ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾವಣ ಸತ್ತಿದ್ದು ರಾಮಬಾಣದಿಂದಲ್ಲ!

ರಾವಣ ಸತ್ತಿದ್ದು ರಾಮಬಾಣದಿಂದಲ್ಲ... ಅವನೊಬ್ಬ ಶ್ರೇಷ್ಠ ಆಡಳಿತಗಾರ... ಯುದ್ಧದಲ್ಲಿ ಆತ ಸತ್ತೇ ಇರಲಿಲ್ಲ! ಹಾಂ, ಇದೇನಿದು...

Mainashree
Updated On : 16 Jul 2013, 12:36 pm

ನವದೆಹಲಿ: ರಾವಣ ಸತ್ತಿದ್ದು ರಾಮಬಾಣದಿಂದಲ್ಲ... ಅವನೊಬ್ಬ ಶ್ರೇಷ್ಠ ಆಡಳಿತಗಾರ... ಯುದ್ಧದಲ್ಲಿ ಆತ ಸತ್ತೇ ಇರಲಿಲ್ಲ!  ಹಾಂ, ಇದೇನಿದು ಹೊಸ ಕಥೆ ಎಂದು ಭಾವಿಸುತ್ತಿದ್ದೀರಾ? ನಾವು ನೀವೆಲ್ಲ ಈವರೆಗೆ ತಿಳಿದುಕೊಂಡಿದ್ದಕ್ಕೆ ತದ್ವಿರುದ್ಧವಾದ ವಿಚಾರಗಳನ್ನು ಶ್ರೀಲಂಕಾದ ವಿದ್ವಾಂಸರೊಬ್ಬರು ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ. ರಾಮಾಯಣ ಮಹಾಕಾವ್ಯದಲ್ಲಿ ಖಳನಾಯಕನಾಗಿ ಬಿಂಬಿತನಾಗಿರುವ ರಾವಣನನ್ನು ಈ ಪುಸ್ತಕದಲ್ಲಿ ಮಾತ್ರ ನಾಯಕನೆಂದು ಬಣ್ಣಿಸಲಾಗಿದೆ. ಶ್ರೀಲಂಕಾದ ವಿದ್ವಾಂಸ ಮಿರಾಂಡೋ ಒಬೇಸಿಕೆರೆ ಎಂಬುವರು 'ರಾವಣ, ಕಿಂಗ್ ಆಫ್ ಲಂಕಾ' ಎಂಬ ಪುಸ್ತಕದಲ್ಲಿ ರಾವಣನ ಬಗೆಗಿನ ಅಚ್ಚರಿಯ ಹಾಗೂ ಕುತೂಹಲಭರಿತ ವಿಚಾರಗಳನ್ನು ಪ್ರಸ್ತುತಪಡಿಸಿದ್ದಾರೆ.

ಸಂಶೋಧನೆ ನಡೆಸಿ ಬರೆದ ಕೃತಿ: ಮಿರಾಂಡೋ ಅವರು ಹಲವು ರೀತಿಯ ಸಂಶೋಧನೆ ನಡೆಸಿ, ಪುರಾತತ್ವ ಸಾಕ್ಷ್ಯಗಳು, ತಾಳೆಗರಿ ಬರಹಗಳ ಆಧಾರದಲ್ಲಿ ಈ ಪುಸ್ತಕ ಬರೆದಿದ್ದಾರೆ ಎನ್ನಲಾಗಿದೆ. 174 ಪುಟಗಳ ಕೃತಿಯನ್ನು ಶ್ರೀಲಂಕಾದ ವಿಜಿತ ಯಾಪಾ ಪಬ್ಲಿಕೇಷನ್ಸ್ ಸಂಸ್ಥೆಯು ಪ್ರಕಟಿಸಿದೆ.

ಪತ್ನಿಯಿಂದಲೇ ಮೋಸ: ರಾವಣ ನಿಜಕ್ಕೂ ಶ್ರೇಷ್ಠ ರಾಜನಾಗಿದ್ದ. ತನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಭೂಮಿಯಡಿ ಅನೇಕ ಸುರಂಗಗಳನ್ನು ನಿರ್ಮಿಸಿದ್ದ. ಯಕ್ಷ ಜನಾಂಗಕ್ಕೆ ಸೇರಿದ ರಾವಣ ಅತ್ಯಂತ ಬುದ್ಧಿವಂತ. ರಾಜ ರಾವಣನು ಯುದ್ಧವೀರರಲ್ಲೇ ಪಾರಂಗತ; ವೈದ್ಯರಲ್ಲಿ ತಜ್ಞವೈದ್ಯ; ಜ್ಯೋತಿಷಿಗಳಲ್ಲಿ ಶ್ರೇಷ್ಠ ಋಷಿ; ಆಡಳಿತಗಾರರಲ್ಲಿ ನಿಪುಣ ಮುತ್ಸದ್ಧಿ; ಸಂಗೀತಗಾರರಲ್ಲಿ ಕಲಾಭಿಜ್ಞ ಎಂದು ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣ ಯುದ್ಧದ ವೇಳೆ ವಿಷಕಾರಿ ಬಾಣ ತಾಗಿ ಆತ ರಣರಂಗದಲ್ಲಿ ಪ್ರಜ್ಞೆ ತಪ್ಪಿದ್ದು ಹೌದು. ಆದರೆ, ರಾವಣ ಸತ್ತಿದ್ದು ರಾಮ ಹೂಡಿದ ಬಾಣದಿಂದಲ್ಲ. ಪತ್ನಿ ಮಂಡೋದರಿ ಮತ್ತು ಸಹೋದರ ವಿಭೀಷಣ ಶತ್ರುಗಳಿಗೆ ರಹಸ್ಯವನ್ನು ತಿಳಿಸುವ ಮೂಲಕ ರಾವಣನಿಗೆ ದ್ರೋಹ ಬಗೆದರು ಎಂದು ಕೃತಿ ಹೇಳುತ್ತದೆ.
 ಈ ಪುಸ್ತಕದಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಗುಣಗಳ ಬಗ್ಗೆಯೂ ಶ್ಲಾಘಿಸಲಾಗಿದೆ. ರಾಮ ಒಬ್ಬ ಪ್ರಾಮಾಣಿಕ ವ್ಯಕ್ತಿ. ಆತನಲ್ಲಿ ವಿಮಾನವೂ ಇರಲಿಲ್ಲ, ರಾವಣನಷ್ಟು ಆಸ್ತಿಯೂ ಇರಲಿಲ್ಲ. ಆದರೆ ರಾಮನ ಮುಖ್ಯ ಧ್ಯೇಯ ಒಂದೇ ಆಗಿತ್ತು. ಅದು 'ಸತ್ಯಕ್ಕೆ ಜಯವಿದೆ' ಎಂಬುದು. ರಾಮನ ಪತ್ನಿ ಸೀತೆಯನ್ನು ಅಪಹರಿಸುವ ಮೂಲಕ ರಾವಣ ತನ್ನ ಸಾಮ್ರಾಜ್ಯದ ಸರ್ವನಾಶಕ್ಕೆ ಕಾರಣನಾದ ಎಂಬ ಅಂಶಗಳನ್ನೂ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

ಪುಸ್ತಕದಲ್ಲೇನಿದೆ?
- ರಾವಣನ ಧ್ವಜವನ್ನು ಶ್ರೀಲಂಕಾದ ಅತ್ಯಂತ ಹಳೆಯ ಧ್ವಜ ಎಂದು ಪರಿಗಣಿಸಬಹುದು
-ರಾವಣನ ರಾಜ್ಯದಲ್ಲಿದ್ದ ಕಟ್ಟಡಗಳು ಅತ್ಯುತ್ಕೃಷ್ಟವಾಗಿದ್ದವು. ಅವುಗಳನ್ನು ದುಬಾರಿ ಮರಗಳಿಂದ ನಿರ್ಮಿಸಲಾಗಿತ್ತು. ಹಾಗಾಗಿಯೇ ಲಂಕಾಗೆ ಹನುಮಾನ್ ಸುಲಭವಾಗಿ ಬೆಂಕಿ ಕೊಡಲು ಸಾಧ್ಯವಾಯಿತು.
- ರಾವಣನು ರಾಮಾಯಣ ಯುದ್ಧದಲ್ಲಿ ಮೃತಪಟ್ಟಿರಲಿಲ್ಲ. ಯುದ್ಧದ ವೇಳೆ ವಿಷಯುಕ್ತ ಬಾಣ ಚುಚ್ಚಿದ್ದರಿಂದ ಆತನಿಗೆ ಮೂರ್ಛೆ ತಪ್ಪಿತ್ತು ಅಷ್ಟೆ.
- ರಾವಣ ಒಬ್ಬ ಅತ್ಯುತ್ತಮ ಕಲಾವಿದ.
-ರಣರಂಗದಲ್ಲಿ ಮುಖ ಮರೆಮಾಚುವಂತಹ ಸಾಧನವನ್ನು ತಲೆಗೆ ತೊಟ್ಟ ವಿಶ್ವದ ಏಕೈಕ ಸೇನಾಪಡೆಯೆಂದರೆ ರಾವಣನ ಸೈನ್ಯ.
-ರಾವಣನಲ್ಲಿ ಸ್ವಂತ ವಿಮಾನವಿತ್ತು ಹಾಗೂ ತರಬೇತಿ ಹೊಂದಿದ್ದ ನೌಕಾಪಡೆಯಿತ್ತು
-ರಾವಣನ ಸೃಜನಾತ್ಮಕ ಚಿಂತನೆಗಳಿಗೆ ತಕ್ಕಂತೆ ಹಲವು ಸಂಗೀತ ಸಾಧನಗಳನ್ನು ವಿನ್ಯಾಸಗೊಳಿಸಲಾಗಿತ್ತು
- ರಾವಣನ ಕಾಲದ ಯಕ್ಷರ ಬಳಿಯಿದ್ದ ರಾಸಾಯನಿಕವೊಂದು ಎಂತಹ ದೊಡ್ಡ ಕಲ್ಲನ್ನೂ ಬ್ರೆಡ್‌ನಂತೆ ಮೆದುಗೊಳಿಸುವ ಸಾಮರ್ಥ್ಯ ಹೊಂದಿತ್ತು. ಇದರ ಮೂಲಕವೇ ಅವರು ಭೂಮಿಯಡಿ ಸುರಂಗ ಹಾಗೂ ದಾರಿಗಳನ್ನು ನಿರ್ಮಿಸಿದ್ದರು.
- ರಾವಣನ ಆಡಳಿತಾವಧಿಯಲ್ಲಿ ಕ್ರಿಮಿನಲ್‌ಗಳನ್ನು ಜೀವಂತ ಸಮಾಧಿ ಮಾಡಲಾಗುತ್ತಿತ್ತು.
- ರಾವಣನ ಸ್ಫೋಟಕಗಳಲ್ಲಿ ನಾಗರಹಾವಿನ ವಿಷವನ್ನು ಬಳಸಲಾಗುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement