ಡೆಂಘೀಗೆ ಬಾಲಕರಿಬ್ಬರು ಸಾವು
ದೊಡ್ಡಬಳ್ಳಾಪುರ/ಹಾನಗಲ್ಲ: ಶಂಕಿತ ಡೆಂಘೀ ಜ್ವರದಿಂದ ನರಳುತ್ತಿದ್ದ ಎಂಟು ವರ್ಷದ ಬಾಲಕರಿಬ್ಬರು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಗೊಲ್ಲಹಳ್ಳಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್‌ನ ಹರಳಕೊಪ್ಪದಲ್ಲಿ ಮೃತಪಟ್ಟಿದ್ದಾರೆ. ಗೊಲ್ಲಹಳ್ಳಿಯ ಸುರೇಶ್‌ನಾಯಕ್ ಹಾಗೂ ಹರಳಕೊಪ್ಪದ ಭರತ ಶಾಂತಪ್ಪ ಕಲ್ಲಮುತ್ತ ಮೃತಪಟ್ಟವರು. ತೀವ್ರ ಜ್ವರದಿಂದ ಬಳಲುತ್ತಿದ್ದ ಸುರೇಶ್‌ನಾಯಕನನ್ನು ಕಳೆದ 3 ದಿನಗಳ ಹಿಂದೆ ಬೆಂಗಳೂರಿನ ಎಂಎಸ್ ರಾಮಯ್ಯ ವೈದ್ಯಕೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಈತನ ತಂಗಿ 6 ವರ್ಷದ ತನುಜಾ ಕೂಡ ಸೋಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದು ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನಲಾಗಿದೆ.
ಶಾಂತಪ್ಪ ಕೆಎಲ್‌ಇಯಲ್ಲಿ ದಾಖಲು: ಶಾಂತಪ್ಪನನ್ನು ಬಮ್ಮನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹಾನಗಲ್ಲಿನಲ್ಲಿ ಚಿಕಿತ್ಸೆ ಪಡೆದು, ಶಿರಶಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಡೆಂಘೀ ಪತ್ತೆಯಾದ್ದರಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾನೆ.