ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇಲ್ಲಿ ಭಾರೀ ಭೂಸ್ವಾಹ...

ಗೋಮಾಳ, ಗ್ರಾಮಠಾಣಾ, ಗುಂಡುತೋಪು, ಕೆರೆ ಅಂಗಳ, ರುದ್ರಭೂಮಿ... ಭೂಕಬಳಿಕೆದಾರರು ಇದ್ಯಾವುದನ್ನೂ ಬಿಟ್ಟಿಲ್ಲ.

Mainashree
Updated On : 17 Jul 2013, 12:18 pm

ಕ.ಪ್ರ.ವಾರ್ತೆ, ಬೆಂಗಳೂರು, ಜು. 16-
ಗೋಮಾಳ, ಗ್ರಾಮಠಾಣಾ, ಗುಂಡುತೋಪು, ಕೆರೆ ಅಂಗಳ, ರುದ್ರಭೂಮಿ...
ಭೂಕಬಳಿಕೆದಾರರು ಇದ್ಯಾವುದನ್ನೂ ಬಿಟ್ಟಿಲ್ಲ. ಕಂದಾಯ ಇಲಾಖೆಗೆ ಸೇರಿದ ಈ ಭೂಮಿಯನ್ನೇ ನುಂಗಲು ಭೂಮಾಫಿಯಾದ ಕಬಂದಬಾಹುಗಳು ಸದಾ ಜಾಗೃತವಾಗಿರುತ್ತವೆ. ಆದ್ದರಿಂದಲೇ, ಕಂದಾಯ ಇಲಾಖೆಯ 9,23,850 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿರುವುದು. ಇದು ಎರಡು ವರ್ಷದ ಹಿಂದಿನ ಲೆಕ್ಕಾಚಾರ. ಈಗ ಎಷ್ಟಾಗಿದೆಯೋ?
ಕರ್ನಾಟಕದ ಭೌಗೋಳಿಕ ಪ್ರದೇಶ 484 ಲಕ್ಷ ಎಕರೆ. ಸಾಮಾನ್ಯ ವರ್ಷದಲ್ಲಿ ಸರಾಸರಿ ಸಾಗುವಳಿಯಾಗುವ ಪ್ರದೇಶ 265 ಲಕ್ಷ ಎಕರೆ. ಸರ್ಕಾರಿ ದಾಖಲೆಯ ಪ್ರಕಾರ, ಗೋಮಾಳ, ಗ್ರಾಮಠಾಣಾ, ಗುಂಡುತೋಪು, ಕೆರೆ ಅಂಗಳ, ರುದ್ರಭೂಮಿ, ಕಾವಲ್, ಶಿಕ್ಷಣ, ಕೃಷಿ, ಮುಜರಾಯಿ, ವಕ್ಫ್ ಮಂಡಳಿ ಮುಂತಾದ ಇಲಾಖೆ ವ್ಯಾಪ್ತಿಯಲ್ಲಿಯ ಜಮೀನು 109 ಲಕ್ಷ ಎಕರೆ. ಇದರಂತೆ ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ.22.5ರಷ್ಟು ಪ್ರದೇಶ ಸರ್ಕಾರದ್ದು. ಸಾಗುವಳಿ ಪ್ರದೇಶದ ಲೆಕ್ಕಾಚಾರದಲ್ಲಿ ಶೇ.41ರಷ್ಟು ಭೂಮಿ ಮೇಲೆ ಸರ್ಕಾರದ ಒಡೆತನವಿದೆ. ಜಾನುವಾರುಗಳ ಲೆಕ್ಕಾಚಾರದಲ್ಲಿ ನಿಗದಿಯಾಗುವ ಗೋಮಾಳ ರಾಜ್ಯದಲ್ಲಿ ಸುಮಾರು 40 ಲಕ್ಷ ಎಕರೆ ಇದೆ.
ಸರ್ಕಾರದ ಅಧೀನದ ಜಮೀನು ಎಂದಾಗ ಅದು ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಇತರೆ ಇಲಾಖೆ ಸೇರಿದಂತೆ ಶಾಸನಬದ್ಧ ಸಂಸ್ಥೆಗಳ ವ್ಯಾಪ್ತಿಯಲ್ಲಿತ್ತದೆ. ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಬೆಳಗಾವಿ ಕಂದಾಯ ವಿಭಾಗದಲ್ಲಿ ಕೇವಲ 49,800 ಎಕರೆ ಭೂಮಿ ಒತ್ತುವರಿಯಾಗಿದೆ. ಗುಲ್ಬರ್ಗ ವಿಭಾಗದಲ್ಲಿ 1,25,000, ಮೈಸೂರು ವಿಭಾಗದಲ್ಲಿ 4,47,342 ಹಾಗೂ ಬೆಂಗಳೂರು ವಿಭಾಗದಲ್ಲಿ 3,01,708 ಎಕರೆ ಒತ್ತುವರಿಯಾಗಿದೆ ಎಂದು ವರದಿ ಮಾಡಲಾಗಿದೆ. ಆದರೆ, ಜಾನುವಾರು ಲೆಕ್ಕಾಚಾರ ಮಾಡಿದರೆ ಈ ನಾಲ್ಕು ವಿಭಾಗಗಳಲ್ಲಿರುವ ಗೋಮಾಳ ಕಡಿಮೆ. ಹೀಗಾಗಿ ಸಮುದಾಯ ಜಮೀನು ಹಾಗೂ ಒತ್ತುವರಿ ಜಮೀನು ಇದಕ್ಕಿಂತ ಅಧಿಕವಾಗಿರುತ್ತದೆ ಎಂದು ವಿ. ಬಾಲಸುಬ್ರಮಣಿಯನ್ ಕಾರ್ಯಪಡೆ ವರದಿಯಲ್ಲಿ ತಿಳಿಸಿದೆ.

1508 ದೂರುಗಳು: ವಿ. ಬಾಲಸುಬ್ರಮಣಿಯನ್ ಕಾರ್ಯಪಡೆ 2009ರ ಅಕ್ಟೋಬರ್‌ನಿಂದ ಭೂ ಒತ್ತುವರಿಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಿತು. 2011ರ ಮೇ ಅಂತ್ಯದೊಳಗೆ 1508 ದೂರುಗಳು ಸ್ವೀಕಾರಗೊಂಡವು. ಅವೆಲ್ಲವೂ ಗಣಕೀಕೃತಗೊಂಡಿವೆ. ಭೂ ಒತ್ತುವರಿ ಬಗ್ಗೆ ದೂರು ನೀಡಿದವರಿಗೆಲ್ಲ ಕ್ರಮ ಕೈಗೊಂಡ ಮೇಲೆ ಉತ್ತರ ಕಳುಹಿಸಬೇಕು ಎಂದು ಕಾರ್ಯಪಡೆ ಸೂಚಿಸಿತ್ತು. ಒತ್ತುವರಿ ತೆರವಾಯಿತು ಎಂದು ಉತ್ತರ ನೀಡಿದರೂ ವಾಸ್ತವದಲ್ಲಿ ಒತ್ತುವರಿ ಮಾತ್ರ ತೆರವಾಗಿರಲಿಲ್ಲ ಎಂಬುದು ಕಾರ್ಯಪಡೆ ಗಮನಿಸಿತ್ತು. ಹೇಗಿದೆ ಗೊತ್ತಾಯ್ತಾ, ಭೂ ಕಬಳಿಕೆದಾರರ ಪ್ರಭಾವ!

ರಾಜಕಾರಣಿಗಳು, ಅಧಿಕಾರಿಗಳು ಶಾಮೀಲು

ಸರ್ಕಾರಿ ಭೂಮಿ ಕಬಳಿಕೆಗೆ ಕಾರಣವಾದ ಅಧಿಕಾರಿಗಳ ಸಂಖ್ಯೆ 505. ಕ್ರಮವಾಗಿದ್ದು 8 ಜನರಿಗೆ ಮಾತ್ರ. ಯಾವುದೇ ಭೂಮಿ ಅದರ ಮಾಲೀಕನ ಸಣ್ಣ ಸಮ್ಮತಿ ಇಲ್ಲದೆ ಪರಭಾರೆ ಆಗುವುದಿಲ್ಲ. ಇದು ಅಕ್ಷರಶಃ ಸತ್ಯ. ಆದ್ದರಿಂದಲೇ, ಸರ್ಕಾರಿ ಭೂಮಿ ಒತ್ತುವರಿಯಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿರುವುದು.
ರಾಜ್ಯದಲ್ಲಿ ಸರ್ಕಾರಿ ಭೂಮಿ ಒತ್ತುವರಿಯಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಭೂಕಂದಾಯ ಅಧಿನಿಯಮಕ್ಕೆ ತಿದ್ದುಪಡಿ ತಂದು 192-ಎ ಪ್ರಕರಣ ಸೇರಿಸಲಾಗಿದೆ. ಇದರಂತೆ ಬೆಂಗಳೂರು ಜಿಲ್ಲೆಯೊಂದರಲ್ಲೇ 357 ಅಧಿಕಾರಿಗಳ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ. ಈವರೆಗೆ ಇಬ್ಬರ ಮೇಲೆ ಮಾತ್ರ ಕ್ರಮವಾಗಿದೆ. ಇತರೆ ಜಿಲ್ಲೆಗಳಲ್ಲಿ 148 ಅಧಿಕಾರಿಗಳಲ್ಲಿ 6 ಅಧಿಕಾರಿಗಳ ಮೇಲೆ ಕ್ರಮವಾಗಿದೆ. ಅಂದರೆ, ಸರ್ಕಾರದ ನಿರ್ಲಕ್ಷ್ಯ ಎಂಥದ್ದು ಎಂಬುದು ಅರ್ಥವಾಗುತ್ತದೆ.
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನಲ್ಲಿ ಜಮೀನನ್ನು ಅನಧಿಕೃತವಾಗಿ ಅಧಿಭೋಗವನ್ನು ಕಾನೂನುಬಾಹಿರವಾಗಿ ಸಕ್ರಮಗೊಳಿಸಲಾಗಿದೆ. ಅಂದರೆ, ಸರ್ಕಾರಿ ಜಮೀನಿನನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ನೆಲೆಸಿರುತ್ತಾರೆ. ಅದಕ್ಕೆ ಅವರು ಅರ್ಹರಾಗಿಲ್ಲದಿದ್ದರೂ ಅವರಿಗೇ ಆ ಭೂಮಿಯನ್ನು ಸಕ್ರಮ ಮಾಡಿಕೊಡುವುದು. ಇದರಲ್ಲಿ ಆಯಾ ಶಾಸಕರದ್ದೇ ಪ್ರಮುಖ ಪಾತ್ರವಾಗಿರುತ್ತದೆ.
ನರಸಿಂಹರಾಜಪುರ ತಾಲೂಕಿನ 1991ರ ಸೆಪ್ಟೆಂಬರ್ 19ರ ನಂತರ ಇಂತಹ ಭೂಮಿ ಸಕ್ರಮಗೊಳಿಸಲು 147 ಅರ್ಜಿ ಸ್ವೀಕರಿಸಲಾಗಿತ್ತು. 31 ಪ್ರಕರಣಗಳಲ್ಲಿ ಅರ್ಜಿದಾರರ ಹೆಸರನ್ನೇ ಬದಲಾಯಿಸಲಾಗಿತ್ತು. 27 ಪ್ರಕರಣಗಳಲ್ಲಿ ಅರ್ಜಿ ಸ್ವೀಕೃತಿಯ ದಾಖಲೆ ಇಲ್ಲದಿದ್ದರೂ ಸಕ್ರಮಕ್ಕೆ ಶಿಫಾರಸ್ಸಾಗಿತ್ತು. 9 ಅರ್ಜಿಗಳನ್ನು 2007ರ ಆಗಸ್ಟ್ 8 ಹಾಗೂ ಅಕ್ಟೋಬರ್ 4ರಂದು ಎರಡು ಬಾರಿ ಶಿಫಾರಸು ಮಾಡಲಾಗಿತ್ತು.
ಈ ಕಾನೂನುಬಾಹಿರ ಕೆಲಸ ಮಾಡಿದವರು ಹೀಗಿದ್ದಾರೆ- ವೆಂಕಟರಮಣ ಹೆಗಡೆ, ತಹಸೀಲ್ದಾರ್, ರಮೇಶ್, ತಹಸೀಲ್ದಾರ್,  ಎನ್.ಆರ್. ಪುರ ತಾಲೂಕು, ಅಧಿಕಾರೇತರ ಸದಸ್ಯರು- ಗಂಗಾಧರ, ಸೂಸಮ್ಮ, ಗಿಡ್ಡಯ್ಯ, ಶೌಕಲ್ ಆಲಿ. 2007ರಲ್ಲಿ ಡಿ.ಎನ್. ಜೀವರಾಜ್, ನಾಗರಾಜ್ ಪುರಾಣಿಕ್, ರಮೇಶ್. ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕಾರ್ಯಪಡೆ ಶಿಫಾರಸು ಮಾಡಿದೆ.
ಈ ಪ್ರಕರಣ ಲೋಕಾಯುಕ್ತದಲ್ಲೂ ತನಿಖೆ ನಡೆಯುತ್ತಿದೆ. ಇದು ಕೇವಲ ಒಂದು ಉದಾಹರಣೆಯಷ್ಟೇ. ಎಲ್ಲ ವಿಧಾನಸಭೆ ಕ್ಷೇತ್ರದಲ್ಲೂ ಇಂತಹ ಪ್ರಕರಣಗಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆಲ್ಲರ ಮಾಹಿತಿ ಇದ್ದಿದ್ದರೆ, ಕಾರ್ಯಪಡೆ ವರದಿ ಸಂಪೂರ್ಣ ಅನುಷ್ಠಾನ ಎಂದು ಹೇಳುತ್ತಿರಲಿಲ್ಲವೇನೋ?

- ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement