ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎತ್ತಿನಹೊಳೆಗೆ 'ಕೈ' ಎತ್ತಿ ದೇಣಿಗೆ

Mainashree
Updated On : 15 Jul 2013, 1:01 am

ಕ.ಪ್ರ.ವಾರ್ತೆ  ಮಂಗಳೂರು  ಜು.14-
ಎತ್ತಿನಹೊಳೆ ಯೋಜನೆ ಹೆಸರಲ್ಲಿ ನೇತ್ರಾವತಿ ನದಿ ತಿರುವುಗೊಳಿಸಲಾಗುತ್ತಿದೆ. ಇಲ್ಲಿನ ನದಿ ನೀರನ್ನು ತಿರುಗಿಸಿ 'ಉಂಡ ಮನೆಗೆ ದ್ರೋಹ ಬಗೆದಿದ್ದಾರೆ' ಎಂದು ಕಾಂಗ್ರೆಸ್ ನಾಯಕರು ಚುನಾವಣೆ ಸಂದರ್ಭದಲ್ಲಿ ಡಿ.ವಿ. ಸದಾನಂದಗೌಡರನ್ನು ಟೀಕಿಸುತ್ತಲೇ ಇದ್ದರು. ಇದೀಗ ಕಾಂಗ್ರೆಸ್ ಆಡಳಿತಕ್ಕೆ ಬಂದಿದ್ದು, ಅದೇ ಎತ್ತಿಹೊಳೆ ಯೋಜನೆ ಜಾರಿಗೆ ಬಜೆಟ್‌ನಲ್ಲಿ 1 ಸಾವಿರ ಕೋಟಿ ಮೀಸಲಿಡಲಾಗಿದೆ!
ಈಗ ಕಾಂಗ್ರೆಸ್‌ನ ಜನಪ್ರತಿನಿಧಿಗಳನ್ನು ಮಾತನಾಡಿಸಿದರೆ, 'ರೈಲು ಹೋಗಿಯಾಗಿದೆ. ಟಿಕೆಟ್ ಇದ್ದು ಏನು ಪ್ರಯೋಜನ?' ಬಿಜೆಪಿಯವರೇ ಮಾಡಿದ್ದು, ನಾವಲ್ಲ ಎಂಬರ್ಥದಲ್ಲಿಯೇ ಉತ್ತರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮತ್ತೆ ಮತ ಕೇಳಲು ಬರಲಿ. ಆಗ ಬುದ್ಧಿ ಕಲಿಸುತ್ತೇವೆ ಎಂದು ಕರಾವಳಿ ಜನರು, ಪರಿಸರ ಹೋರಾಟಗಾರರು ಲೆಕ್ಕ ಹಾಕುತ್ತಿದ್ದಾರೆ.
ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಸುರತ್ಕಲ್ ಮಾಜಿ ಕಾಂಗ್ರೆಸ್ ಶಾಸಕ ವಿಜಯಕುಮಾರ್ ಶೆಟ್ಟಿ ಸಹಿತ ಎಲ್ಲ ಪಕ್ಷದ ಮುಖಂಡರು ಸಮಾನ ಮನಸ್ಕರ ಸಮಿತಿಯೊಂದನ್ನು ರಚಿಸಿಕೊಂಡು, ಎತ್ತಿನಹೊಳೆ ಯೋಜನೆಯಿಂದ ಪರಿಸರಕ್ಕೆ ಆಗುವ ಹಾನಿ ಬಗ್ಗೆ ಮಾತನಾಡಿದ್ದರು. ಸಾಧ್ಯತಾ ವರದಿಯ ಸತ್ಯಾಸತ್ಯತೆಯನ್ನೇ ಪ್ರಶ್ನಿಸಿದ್ದರು. ಪರಶಿವಯ್ಯ ಯೋಜನಾ ವಿಸ್ತೃತ ವರದಿ ತಯಾರಿಗೆ ಸಿದ್ದರಾಮಯ್ಯ 50 ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾರೆ. ಈಗ ಪರಿಸರವಾದಿ ಕಾಂಗ್ರೆಸ್ ನಾಯಕರು ಮಾಧ್ಯಮದವರ ಮುಖ ತಪ್ಪಿಸಿಕೊಂಡು ಓಡುತ್ತಿದ್ದಾರೆ.

ಕರಾವಳಿ ಸಂಜೀವಿನಿ 'ಕೈ' ಬಿಟ್ಟ ಸರ್ಕಾರ:  ಅತ್ತ ನದಿಗಳು, ಇತ್ತ ವಿಶಾಲ ಕಡಲಿದ್ದರೂ ಬೇಸಗೆಯಲ್ಲಿ ಕುಡಿಯುವ ನೀರಿಗಾಗಿ ಕರಾವಳಿ ಜಿಲ್ಲೆಗಳ ಜನರು ತತ್ತರಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಎಂಬಂತೆ ಬಿಜೆಪಿ ಕಳೆದ ಬಜೆಟ್‌ನಲ್ಲಿ 'ಕರಾವಳಿ ಸೌಭಾಗ್ಯ ಸಂಜೀವಿನಿ' ಎಂಬ ಯೋಜನೆಯೊಂದನ್ನು ಘೋಷಿಸಿತ್ತು. ಅದರ ಬಗ್ಗೆ ಈ ಬಾರಿ ಮಾತೇ ಇಲ್ಲ. ಇಲ್ಲಿನ ನೀರನ್ನು ಬೇರೆಡೆ ಒಯ್ಯುವ ಬಿಜೆಪಿ ಘೋಷಿಸಿದ ಯೋಜನೆಗೆ ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಒಪ್ಪಿಗೆ ಸೂಚಿಸಿದೆ. ವರವಾಗುವ ಯೋಜನೆಗಳನ್ನು ಕೈ ಬಿಟ್ಟು, ಜಿಲ್ಲೆಗೆ ಮಾರಕವಾಗುವ ಯೋಜನೆಗಳ ಜಾರಿಗೆ ಮುಂದಾಗಿರುವುದು ಪರಿಸರ ಪ್ರೇಮಿಗಳ, ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ಸ್ಯೋದ್ಯಮಕ್ಕೆ ಅಪಾಯ: ನೇತ್ರಾವತಿ ನದಿ ತಿರುವು ಮಾಡಿದರೆ ಕಡಲಿನ ಮತ್ಸ್ಯೋದ್ಯಮಕ್ಕೆ ಅಪಾಯವಾಗಲಿದೆ. ಕಡಲಲ್ಲಿ ಸಂತಾನೋತ್ಪತ್ತಿ ನಡೆಯುವುದೇ ಪಶ್ಚಿಮಘಟ್ಟದ ಹರಿದು ಬರುವ ನದಿ ನೀರು, ಖನಿಜಗಳಿಂದ. ನೀರು ತಿರುಗಿಸಿದರೆ ಮತ್ಸ್ಯೋದ್ಯಮಕ್ಕೆ ಭಾರಿ ಅಪಾಯ ಇದೆ ಎಂದು ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ಹೇಳುತ್ತಾರೆ.
ಇದಕ್ಕೆ ಮೀನುಗಾರ ಸಮುದಾಯದ ತೀವ್ರ ವಿರೋಧವೂ ಇದೆ. ಪಶ್ಚಿಮಕ್ಕೆ ಹರಿಯುವ ನದಿ ನೀರನ್ನು ಪೂರ್ವಕ್ಕೆ ತಿರುಗಿಸುವ ಸಂದರ್ಭ ಪರಿಸರ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಆಗಬೇಕು, 8 ಸಾವಿರ ಕೋಟಿ ಯೋಜನೆಯಿಂದ ನಿಜವಾಗಿಯೂ ಲಾಭವಾಗಲಿದೆಯೇ ಎಂಬ ಅಧ್ಯಯನ ಇನ್ನೂ ಆಗಿಲ್ಲ.
 ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಕರಾವಳಿಯ ಮೀನುಗಾರರಿಗೆ ಕೊಡುಗೆಗಳನ್ನು ಪ್ರಕಟಿಸಿದರೂ ಈ ಕೊಡುಗೆಗಳು ಎತ್ತಿನಹೊಳೆ ಯೋಜನೆ ಜಾರಿಗೆ ಹಾಕಿದ ಗಾಳ ಎನ್ನಲಡ್ಡಿ ಇಲ್ಲ.

ಎಂಡೋ; ಮತ್ತದೇ ಸಮೀಕ್ಷೆ!
ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ನೀಡಲು ಮತ್ತೆ ಸಮೀಕ್ಷೆಗೆ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಹೇಳಿದೆ. ಆದರೆ ಇದಕ್ಕೆ ಬಜೆಟ್‌ನಲ್ಲಿ ಹಣ ಇಟ್ಟಿಲ್ಲ. ಬಿಜೆಪಿ ಸರ್ಕಾರ ಇರುವಾಗ ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಮತ್ತಿತರ ಅಧ್ಯಯನ ಸಮಿತಿ ಎಂಡೋ ಸಂತ್ರಸ್ತರನ್ನು ಭೇಟಿಯಾಗಿ ಕಾಂಗ್ರೆಸ್ ಎಂಡೋ ಸಂತ್ರಸ್ತರ ಕಾಳಜಿಯನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ಕಣ್ಣೀರು ಮಿಡಿದಿದ್ದರು. ಬಜೆಟ್‌ಗೆ ಮುಂಚೆ ಸಿದ್ದರಾಮಯ್ಯ ಬಳಿ ಕೇರಳ ಮಾದರಿಯಲ್ಲಿ ಪರಿಹಾರ ನೀಡಿ ಎಂದು ಕಾಂಗ್ರೆಸ್ ನಿಯೋಗವೊಂದ ತೆರಳಿ ವಿನಂತಿಸಿಕೊಂಡಿತ್ತು. ಕೇರಳ ಮಾದರಿ ಹೇಗೆ ಎಂಬ ಪ್ರಶ್ನೆಗೆ ಈ ಕಾಂಗ್ರೆಸ್ ಮುಖಂಡರ ಬಳಿ ಉತ್ತರ ಇರಲಿಲ್ಲ. ಸರಿಯಾಗಿ ಅಧ್ಯಯನ ಮಾಡಿಕೊಂಡು ಬನ್ನಿ ಎಂದು ಬೈದು ಸಿಎಂ ವಾಪಸ್ ಕಳುಹಿಸಿದ್ದರು. 'ಈ ಬಾರಿ ಪರಿಹಾರ ಘೋಷಿಸಬಹುದು ಎಂಬ ಆಸೆ ಇತ್ತು. ಪರಿಹಾರ ನೀಡದಿದ್ದರೆ, ಸಂತ್ರಸ್ತರಿಗೆ ದಯಾ ಮರಣಕ್ಕೆ ಅವಕಾಶ ನೀಡುವ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಿ' ಎಂದು ಎಂಡೋ ಪೀಡಿತ, ಹೋರಾಟಗಾರ ಶ್ರೀಧರ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎತ್ತಿನಹೊಳೆ ನೇತ್ರಾವತಿ ನದಿಗೆ ಮೂಲ. ನೇತ್ರಾವತಿ ನದಿ ತಿರುವು ಹೇಳಿದರೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಎದ್ದು ಬೀಳುತ್ತಾರೆ ಎಂಬ ಕಾರಣಕ್ಕೆ ಎತ್ತಿನ ಹೊಳೆ ಎಂಬ ಹೆಸರಿಟ್ಟರು. ಆ ಭಾಗದ ಜನರಿಗೆ ನೀರು ಕೊಡಬಾರದು ಎನ್ನುವುದಿಲ್ಲ. ಆದರೆ ಪಶ್ಚಿಮಘಟ್ಟಕ್ಕೆ, ಇಲ್ಲಿನ ಜನರಿಗೆ ಹಾನಿ ಮಾಡದೆ ನೀರು ನೀಡಲು ಬೇರೆ ದಾರಿ ಇಲ್ಲವೇ?
- ನೀರೇನ್ ಜೈನ್, ಪರಿಸರ ಪ್ರೇಮಿ

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement