ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಂಗ್ರೆಸ್- ಬಿಜೆಪಿಗೆ ತೃತೀಯರಂಗ ಪರ್ಯಾಯ

ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ...

Mainashree
Updated On : 17 Jul 2013, 11:06 am

ಕ.ಪ್ರ.ವಾರ್ತೆ  ಬೆಂಗಳೂರು  ಜು.17
ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ತೃತೀಯ ರಂಗ ಅಸ್ತಿತ್ವಕ್ಕೆ ಬರಲಿದ್ದು, ಅದರ ಹೆಸರಲ್ಲಿ ಏನಾದರೂ ಬದಲಾಗಬಹುದಷ್ಟೆ. ಆದರೆ, ಅಸ್ತಿತ್ವಕ್ಕೆ ಬರುವುದು ಮಾತ್ರ ಖಚಿತ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಎಡಪಂಥೀಯ ನಾಯಕರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ತೃತೀಯರಂಗ ಸಂಬಂಧ ರಾಷ್ಟ್ರಮಟ್ಟದಲ್ಲಿ ಚರ್ಚೆ ಆರಂಭವಾಗಿದ್ದು, ಇದಕ್ಕೆ ಶೀಘ್ರವೇ ಅಂತಿಮ ರೂಪ ದೊರೆಯಲಿದೆ ಎಂದು ಈ ಸಂಬಂಧ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ನಾಯಕರೊಂದಿಗೆ ಚರ್ಚೆ: ಈ ಸಂಬಂಧ  ಸಿಪಿಐ ನಾಯಕ ಎ.ಪಿ. ಬರ್ಧನ್ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಅವರಿಗೆ ನಮ್ಮ ಸಹಕಾರ ಇದೆ. ತೆಲುಗು ದೇಶಂನ ಚಂದ್ರಬಾಬುನಾಯ್ಡು ಅವರೊಂದಿಗೂ ಚರ್ಚಿಸಲಾಗಿದೆ. ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಈಗಾಗಲೇ ದಕ್ಷಿಣ ಭಾರತದಲ್ಲಿ ಪಕ್ಷ ಸಂಘಟಿಸುವ ಮಾತನ್ನಾಡಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತಿತರರು 'ಫೆಡರಲ್ ಫ್ರಂಟ್‌' ರಚನೆ ಬಗ್ಗೆ ಮಾತನಾಡಿದ್ದಾರೆ. ಯಾವುದೇ ಹೆಸರು ಇರಬಹುದು. ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಹೊಸದೊಂದು ರಾಜಕೀಯ ಶಕ್ತಿ ಉದಯವಾಗುವುದಂತೂ ಖಾತರಿ ಯಾಗಿದೆ ಎಂದರು.
ತೃತೀಯ ಶಕ್ತಿಗೆ ಭವಿಷ್ಯವಿದೆ: ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದು, ಪ್ರಧಾನಿ ಅಭ್ಯರ್ಥಿಗಳಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದರಿಂದ ಜನರು ಹತಾಶರಾಗಿದ್ದಾರೆ. ಈ ಎಲ್ಲ ವಿಚಾರವನ್ನು ಗಮನಿಸಿರುವ ಜನತೆ ರಾಜಕೀಯವಾಗಿ ಬೇರೊಂದು ಪಕ್ಷದತ್ತ ಮನಸ್ಸು ಮಾಡುವ ಕಾಲ ಬರುತ್ತದೆ. ಹೀಗಾಗಿ ತೃತೀಯ ಶಕ್ತಿ ಹೆಚ್ಚು ಭವಿಷ್ಯ ಇದೆ ಎಂದರು.
ಮೈತ್ರಿ ಬಗ್ಗೆ ಚರ್ಚೆ ನಡೆದಿಲ್ಲ: ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್.ಡಿ. ದೇವೇಗೌಡ, ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಬಗ್ಗೆ ಚರ್ಚೆ ನಡೆದಿಲ್ಲ. ಕಾಂಗ್ರೆಸ್ಸೇತರ ಪಕ್ಷ ಎಂಬ ಮಾತೂ ಬರುವುದಿಲ್ಲ. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಈಗಾಗಲೇ ನಮ್ಮಿಂದ ತಪ್ಪಾಗಿದೆ. ನಾವೆಲ್ಲ ಒಂದಾಗುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಅವರು ಮನೆಗೆ ಹಿಂದಿರುಗುವುದರಿಂದ ಅವರ ಜತೆ ಮಾತುಕತೆಯ ಪ್ರಶ್ನೆ ಇಲ್ಲ ಎಂದರು.

ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ದಿನವೇ ಹಿಂದುಳಿದವರು ಹಾಗೂ ಪರಿಶಿಷ್ಟರ ಸಾಲ ಮನ್ನಾ ಮಾಡಿ ಉತ್ತಮ ಕೆಲಸ ಮಾಡಿದ್ದಾರೆ. ಅದೇ ರೀತಿ ತೆಂಗು ಬೆಳೆಗಾರರು ಹಾಗೂ ಅಡಕೆ ಬೆಳೆಗಾರರ ಬಗ್ಗೆಯೂ ಮನಸ್ಸು ಮಾಡಿ ಅವರ ಸಾಲ ಮನ್ನಾ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಿವಿಮಾತು ಹೇಳಿದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಲ್ಕು ಪುಟಗಳ ಪತ್ರ ಬರೆದಿದ್ದು, ತೆಂಗು ಹಾಗೂ ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಲು ಕೋರಿಕೊಳ್ಳಲಾಗಿದೆ. ತೆಂಗಿನ ಮರದ ಸುಳಿಯೇ ಬಿದ್ದು ಹೋಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಇವರ ನೆರವಿಗೆ ಧಾವಿಸಬೇಕು. ಅಲ್ಲದೆ, ಅಡಕೆ ಬೆಳೆಗಾರರಿಗೆ ಸಾಕಷ್ಟು ಸಮಸ್ಯೆಗಳಿವೆ. ಅವೆಲ್ಲ ಪರಿಹಾರ ಆಗಬೇಕು. ಈ ಬಗ್ಗೆ ಪತ್ರ ಮುಖೇನ ಮುಖ್ಯಮಂತ್ರಿ ಅವರ ಗಮನ ಸೆಳೆದಿದ್ದೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement