ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗ್ರಾಮೀಣಾಭಿವೃದ್ಧಿಗೆ ಸಿದ್ದು ಬಲ

ಕುಡಿಯುವ ನೀರಿನಲ್ಲಿ ಫ್ಲೋರೈಡ್ ಮತ್ತು ಆರ್ಸೆನಿಕ್ ರಾಸಾಯನಿಕ ಅಂಶವಿರುವ ಒಂದು ಸಾವಿರ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು...

Mainashree
Updated On : 13 Jul 2013, 12:19 pm

- ನೂತನ ಆರೋಗ್ಯ ಯೋಜನೆ ರೂಪಿಸಲು ಕ್ರಮ/ ಪ್ರತಿ ತಾಲೂಕಿನಲ್ಲೂ ಆಯುಷ್ ಘಟಕ ಸ್ಥಾಪನೆ
- ಆಯುಕ್ತಾಲಯ ಸ್ಥಾಪನೆ
- ಪಂಚಾಯತ್ ರಾಜ್ ಇಲಾಖೆಗೆ 8,218 ಕೋಟಿ ನಿಗದಿ


ಕುಡಿಯುವ ನೀರಿನಲ್ಲಿ ಫ್ಲೋರೈಡ್ ಮತ್ತು ಆರ್ಸೆನಿಕ್ ರಾಸಾಯನಿಕ ಅಂಶವಿರುವ ಒಂದು ಸಾವಿರ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಜಾರಿಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಸ್ಥಾಪಿಸುವುದರ ಜತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಪ್ರಮುಖ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ಇಲಾಖೆಯ ಕಾರ್ಯಕ್ರಮಗಳಿಗೆ ಒಟ್ಟು 8,218 ಕೋಟಿ ನಿಗದಿಪಡಿಸಿದ್ದಾರೆ.

ಪ್ರಮುಖ ಯೋಜನೆಗಳು

-    ಗ್ರಾಮೀಣ ಉದ್ಯೋಗ ಖಾತರಿ ಯೋಜನೆಡಿ 75 ಸಾವಿರ ಪರಿಶಿಷ್ಟ ಜಾತಿ, ಪಂಗಡ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸೇರಿದ ಜಮೀನುಗಳಲ್ಲಿ ತೋಟಗಾರಿಕೆ ಅಭಿವೃದ್ಧಿ ಮತ್ತು ಜಲಾನಯನ ಚಟುವಟಿಕೆ.
-    ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಭೂಮಿಗೆ ಸಂಪರ್ಕ ಕಲ್ಪಿಸಲು 'ನಮ್ಮ ಹೊಲ ನಮ್ಮ ದಾರಿ' ಯೋಜನೆ, ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 12 ಸಾವಿರ ಕೆರೆಗಳ ಪುನರುಜ್ಜೀವನ.
-    30 ಸಾವಿರ ಅಂಗನವಾಡಿ ಕೇಂದ್ರಗಳಿಗೆ ನೀರಿನ ಸೌಲಭ್ಯ
-    ಕುಡಿಯುವ ನೀರಿನ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕ ಗ್ರಾಮೀಣ ನೀರು ಸರಬರಾಜು ಮತ್ತು ನಿರ್ಮಲೀಕರಣ ಇಲಾಖೆ ರಚನೆ
-    ಗ್ರಾಮೀಣ ಜೀವನಾಧಾರ ಮಿಷನ್ ಯೋಜನೆಯಡಿ ಸಕಾಲದಲ್ಲಿ ಸಾಲ ಮರುಪಾವತಿಸುವ 26 ಜಿಲ್ಲೆಗಳ ಒಂದು ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೇ.4ರ ಬಡ್ಡಿ ಸಹಾಯಧನ ಯೋಜನೆ.
-    ಖಾಲಿ ಇರುವ 1,100 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳ ಹುದ್ದೆಗಳ ನೇರ ಭರ್ತಿ
- ಧಾರವಾಡ, ಗುಲ್ಬರ್ಗ ಮತ್ತು ಮಂಗಳೂರಿನಲ್ಲಿ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರಗಳ ಸ್ಥಾಪನೆ.
- ಕ್ಷೇತ್ರದಲ್ಲಿ ಕೌಶಲ್ಯ. ಮತ್ತು ಸಾಮರ್ಥ್ಯ ವೃದ್ಧಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ಸ್ಥಾಪನೆ.
-    ಪಂಚಾಯ್ತಿ ಆಸ್ತಿ ರಕ್ಷಣೆಗೆ ಪ್ರತಿ ಗ್ರಾ. ಪಂ. ತನ್ನ ಆಸ್ತಿ ರಿಜಿಸ್ಟರ್ ಮುದ್ರಿಸಿ ಸಾರ್ವಜನಿಕ ಪರಿಶೀಲನೆಗೆ ಒದಗಿಸಲು ಕ್ರಮ.
-    ರಾಜ್ಯ ದೂರ ಸಂವೇದಿ ಸಂಸ್ಥೆ ಮೂಲಕ ಕೆರೆಗಳ ಅಧ್ಯಯನ, ದಾಖಲೀಕರಣ ಮತ್ತು ಪುಸ್ತಕ ಪ್ರಕಟಣೆ.
-    ಗ್ರಾಮ ಪಂಚಾಯ್ತಿಗಳು ಸಾಧಿಸುವ ಶೇ. 90- 95ರಷ್ಟು ಸಾಧನೆಯನ್ನು ಮೌಲ್ಯಮಾಪನ ಮಾಡಿ ಅವುಗಳಿಗೆ ಸೂಕ್ತ ಪ್ರೋತ್ಸಾಹಧನ
-    ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಗ್ರಾಮದಲ್ಲಿ ಕಟಾವು ನಂತರದ ಚಟುವಟಿಕೆಗಳಿಗೆ ಹಂತ ಹಂತವಾಗಿ ಧಾನ್ಯ ಒಕ್ಕಣೆ ಕಣ ನಿರ್ಮಾಣ.

ವಿಕಲಚೇತನರಿಗೆ ಆರ್ಥಿಕ ನೆರವು
ವಿಕಲಚೇತನ ವ್ಯಕ್ತಿಗಳ ಜೀವನ ನಿರ್ವಹಣೆಯತ್ತ ಹೆಚ್ಚಿನ ಕಾಳಜಿ ತೋರಿರುವ ಸರ್ಕಾರ, ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ವಿಕಲ ಚೇತನ ವ್ಯಕ್ತಿಗಳು ವಿವಾಹವಾದಲ್ಲಿ ಅವರ ಹೆಸರಿಗೆ ರು. 50 ಸಾವಿರ ನಿರಂತರ ಮಾಸಿಕ ಆದಾಯವನ್ನು ಹೂಡಿಕೆ ರೂಪದಲ್ಲಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅಲ್ಲದೆ, ವಿಕಲಚೇತನರಿಗೆ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣದ ಶುಲ್ಕವನ್ನು ಹಿಂದಿರುಗಿಸುವುದಾಗಿ ಕೂಡ ಸರ್ಕಾರ ಪ್ರಸಕ್ತ ಆಯವ್ಯಯದಲ್ಲಿ ಘೋಷಿಸಿದೆ.

ಶಿಶುಪಾಲನೆ ಭತ್ಯೆ
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿರುವ ದೃಷ್ಟಿಹೀನ ಮಹಿಳೆಯರಿಗೆ ಎರಡು ಹೆರಿಗೆಯ ನಂತರದ 2 ವರ್ಷಗಳ ಅವಧಿಯವರೆಗೆ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಒದಗಿಸುವ ಸಲುವಾಗಿ ತಿಂಗಳಿಗೆ ರು. 2 ಸಾವಿರ ಶಿಶುಪಾಲನೆ ಭತ್ಯೆ ನೀಡಲಾಗುವುದು.

ಹಗಲು ಪಾಲನಾ ಕೇಂದ್ರ
ನಗರ ಪ್ರದೇಶಗಳಲ್ಲಿನ 6ರಿಂದ 18 ವರ್ಷದ ವಯೋವಾನದವರೆಗಿನ ಮಾನಸಿಕ ಆಸ್ಪಸ್ಥ, ಸೆರಬ್ರಲ್ ಪಾಲ್ಸಿ, ಆರ್ಟಿಸಂ ಹಾಗೂ ತೀವ್ರತರದ ವಿಕಲ ಚೇತನ ಮಕ್ಕಳಿಗೆ ಎರಡು ಹಗಲು ಪಾಲನಾ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗುವುದು.

ವೃದ್ಧಾಶ್ರಮಗಳಿಗೆ ರು. 8 ಲಕ್ಷ
ದೈಹಿಕ ಹಲ್ಲೆ, ಕಿರುಕುಳ, ಆರ್ಥಿಕ ಶೋಷಣೆ ಹಾಗೂ ಅಭದ್ರತೆಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಹಲವಾರು ಹಿರಿಯ ನಾಗರಿಕರ ಸಮಸ್ಯೆಗಳನ್ನು ಹೋಗಲಾಡಿಸುವ ಸಲುವಾಗಿ ವೃದ್ದಾಶ್ರಮಗಳಿಗೆ ನೀಡುತ್ತಿರುವ ವಾರ್ಷಿಕ ಅನುದಾನವನ್ನು ರು. 1.96 ಲಕ್ಷದಿಂದ ರು. 8 ಲಕ್ಷಕ್ಕೆ ಹೆಚ್ಚಿಸಲಾಗುವುದು. ಈ ಯೋಜನೆಯನ್ನು ಯಾದಗಿರಿ, ರಾಮನಗರ ಹಾಗೂ ಉಡುಪಿ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಹಿರಿಯ ನಾಗರಿಕರ ಸಹಾಯವಾಣಿಗೆ ಒದಗಿಸುವ ವಾರ್ಷಿಕ ಅನುದಾನವನ್ನು ರು. 3.60 ಲಕ್ಷಗಳಿಂದ ರು. 7.15 ಲಕ್ಷ ಹೆಚ್ಚಿಸಲಾಗಿದ್ದು, 15 ಜಿಲ್ಲೆಗಳಿಗೆ ವಿಸ್ತರಿಸಲಾಗುವುದು.

ರು.3,466 ಕೋಟಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವ ಸರ್ಕಾರ, ಪ್ರಸಕ್ತ ಆಯವ್ಯಯದಲ್ಲಿ ಬರೋಬ್ಬರಿ ರು. 3,466 ಕೋಟಿ ಅನುದಾನ ಮೀಸಲಿಟ್ಟಿದೆ. ಅಲ್ಲದೆ, ಅಂಗನವಾಡಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರದೊಂದಿಗೆ ಹಾಲನ್ನು ಕೂಡ ಸರಬರಾಜು ಮಾಡುವ ನೂತನ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದೆ. ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ನೀಡುತ್ತಿರುವ ಆವರ್ತ ನಿಧಿ ಮಿತಿಯನ್ನು ರು. 5000ದಿಂದ ರು. 25,000ಗಳಿಗೆ ಹಂತಹಂತವಾಗಿ ಹೆಚ್ಚಿಸಲಾಗುವುದು. ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರಿಗೆ ನೀಡುತ್ತಿರುವ ಗೌರವಧನವನ್ನು ಕ್ರಮವಾಗಿ ರು. 500 ಹಾಗೂ ರು. 250ಗೆ ಹೆಚ್ಚಿಸಲಾಗುವುದು ಎಂದು ಆಯವ್ಯಯದಲ್ಲಿ ಘೋಷಿಸಲಾಗಿದೆ.

ಅನ್ನ ಭಾಗ್ಯ ಪ್ರಚಾರಾಂದೋಲನ
ಸರ್ಕಾರ ಬಿ.ಪಿ.ಎಲ್ ಕಾರ್ಡ್‌ದಾರರಿಗೆ ಒಂದು ಕೆ.ಜಿಗೆ 1ರಂತೆ ತಿಂಗಳಿಗೆ ಗರಿಷ್ಠ 30 ಕೆ.ಜಿ ಅಕ್ಕಿ ವಿತರಿಸುವ 'ಅನ್ನ ಭಾಗ್ಯ' ಯೋಜನೆ ಈಗಾಗಲೇ ಜಾರಿಗೊಳಿಸಿದೆ. ಗ್ರಾಹಕರಿಗೆ ಅನ್ನಭಾಗ್ಯ ಯೋಜನೆ ಮಾಹಿತಿ ಮತ್ತು ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ವಿಶೇಷ ಪ್ರಚಾರಾಂದೋಲನ ಕೈಗೊಳ್ಳಲು ನಿರ್ಧರಿಸಲಾಗಿದೆ.

ಗ್ರಾಹಕರ ಭವನ
ಆಹಾರ ಇಲಾಖೆ ಗಣಕೀಕರಿಸಲು ಮತ್ತು ಬಯೋವುಟ್ರಿಕ್ ಇ- ಪಡಿತರ ಯಂತ್ರಗಳನ್ನು ಸ್ಥಾಪಿಸಲು ರು. 20 ಕೋಟಿ ವೆಚ್ಚ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರು ನಗರದ ಯಶವಂತಪುರದಲ್ಲಿ ಆಹಾರಭವನ ಮತ್ತು ಗ್ರಾಹಕರ ಭವನ ನಿರ್ಮಾಣವಾಗಲಿದೆ.

ಕಟ್ಟಡ ಪೂರ್ಣಕ್ಕೆ ಯೋಜನೆ
ಕೇಂದ್ರ ಸರ್ಕಾರ ಜಾರಿ ತಂದಿರುವ ರಾಷ್ಟ್ರೀಯ ಆಹಾರ ಭದ್ರತೆ ಸುಗ್ರೀವಾಜ್ಞೆ ಸ್ವಾಗತ ಕೋರಿರುವ ಸರ್ಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆಯಲ್ಲಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಪೂರ್ಣಗೊಳಿಸಲು ರು. 2 ಕೋಟಿ ಮತ್ತು ಹೊಸ ಸಾಧನ ಖರೀದಿಸಲು ರು. 1 ಕೋಟಿ ಮೀಸಲಿಟ್ಟಿದೆ. ಪ್ರಸಕ್ತ ಸಾಲಿನಲ್ಲಿ ಈ ವಲಯಕ್ಕೆ ರು. 3,507 ಕೋಟಿ ನಿಗದಿಯಾಗಿದೆ.

10 ತ್ವರಿತ ನ್ಯಾಯಾಲಯ

ಮಹಿಳೆಯರ ಮೇಲಿನ ದೌರ್ಜನ್ಯಗಳ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ 10 ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಪ್ರಸಕ್ತ ಆಯವ್ಯಯದಲ್ಲಿ ಭರವಸೆ ನೀಡಿದೆ. ನ್ಯಾಯಾಂಗ ಇಲಾಖೆಯಲ್ಲಿದ ಮೂಲ ಸೌಕರ್ಯಗಳ ಕೊರತೆಯನ್ನು ಸರ್ಕಾರ ಪರಿಗಣಿಸಿದ್ದು, ನಿರ್ಮಾಣ ಕಾಮಗಾರಿ ಬಾಕಿಯಿರುವ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 52 ನ್ಯಾಯಾಲಯಗಳು ಹಾಗೂ 204 ನ್ಯಾಯಾಂಗ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಇದರೊಂದಿಗೆ, ಮೈಸೂರಿನ ವಕೀಲರ ಸಂಘ ಭವನ ನಿರ್ಮಾಣಕ್ಕಾಗಿ ರು. 2 ಕೋಟಿ ಅನುದಾನ ಘೋಷಿಸಿದೆ.

ರು.500 ಹೆಚ್ಚಳ
ಮಾಜಿ ದೇವದಾಸಿಯರಿಗೆ ನೀಡುತ್ತಿರುವ ಮಾಸಾಶನವನ್ನು ರು. 400ಗಳಿಂದ ರು. 500ಗಳಿಗೆ ಹೆಚ್ಚಿಸಲಾಗುವುದು. ಹಾಗೂ ನಿವೇಶನ ಹೊಂದಿರುವ ಮಾಜಿ ದೇವದಾಸಿಯರಿಗೆ ಮನೆಗಳನ್ನು ನಿರ್ಮಿಸುವ ಸಲುವಾಗಿ ನೀಡುತ್ತಿರುವ ಸಹಾಯಧನವನ್ನು ರು. 40 ಸಾವಿರದಿಂದ ರು. 1.20 ಲಕ್ಷಕ್ಕೆ ಹೆಚ್ಚಿಸಲಾಗುವುದು.

ರು. 5,421 ಕೋಟಿ
ಆರೋಗ್ಯ ಇಲಾಖೆಯ ಸಮಗ್ರ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿರುವ ಅವರು, ಒಟ್ಟಾರೆ 5,421 ಕೋಟಿ ಅನುದಾನ ನಿಗದಿಪಡಿಸಿದ್ದಾರೆ.
-    ಪ್ರತಿ ತಾಲೂಕಿನಲ್ಲಿ ಆಯುಷ್ ಘಟಕ ಮತ್ತು ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದು ಸಂಚಾರಿ ಆಯುಷ್ ಘಟಕ ಸ್ಥಾಪನೆ.
-    ರಾಜ್ಯದ 35 ಸಾವಿರ ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪ್ರೋತ್ಸಾಹಧನದ ಜತೆಗೆ ರಾಜ್ಯದಿಂದಲೂ ಪ್ರೋತ್ಸಾಹಧನ ನೀಡುವ ಬಗ್ಗೆ ಪರಿಶೀಲನೆ.
-    ಪ್ರತಿ ಜಿಲ್ಲೆಯ ಒಂದು ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ.
-    ಬೆಂಗಳೂರಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆ ಸ್ಥಾಪನೆ.
-    ಪ್ರತಿ ತಾಲೂಕಿಗೆ ಒಂದರಂತೆ ಡೆನೆರಿಕ್ ಔಷಧ ಮಳಿಗೆ.
-    ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಸಂಜಯಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಗಳಲ್ಲಿ ಇ- ಆಸ್ಪತ್ರೆ ತಂತ್ರಾಂಶ ಅಳವಡಿಕೆ.
-    ಗದಗ್‌ನಲ್ಲಿ ಸರ್ಕಾರಿ ಹೆರಿಗೆ ಆಸ್ಪತ್ರೆ ಆಧುನೀಕರಣ ಮತ್ತು ವಿಸ್ತರಣೆಗಾಗಿ 8 ಕೋಟಿ
-    ಪ್ರತಿ ಜಿಲ್ಲೆಗೊಂದರಂತೆ ಮಾನಸಿಕ ರೋಗಿಗಳಿಗೆ ವಸತಿ ಸೌಲಭ್ಯವುಳ್ಳ ಪಾಲನಾ ಕೇಂದ್ರ
-    ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡಲು 41 ತಾಯಿ ಮತ್ತು ಶಿಶು ಆರೋಗ್ಯ ರಕ್ಷಣಾ ಕೇಂದ್ರಗಳ ಹಾಸಿಗೆ ಸಾಮರ್ಥ್ಯ ಹೆಚ್ಚಳ.
-32.50 ಲಕ್ಷ ಯುವತಿಯರಿಗೆ ಋತುಚಕ್ರ ಸಂದರ್ಭದಲ್ಲಿ ಶುಚಿತ್ವ ಕಾಪಾಡಲು ಉಚಿತವಾಗಿ ತಲಾ 10 ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ಸರಬರಾಜು.
-    ಕ್ಷಯರೋಗಿಗಳು ಮತ್ತು ಎಚ್‌ಐವಿ ಪೀಡಿತರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ವಸ್ತುಗಳ ರೂಪದಲ್ಲಿ ಪೌಷ್ಠಿಕ ಆಹಾರದ ಬೆಂಬಲ.
-    ಕರಾವಳಿ ಪ್ರದೇಶದಲ್ಲಿ ಎಂಡೋಸಲ್ಫಾನ್ ಬಾಧಿತರಾದವರ ಸಮೀಕ್ಷೆ ನಡೆಸಿ ಪುನರ್ವಸತಿ ಯೋಜನೆ ಮೂಲಕ ಶಾಶ್ವತ ಪರಿಹಾರ.
-    ಎಲ್ಲಾ ಸ್ವಾತಂತ್ರ್ಯ ಯೋಧರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಮತ್ತು ಚಿಕಿತ್ಸೆ.
-    ಆರೋಗ್ಯ ಕವಚ- 108 ಯೋಜನೆಯಡಿ 2011ರ ಜನಗಣತಿ ಆಧಾರದ ಮೇಲೆ ಒಂದು ಲಕ್ಷ ಜನರಿಗೆ ಒಂದು ವಾಹನ ಒದಗಿಸಲು ಕ್ರಮ.
-    ಗುಲ್ಬರ್ಗದಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪೆರಿಫರಲ್ ಕಾನ್ಸರ್ ಕೇಂದ್ರ ಮೇಲ್ದರ್ಜೆಗೆ.
-    ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ 10 ಕೋಟಿ ನೆರವು.

ಬಿಪಿಎಲ್‌ಗೆ ಆರೋಗ್ಯ ಸೇವೆ

ಬಿಪಿಎಲ್ ಕುಟುಂಬಗಳಿಗೆ ಸೇರದಿರುವ ವಿವಿಧ ಕಾರ್ಮಿಕ ವರ್ಗ ಮತ್ತು ಜನಸಮುದಾಯಕ್ಕೆ ಸುಸಜ್ಜಿತ ಮೇಲ್ದರ್ಜೆ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಈ ವರ್ಗಕ್ಕೆ ನೂತನ ಆರೋಗ್ಯ ಯೋಜನೆ ರೂಪಿಸಲು ಮುಂದಾಗಿದೆ. ಆರೋಗ್ಯ ವಿಮೆ ಮತ್ತು ಬಾಗಿದಾರರ ಕೊಡುಗೆ ಆಧರಿಸಿ ಈ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಹೇಳಿದ್ದಾರೆ.

ಇದೊಂದು ಜನಪರ, ಗ್ರಾಮೀಣ ಜನರ ಬದುಕು ಉನ್ನತೀಕರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿರುವ ಬಜೆಟ್. ಗ್ರಾಪಂಗಳಲ್ಲಿ ಯುವಕರಿಗೆ ಹೊಸ ಉದ್ಯೋಗ ಸೃಷ್ಟಿಸುವು ಜತೆಗೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಜ್ಯದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ.
- ಎಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ

ಇದು ಬಡವರಿಗೆ, ಹಿಂದುಳಿದವರಿಗೆ ಆಶಾದಾಯಕ ಬಜೆಟ್. ಇನ್ನು ಕೆರೆಗಳ ಪುನಶ್ಚೇತನಕ್ಕೆ ಮಹತ್ವದ ಹೆಜ್ಜೆಯನ್ನಿಡಲಾಗಿದೆ. ನಾನೊಬ್ಬ ಶಿಕ್ಷಕನಾಗಿ ಹೇಳುವುದಾದರೆ ಶಾಲೆಗೆ ಹೋಗುವ ಬಾಲಕಿಯರಿಗೆ ಪ್ರತಿದಿನ 2 ಪ್ರೋತ್ಸಾಹ ಧನ ನೀಡುವುದು ಉತ್ತಮ ನಿರ್ಧಾರ. ಇನ್ನು ಗಣಿಗಾರಿಕೆಯಿಂದಾಗಿ ಹಲ್ಲೆಗೊಳಗಾಗಿರುವ ಬೆಟ್ಟಗುಡ್ಡಗಳ ಹಸಿರುಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕಿತ್ತು.
- ಕುಂ. ವೀರಭದ್ರಪ್ಪ, ಸಾಹಿತಿ, ಬಳ್ಳಾರಿ

ಪಶ್ಚಿಮ ಘಟ್ಟ ಉಳಿಸುವ ಮತ್ತು ಸಂರಕ್ಷಿಸುವ ಯೋಜನೆಗಳ ಕುರಿತು ಪ್ರಸ್ತಾಪವನ್ನೇ ಮಾಡಿಲ್ಲ. ನದಿ ಮೂಲ ಮತ್ತು ನದಿ ಕಣಿವೆ ಸಂರಕ್ಷಣೆಗೆ ಆದ್ಯತೆಯನ್ನೇ ಕೊಟ್ಟಿಲ್ಲ. ಇದರಿಂದ ನೀರಿನ ಸಮಸ್ಯೆ ತೀವ್ರಗೊಳ್ಳಬಹುದು. ಸೋಲಾರ್ ಬಳಕೆದಾರರಿಗೆ ಸಹಾಯಧನ ನೀಡಿರುವುದು ಸಮಾಧಾನಕರ ಸಂಗತಿ. ಗ್ರಾಮ ಅರಣ್ಯ ಸಮಿತಿಗಳ ಪುನರುಜ್ಜೀವನಕ್ಕೆ ಅನುದಾನ ನೀಡಿರುವುದು ಸ್ವಾಗತಾರ್ಹ.
- ಅನಂತ ಹೆಗಡೆ ಅಶೀಸರ, ಮಾಜಿ ಅಧ್ಯಕ್ಷರು, ಪಶ್ಚಿಮ ಘಟ್ಟ ಕಾರ್ಯಪಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement