ಪೊಲೀಸ್ ಇಲಾಖೆ ಖಾಲಿ ಹುದ್ದೆ ಮಾಹಿತಿ ನೀಡುವಂತೆ 'ಹೈ' ಆದೇಶ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಪೊಲೀಸ್ ದೂರು ಪ್ರಾಧಿಕಾರ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದ ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆಯಲ್ಲಿ ರಾಜ್ಯದಲ್ಲಿರುವ ಪೊಲೀಸರ ಸಂಖ್ಯೆಯ ಕುರಿತು ಮಾಹಿತಿ ನೀಡುವಂತೆ ಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ತಮ್ಮ ಬಳಿ ಸಂಪೂರ್ಣ ಮಾಹಿತಿಯಿಲ್ಲ. ಕಲೆಹಾಕಬೇಕಿದೆ ಎಂದು ಸಬೂಬು ಹೇಳಿದರು. ಇದನ್ನೊಪ್ಪದ ಪೀಠ, ಪೊಲೀಸ್ ಇಲಾಖೆಯನ್ನು ಬಲಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿತು. ಇಲಾಖೆಯ ವಿವಿಧ ವಿಭಾಗಗಳು ಹಾಗೂ ಶ್ರೇಣಿಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇರುವುದನ್ನು ಸರ್ಕಾರಿ ವಕೀಲರು ಒಪ್ಪಿಕೊಂಡರು. ಮಾತ್ರವಲ್ಲದೆ, ಶೀಘ್ರದಲ್ಲೇ ಅದರ ಭರ್ತಿಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರೊಬ್ಬರು, ಇಲ್ಲಿಯವರೆಗೆ 4 ಸಾವಿರ ಪೊಲೀಸರು ನೇಮಕಗೊಳ್ಳಬೇಕಿದೆ ಎಂದು ಆರೋಪಿಸಿದರು.
ಸೂಪರ್‌ಮ್ಯಾನ್ ಅಲ್ಲ: ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಸಾರ್ವಜನಿಕರಿಗೆ ಸುರಕ್ಷತೆ ನೀಡುವುದು, ನಗರದಲ್ಲಿ ಅಪರಾಧಗಳನ್ನು ತಡೆದು ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಪ್ರಥಮ ಕರ್ತವ್ಯ. ಆದರೆ, ಹೆಚ್ಚಿನ ಪೊಲೀಸರನ್ನು ವಿಐಪಿ ವ್ಯಕ್ತಿಗಳಿಗೆ ಭದ್ರತೆ ನೀಡಲು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ, ಹೆಚ್ಚುವರಿ ಅವಧಿ ಕೆಲಸ ನಿರ್ವಹಿಸುವ ಪೊಲೀಸರ ಮೇಲೆ ಹೊರೆ ಹೆಚ್ಚುತ್ತಿದೆ.ಅವರಿಗೆ ಸೂಕ್ತ ಭತ್ಯೆ ನೀಡಲಾಗುತ್ತಿದೆಯೇ ಎಂಬುದೂ ಕೂಡ ಅನುಮಾನಸ್ಪದವಾಗಿದೆ. ಪೊಲೀಸರೇನು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವಂತಹ ಸೂಪರ್‌ಮ್ಯಾನ್ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಗಂಭೀರ ಪ್ರಕರಣಗಳ ತನಿಖೆಗಳನ್ನು ಕೈಗೆತ್ತಿಕೊಳ್ಳುವ ಪೊಲೀಸ್ ಅಧಿಕಾರಿಗಳಿಗೆ ಬೇರೆ ಜವಾಬ್ದಾರಿಗಳನ್ನು ವಹಿಸಬಾರದು. ಅವರಿಗೆ ತಮ್ಮ ಕೆಲಸಗಳನ್ನು ಯಾವುದೇ ಅಡೆತಡೆಗಳಿಲ್ಲದೆ ನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಅಪರಾಧ ಪ್ರಕರಣಗಳು ನಡೆದಾಗ ಮೊದಲ ಐದು ದಿನಗಳಲ್ಲೇ ತನಿಖೆ ಪೂರೈಸಬೇಕು. ಇಲ್ಲದಿದ್ದಲ್ಲಿ ಸಾಕ್ಷಿಗಳು ನಾಶವಾಗುವ ಸಾಧ್ಯತೆಗಳಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ.