ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿದ್ದು ಲೆಕ್ಕ: ಇಂದು ಮಧ್ಯಾಹ್ನ 12.30ಕ್ಕೆ ಸಿಎಂ ಆಗಿ ಮೊದಲ ಬಜೆಟ್ ಮಂಡನೆ

ಜನರಿಗೆ ಹೆಚ್ಚು ಹೊರೆಯಾಗದ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ...

Mainashree
Updated On : 12 Jul 2013, 12:02 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.11-
ಜನರಿಗೆ ಹೆಚ್ಚು ಹೊರೆಯಾಗದ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧವಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ 12.30ಕ್ಕೆ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದು, ಈ ಬಾರಿ ಕೃಷಿಗೆ ಪ್ರತ್ಯೇಕ ಬಜೆಟ್ ಇರುವುದಿಲ್ಲ. ಸಾಮಾನ್ಯ ಬಜೆಟ್‌ನಲ್ಲೇ ಕೃಷಿಗೂ ಅನುದಾನ ನಿಗದಿಪಡಿಸಲಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಜನರ ಮೇಲೆ ಹೆಚ್ಚು ಹೊರೆ ಹಾಕದಿರಲು ನಿರ್ಧರಿಸಿದ್ದಾರೆ. ತಾವು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವ ಸಾಮಾಜಿಕ ನ್ಯಾಯದ ಕಲ್ಪನೆಗೆ ಸಾಕಾರ ರೂಪ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ವಿಶೇಷ ಕಾರ್ಯಕ್ರಮಗಳನ್ನು ಅವರು ತಮ್ಮ ಬಜೆಟ್‌ನಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ. ಅಲ್ಲದೆ, ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನಷ್ಟು ಜನಪ್ರಿಯ ಕಾರ್ಯಕ್ರಮಗಳ ಮೊರೆ ಹೋಗುವುದು ಖಚಿತ. ಈಗಾಗಲೇ ಘೋಷಿಸಿರುವ ಶಾಲಾ ಮಕ್ಕಳಿಗೆ ವಾರಕ್ಕೆ ಮೂರು ದಿನ ಹಾಲು ವಿತರಣೆ, ರೈತರಿಗೆ 2 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ, ಕೃಷಿ ಆವರ್ತನಿಧಿ 1 ಸಾವಿರ ಕೋಟಿಗೆ ಹೆಚ್ಚಳ, ಭಯೋತ್ಪಾದನಾ ಪ್ರಕರಣಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ಹೇಳಲಾಗಿದೆ.

ತೆರಿಗೆ ಹೆಚ್ಚಳ ಇಲ್ಲ?: ಈಗಾಗಲೇ ಘೋಷಣೆ ಮಾಡಿರುವ ಕಾರ್ಯಕ್ರಮಗಳು ಮತ್ತು ಬಜೆಟ್‌ನಲ್ಲಿ ಘೋಷಿಸುವ ಯೋಜನೆಗಳಿಗೆ ಸಾಕಷ್ಟು ಆರ್ಥಿಕ ಸಂಪನ್ಮೂಲ ಬೇಕಾದರೂ ಜನರ ಮೇಲೆ ಹೊರೆ ಹಾಕದಿರಲು ನಿರ್ಧರಿಸಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗಕ್ಕೆ ಯಾವುದೇ ಬೇಸರವಾಗದಂತೆ ನೋಡಿಕೊಳ್ಳಲು ಹೊಸ ತೆರಿಗೆ ಹಾಕದಿರಲು ಮುಂದಾಗಿದ್ದಾರೆ.
ಹಿಂದಿನ ಸಿಎಂ ಜಗದೀಶ ಶೆಟ್ಟರ್ ಅವರು ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ವಿವಿಧ ಮೂಲಗಳಿಂದ 61,012 ಕೋಟಿ ತೆರಿಗೆ ಸಂಗ್ರಹ ಗುರಿ ಹಾಕಿಕೊಳ್ಳಲಾಗಿತ್ತು.     
ಇದನ್ನು ಪರಿಷ್ಕರಿಸಿ ಒಟ್ಟು 62,078 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ನಿಗದಿಪಡಿಸುವ ಸಾಧ್ಯತೆ ಇದೆ. ಅಂದರೆ, ತೆರಿಗೆ ಸಂಗ್ರಹ ಗುರಿಯಲ್ಲಿ ಕೇವಲ 1,066 ಕೋಟಿ ಮಾತ್ರ ಹೆಚ್ಚಳವಾಗುತ್ತದೆ. ಬಜೆಟ್‌ನಲ್ಲಿ ತೆರಿಗೆ ಸೋರಿಕೆ ತಡೆಗಟ್ಟಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಈ ಗುರಿ ಸಾಧಿಸಲು ಸಿದ್ದರಾಮಯ್ಯ ಯೋಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದ್ಯತಾ ವಲಯಗಳು: ಕೃಷಿ, ನೀರಾವರಿ, ಇಂಧನ, ಸಮಾಜ ಕಲ್ಯಾಣ ಮತ್ತು ಸಾರಿಗೆ ಇಲಾಖೆಗಳನ್ನು ಆದ್ಯತೆಯಾಗಿ ಪರಿಗಣಿಸುವ ಸಾಧ್ಯತೆ ಇದೆ. ಈ ಇಲಾಖೆಗಳಿಗೆ ಹೆಚ್ಚಿನ ಅನುದಾನ ನಿಗದಿಪಡಿಸುವುದು ಖಚಿತವಾಗಿದೆ. ಈ ಹಿಂದೆ ಘೋಷಿಸಿದಂತೆ ಕೃಷ್ಣಾ ಮತ್ತು ಕಾವೇರಿ ಕೊಳ್ಳ ಸೇರಿದಂತೆ ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗಾಗಿ 10 ಸಾವಿರ ಕೋಟಿ ನಿಗದಿಪಡಿಸಲಿದ್ದಾರೆ.
ಇನ್ನು ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟರ ಶೇ.18ರ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಅಗತ್ಯವಾಗುವಂತೆ ಹೊಸ ಕಾಯ್ದೆ ರಚಿಸುವ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ. ಆಂಧ್ರಪ್ರದೇಶದಲ್ಲಿ ಈ ರೀತಿಯ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ. ಈ ಕಾಯ್ದೆಯ ಅನ್ವಯ ಪರಿಶಿಷ್ಟರ ಶೇ.18ರ ಮೀಸಲು ಅನುದಾವನ್ನು ಆ ವರ್ಷದಲ್ಲಿ ಕಡ್ಡಾಯವಾಗಿ ಬಳಸಿಕೊಳ್ಳಲೇ ಬೇಕು. ಇದರ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಆಯಾ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿರಲಿದೆ. ಅದೇ ರೀತಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಪರಿಶಿಷ್ಟರಿಗೆ ಮೀಸಲು ಕಲ್ಪಿಸುವ ಬಗ್ಗೆಯೂ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದುಂದುವೆಚ್ಚಕ್ಕೆ ಕಡಿವಾಣ: ಹೊಸ ಕಾರ್ಯಕ್ರಮಗಳಿಗೆ ಸಾಕಷ್ಟು ಅನುದಾನ ಬೇಕಾಗಿದೆಯಾದರೂ ತೆರಿಗೆ ಸಂಗ್ರಹದಲ್ಲಿ ಹೆಚ್ಚುವರಿಯಾಗಿ 1,066 ಕೋಟಿ ಮಾತ್ರ ನಿರೀಕ್ಷಿಸಲಾಗಿದೆ.
ಅದೇ ರೀತಿ ಯೋಜನಾ ವೆಚ್ಚದಲ್ಲಿ 550 ಕೋಟಿ ಮಾತ್ರ ಹೆಚ್ಚಳವಾಗಿದೆ. ಹೀಗಾಗಿ ತೆರಿಗೆ ಹೆಚ್ಚಿಸದೆ ವಿವಿಧ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲು ವಿವಿಧ ಇಲಾಖೆಗಳಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಯೋಚಿಸಿದ್ದು, ಈ ಕುರಿತಂತೆ ಸ್ಪಷ್ಟ ರೂಪುರೇಷೆಗಳನ್ನು ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ವಿವರಿಸಲಿದ್ದಾರೆ. ಅದೇ ರೀತಿ ರಾಜ್ಯ ಸರ್ಕಾರದಿಂದ ಹೊಸ ಘೋಷಣೆಗಳನ್ನು ಹೊರಡಿಸಿ ಹಣ ಹೊಂದಾಣಿಕೆಗೆ ಕಸರತ್ತು ನಡೆಸುವ ಬದಲು ಕೇಂದ್ರ ಸರ್ಕಾರದ ನೆರವಿನ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಲಿದ್ದಾರೆ. ಜತೆಗೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವ ಕಾರ್ಯಕ್ರಮಗಳನ್ನು ಈಡೇರಿಸುವ ಭರವಸೆಯನ್ನು ಬಜೆಟ್‌ನಲ್ಲಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ದುಂದುವೆಚ್ಚಕ್ಕೆ ಕಡಿವಾಣ
ಹೊಸ ಕಾರ್ಯಕ್ರಮಗಳಿಗೆ ಸಾಕಷ್ಟು ಅನುದಾನ ಬೇಕಾಗಿದೆಯಾದರೂ ತೆರಿಗೆ ಸಂಗ್ರಹದಲ್ಲಿ ಹೆಚ್ಚುವರಿಯಾಗಿ 1,066 ಕೋಟಿ ಮಾತ್ರ ನಿರೀಕ್ಷಿಸಲಾಗಿದೆ. ಅದೇ ರೀತಿ ಯೋಜನಾ ವೆಚ್ಚದಲ್ಲಿ 550 ಕೋಟಿ ಮಾತ್ರ ಹೆಚ್ಚಳವಾಗಿದೆ. ಹೀಗಾಗಿ ತೆರಿಗೆ ಹೆಚ್ಚಿಸದೆ ವಿವಿಧ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲು ವಿವಿಧ ಇಲಾಖೆಗಳಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಯೋಚಿಸಿದ್ದು, ಈ ಕುರಿತಂತೆ ಸ್ಪಷ್ಟ ರೂಪುರೇಷೆಗಳನ್ನು ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ವಿವರಿಸಲಿದ್ದಾರೆ. ಅದೇ ರೀತಿ ರಾಜ್ಯ ಸರ್ಕಾರದಿಂದ ಹೊಸ ಘೋಷಣೆಗಳನ್ನು ಹೊರಡಿಸಿ ಹಣ ಹೊಂದಾಣಿಕೆಗೆ ಕಸರತ್ತು ನಡೆಸುವ ಬದಲು ಕೇಂದ್ರ ಸರ್ಕಾರದ ನೆರವಿನ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಲಿದ್ದಾರೆ. ಜತೆಗೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವ ಕಾರ್ಯಕ್ರಮಗಳನ್ನು ಈಡೇರಿಸುವ ಭರವಸೆಯನ್ನು ಬಜೆಟ್‌ನಲ್ಲಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement