ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಾಶನದ ಮೈತ್ರಿ

Mainashree
Updated On : 13 Jul 2013, 12:00 pm

ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ 'ಮನಸ್ವಿನಿ', ಲೈಂಗಿಕತ ಅಲ್ಪಸಂಖ್ಯಾತರಿಗೆ 'ಮೈತ್ರಿ', ಹಂತಹಂತವಾಗಿ ಹೊಸ ತಾಲೂಕು ರಚನೆ ಸೇರಿದಂತೆ ಇನ್ನು ಮುಂದೆ ತಾಂಡಾ, ಹಟ್ಟಿಗಳನ್ನೂ ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಂದಾಯ ಇಲಾಖೆಗೆ 3,797 ಕೋಟಿ ಒದಗಿಸಿದ್ದು, ಬಡತನ ರೇಖೆಗಿಂತ ಕೆಳಗಿರುವ 40 ವರ್ಷ ದಾಟಿದ ಅವಿವಾಹಿತ ಮಹಿಳೆಯರು ಹಾಗೂ ಬಡತನರೇಖೆಗಿಂತ ಕೆಳಗಿರುವ ವಿಚ್ಛೇದಿತ ಮಹಿಳೆಗೆ 500 ಮಾಸಾಶನ ನೀಡಲು ನಿರ್ಧರಿಸಿದ್ದಾರೆ. ಈ ಯೋಜನೆಗೆ ಮನಸ್ವಿನಿ ಎಂದು ಹೆಸರಿಸಲಾಗಿದೆ.

ನೀರಾ ಉತ್ಪಾದನೆಗೆ ಮರು ಜೀವ

ರಾಜ್ಯದಲ್ಲಿ ಸ್ಥಗಿತವಾಗಿದ್ದ ನೀರಾ ಉತ್ಪಾದನೆಗೆ ಕಾಂಗ್ರೆಸ್ ಸರ್ಕಾರ ಮತ್ತೆ ಜೀವ ನೀಡುವ ನಿರ್ಧಾರ ಮಾಡಿದೆ. ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋಟಗಾರಿಕೆ ಬೆಳೆಗೆ ಆದ್ಯತೆ ನೀಡಿದ್ದು, ಅದರಲ್ಲೂ  ತೆಂಗು ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದ್ದಾರೆ. ತೆಂಗಿನ ಮರಗಳಿಂದ ನೀರಾ ಉತ್ಪಾದಿಸಲು ಇರುವ ಅಡಚಣೆ ನಿವಾರಿಸಲು ಆಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ನೀರಾ ಉತ್ಪಾದನಾ ಹಾದಿ ಸುಗಮಗೊಳಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಈ ಮೂಲಕ ನೀರಾದಿಂದ ಉತ್ಪಾದಿಸುವ ಇತರ ಪದಾರ್ಥಗಳಿಗೂ ಮೌಲ್ಯ ಬರುವಂತೆ ಮಾಡಲು ಪ್ರೋತ್ಸಾಹ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ತೆಂಗು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು. ತೆಂಗು ಉತ್ಪನ್ನ ಸಂಸ್ಕರಣ ಘಟಕಗಳಿಗೆ ಶೇ.25ರಷ್ಟು ನೆರವು. ತೆಂಗು ಉತ್ಪನ್ನ ಮೌಲ್ಯವರ್ಧನೆಗೆ 5ಪಾರ್ಕ್‌ಗಳ ಸ್ಥಾಪನೆ. ರಾಜ್ಯದಲ್ಲಿ ತೆಂಗು ಉತ್ಪಾದಕರ ಕಂಪನಿ ಸ್ಥಾಪನೆಗೆ ಶೇ.25ರಷ್ಟು ನೆರವು. ಇದಕ್ಕಾಗಿ ಆರಂಭಿಕವಾಗಿ 1ಕೋಟಿ ಅನುದಾನ ಒದಗಿಸುವುದಾಗಿ ಹೇಳಿದ್ದಾರೆ. ಸಾವಯವ ಕೃಷಿ ಉತ್ತೇಜಿಸಲು ರೈತರನ್ನು ಒಳಗೊಂಡ ಕ್ಲಸ್ಟರ್ ರಚನೆ. ಚಾಮರಾಜನಗರದಲ್ಲಿರುವ ರೈತ ನಾಯಕ ದಿ.ಪ್ರೊ.ನಂಜುಂಡಸ್ವಾಮಿ ಸ್ಮರಣಾರ್ಥ ಅಮೃತಭೂಮಿ ಟ್ರಸ್ಟ್ ಸಾವಯವ ಕೃಷಿ ಚಟುವಟಿಕೆಗೆ 5ಕೋಟಿ ನೆರವು. ನಷ್ಟಕ್ಕೀಡಾದ ಅಡಕೆ ಬೆಳೆಗಾರರಿಗೆ ಪರ್ಯಾಯ ಬೆಳೆ ಮತ್ತು ಪರ್ಯಾಯ ಬೇಸಾಯದ ಬಗ್ಗೆ ಅರಿವು ಮತ್ತು ಪ್ರಾತ್ಯಕ್ಷಿಕೆ ನೀಡಲು 2ಕೋಟಿ. ದಾಳಿಂಬೆ ಬೆಳೆಗಾರರಿಗೆ ಕೇಂದ್ರದೊಂದಿಗೆ ರಾಜ್ಯದ ನೆರವಿನ ಪಾಲು 12.5ಕೋಟಿ ನೆರವು ನೀಡುವುದಾಗಿ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಜಾನುವಾರುಗಳಿಗೂ 'ಸೂಪರ್‌' ಆಸ್ಪತ್ರೆ

ಪಶುವೈದ್ಯಕೀಯ ಸೇವೆ ಒದಗಿಸಲು ಪ್ರತಿ ಕಂದಾಯ ವಿಭಾಗಕ್ಕೆ ಒಂದರಂತೆ ಸ್ಪೆಷಾಲಿಟಿ ಆಸ್ಪತ್ರೆ
ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಜಾನುವಾರುಗಳಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ನಿರ್ಧರಿಸಿದೆ. ಅಷ್ಟೇ ಅಲ್ಲ. ಕುರಿ, ಮೇಕೆಗಳು ಆಕಸ್ಮಿಕವಾಗಿ ಸಾವಿಗೀಡಾದರೆ 3000 ಪರಿಹಾರ ನೀಡಲು ಮುಂದಾಗಿದೆ.
ಹೀಗೆ ಪಶುಸಂಗೋಪನೆ ಅಭಿವೃದ್ಧಿಗೆ ಕೆಲವು ಯೋಜನೆಗಳನ್ನು ಪ್ರಕಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲಾಖೆಗೆ ಒಟ್ಟು 1.675 ಕೋಟಿ ಒದಗಿಸಿದ್ದಾರೆ.
ಪಶುವೈದ್ಯಕೀಯ ಸೇವೆ ಒದಗಿಸಲು ಪ್ರತಿ ಕಂದಾಯ ವಿಭಾಗಕ್ಕೆ ಒಂದರಂತೆ ಸ್ಪೆಷಾಲಿಟಿ ಆಸ್ಪತ್ರೆ. ಬೆಂಗಳೂರಿನಲ್ಲಿ ಸೂಪರ್ ಸ್ಪೆಷಾಲಿಟಿಆಸ್ಪತ್ರೆ ತೆರೆಯಲು 8ಕೋಟಿ ಅನುದಾನ.
ಹಸಿರು ಮೇವು ಬೆಳೆಯಲು ಕೇಂದ್ರ ಸರ್ಕಾರದ ನೆರವಿನೊಂದಿಗೆ  ರೈತರಿಗೆ 5.25ಲಕ್ಷ ಮೇವಿನ ಬೀಜದ ಕಿರು ಪೊಟ್ಟಣಗಳ ವಿತರಣೆ. ಬೀದರ್, ಶಿವಮೊಗ್ಗ, ಹಾಸನ ಪಶು ವೈದ್ಯಕೀಯ ಕಾಲೇಜು, ಗುಲ್ಬರ್ಗದ ಡೈರಿ ಕಾಲೇಜಿನಲ್ಲಿ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರದ ನೆರವಿನೊಂದಿಗೆ  73ಕೋಟಿ.
ಪ್ರಸ್ತಕ ಸಾಲಿನಲ್ಲಿ 391 ಪಶುವೈದ್ಯರು ಹಾಗೂ 642 ಪಶುವೈದ್ಯಕೀಯ ಸಹಾಯಕರ ಹುದ್ದೆ ತುಂಬಲು ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಾನುವಾರು ಮತ್ತು ಕುಕ್ಕುಟ ಅಭಿವೃದ್ಧಿಗೆ 65ಕೋಟಿ.
ಕುರಿ, ಎಮ್ಮೆ, ಮೇಕೆ ತಳಿ ಸಂರಕ್ಷಣೆ ಮತ್ತು ಅಭಿವೃದ್ಧಿಗೊಳಿಸುವ ಹೊಸ ಯೋಜನೆಗೆ 2ಕೋಟಿ.
ಕುರಿ, ಮೇಕೆಗಳು ಆಕಸ್ಮಿಕವಾಗಿ ಸಾವಿಗೀಡಾದರೆ ಒಂದಕ್ಕೆ 3000 ವರೆಗೂ ಪರಿಹಾರ ಒದಗಿಸಲು 2ಕೋಟಿಚಾಮರಾಜನಗರ ಜಿಲ್ಲೆಗೆ  ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವುದಾಗಿ ಅವರು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

12,600 ಕೋಟಿ ಅಬಕಾರಿ ತೆರಿಗೆ ಸಂಗ್ರಹ ಗುರಿ ನಿಗದಿ
ಪ್ರಸಕ್ತ ಸಾಲಿನಲ್ಲಿ ರು. 12,600 ಕೋಟಿ ತೆರಿಗೆ ಸಂಗ್ರಹಿಸುವಂತೆ ಅಬಕಾರಿ ಇಲಾಖೆಗೆ ಗುರಿ ನಿಗದಿ ಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಜತೆಗೆ, ಎಲ್ಲ 17 ಸ್ಲ್ಯಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಅನುಬಂಧ-2ರಲ್ಲಿ ಇರುವಂತೆ ಶೇ. 16 ರಿಂದ ಶೇ. 40ರಷ್ಟು ಹೆಚ್ಚಿಸಲು ಪ್ರಸ್ತಾಪಿಸುವುದಾಗಿ ಹೇಳಿರುವ ಅವರು, ಪರಿಣಾಮಕಾರಿ ಜಾರಿ ಮತ್ತು ನಿಯಂತ್ರಣಾ ಕ್ರಮಗಳ ಮೂಲಕ ಇಲಾಖೆ ನಿಗದಿತ ಗುರಿ ಸಾಧಿಸಲಿದೆ ಎಂದರು. ಅಬಕಾರಿ ಸುಂಕ ಹಾಗೂ ಇನ್ನಿತರ ಮೊತ್ತಗಳನ್ನು ವಿದ್ಯುನ್ಮಾನ ವಿಧಾನದಲ್ಲಿ(ಇ-ಪಾವತಿ) ಸಂದಾಯ ಮಾಡುವ ಸೌಲಭ್ಯವನ್ನು ಸನ್ನದುದಾರರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.

ಕಳ್ಳಭಟ್ಟಿಯವರಿಗೆ ಪುನರ್ವಸತಿ
ಈ ಹಿಂದೆ ರಾಜ್ಯದಲ್ಲಿದ್ದ 2048 ಕಳ್ಳಭಟ್ಟಿ ತಯಾರಿಕಾ ಕೇಂದ್ರಗಳಲ್ಲಿ ಅಕ್ರಮ ಮದ್ಯ ತಯಾರಿಸುತ್ತಿದ್ದ ಕುಟುಂಬಗಳ ಸದಸ್ಯರನ್ನು ಗುರುತಿಸಲಾಗಿದೆ. ಅವರೆಲ್ಲರಿಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮಗಳ ನೆರವಿನೊಂದಿಗೆ ಪುನರ್ವಸತಿ ಕಲ್ಪಿಸಲಾಗುವುದು.

ಅಬಕಾರಿ ಅಕಾಡೆಮಿ
ಅಬಕಾರಿ ಇಲಾಖೆ ಸಿಬ್ಬಂದಿಗೆ ತರಬೇತಿ ಮತ್ತು ಅವರ ವೃತ್ತಿ ಕೌಶಲ್ಯ ಉತ್ತಮ ಪಡಿಸಲು ಇಲಾಖೆ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಲ್ಲುಕೋಟೆ ಗ್ರಾಮದಲ್ಲಿ ಆಧುನಿಕ ಅಬಕಾರಿ ಅಕಾಡೆಮಿ ಸ್ಥಾಪಿಸಲಾಗುವುದು.

ಖಾಲಿ ಹುದ್ದೆ ಭರ್ತಿ
ಅಬಕಾರಿ ನಿಯಮಗಳ ಪರಿಣಾಮಕಾರಿ ಜಾರಿ ಜತೆಗೆ ಆಡಳಿತ ಚುರುಕುಗೊಳಿಸಲು ಖಾಲಿ ಇರುವ ಎಲ್ಲ ಅಬಕಾರಿ ಉಪ ನಿರೀಕ್ಷಕರು ಮತ್ತು ಅಬಕಾರಿ ರಕ್ಷಕರ ಹುದ್ದೆಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭರ್ತಿಮಾಡಲಾಗುವುದು.

ಅರಣ್ಯ ಒತ್ತು'ವರಿ' ತಡೆಗೆ ಆದ್ಯತೆ
ಅರಣ್ಯ: ಈ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಅರಣ್ಯ ಪ್ರದೇಶದ ಒತ್ತುವರಿ ತಡೆಗೆ ಆದ್ಯತೆ ನೀಡಿದೆ. ಅರಣ್ಯ ಮತ್ತು ಪರಿಸರ ವಲಯಕ್ಕೆ ಪ್ರಸಕ್ತ ಸಾಲಿನಲ್ಲಿ 1254 ಕೋಟಿ ಅನುದಾನದ ಜತೆಗೆ ವಿವಿಧ ಯೋಜನೆಗಳಿಗೆ ರು. 93 ಕೋಟಿ ಹೆಚ್ಚುವರಿ ಅನುದಾನ ಘೋಷಣೆಯಾಗಿದೆ.
ಸಿರಿಚಂದನವನ: ಗಂಧದ ಮರ ಬೆಳೆಯುವ ನೈಸರ್ಗಿಕ ಪ್ರದೇಶಗಳನ್ನು ಸಂಪರ್ಕಿಸಲು ಮತ್ತು ನಿರ್ವಹಿಸಲು 'ಸಿರಿಚಂದನವನ' ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಂಗಳೂರು ಮತ್ತು ಇತರ ನಗರ ಪ್ರದೇಶಗಳಲ್ಲಿರುವ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು 7 ಕೋಟಿ ನಿಗದಿಪಡಿಸಿದ್ದಾರೆ.
ತರಬೇತಿ ಸಂಸ್ಥೆ: ಸರ್ಕಾರ ಘೋಷಿಸಿರುವ ಸಂರಕ್ಷಿತ ಪ್ರದೇಶ ಮತ್ತು ರಾಷ್ಟ್ರೀಯ ಉದ್ಯಾನಗಳಾದ ರಾಮದೇವರ ಬೆಟ್ಟ, ಭೀಮಗಡ ವನ್ಯಧಾಮ, ಚಿಂಚೋಳಿ ವನ್ಯಧಾಮ, ರೈಪೋರಿಯಮ್ ಇಕೋ ಸಿಸ್ಟಮ್ ಕನ್ಸರ್‌ವೇಶನ್ ರಿಸರ್ವ್‌ಗಳನ್ನು ಅಬಿವೃದ್ಧಿಪಡಿಸಲು ವಿಶೇಷ ಕ್ರಮ. ಧಾರವಾಡ ಸಮೀಪದ ಗುಂಗರಗಟ್ಟಿಯಲ್ಲಿ ವಲಯ ಅರಣ್ಯ ಅಧಿಕಾರಿಗಳ ತರಬೇತಿ ಸಂಸ್ಥೆ ಸ್ಥಾಪನೆಗೆ ಕ್ರಮ.

ಇತರೆ ಯೋಜನೆಗಳು
- ಗ್ರಾಮ ಅರಣ್ಯ ಸಮಿತಿ ಪುನಶ್ಚೇತನಕ್ಕಾಗಿ ರು. 7 ಕೋಟಿ
- ಹುಲಿ ಮೀಸಲು ಅರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿರುವ ಕುಟುಂಬಗಳ ಸ್ವಇಚ್ಛಾ ಪುನರ್ವಸತಿ ಪ್ಯಾಕೇಜ್‌ಗೆ ರು. 35 ಕೋಟಿ.
- ಹೊಸದಾಗಿ ಘೋಷಿತ ಅಭಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ತಾಣಗಳ ಅಭಿವೃದ್ಧಿಗೆ ರು. 7 ಕೋಟಿ
- ಮಾನವ- ಪ್ರಾಣಿ ಸಂಘರ್ಷ ಪರಿಹರಿಸಲು ದೀರ್ಘಾವಧಿ ಕ್ರಮಗಳಿಗೆ ರು. 30 ಕೋಟಿ ಮೀಸಲು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement