ಜುಲೈ ತಿಂಗಳ ಬಾಕಿ ಕೊಡಿ
ಪಿಟಿಐ ನವದೆಹಲಿ ಜು. 15-
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ತಮಿಳು ಸರ್ಕಾರ ಮತ್ತೊಮ್ಮೆ ತನ್ನ ಮೊಂಡು ಹಠ ಮುಂದುವರಿಸಿದೆ. ಕರ್ನಾಟಕದ ಸ್ಪಷ್ಟನೆ ಹೊರತಾಗಿಯೂ ಜುಲೈ ತಿಂಗಳ ನೀರಿಗೆ ಸಂಬಂಧಿಸಿ ವಿನಾಕಾರಣ ತಗಾದೆ ತೆಗೆದಿದೆ.
ಈ ವಿಚಾರ ನದಿ ನೀರು ಹಂಚಿಕೆ ಸಂಬಂಧ ದೆಹಲಿಯಲ್ಲಿ ಸೋಮವಾರ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸಭೆಯಲ್ಲಿ ಜುಲೈ ತಿಂಗಳ ತನ್ನ ಪಾಲಿನ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಹಾಗೂ ಮೇಲುಸ್ತುವಾರಿ ಸಮಿತಿ ಮುಂದೆ ತಮಿಳುನಾಡು ತೀವ್ರ ಪಟ್ಟುಹಿಡಿಯಿತು.
ಇದಕ್ಕೆ ಸ್ಪಷ್ಟನೆ ನೀಡಿದ ಕರ್ನಾಟಕ, ತಿಂಗಳಾರಂಭದ ಮೂರು ದಿನಗಳಲ್ಲಿ 34 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಬಾಕಿ 10 ಟಿಎಂಸಿ ನೀರನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡುವುದಾಗಿ ಹೇಳಿತು. ಆದರೆ, ಈ ಕುರಿತು ಸ್ಪಷ್ಟ ಭರವಸೆ ನೀಡಲು ಕರ್ನಾಟಕ ಹಿಂದೇಟು ಹಾಕಿತು. ಈ ವಿಚಾರದಲ್ಲಿ ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಅಲೋಕ್ ರಾವತ್ ನೇತೃತ್ವದ ಸಮಿತಿಯೂ ತನ್ನ ಅಸಹಾಯಕತೆ ವ್ಯಕ್ತಪಡಿಸಿತು. ಎಷ್ಟು ಪ್ರಮಾಣದ ನೀರು ಬಿಡುಗಡೆ ಮಾಡಲಾಯಿತು ಎನ್ನುವ ಕುರಿತು ಸುಪ್ರೀಂಕೋರ್ಟ್‌ಗೆ ಸ್ಪಷ್ಟನೆಯನ್ನಷ್ಟೇ ನೀಡಬಹುದು. ಆದರೆ, ನೀರು ಬಿಡುಗಡೆ ಕುರಿತು ಸ್ಪಷ್ಟ ಭರವಸೆ ನೀಡಲು ಸಾಧ್ಯವಿಲ್ಲ ಎಂದು ತಮಿಳುನಾಡಿಗೆ ಹೇಳಿತು.
ಇದೇ ವೇಳೆ, ತಿಂಗಳ ಆರಂಭದ ಮೊದಲೆರಡು ವಾರ ನಿಗದಿಗಿಂತ ಶೇ. 60ರಷ್ಟು ಹೆಚ್ಚು ನೀರನ್ನು ತಮಿಳುನಾಡು ಪಡೆದಿದೆ ಎಂದೂ ಸಮಿತಿ ಮಾಹಿತಿ ನೀಡಿತು ಎಂದು ಮೂಲಗಳು ತಿಳಿಸಿವೆ. ಆದರೆ, ತಮಿಳುನಾಡು ಮಾತ್ರ ಈ ನೀರು ಮಳೆಯಿಂದಾಗಿ ತಮಿಳುನಾಡಿಗೆ ಹರಿದು ಬಂದಿದೆ. ಕಾವೇರಿ ನೀರು ವಿವಾದ ನ್ಯಾಯಾಧಿಕರಣದ ತೀರ್ಪಿನಂತೆ ಕರ್ನಾಟಕ ತನ್ನ ಪಾಲಿನ ನೀರು ಬಿಡುಗಡೆ ಮಾಡಲೇಬೇಕು ಎಂದು ವಾದಿಸಿತು.
ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿಯ ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಜಲ ಆಯೋಗದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಂಡಳಿ ರಚನೆಗೆ ತ.ನಾಡು ಪಟ್ಟು
ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸುವಂತೆ ಒತ್ತಾಯಿಸುತ್ತವೇ ಬಂದಿರುವ ತಮಿಳುನಾಡು ಮೇಲುಸ್ತುವಾರಿ ಸಮಿತಿ ಸಭೆ ಆರಂಭದಲ್ಲೇ ಈ ವಿಚಾರ ಮತ್ತೊಮ್ಮೆ ಪ್ರಸ್ತಾಪಿಸಿತು. ಕಾವೇರಿ ನೀರು ವಿವಾದ ನ್ಯಾಯಾಧಿಕರಣದ ಐತೀರ್ಪನ್ನು ನೋಟಿಫೈ ಮಾಡಿದ ಬಳಿಕ ಈ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಯಾವುದೇ ಧನಾತ್ಮಕ ಕ್ರಮಕೈಗೊಂಡಿಲ್ಲ. ಸರ್ಕಾರ ಈ ವಿಚಾರದಲ್ಲಿ ಯಾಕೆ ನಿರ್ಲಕ್ಷ್ಯ ಧೋರಣೆ ತಳೆಯುತ್ತಿದೆ ಎಂದೇ ಗೊತ್ತಾಗುತ್ತಿಲ್ಲ ಎಂದು ತಮಿಳುನಾಡು ಆಕ್ರೋಶ ವ್ಯಕ್ತಪಡಿಸಿತು.