಬೇಡಿ, ಹಾಳಾಗುತ್ತದೆ!
ರಾಜ್ಯ ಸರ್ಕಾರ ಕಡಿಮೆ ಹಣದಲ್ಲಿ ಪುಸ್ತಕ ನೀಡುತ್ತಿದೆ ಎಂಬ ಕಾರಣಕ್ಕೆ ಅಷ್ಟೆ ಕಳಪೆ ದರ್ಜೆಯ ಪುಸ್ತಕವನ್ನು ಮಾರಾಟಕ್ಕಿಟ್ಟಿದೆ. ಪುಸ್ತಕಗಳಿಗೆ ಉಪಯೋಗಿಸಿರುವ ಕಾಗದಗಳು ಒಳ್ಳೆಯ ಗುಣಮಟ್ಟ ಹೊಂದಿದ್ದು, ಬಣ್ಣದ ಪುಟದಲ್ಲಿಯೇ ಮುದ್ರಿತವಾಗಿದೆ. ಆದರೆ ಪುಸ್ತಕವನ್ನು ತೆರೆದು ಓದಲಾರಂಭಿಸಿದರೆ ಹಾಳೆಗಳು ಕೈಗೆ ಬರುತ್ತವೆ. ಅತ್ಯಂತ ಕಳಪೆ ದರ್ಜೆಯ ಬೈಂಡಿಂಗ್ ಮಾಡಲಾಗಿದ್ದು, ಪುಟ ತೆರೆದಂತೆ ಕಳಚಿ ಬೀಳುವ ಹಾಗಿದೆ. ಪುಸ್ತಕ ಕೊಂಡ ಬಳಿಕ ಪ್ರತಿ ವಿದ್ಯಾರ್ಥಿಯು ಹೊಸದಾಗಿ ಬೈಂಡಿಂಗ್ ಮಾಡಿಸಿಕೊಳ್ಳದಿದ್ದರೆ ಒಂದು ತಿಂಗಳ ಮಟ್ಟಿಗೂ ಪುಸ್ತಕವನ್ನು ಉಪಯೋಗಿಸಲು ಸಾಧ್ಯವಿಲ್ಲ. ಇದು ಯಾವುದೇ ಒಂದು ವಿಷಯದ ಪುಸ್ತಕಕ್ಕೆ ಸೀಮಿತವಾಗಿಲ್ಲ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಪುಸ್ತಕಗಳ ಬೈಂಡಿಂಗ್ ಕೂಡ ಅದೇ ಪ್ರಮಾಣದಲ್ಲಿ ಕೆಟ್ಟದಾಗಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಸ್ತಕ
ಬ್ಯುಸಿನೆಸ್ ಸ್ಟಡೀಸ್, ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ, ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಕಂಪ್ಯೂಟರ್ ಸೈನ್ಸ್
ಖಾಸಗಿ ಪ್ರಕಾಶನದ ಪುಸ್ತಕಗಳು: ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅಕೌಂಟನ್ಸಿ, ಬ್ಯುಸಿನೆಸ್ ಸ್ಟಡೀಸ್ (ಸರ್ಕಾರಿ ಪ್ರಕಾಶನದ ರಾಜ್ಯ ಶಾಸ್ತ್ರ ಹಾಗೂ ಬ್ಯುಸಿನೆಸ್ ಸ್ಟಡೀಸ್ ಪುಸ್ತಕಗಳು ಗುರುವಾರದಿಂದ ದೊರೆಯುತ್ತಿವೆ. ಖಾಸಗಿ ಪ್ರಕಾಶನದ ಪುಸ್ತಕಗಳು ಮಾರುಕಟ್ಟೆಗೆ ಬಂದು ಒಂದು ವಾರ ಕಳೆಯಿತು)

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement