ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿಇಟಿ ಶುಲ್ಕ ಹೆಚ್ಚುವರಿ; ಸರ್ಕಾರದಿಂದಲೇ ಮುಚ್ಚುಮರೆ

ಯಾವುದೇ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ರಾಜಕೀಯ ಹೇಳಿಕೆ ನೀಡಿದ್ದ ರಾಜ್ಯ ಸರ್ಕಾರ, ಈಗ ಅಧಿಕೃತವಾಗಿ ಹೆಚ್ಚುವರಿ ಶುಲ್ಕ...

Mainashree
Updated On : 17 Jul 2013, 12:10 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು. 16-
ಯಾವುದೇ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ರಾಜಕೀಯ ಹೇಳಿಕೆ ನೀಡಿದ್ದ ರಾಜ್ಯ ಸರ್ಕಾರ, ಈಗ ಅಧಿಕೃತವಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು ಟಿಪ್ಪಣಿ ತಯಾರಿಸುತ್ತಿದೆ. ವಿಚಿತ್ರವೆಂದರೆ ಮೊದಲ ಹಂತದ ಪ್ರವೇಶ ಪ್ರಕ್ರಿಯೆ ಮುಗಿಯುವವರೆಗೂ ಉನ್ನತ ಶಿಕ್ಷಣ ಇಲಾಖೆ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಕುಂಭಕರ್ಣ ನಿದ್ದೆಯಲ್ಲಿದೆ.
ರಾಜ್ಯ ಸರ್ಕಾರದ ಇಬ್ಬಗೆಯ ನೀತಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ಒಂದೆಡೆ ಶುಲ್ಕ ಹೆಚ್ಚಳವಿಲ್ಲವೆಂದು ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು ಸರ್ಕಾರಕ್ಕೆ ಶಹಭಾಸ್‌ಗಿರಿ ಪಡೆದುಕೊಳ್ಳಲು ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದೆಡೆ ನಿಮ್ಮಿಷ್ಟದ ಶುಲ್ಕವನ್ನು ಭರಿಸಿಕೊಳ್ಳಿ ಎಂದು ಸರ್ಕಾರ ಮೌನ ಸಮ್ಮತಿ ನೀಡುತ್ತಾರೆ.
ಈ ಸಂಬಂಧ ವಿಧಾನ ಪರಿಷತ್ ಸದಸ್ಯರೊಬ್ಬರು ಶಿಕ್ಷಣ ಇಲಾಖೆ ಸಚಿವರನ್ನು ಸಂಪರ್ಕಿಸಿದಾಗ ಹೀಗೆ ಉತ್ತರಿಸಿದ್ದಾರೆ. 'ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜುಗಳನ್ನು ನಡೆಸುವುದು ಕಷ್ಟವಾಗಿದೆ. ಹೆಚ್ಚುವರಿ ಶುಲ್ಕ ತೆಗೆದುಕೊಳ್ಳುವುದು ಅನಿವಾರ್ಯ'. ಈ ವಿಚಾರ ಸಚಿವರಿಗೆ ಹಾಗೂ ಸರ್ಕಾರಕ್ಕೆ ತಿಳಿದಿದ್ದರೆ ಒಂದೂವರೆ ತಿಂಗಳ ಹಿಂದೆ ಶುಲ್ಕ ಹೆಚ್ಚಳವಿಲ್ಲ ಎಂದು ಪತ್ರಿಕಾಗೋಷ್ಠಿ ಕರೆದು ಹೇಳಿಕೆ ನೀಡುವ ಅಗತ್ಯವೇನಿತ್ತು? ಸರ್ಕಾರದ ನಿರ್ಧಾರವನ್ನು ಸ್ಪಷ್ಟಪಡಿಸಲು ಅವಕಾಶವಿತ್ತು.

ಪರಿಶಿಷ್ಟ ಜಾತಿ-ಪಂಗಡಗಳ ವಿದ್ಯಾರ್ಥಿಗಳ ಸುಲಿಗೆ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಸೀಟುಗಳು ದೊರೆತಿದ್ದರೆ ಯಾವುದೆ ಶುಲ್ಕ ಭರಿಸಬೇಕಿಲ್ಲ. ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕವನ್ನು ರಾಜ್ಯ ಸರ್ಕಾರವೇ ಆಯಾ ಕಾಲೇಜಿಗೆ ತುಂಬಿಕೊಡುತ್ತದೆ. ಆದರೆ ದಕ್ಷಿಣ ಬೆಂಗಳೂರಿನ ಬನಶಂಕರಿ ಸಮೀಪದಲ್ಲಿರುವ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ 28ರಿಂದ 50 ಸಾವಿರದವರೆಗೆ ಶುಲ್ಕ ಪಡೆಯುತ್ತಿದೆ. ರಾಜ್ಯದ ಇತರ ಕೆಲ ಕಾಲೇಜುಗಳಲ್ಲಿಯೂ ಈ ರೀತಿ ನಡೆಯುತ್ತಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲೂ ಇದೇ ಕಾಲೇಜು 96 ಸಾವಿರ ಹೆಚ್ಚುವರಿ ಶುಲ್ಕ ಪಡೆದಿತ್ತು. ಸರ್ಕಾರ ನಮಗೆ ಶುಲ್ಕ ಮರುಪಾವತಿಸಲು ವಿಳಂಬಮಾಡುತ್ತದೆ, ಆದ್ದರಿಂದ ಸರ್ಕಾರ ಭರಿಸುವವರೆಗೆ ನೀವೆ ತುಂಬಿಕೊಡಿ ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದಾರೆ. ಆದರೆ ಉನ್ನತ ಶಿಕ್ಷಣ ಸಚಿವರಿಗೆ ಇದ್ಯಾವುದು ಕಣ್ಣಿಗೆ ಬೀಳುತ್ತಿಲ್ಲ. ಕಾಲೇಜುಗಳು ಅನುಭವಿಸುತ್ತಿರುವ ಸಂಕಷ್ಟಗಳು ಮಾತ್ರ ಮುಖ್ಯವಾಗಿ ಕಾಣುತ್ತಿವೆ.

ನಿಮ್ಮ ಪಕ್ಷದ ಕಾಲೇಜು ಉಳಿಸಲು ಈ ನೀತಿಯೆ?: ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ಆರ್.ಎಲ್.ಜಾಲಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಎಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕಾಲೇಜುಗಳಿವೆ. ಕಳೆದ 2 ದಶಕಗಳಿಂದ ರಾಜ್ಯದ ರಾಜಕೀಯ ವ್ಯವಸ್ಥೆ ಮೇಲೆ ಶಿಕ್ಷಣ ಲಾಬಿ ಕೆಲಸಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಮುಂಬಾಗಿಲಿನಲ್ಲಿ ಶುಲ್ಕ ಏರಿಸದೆ ಹಿಂಬಾಗಿಲಿನ ದಾರಿ ಹಿಡಿದಿರುವ ಕಾಂಗ್ರೆಸ್ ಸರ್ಕಾರದ ಕ್ರಮಕ್ಕೆ ಈ ಒತ್ತಡಗಳು ಕಾರಣವಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಗೊಂದಲ ಪರಿಹರಿಸಿ: ಮೊದಲನೇ ಹಂತದ ಕೌನ್ಸೆಲಿಂಗ್ ಬಳಿಕ ವಿದ್ಯಾರ್ಥಿಗಳು ತಮಗೆ ದೊರೆತ ಸೀಟನ್ನು ಹಿಡಿದಿರಿಸಿಕೊಂಡು 2ನೇ ಹಂತದಲ್ಲಿ ಸೀಟು ಪಡೆಯಲು ಅವಕಾಶವಿರುತ್ತದೆ. ಇದರರ್ಥ 2ನೇ ಹಂತದಲ್ಲಿ ಈ ವಿದ್ಯಾರ್ಥಿಗೆ ಬೇರೊಂದು ಕಾಲೇಜಿನಲ್ಲಿ ಸೀಟು ಸಿಕ್ಕರೆ ಆತನ ಮೊದಲ ಸೀಟು ಖಾಲಿಯಾಗುತ್ತದೆ. ಆದರೆ 3ನೇ ಹಂತದ ಕೌನ್ಸೆಲಿಂಗ್ ಇಲ್ಲದಿರುವುದರಿಂದ ಈ ಸೀಟುಗಳು ಹಾಗೆಯೇ ಖಾಲಿ ಉಳಿಯಲಿವೆ. ಬಹುತೇಕ ಸಂದರ್ಭದಲ್ಲಿ ಇದು ಪ್ರತಿಷ್ಠಿತ ಕಾಲೇಜುಗಳ ಸೀಟುಗಳಾಗಿರುತ್ತವೆ.

ಮುಗಿಯದ ಎಸ್‌ಜೆಸಿಇ ಸಮಸ್ಯೆ
ಮೈಸೂರಿನ ಎಸ್‌ಜೆಸಿಇ ಕಾಲೇಜಿನಲ್ಲಿ ಎಂಜಿನಿಯರಿಂಗ್‌ಗೆ ಪ್ರವೇಶ ಪಡೆಯಬಯಸಿದ ವಿದ್ಯಾರ್ಥಿಗಳ ಸಮಸ್ಯೆ ಮಂಗಳವಾರವೂ ಇತ್ಯರ್ಥವಾಗಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 120 ಸರ್ಕಾರಿ ಸೀಟುಗಳನ್ನು ಸಿಇಟಿ ಮೂಲಕ ಮೊದಲ ಸುತ್ತಿನಲ್ಲೆ ಹಂಚಿಕೆ ಮಾಡಿದೆ. ಹೀಗೆ 500 ರಿಂದ 2500 ಒಳಗಿನ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಎಸ್‌ಜೆಸಿಇಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದ್ದಾರೆ. ಆದರೆ, ಈಗ ಕಾಲೇಜು ಆಡಳಿತ ಮಂಡಳಿಯು 120 ಸೀಟುಗಳನ್ನು ಸರ್ಕಾರಿ ಸೀಟಾಗಿ ನೀಡಲು ಸಾಧ್ಯವಿಲ್ಲ ಎಂಬ ಆಡಳಿತ ಮಂಡಳಿ ವಾದವನ್ನು ಹೈಕೋರ್ಟ್ ಮಾನ್ಯ ಮಾಡಿದೆ.
ಅನುದಾನಕ್ಕೆ ಒಳಪಟ್ಟ 60 ಸೀಟುಗಳ ಪೈಕಿ ಶೇ. 95 ರಷ್ಟು ಅಂದರೆ 57 ಸೀಟು ಸರ್ಕಾರಕ್ಕೆ ಉಳಿದ ಶೇ. 5 ಅಂದರೆ 3 ಸೀಟು ಆಡಳಿತ ಮಂಡಳಿಗೆ ಸೇರುತ್ತದೆ. ಅನುದಾನರಹಿತ 60 ಸೀಟುಗಳಲ್ಲಿ ಶೇ. 45 ಅಂದರೆ 27 ಕಾಮೆಡ್- ಕೆ, ಉಳಿದ ಶೇ. 55 ರಷ್ಟು ಅಂದರೆ 33 ಸೀಟುಗಳ ಪೈಕಿ 18 ಕಾಮೆಡ್‌ಕೆ ಮತ್ತು 15 ಸೀಟು ಆಡಳಿತ ಮಂಡಳಿಗೆ ಸೇರಬೇಕು. ಆದರೆ, ಸರ್ಕಾರ ಈ ಮಾದರಿಯಲ್ಲಿ ಸೀಟು ಹಂಚಿಕೆ ಮಾಡದೆ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಷನ್ ಮತ್ತು ಕಂಪ್ಯೂಟರ್ ಸೈನ್ಸ್‌ನ ಎರಡೂ ವಿಷಯದ 240 ಸೀಟು ಹಂಚಿಕೆ ಮಾಡಿರುವುದು ಸರಿಯಲ್ಲ ಎಂಬುದು ಆಡಳಿತ ಮಂಡಳಿಯ ವಾದ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಪೋಷಕರು ಕಾಲೇಜಿನ ಪರವಾಗಿ ಬಂದಿದೆ ಎನ್ನಲಾದ ತೀರ್ಪಿನ ವಿರುದ್ಧ ತಡೆಯಾಜ್ಞೆ ತರುತ್ತೇವೆ. ಆಡಳಿತ ಮಂಡಳಿಯ ಈ ತೀರ್ಮಾನದಿಂದ 240 ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸ್ಥಿತಿಯಲ್ಲಿ ನಮ್ಮ ಮಕ್ಕಳು ಬೇರೆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಆಗುವುದಿಲ್ಲ. ರಾಜ್ಯದ 30 ಜಿಲ್ಲೆಗಳಿಂದಲೂ ಪೋಷಕರು ಇಲ್ಲಿಗೆ ಆಗಮಿಸಿದ್ದಾರೆ. ಈ ಸಂಬಂಧ ಈಗಾಗಲೆ ನಾವು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಸರ್ಕಾರ ಪ್ರಶ್ನಿಸಿದೆ. ಬುಧವಾರ ಅಂತಿಮ ಆದೇಶ ಬರುವ ನಿರೀಕ್ಷೆಯಿದೆ.

ಇರುವ ಗೊಂದಲಗಳು
- 3 ಬಾರಿ ಕೌನ್ಸೆಲಿಂಗ್ ವೇಳಾಪಟ್ಟಿ ಬದಲಾವಣೆ
-ವೈದ್ಯಕೀಯ ಸೀಟುಗಳ ಪ್ರಕಟಣೆಯಲ್ಲಿ ಗೊಂದಲ
- ಆಪ್ಶನ್ ಎಂಟ್ರಿ ಹಾಗೂ ಸೀಟು ಹಂಚಿಕೆ ಕುರಿತಂತೆ ಕೆಇಎ ಅಧಿಕಾರಿಗಳಿಂದ 1.03 ಲಕ್ಷ ವಿದ್ಯಾರ್ಥಿಗಳಿಗೆ ಸುಳ್ಳು ಸಂದೇಶ ರವಾನೆ
- ಈವರೆಗೂ ಐಎಸ್‌ಎಂಎಚ್ ಕೋರ್ಸ್‌ಗಳ ಕೌನ್ಸೆಲಿಂಗ್ ಪ್ರಸ್ತಾಪವಿಲ್ಲ
- ಆಪ್ಶನ್ ಎಂಟ್ರಿ, ಸೀಟು ಹಂಚಿಕೆ ಪ್ರಕಟಣೆ ಪ್ರಕ್ರಿಯೆಯಲ್ಲಿ ವಿಳಂಬ
- ಶುಲ್ಕ ಪಾವತಿಯಲ್ಲಿ ಅತಿಯಾದ ಗೊಂದಲ. ಆನ್‌ಲೈನ್ ಪಾವತಿ ಮಾಡಿದ್ದರೂ, ಪ್ರವೇಶ ಪ್ರತಿ ದೊರೆಯದೆ 2-3 ದಿನ ಒದ್ದಾಡಿದ ವಿದ್ಯಾರ್ಥಿಗಳು
- ಕೌನ್ಸೆಲಿಂಗ್ ಪ್ರಕ್ರಿಯೆ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ನೀಡದಿರುವುದು
-ಮೈಸೂರಿನ ಎಸ್‌ಜೆಸಿಇ ಕಾಲೇಜಿನ ಸೀಟುಗಳಿಗೆ ಸಂಬಂಧಿಸಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಸೀಟು ಹಂಚಿಕೆ ಮಾಡಿ ವಿದ್ಯಾರ್ಥಿಗಳಿಗೆ ಗೊಂದಲ ಏರ್ಪಡಿಸಲಾಗಿದೆ.

ಉತ್ತರಿಸಬೇಕಾದ ಪ್ರಶ್ನೆಗಳು...

- ಶುಲ್ಕ ಹೆಚ್ಚಳವಿಲ್ಲ ಎಂದು ಹೇಳಿಕೆ ನೀಡಿ, ತೆರೆಮರೆಯಲ್ಲಿ ಏರಿಸುವ ಉದ್ದೇಶವೇನು?
-ಶುಲ್ಕ ಎಷ್ಟೆ ಇರಲಿ, ಮಾನದಂಡ ಯಾವುದೆ ಇರಲಿ, ಅದನ್ನು ಅಧಿಕೃತವಾಗಿ ಪ್ರಕಟಿಸದಿರಲು ಕಾರಣವೇನು?
-ಈ ರೀತಿ ತೆರೆಮರೆಯ ವ್ಯವಹಾರಗಳು ಮತ್ತಷ್ಟು ಅಕ್ರಮಕ್ಕೆ ಕಾರಣವಾಗುವುದಿಲ್ಲವೇ?
-ಮೊದಲ ಹಂತದ ಪ್ರವೇಶ ಪ್ರಕ್ರಿಯೆ ನಿನ್ನೆಗೆ ಅಂತ್ಯವಾಗಿದೆ, ಹೆಚ್ಚುವರಿ ಶುಲ್ಕದ ಬಗ್ಗೆ ಸ್ಪಷ್ಟ ನಿಲುವು ತಾಳದಿರಲು ಕಾರಣವೇನು?
- ಕಳೆದ ವರ್ಷ ಹೆಚ್ಚುವರಿ ಶುಲ್ಕ ಪಡೆದ ಕಾಲೇಜುಗಳ ವಿರುದ್ಧ ಕ್ರಮವೇಕಿಲ್ಲ?
- ಎಐಸಿಟಿಇ ನಿಯಮದ ಪ್ರಕಾರ ಸರ್ಕಾರ ನಿಗದಿಪಡಿಸಿದ ಶುಲ್ಕ ಹೊರತುಪಡಿಸಿ ಇನ್ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ ಎನ್ನುವುದಕ್ಕೆ ಸರ್ಕಾರ ಬದ್ಧವಾಗಿಲ್ಲವೇ?
-ಒಂದೊಮ್ಮೆ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 10 ಸಾವಿರದಿಂದ 20 ಸಾವಿರ ಶುಲ್ಕ ವಸೂಲಿ ಮಾಡಲು ಸಮ್ಮತಿಸಿದ್ದರೆ, ಇದಕ್ಕೆ ಯಾವ ವೈಜ್ಞಾನಿಕ ಮಾನದಂಡ ಅಳವಡಿಸಲಾಗಿದೆ? ಈ ಶುಲ್ಕ ನಿಗದಿಗಾಗಿ ಯಾವ ಸಮಿತಿ ರಚಿಸಲಾಗಿತ್ತು?
- ಉನ್ನತ ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳಿಗಿಂತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಮೇಲೆ ಪ್ರೀತಿ ದಿಢೀರನೆ ಹೆಚ್ಚಾಗಲು ಕಾರಣವೇನು?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement