ಹುಸಿ ವಾದ
ಉದ್ದೇಶಿತ ಯೋಜನೆಯಂತೆ ಕರ್ನಾಟಕ ಮಹಾದಾಯಿಯ 24.15 ಟಿಎಂಸಿ ನೀರು ಬಳಸಿಕೊಂಡರೆ ತನಗೆ ಭಾರಿ ಹಾನಿಯಾಗುತ್ತದೆಂಬುದನ್ನು...
ನವದೆಹಲಿ: ಉದ್ದೇಶಿತ ಯೋಜನೆಯಂತೆ ಕರ್ನಾಟಕ ಮಹಾದಾಯಿಯ 24.15 ಟಿಎಂಸಿ ನೀರು ಬಳಸಿಕೊಂಡರೆ ತನಗೆ ಭಾರಿ ಹಾನಿಯಾಗುತ್ತದೆಂಬುದನ್ನು ದೃಢ ಪಡಿಸುವ ಯಾವ ಆಧಾರವನ್ನೂ ಗೋವಾ ಸರ್ಕಾರ ನೀಡಿಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಕುಡಿಯುವ ನೀರಿನ ಅಗತ್ಯ ಪೂರೈಸಲು ಕಳಸ ಬಂಡೂರಿ ತಿರುವು ಯೋಜನೆಗೆ 7.56 ಟಿಎಂಸಿ ನೀರು ಅತ್ಯಗತ್ಯ ಎಂದು ಪ್ರತಿಪಾದಿಸಿರುವ ಕರ್ನಾಟಕ, ಗೋವಾ ಸರ್ಕಾರ ಹೇಳಿರುವಂತೆ ಅವಳಿ ನಗರಗಳಿಗೆ ನೀರು ಪೂರೈಸಲು ಬೇರೆ ಯಾವುದೇ ಪರ್ಯಾಯವೂ ಇಲ್ಲ ಎಂದೂ ಸ್ಪಷ್ಟ ಪಡಿಸಿದೆ.
ನದಿ ತಿರುವು ಯೋಜನೆಯಿಂದ ಗೋವಾ ರಾಜ್ಯಕ್ಕೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ಕರ್ನಾಟಕ 7.56 ಟಿಎಂಸಿ ನೀರನ್ನು ಮಲಪ್ರಭೆಯತ್ತ, 5.52 ಟಿಎಂಸಿ ನೀರನ್ನು ಕಾಳಿಯತ್ತ ತಿರುಗಿಸಿದರೆ ನದಿ ತಿರುವಿನಿಂದ ಆಗುವ ನೀರಿನ ನಷ್ಟ ಕೇವಲ 1.30 ಟಿಎಂಸಿ ಮಾತ್ರ. ಈ ಪ್ರಮಾಣವನ್ನು ನಿರ್ಲಕ್ಷಿಸಲಾಗದಿದ್ದರೂ ಒಟ್ಟಾರೆ ಇದು ಅತ್ಯಲ್ಪವೇ. ಹೀಗಾಗಿ ನೀರನ್ನು ಮಹಾದಾಯಿ ನದಿಪಾತ್ರದಿಂದ ಬೇರೆಡೆ ತಿರುಗಿಸಿದರೂ ಮಹಾದಾಯಿ ಯೋಜನೆಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಗೋವಾ ಸರ್ಕಾರ ಎತ್ತಿರುವ ತಕರಾರುಗಳಿಗೆ ಮತ್ತು ವ್ಯಕ್ತಪಡಿಸಿರುವ ಆತಂಕಗಳಿಗೆ ಯಾವುದೇ ನಿಖರ ಆಧಾರಗಳಿಲ್ಲ ಎಂದು ಹೇಳಿದೆ.
ಮಹಾದಾಯಿ ಜಲ ನ್ಯಾಯಾಧಿಕರಣದ ಮುಂದೆ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಆಕ್ಷೇಪಗಳು ಮತ್ತು ಎತ್ತಿರುವ ಪ್ರಶ್ನೆಗಳಿಗೆ ವಿಸ್ತೃತ ಅಂಕಿ ಅಂಶ ಸಹಿತ ಅಫಿಡವಿಟ್ ಸಲ್ಲಿಸಿರುವ ಕರ್ನಾಟಕ, ಗೋವಾ ಸರ್ಕಾರ ಜಲ ಇಳುವರಿ ಅಧ್ಯಯನ ಕುರಿತ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ ಎಂದು ಆಕ್ಷೇಪಿಸಿದೆ.
ಜನವರಿ 2 ರಂದು ಕರ್ನಾಟಕ ಪ್ರಮಾಣ ಪತ್ರ ಸಲ್ಲಿಸಿತ್ತು. ಈ ಸಂಬಂಧ ಗೋವಾ ಸರ್ಕಾರ ಮೇ 10 ರಂದು ಮಹಾದಾಯಿ ನ್ಯಾಯಾಧಿಕರಣದ ಮುಂದೆ ಸಲ್ಲಿಸಿರುವ ಆಕ್ಷೇಪಗಳಿಗೆ ಕರ್ನಾಟಕ ಪ್ರತಿ ಆಕ್ಷೇಪ ಮತ್ತು ಪ್ರತ್ಯುತ್ತರ ನೀಡಿದೆ. ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿರುವುದನ್ನು ರಾಷ್ಟ್ರೀಯ ಪರಿಸರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ(ನೀರಿ) ನಡೆಸಿದ ಪರಿಸರ ಪರಿಣಾಮ ಅಂದಾಜು ಅಧ್ಯಯನ ವರದಿ ಆಧರಿಸಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ(ಎನ್ಡಬ್ಲ್ಯೂಡಿಎ) ಸಿದ್ಧಪಡಿಸಿದ ಜಲ ಇಳುವರಿ ವರದಿಯನ್ನು ಗೋವಾ ಆಕ್ಷೇಪಿಸಿದೆ. ಗೋವಾ ಸಲ್ಲಿಸಿರುವ ಅಂಕಿ ಅಂಶಗಳಿಗೆ ಯಾವುದೇ ವೈಜ್ಞಾನಿಕ ಅಧ್ಯಯನ ವರದಿಗಳ ಆಧಾರ ಇಲ್ಲ ಎಂದೂ ತಿಳಿಸಿದೆ.
ಗೋವಾ ಸರ್ಕಾರದ ಆಕ್ಷೇಪಗಳಿಗೆ 94 ಪುಟ ಹಾಗೂ ಮಹಾರಾಷ್ಟ್ರ ಸರ್ಕಾರದ ಆಕ್ಷೇಪಗಳಿಗೆ 18 ಪುಟಗಳ ಅಫಿಡವಿಟ್ ಸಲ್ಲಿಸಲಾಗಿದೆ.
- ಕನ್ನಡಪ್ರಭ ಪ್ರತಿನಿಧಿಯಿಂದ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.