ಶಿಕ್ಷಣಕ್ಕೆ ಹೆಚ್ಚು; ರಕ್ಷಣೆಗೆ ಒತ್ತು
ದಾವಣಗೆರೆ, ಬೆಳಗಾವಿ, ಗುಲ್ಬರ್ಗ ಮತ್ತು ಮಂಗಳೂರು ವಲಯ ಕೇಂದ್ರ ಸ್ಥಾನಗಳಲ್ಲಿ, ಪೊಲೀಸ್ ಸಾರ್ವಜನಿಕ ಶಾಲೆಯ...
- 1ನೇ ತರಗತಿಯಿಂದ ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಕೆ
- ಯುನಿಕೋಡ್ ಕನ್ನಡ ತಂತ್ರಾಂಶಕ್ಕೆ ಒತ್ತು
ದಾವಣಗೆರೆ, ಬೆಳಗಾವಿ, ಗುಲ್ಬರ್ಗ ಮತ್ತು ಮಂಗಳೂರು ವಲಯ ಕೇಂದ್ರ ಸ್ಥಾನಗಳಲ್ಲಿ, ಪೊಲೀಸ್ ಸಾರ್ವಜನಿಕ ಶಾಲೆಯ ಮಾದರಿಯಲ್ಲಿ ಶಾಲೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಾಲಾ ವ್ಯವಸ್ಥಾಪಕ ಸಮಿತಿಗಳು ಈ ಶಾಲೆಗಳನ್ನು ನಡೆಸುತ್ತವೆ. ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯನ್ನು ಉನ್ನತೀಕರಿಸಲು ಉದ್ದೇಶಿಸಲಾಗಿದೆ.
ಪ್ರಮುಖಾಂಶಗಳು
- ಶಿಕ್ಷಕರ ವಿದ್ಯಾರ್ಹತೆ ಹೆಚ್ಚಳ ಹಾಗೂ ಖಾಲಿ ಹುದ್ದೆ ಭರ್ತಿ
- ಗ್ರಾಮೀಣ ಶಾಲೆಗಳಲ್ಲಿ ದೂರಸಂವೇದಿ ಶಿಕ್ಷಣ
- 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಬಿಸಿಯೂಟ ಯೋಜನೆಗೆ ಸ್ಟೀಮ್ ಬಾಯ್ಲರ್ ಅಳವಡಿಕೆ
- ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷಾ ಮಾಹಿತಿ ಆನ್ಲೈನ್ನಲ್ಲಿ ಲಭ್ಯ
- ಸಾರ್ವಜನಿಕ ಗ್ರಂಥಾಲಯಗಳಲ್ಲಿ ಡಿಜಿಟಲ್ ಜ್ಞಾನ ಕೇಂದ್ರ ಸ್ಥಾಪನೆ
- ಭಾರತ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 3 ಕೋಟಿ
- 15 ನೂತನ ಮಹಿಳಾ ಸರ್ಕಾರಿ ಪದವಿ ಕಾಲೇಜು
- 25 ಸರ್ಕಾರಿ ಪದವಿ ಕಾಲುಜಗಳ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತಿ ಕಾಲೇಜಿಗೆ 2 ಕೋಟಿ ಅನುದಾನ
- ವಾರ್ಷಿಕ ವರಮಾನ 2.50 ಲಕ್ಷಕ್ಕೂ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಬೇಕಾದ ಪುಸ್ತಕ, ವಸ್ತ್ರ, ಉಪಕರಣ, ರಾಜೀವ್ ಗಾಂಧಿ ಶಿಷ್ಯವೇತನ
- ಎಲ್ಲ ಸರ್ಕಾರಿ ಕಾಲೇಜುಗಳಿಗೆ ಅಂತರ್ಜಾಲ ಸಂಪರ್ಕ
- ಎಲ್ಲ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಇನೋವೇಷನ್ ಕ್ಲಬ್
- ಎಚ್ಐವಿ ಹಾಗೂ ಕುಷ್ಠ ರೋಗ ಪೀಡಿತರಿಗೆ ವಿದ್ಯಾರ್ಥಿ ವೇತನ ಹಾಗೂ ಉಚಿತ ಉನ್ನತ ಶಿಕ್ಷಣ
- ಮಂಡ್ಯದಲ್ಲಿ ಮಹಿಳಾ ವಿವಿಯ ಹೊರಾವರಣ ಕೇಂದ್ರ
- ರಾಣಿಚೆನ್ನಮ್ಮ ವಿವಿ, ಮಹಿಳಾ ವಿವಿ ಹಾಗೂ ದಾವಣಗೆರೆ ವಿವಿ ಅಭಿವೃದ್ಧಿಗೆ ತಲಾ 5 ಕೋಟಿ
- ವಿಶ್ವವಿದ್ಯಾಲಯ ಸರಾಸರಿಗಿಂತ ಶೇ.10ರಷ್ಟು ಹೆಚ್ಚಿನ ಫಲಿತಾಂಶ ಹೊಂದಿರುವ ಕಾಲೇಜುಗಳಿಗೆ ಪ್ರೋತ್ಸಾಹ
ಮನೆಗಳ ಘಟಕ ಸಹಾಯಧನ 1.20 ಲಕ್ಷಕ್ಕೆ ಏರಿಕೆ
ಮನೆಗಳ ಘಟಕ ಸಹಾಯಧನವನ್ನು 75 ಸಾವಿರದಿಂದ 1.20 ಲಕ್ಷಕ್ಕೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ವಸತಿ ಯೋಜನೆ ಫಲಾನುಭವಿಗಳಿಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ. ಈ ಹೆಚ್ಚಳ ರಾಜ್ಯದಲ್ಲಿ ಜಾರಿಗೊಳ್ಳುವ ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಇಂದಿರಾಗಾಂಧಿ ಆವಾಸ್ ಯೋಜನೆಗಳಿಗೆ ಅನ್ವಯವಾಗುತ್ತದೆ ಎಂದಿದ್ದಾರೆ. ಇದಲ್ಲದೆ ಅಗತ್ಯ ಸ್ಥಳಗಳಲ್ಲಿ ಜಿ-2 ಮಾದರಿಯಲ್ಲಿ ಪ್ಲಾಟ್ ನಿರ್ಮಿಸಿ ಕೈಗೆಟುಕುವ ದರದಲ್ಲಿ ಜನರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಹಾಗೂ ಪ್ರಸಕ್ತ ಸಾಲಿನಲ್ಲಿ ಈ ವಲಯಕ್ಕೆ 1365 ಕೋಟಿ ಒದಗಿಸಲಾಗಿದೆ.
ಮೂಲ ಸೌಕರ್ಯ
ಇನ್ನು ಮೂರು ವರ್ಷಗಳಲ್ಲಿ ಕರ್ನಾಟಕವನ್ನು ಗುಡಿಸಲು ರಹಿತ ರಾಜ್ಯವನ್ನಾಗಿಸುವುದು, ಅಭಿವೃದ್ಧಿ ಹೊಂದುತ್ತಿರುವ ಹೊಸ ಬಡಾವಣೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಅನುದಾನ ಒದಗಿಸುವುದು ಸೇರಿದಂತೆ ಜನಸಮೂಹಕ್ಕೆ ಅನುಕೂಲವಾಗುವ ರೀತಿ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ ಎಂದಿದ್ದಾರೆ.
ಗ್ರಾಮಕ್ಕೆ ಇಪ್ಪತ್ತು ಮನೆ
ಬಸವ ವಸತಿ ಯೋಜನೆ(ಗ್ರಾಮೀಣ ವಸತಿ ಯೋಜನೆ) ಅಡಿ 2013-14ನೇ ಆರ್ಥಿಕ ವರ್ಷಕ್ಕಾಗಿ ಪ್ರತಿ ಗ್ರಾಮ ಪಂಚಾಯತಿಗೆ 20 ಮನೆಗಳು ಹಾಗೂ ನಗರ ಪ್ರದೇಶಗಳಲ್ಲಿ 20 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.
ಖಾತೆಗೆ ನೇರ ಹಣ
ಪ್ರಸಕ್ತ ವರ್ಷದಿಂದ ಜಿ.ಪಿ.ಎಸ್ ತಂತ್ರಜ್ಞಾನದಿಂದ ಮನೆ ನಿರ್ಮಾಣದ ಪ್ರಗತಿಯನ್ನು ಆಧರಿಸಿ ಫಲಾನುಭವಿಗಳ ಖಾತೆಗೆ ಅನುದಾನವನ್ನು ನೇರವಾಗಿ ಬಿಡುಗಡೆ ಮಾಡುವ ಮೂಲಕ ಇಂದಿರಾಗಾಂಧಿ ಆವಾಸ್ ಯೋಜನೆ ಅನುಷ್ಠಾನಗೊಳಿಸಲು ಪ್ರಸ್ತಾಪಿಸಲಾಗಿದೆ.
ರು. 450 ಕೋಟಿ
ಗೃಹಮಂಡಳಿಯು ರು. 450 ಕೋಟಿ ವೆಚ್ಚದಲ್ಲಿ ಆನೇಕಲ್ ಪಟ್ಟಣ ಮತ್ತು ಅಕ್ಕಪಕ್ಕದ ಹಳ್ಳಿಗಳನ್ನು ಒಳಗೊಂಡಂತೆ ಸೂರ್ಯನಗರದ ವಿವಿಧ ಹಂತದ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಅನುಷ್ಠಾನಗೊಳಿಸಲಿದೆ. ಬೆಂಗಳೂರು ನಗರದ ಯಲಹಂಕ, ಕೆಂಗೇರಿ, ಗುಲ್ಬರ್ಗಾ ಬಡಾವಣೆಗಳಲ್ಲಿ ಸರ್ಕಾರಿ ಖಾಸಗಿ ಸಹಯೋಗದಡಿ ವಾಣಿಜ್ಯ ಸಂಕೀರ್ಣ/ವಾಸಯೋಗ್ಯ ಎತ್ತರದ ಬಹುಮಹಡಿ ಮನೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಐ.ಎಚ್.ಎಸ್.ಡಿ.ಪಿ.ಅಡಿ ಮೂಲಸೌಕರ್ಯ ಒಳಗೊಂಡ 500 ಮನೆಗಳನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜೀವ್ಗಾಂಧಿ ಆವಾಸ್ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 5549 ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ.
ಸಮರ್ಪಕ ಕುಡಿವ ನೀರು
ಬಸವ ಯೋಜನೆ ಅಡಿ ಗಾಮಪಂಚಾಯತಿಗಳಲ್ಲಿ ಪ್ರಸಕ್ತ ವರ್ಷದಲ್ಲಿ ಅಂದರೆ ಆರ್ಥಿಕ ವರ್ಷಕ್ಕನುಗುಣವಾಗಿ ಪ್ರತಿ ಗ್ರಾಮ ಪಂಚಾಯತಿಗೆ ಹಾಗೂ ನಗರಪ್ರದೇಶಗಳಲ್ಲಿ ಸಾವಿರಾರು ಮನೆ ನಿರ್ಮಾಣ ಮಾಡುವ ಗುರಿ ಸರ್ಕಾರದ್ದು. ಪ್ರಸಕ್ತ ಸಾಲಿನಲ್ಲಿ ರಾಜೀವ್ಗಾಂಧಿ ಆವಾಸ್ ಯೋಜನೆಯಡಿ ಐದು ಸಾವಿರಕ್ಕೂ ಅಧಿಕ ಮನೆಗಳ ನಿರ್ಮಾಣ, ಹಳ್ಳಿಗಳಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಯ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ಮತ್ತೊಂದೆಡೆ ಮನೆಗಳ ನಿರ್ಮಾಣ ಕಾರ್ಯ ತ್ವರಿತಗೊಳಿಸಲು ಫಾಸ್ಟ್ ಟ್ರ್ಯಾಕ್ ತಂತ್ರಜ್ಞಾನ ಅಳವಡಿಸಲಾಗಿದ್ದು, ಸಿಲಿಕಾನ್ ಸಿಟಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿಸುವುದು ಹಾಗೂ ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರತಿವರ್ಷ 3 ಲಕ್ಷ ಹೊಸ ಮನೆ ನಿರ್ಮಿಸಲಾಗುವುದು.
ಆರಕ್ಷಕರಿಗೆ ಬಂತು ಆನೆ ಬಲ
ರಾಜ್ಯದ ನಾಗರಿಕ ಹಾಗೂ ಸಶಸ್ತ್ರ ಪೊಲೀಸ್ ಬಲ ವೃದ್ಧಿಸುವ ಸಲುವಾಗಿ ಪ್ರಸಕ್ತ ಸಾಲಿನಲ್ಲಿ 8,500 ಪೊಲೀಸ್ ಪೇದೆಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಸರ್ಕಾರ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಪೊಲೀಸ್ ಆಡಳಿತ ನಿರ್ವಹಣೆಯನ್ನು ಬಲಿಷ್ಠಗೊಳಿಸುವ ಸಲುವಾಗಿ 51 ಕೋಟಿ ವೆಚ್ಚದಲ್ಲಿ 31 ಪೊಲೀಸ್ ಠಾಣೆಗಳ ಕಟ್ಟಡಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಂದು ಘೋಷಿಸಿರುವ ಸರ್ಕಾರ, ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಸರ್ಕಾರ ಗೃಹ ಇಲಾಖೆಗೆ 3,941 ಕೋಟಿ ಮೊತ್ತದ ಬಂಪರ್ ಅನುದಾನ ನೀಡಿದೆ.
ದಾವಣಗೆರೆ ಹಾಗೂ ತುಮಕೂರು ನಗರಗಳಲ್ಲಿ ಇಂಡಿಯಾ ರಿಸರ್ವ್ ಬೆಟಾಲಿಯನ್ಗಳನ್ನು ಸ್ಥಾಪಿಸಲಾಗುವುದಾಗಿ ಆಯವ್ಯಯದಲ್ಲಿ ಘೋಷಿಸಲಾಗಿದೆ. ಬೆಳಗಾವಿ ನಗರದಲ್ಲಿ ಪೊಲೀಸ್ ಕಮಿಷನರ್ ಕಚೇರಿ ಸ್ಥಾಪನೆ, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ಕಲ್ಪಿಸಲಾಗುವುದು.
ಐದು ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ - ಧಾರವಾಡಗಳನ್ನು ಸುರಕ್ಷಿತ ನಗರಗಳನ್ನಾಗಿ ಪರಿವರ್ತಿಸಲು ಐದು ವರ್ಷಗಳಲ್ಲಿ 150 ಕೋಟಿ ವೆಚ್ಚದ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು.
ರಾಜ್ಯದಲ್ಲಿನ ಪ್ರಮುಖ ಅಣೆಕಟ್ಟುಗಳು ಹಾಗೂ ಜಲವಿದ್ಯುತ್ ಸ್ಥಾವರಗಳಿಗೆ ವಿಶೇಷ ಭದ್ರತೆಯನ್ನು ಒದಗಿಸುವ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕೋರಮಂಗಲ ಹಾಗೂ ಮೈಸೂರು ಪೊಲೀಸ್ ಶಾಲೆಗಳನ್ನು ಉನ್ನತೀಕರಣ, ಧಾರವಾಡದ ಮುತ್ತಣ್ಣ ಸ್ಮಾರಕ ಶಾಲೆಯ ಕಾಮಗಾರಿ ಶೀಘ್ರ ಪೂರ್ಣ, ಮೈಸೂರಿನ ಪೊಲೀಸ್ ಸಾರ್ವಜನಿಕ ಶಾಲೆಯನ್ನು ಸೈನಿಕ್ ಶಾಲೆ ಮತ್ತು ಇತರೆ ಮಾದರಿ ಸಾರ್ವಜನಿಕ ಶಾಲೆಗಳ ಮಾದರಿಯನ್ನು ಉನ್ನತೀಕರಿಸಲು ಉದ್ದೇಶಿಸಲಾಗಿದೆ.
10 ಸಾವಿರ ವಸತಿ ಗೃಹ
ಕರ್ನಾಟಕ ರಾಜ್ಯ ಗೃಹ ನಿರ್ಮಾಣ ನಿಗಮ ನಿಯಮಿತ ಸಾಲದ ನೆರವಿನಿಂದ 10,000 ಪೊಲೀಸ್ ವಸತಿ ಗೃಹಗಳ ಬೃಹತ್ ಪೊಲೀಸ್ ವಸತಿ ನಿರ್ಮಾಣ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ನಕ್ಸಲ್ ಪಡೆಗೆ 9 ಕೋಟಿ
ಕಾರ್ಕಳದ ನಕ್ಸಲ್ ನಿಗ್ರಹ ಪಡೆಯ ಶಿಬಿರದಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಸಲುವಾಗಿ 9 ಕೋಟಿ ಅನುದಾನ ಒದಗಿಸಲಾಗಿದೆ.
ಗಸ್ತು ವಾಹನಕ್ಕೆ 4 ಕೋಟಿ
ಎಲ್ಲಾ ಜಿಲ್ಲೆಗಳಲ್ಲಿ ಹೆದ್ದಾರಿ ಗಸ್ತು ವಾಹನಗಳನ್ನು ಖರೀದಿಸುವ ಸಲುವಾಗಿ 4 ಕೋಟಿ ಅನುದಾನ ಒದಗಿಸಲಾಗಿದೆ.
ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ
ಹೆಣ್ಣು ಮಕ್ಕಳ ದಿನದ ಹಾಜರಿಗೆ ತಲಾ 2 ಪ್ರೋತ್ಸಾಹ ಧನ, ಶಾಲೆಗಳ ಮರುರಚನೆ, ಸರ್ಕಾರಿ ಕಾಲೇಜುಗಳ ಮೂಲಭೂತ ಸೌಕರ್ಯ ಅಭಿವೃದ್ಧಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಯ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ ಹಾಗೂ ಹೊಸ 4 ವೈದ್ಯ ಕಾಲೇಜುಗಳ ಪ್ರಾರಂಭ ಸೇರಿದಂತೆ ಕೆಲ ನೂತನ ಯೋಜನೆಗಳನ್ನು ಶಿಕ್ಷಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ನೀಡಿದ್ದಾರೆ. 'ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ, ಇಂದಲ್ಲ ನಾಳೆ ಫಲ ಕೊಡುವುದು' ಎಂಬ ದೇವನೂರು ಮಹದೇವ ಅವರ ಕವನದ ಸಾಲುಗಳನ್ನು ಶಿಕ್ಷಣ ಇಲಾಖೆಯ ಆಯವ್ಯವದ ಪ್ರಾರಂಭದಲ್ಲಿ ಸೇರಿಸಿದ್ದಾರೆ. ಈ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಆದ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಜಗದೀಶ್ ಶೆಟ್ಟರ್ ಪ್ರಕಟಿಸಿದ್ದ ಬಜೆಟ್ಗಿಂತಲೂ 257 ಕೋಟಿ ಹೆಚ್ಚುವರಿ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆ ಹೊರತುಪಡಿಸಿ ಶಿಕ್ಷಣ ಇಲಾಖೆಗೆ ಒಟ್ಟು 18,923 ಕೋಟಿ ಅನುದಾನನೀಡಲಾಗಿದೆ.
ಹೈಕೋರ್ಟ್ ಮಾತಿಗೆ ಬೆಲೆ
ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಮಕ್ಕಳು ಪ್ರಾಥಮಿಕ ಶಾಲೆಯಿಂದ ದೂರವಿದ್ದಾರೆ ಎಂಬ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡಿತ್ತು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಪ್ರೋತ್ಸಾಹ ಧನ ನೀಡುವಂತೆ ಚಿಂತನೆ ಮಾಡಲು ಹೈಕೋರ್ಟ್ ಸಲಹೆ ನೀಡಿತ್ತು. ಇದಕ್ಕೆ ಮನ್ನಣೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ಹಾಜರಾಗುವ ವಿದ್ಯಾರ್ಥಿನಿಯರಿಗೆ ಪ್ರತಿ ದಿನದ ಹಾಜರಿಗೆ ತಲಾ 2 ನೀಡಲು ನಿರ್ಧರಿಸಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಸಾಮರಸ್ಯ ವಿದ್ಯಾಕೇಂದ್ರವನ್ನಾಗಿ ಮರುರಚನೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ರಾಜ್ಯದಲ್ಲಿನ ಕಾರ್ಪೊರೇಟ್ ಜಗತ್ತಿನ ನೆರವು ಪಡೆಯಲು ಸರ್ಕಾರ ಮುಂದಾಗಿದೆ.
ಇನ್ನು ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತುನೀಡಲು ಸರ್ಕಾರ ಮುಂದಾಗಿದೆ. ಪದವಿ ಮುಗಿದ ಬಳಿಕ ಉದ್ಯೋಗ ದೊರಕುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ನೀಡಲು ಸರ್ಕಾರ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದಲ್ಲದೆ ಶಿಕ್ಷಕರು ಹಾಗೂ ಉಪನ್ಯಾಸಕರಿಗು ತರಬೇತಿನ ನೀಡುವ ಉದ್ದೇಶದಿಂದ ಉನ್ನತ ಶಿಕ್ಷಣ ಅಕಾಡೆಮಿ ಪ್ರಾರಂಭಿಸಲಾಗುತ್ತಿದೆ. ಒಟ್ಟಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ 15,680 ಕೋಟಿ ಹಾಗೂ ಉನ್ನತ ಶಿಕ್ಷಣಕ್ಕೆ 3,243 ಕೋಟಿಯನ್ನು ಸಿದ್ದರಾಮಯ್ಯ ಅನುದಾನ ನಿಗದಿಪಡಿಸಿದ್ದಾರೆ.
ಕನ್ನಡಕ್ಕೆ 'ಯುನಿಕೋಡು'
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷಾ ಬಳಕೆ ವ್ಯಾಪಕಗೊಳಿಸಲು ಯುನಿಕೋಡ್ ಕನ್ನಡ ತಂತ್ರಾಂಶಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ್ದಾರೆ. ಜತೆಗೆ, ಪ್ರಸಕ್ತ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಟ್ಟು ರು. 263 ಕೋಟಿ ಒದಗಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆ ವ್ಯಾಪಕಗೊಳಿಸಲು ಜಾರಿಗೆ ತರಲುದ್ದೇಶಿಸಿದ್ದ ಯೂನಿಕೋಡ್ ತಂತ್ರಾಂಶ ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಅದರ ಜಾರಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಿ ಡಾ.ಚಿದಾನಂದಗೌಡ ಸಮಿತಿ ಶಿಫಾರಸ್ಸಿನಂತೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನವನ್ನು ಉತ್ತೇಜಿಸಲು ವೂಜ್ಬರ್ಗ್, ವಿಯೆನ್ನಾ, ಹೈಡಲ್ಬರ್ಗ್, ಮ್ಯೂನಿಚ್ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ನೃತ್ಯ, ಸಂಗೀತ, ನಾಟಕ, ಜಾನಪದ, ಚಿತ್ರಕಲೆ ಇತ್ಯಾದಿ ಕಲಾಪ್ರಕಾರಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಯುವಕರಿಗೆ ಕರ್ನಾಟಕದ ಖ್ಯಾತ ಸಂಸ್ಥೆಗಳಿಂದ ಆಳವಾದ ಜ್ಞಾನ ಪಡೆಯಲು ಕನಿಷ್ಠ 2-3 ವರ್ಷ ಕಾಲ ಪ್ರೋತ್ಸಾಹ ನೀಡಲಾಗುವುದು. ಜತೆಗೆ ರಾಜ್ಯ ಹಾಗೂ ರಾಷ್ಟ್ರದ ಹೊರಗೆ ಕನ್ನಡ ಕಲಿಕಾ ಕೇಂದ್ರಗಳನ್ನು ಹೆಚ್ಚಿಸಲಾಗುವುದು.
ರಾಷ್ಟ್ರಕವಿ ಕುವೆಂಪು ಅವರ ಸ್ಮರಣಾರ್ಥ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ 'ಕುವೆಂಪು ಕಲಾಭವನ' ನಿರ್ಮಿಸಲುದ್ದೇಶಿಸಲಾಗಿದೆ. ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಅಭಿವೃದ್ಧಿಗಾಗಿ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನಕ್ಕೆ ರು. 3.5 ಕೋಟಿ ನೀಡಲಾಗುವುದು. ಕರ್ನಾಟಕ ವಿದ್ಯಾವರ್ಧಕ ಸಂಘದ ಪರಂಪರಾ ಕಟ್ಟಡ ಬಲಪಡಿಸಲು ರು. 1 ಕೋಟಿ ನೀಡಲಾಗುವುದು.
ಸಾಂಸ್ಕೃತಿಕ ನೀತಿ ಜಾರಿ
ಆಯವ್ಯಯದಲ್ಲಿ ಒದಗಿಸಿರುವ ಅನುದಾನವನ್ನು ರಾಜ್ಯದಲ್ಲಿ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲ ಸಂಸ್ಥೆಗಳಿಗೂ ಸಮರ್ಪಕ ಹಾಗೂ ನ್ಯಾಯಯುತವಾಗಿ ಹಂಚಿಕೆ ಮಾಡುವ ಉದ್ದೇಶದಿಂದ 'ಸಾಂಸ್ಕೃತಿಕ ನೀತಿ' ಜಾರಿಗೆ ತರಲಾಗುವುದು.
ಗುಲ್ಬರ್ಗದಲ್ಲಿ ರಂಗಾಯಣ
ರಾಜ್ಯದಲ್ಲಿ ಪ್ರಸ್ತುತ ರಂಗಾಯಣ ಘಟಕಗಳು ಮೈಸೂರು, ಶಿವಮೊಗ್ಗ ಮತ್ತು ಧಾರವಾಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಗುಲ್ಬರ್ಗ ವಿಭಾಗದಲ್ಲಿ ರು. 1 ಕೊಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಜತೆಗೆ, ಬಳ್ಳಾರಿ ಹೂವಿನಹಡಗಲಿಯಲ್ಲಿನ ರಂಗಭಾರತಿ ಸಂಸ್ಥೆಯ ರಂಗಸಮುಚ್ಚಯ ನಿರ್ಮಾಣ ಪೂರ್ಣಗೊಳಿಸಲು ರು. 1 ಕೋಟಿ ಒದಗಿಸಲಾಗುವುದು.
ರೋರಿಚ್ ವಸ್ತು ಸಂಗ್ರಹಾಲಯ
ತಾತಗುಣಿಯಲ್ಲಿರುವ ರೋರಿಚ್ ಎಸ್ಟೇಟ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸ್ತು ಸಂಗ್ರಹಾಲಯ ರು. 25 ಕೋಟಿ ವೆಚ್ಚದಲ್ಲಿ, 2 ಹಂತದಲ್ಲಿ ನಿರ್ಮಿಸಲಾಗುವುದು. ಅದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ರು. 3 ಕೋಟಿ ಅನುದಾನ ಒದಗಿಸಲಾಗುವುದು.
ರು. 5 ಕೋಟಿ
ತುಳು ಮತ್ತು ಬಿಲ್ಲವ ಸಮಾಜದ ಆರಾಧ್ಯ ದೈವ ಕೋಟಿ ಚೆನ್ನಯರ ಜನ್ಮಸ್ಥಳವಾದ ಪುತ್ತೂರಿನ ಪಡುಮಲೈನಲ್ಲಿ ಅವರು ಹುಟ್ಟಿ ಬೆಳೆದ ಕುರುಹುಗಳನ್ನು ಅಭಿವೃದ್ಧಿ ಪಡಿಸಲು ರು. 5 ಕೋಟಿ ಒದಗಿಸಲಾಗುವುದು. ಜತೆಗೆ, ಶಿವಮೊಗ್ಗದಲ್ಲಿ ಶ್ರೀನಾರಾಯಣಗುರು ಬಿಲ್ಲವ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ರು. 1.6 ಕೋಟಿ.
ಗಾಂಧಿ ಭವನ ಉನ್ನತೀಕರಣ
ಬೆಂಗಳೂರಿನ ಗಾಂಧೀಭವನದಲ್ಲಿರುವ ಗಾಂಧಿ ವಸ್ತು ಸಂಗ್ರಹಾಲಯ ಉನ್ನತೀಕರಿಸಲು, ಇ-ಗಾಂಧಿ ಕಾರ್ಯಕ್ರಮ ಗಣಕೀಕರಿಸಲು, ಗಾಂಧಿ ಅಧ್ಯಯನ ಕೇಂದ್ರ ನಿರ್ಮಾಣ, ಗಾಂಧಿ ಪ್ರಚಾರ ಮತ್ತು ಗಾಂಧಿ ಭವನ ನಿರ್ಮಾಣಕ್ಕೆ ರು. 4 ಕೋಟಿ ಒದಗಿಸಲಾಗುವುದು.
ಉನ್ನತ ಶಿಕ್ಷಣಕ್ಕೆ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ನೀಡಿರುವ ಸಿದ್ದರಾಮಯ್ಯನವರು ಧಾರವಾಡದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಖಿ) ಸ್ಥಾಪಿಸಲು 45 ಕೋಟಿ ನೀಡಿರುವುದು ಈ ಭಾಗದ ಶೈಕ್ಷಣಿಕ ವಲಯ ಇನ್ನಷ್ಟು ಬೆಳೆಯಲು ಸಹಕಾರಿಯಾಗಲಿದೆ. ಅಲ್ಲದೇ, ಧಾರವಾಡಕ್ಕೆ ಐಎಎಸ್, ಐಪಿಎಸ್ ಅಕಾಡೆಮಿ ಮಾದರಿ ಸಂಸ್ಥೆಯಾಗಿ ಉನ್ನತ ಶಿಕ್ಷಣ ಅಕಾಡೆಮಿ ನೀಡಲಾಗಿದೆ. ಕರ್ನಾಟಕ ವಿವಿ ಆವರಣದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ತಾರಾಲಯಕ್ಕೆ 1 ಕೋಟಿ ನೀಡಲಾಗಿದೆ.
- ಡಾ. ಎಚ್.ಬಿ. ವಾಲೀಕಾರ, ಕರ್ನಾಟಕ ವಿವಿ ಕುಲಪತಿ
ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದರೂ, ನಿರಾಸದಾಯಕವಾಗಿದೆ. ಗ್ರಾಮ ಪಂಚಾಯತಿಗೆ ಹೆಚ್ಚಿಸಿದ 2ಲಕ್ಷ ಅನುದಾನ ಯಾವುದಕ್ಕೂ ಸಾಕಾಗದು. ಇನ್ನೂ ಹೆಚ್ಚಿನ ಅನುದಾನ ನೀಡಬೇಕಿತ್ತು. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಬರಗಾಲ ಬಿದ್ದಿದ್ದು, ಕೃಷಿ ಆದಾಯ ಹೆಚ್ಚಿಸಲು ಬಜೆಟ್ನಲ್ಲಿ ಕನಿಷ್ಠ 6 ಸಾವಿರ ಕೋಟಿ ಅನುದಾನ ಕಾಯ್ದಿರಿಸಬೇಕಾಬೇಕಾಗಿತ್ತು. ರಾಜ್ಯದಲ್ಲಿ 78 ಸಾವಿರ ಕೃಷಿಕರು, 62 ಸಾವಿರ ಕೃಷಿ ಕೂಲಿಕಾರರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕಾಗಿತ್ತು.
- ಗೋವಿಂದ ಕಾರಜೋಳ, ಮಾಜಿ ಸಚಿವ
ಬೆಳಗಾವಿಗೆ ಯಾವುದೇ ದೊಡ್ಡ ಕೊಡುಗೆ ನೀಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಅನ್ನೇ ಮುಂದುವರಿಸಬೇಕಿತ್ತು. ದೂರದೃಷ್ಟಿ ಇಲ್ಲದ ಬಜೆಟ್ ಇದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ನಲ್ಲಿ ಜನಪರ, ರೈತಪರ ಕಾಳಜಿ ಕಂಡು ಬಂದಿಲ್ಲ. ವಿ.ಎಸ್. ಆಚಾರ್ಯ ಗೃಹ ಸಚಿವರಾಗಿದ್ದಾಗ ಬೆಳಗಾವಿಯಲ್ಲಿ ಪೊಲೀಸ್ ಕಮೀಷನರ್ ಕಚೇರಿ ಸ್ಥಾಪನೆಗೆ ಬೇಡಿಕೆ ಇಡಲಾಗಿತ್ತು. ಆಗಿನ ಸಿಎಂ ಜಗದೀಶ ಶೆಟ್ಟರ್ ಈ ಬೇಡಿಕೆ ಈಡೇರಿಸಿದ್ದರು. ಈಗ ಅದನ್ನೇ ಮೊತ್ತೊಮ್ಮೆ ತಮ್ಮ ಸಾಧನೆಯೆಂಬಂತೆ ಘೋಷಿಸಲಾಗಿದೆ.
- ಸುರೇಶ ಅಂಗಡಿ, ಬೆಳಗಾವಿ ಸಂಸದ
ಒಳನೋಟ.... ಸರ್ವತೋಮುಖ ಕಾಳಜಿ ಇಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಹೊಸತನ, ದೂರದೃಷ್ಟಿ ಇಲ್ಲದ ಆಯವ್ಯಯ ಮಂಡಿಸಿ ರಾಜ್ಯದ ಜನತೆಗೆ ತೀವ್ರ ನಿರಾಸೆ ಉಂಟು ಮಾಡಿದ್ದಾರೆ. ಬಿಜೆಪಿ ಆಯವ್ಯಯದಲ್ಲಿ ಮಂಡಿಸಿದ್ದ 43 ಹೊಸ ತಾಲೂಕುಗಳ ರಚನೆ, ವಿದ್ಯಾರ್ಥಿಗಳಿಗೆ ಬೈಸಿಕಲ್, ಮಹಿಳೆಯರಿಗೆ ಮಡಿಲು, ರೈತರಿಗೆ ಸುವರ್ಣ ಭೂಮಿ ಯೋಜನೆಗಳ ಬಗ್ಗೆ ಈ ಮುಂಗಡ ಪತ್ರದಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ. ಬಿಬಿಎಂಪಿ ವಿಶೇಷ ಅನುದಾನದ ನಿರೀಕ್ಷೆ ಕೂಡ ಹುಸಿಯಾಗಿಸಿದ್ದಾರೆ. ಅಲ್ಲದೆ, ಕೃಷಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ, ಇಂಧನ ಇಲಾಖೆಗಳಿಗೆ ಬಿಜೆಪಿ ಸರ್ಕಾರ ನಿಗದಪಡಿಸಿದ್ದಕ್ಕಿಂತ ಕಡಿಮೆ ಹಣ ನಿಗದಿಪಡಿಸಿರುವುದು ನೋಡಿದರೆ ಇವರಿಗೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾಳಜಿ ಇಲ್ಲದಿರುವುದನ್ನು ತೋರಿಸುತ್ತದೆ.
- ಅನಂತಕುಮಾರ್, ಸಂಸದ