ರಂಗಿನ ಯೋಜನೆ ಇಲ್ಲ
ಯಾರಿಗೂ ಹೊರೆ ಇಲ್ಲ ಮತ್ತು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟರ ಪರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಹೊಸ ಬಜೆಟ್...
ಕನ್ನಡಪ್ರಭ ವಾರ್ತೆ ಬೆಂಗಳೂರು ಜು.12
ಯಾರಿಗೂ ಹೊರೆ ಇಲ್ಲ ಮತ್ತು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟರ ಪರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಹೊಸ ಬಜೆಟ್ ಕುರಿತಂತೆ ಒಂದು ಸಾಲಿನಲ್ಲಿ ಈ ಮಾತು ಹೇಳಬಹುದು.ರಂಗು ರಂಗಿನ ಯೋಜನೆಗಳನ್ನು ಪ್ರಕಟಿಸದೆ, ಜನರ ಮೂಗಿಗೆ ತುಪ್ಪ ಸವರುವ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸದೆ ಚುನಾವಣಾ ಬಜೆಟ್ ಹೇಗೆ ಮಂಡಿಸಬಹುದು? ಈ ಮೂಲಕ ಸಾಮಾಜಿಕ ನ್ಯಾಯವನ್ನು ಯಾವ ರೀತಿ ಪರಿಪಾಲಿಸಬಹುದು ಎಂಬುದನ್ನು ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಸಾಬೀತುಪಡಿಸಿದ್ದಾರೆ.
ಆದರೆ, ಈ ಹಿಂದೆ ಉಪಮುಖ್ಯಮಂತ್ರಿಯಾಗಿ ಮತ್ತು ಹಣಕಾಸು ಸಚಿವರಾಗಿ ಮಂಡಿಸಿದ್ದ ಏಳು ಉತ್ತಮ ಬಜೆಟ್‌ಗಳಿಗೆ ಇದನ್ನು ಹೋಲಿಸಲು ಸಾಧ್ಯವಾಗದೇ ಇದ್ದರೂ ಎಲ್ಲರನ್ನೂ ಸಮಾಧಾನಪಡಿಸಲು ಶ್ರಮಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಜೆಟ್ ಮಂಡನೆಯಾಗಿದ್ದರಿಂದ ಅದರಲ್ಲಿ ಸಿದ್ದರಾಮಯ್ಯ ಅವರ ಸ್ಪಷ್ಟ ನಿಲುವು ಕಾಣಲು ಸಾಧ್ಯವಿಲ್ಲ ಎನ್ನುವ ಕೊರತೆ ಎದ್ದು ಕಾಣುತ್ತದೆ.
ಅಹಿಂದಕ್ಕೆ ಆದ್ಯತೆ: ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದ ಅಲ್ಪಸಂಖ್ಯಾತ, ಹಿಂದುಳಿದ, ದಲಿತ (ಅಹಿಂದ) ವಾದ ಬಜೆಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಹಾಗೆಂದು ಬೇರೆಯವರಿಗೆ ಅಸಮಾಧಾನವನ್ನೂ ಉಂಟುಮಾಡಿಲ್ಲ. ಒಟ್ಟಿನಲ್ಲಿ ಸಾಮಾಜಿಕ ನ್ಯಾಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ. ಅಹಿಂದ ಸಮುದಾಯದ ಜನರ ಕಲ್ಯಾಣ ಯೋಜನೆ ವಿಚಾರದಲ್ಲಿ ಸಿಎಂ ಹೆಚ್ಚು ಧಾರಾಳಿಯಾಗಿದ್ದಾರೆ.
ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುದು, ಸಂಘಟನೆಗಳ ಕೆಲಸಗಳಿಗೆ ಸಹಕರಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಒಟ್ಟಿನಲ್ಲಿ ಈ ವಿಭಾಗಕ್ಕೆ ಬಜೆಟ್‌ನಲ್ಲಿ ಒಟ್ಟು 5046 ಕೋಟಿ ಮೀಸಲಿಟ್ಟಿದ್ದಾರೆ.
ಹೊಸ ಸಂಪ್ರದಾಯ: ಬಿಜೆಪಿ ಸರ್ಕಾರ ಆರಂಭಿಸಿದ್ದ ಮಠ, ಧಾರ್ಮಿಕ ಸಂಸ್ಥೆಗಳಿಗೆ ನೇರವಾಗಿ ಹಣ ನೀಡುವ ಪದ್ಧತಿಗೆ ಸಿದ್ದರಾಮಯ್ಯ ಅಂತ್ಯ ಹಾಡಿದ್ದಾರೆ. ಹಾಗೆಂದು ಅವರಿಗೆ ಅನ್ಯಾಯ ಮಾಡಿಲ್ಲ. ಆ ಸಂಸ್ಥೆಗಳು ನಡೆಸುವ ಸಾಮಾಜಿಕ ಕಾರ್ಯಕ್ಕೆ ಅನುದಾನ ನಿಗದಿಪಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಅಂದರೆ, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಧಾರ್ಮಿಕ ಸಂಸ್ಥೆಗಳು ನಡೆಸುವ ವಿದ್ಯಾರ್ಥಿ ನಿಲಯ, ಶೈಕ್ಷಣಿಕ ಸಂಸ್ಥೆಗಳು, ಸಮುದಾಯ ಭವನ ನಿರ್ಮಾಣ, ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಒಟ್ಟು 125 ಕೋಟಿ ತೆಗೆದಿಟ್ಟಿದ್ದಾರೆ. ಆದರೆ, ಮೇಲ್ವರ್ಗದ ಧಾರ್ಮಿಕ ಸಂಸ್ಥೆಗಳಿಗೆ ಮಾತ್ರ ಅನುದಾನ ನೀಡಿಲ್ಲ.
ಆದ್ಯತಾ ವಲಯಗಳು: ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸದೇ ಇದ್ದರೂ ಕೃಷಿ ಮತ್ತು ತೋಟಗಾರಿಕಾ ವಲಯದ ಬೆಳವಣಿಗೆಗೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ಹನಿ ನೀರಾವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ. 90 ಮತ್ತು ಇತರರಿಗೆ ಶೇ. 75ರಷ್ಟು ಸಹಾಯಧನ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ, ರೈತರು ಪಡೆಯುವ ಬಡ್ಡಿ ರಹಿತ ಬೆಳೆ ಸಾಲದ ಮಿತಿಯನ್ನು 1ರಿಂದ 2 ಲಕ್ಷಕ್ಕೆ ಹೆಚ್ಚಿಸಿದ್ದಲ್ಲದೆ, 2ರಿಂದ 3 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಶೇ. 1ಕ್ಕೆ ಇಳಿಸಿದ್ದಾರೆ. ಅಷ್ಟೇ ಅಲ್ಲ, ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ದರ ಒದಗಿಸುವ ಬಗ್ಗೆಯೂ ಗಮನಹರಿಸಿದ್ದಾರೆ. ಇನ್ನು ನೀರಾವರಿ ಯೋಜನೆಗಳಿಗೆ ಈ ಹಿಂದೆ ಹೇಳಿದಂತೆ 10 ಸಾವಿರ ಕೋಟಿ ಪೂರ್ತಿಯಾಗಿ ನೀಡದಿದ್ದರೂ 9812 ಕೋಟಿ ನಿಗದಿಪಡಿಸುವ ಮೂಲಕ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅನುದಾನ ನೀಡಿದ್ದಾರೆ. ಅದೇ ರೀತಿ ಸಾಹಿತಿಗಳು, ಕನ್ನಡಪರ ಸಂಘಟನೆಗಳ ವಿರೋಧದ ನಡುವೆಯೂ 1ನೇ ತರಗತಿಯಿಂದ ಅಂಗ್ಲ ಭಾಷೆಯನ್ನು ಒಂದು ವಿಷಯವಾಗಿ ಬೋಧಿಸುವ ಬಗ್ಗೆ ಪ್ರಸ್ತಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಪರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ವಸತಿ, ನಗರಾಭಿವೃದ್ಧಿ, ಜಲ ಸಂಪನ್ಮೂಲ ಇಲಾಖೆಗಳನ್ನು ಆದ್ಯತಾ ವಲಯಗಳೆಂದು ಪರಿಗಣಿಸಿದ್ದಾರೆ. ಈ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳ ಒಟ್ಟಾರೆ ಬೆಳವಣಿಗೆಗೆ ಒತ್ತು ನೀಡಿದ್ದಾರೆ.
ಹಣ ಹೊಂದಿಸಲು ಕಸರತ್ತು: ಜನರ ಮೇಲೆ ಹೊಸ ತೆರಿಗೆ ಹಾಕದೆ ಇರುವ ಇತಿಮಿತಿಯಲ್ಲೇ ಸಂಪನ್ಮೂಲ ಕ್ರೋಡೀಕರಣಕ್ಕೆ ಸಾಕಷ್ಟು ಕಸರತ್ತು ನಡೆಸಿರುವುದು ಎದ್ದು ಕಾಣುತ್ತದೆ. ಇದಕ್ಕಾಗಿ ತೆರಿಗೆ ಸಂಗ್ರದಲ್ಲಿ ಶಿಸ್ತು ತರಲು ಮುಂದಾಗಿದ್ದಾರೆ. ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಳೆದ ಫೆಬ್ರವರಿಯಲ್ಲಿ 1,17,005 ಕೋಟಿ ಮೊತ್ತದ ಬಜೆಟ್ ಮಂಡಿಸಿದರೆ ಸಿದ್ದರಾಮಯ್ಯ ಅವರು ಅದಕ್ಕಿಂತ 4,606 ಕೋಟಿ ಹೆಚ್ಚು ಅಂದರೆ 1,21,611 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದಾರೆ. ಹಾಗೆಂದು ಈ ಹೆಚ್ಚುವರಿ ಮೊತ್ತವನ್ನು ಜನರ ಮೇಲೆ ಹಾಕಿಲ್ಲ.
ಬದಲಾಗಿ ಈಗಾಗಲೇ ವಿಧಿಸಿರುವ ತೆರಿಗೆಯನ್ನೇ ಸಮರ್ಪಕವಾಗಿ ಸಂಗ್ರಹಿಸಿ ಅದನ್ನು ಭರಿಸಲು ಮುಂದಾಗಿದ್ದಾರೆ. ಜತೆಗೆ ಯೋಜನಾ ಗಾತ್ರದಲ್ಲಿ 550 ಕೋಟಿ ಹೆಚ್ಚಳ ಮಾಡಿಕೊಂಡು ಹೊರೆ ಕಡಿಮೆ ಮಾಡಿಕೊಂಡಿದ್ದಾರೆ. ಇದು ಹಣಕಾಸು ವಿಚಾರದಲ್ಲಿ ಅವರು ಅನುಸರಿಸಿದ ಶಿಸ್ತಿನ ನಡಿಗೆಯನ್ನು ತೋರಿಸುತ್ತದೆ.