ಸಾವಿನ ಸಂಖ್ಯೆ 22ಕ್ಕೆ ಏರಿಕೆ
ಬಿಹಾರದ ಸಾರನ್ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಬಿಸಿಯೂಟ ದುರಂತದಲ್ಲಿ ಅಸುನೀಗಿದ ವಿದ್ಯಾರ್ಥಿಗಳ ಸಂಖ್ಯೆ 22ಕ್ಕೆ ಏರಿದೆ. ಮಂಗಳವಾರ ತಡರಾತ್ರಿಯ...
ಪಿಟಿಐ ಛಪ್ರಾ/ಮಧುಬನಿ ಜು.17
ಬಿಹಾರದ ಸಾರನ್ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಬಿಸಿಯೂಟ ದುರಂತದಲ್ಲಿ ಅಸುನೀಗಿದ ವಿದ್ಯಾರ್ಥಿಗಳ ಸಂಖ್ಯೆ 22ಕ್ಕೆ ಏರಿದೆ. ಮಂಗಳವಾರ ತಡರಾತ್ರಿಯ ವೇಳೆಗೆ ಸಾವಿನ ಸಂಖ್ಯೆ 16 ಆಗಿತ್ತು. ಬುಧವಾರ ಬೆಳಗ್ಗೆ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿತ್ತು.
ಬುಧವಾರ ಮಧುಬನಿ ಜಿಲ್ಲೆಯಲ್ಲಿ ಸಂಭವಿಸಿದ ಮತ್ತೊಂದು ದುರಂತದಲ್ಲಿ ಹಲ್ಲಿ ಬಿದ್ದ ಬಿಸಿಯೂಟ ಸೇವನೆ ಮಾಡಿದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಹಾರ ಸರ್ಕಾರ ಪ್ರಕರಣವನ್ನು ಸಂಚು ಎಂದು ಬಣ್ಣಿಸಿದೆ. ಜತೆಗೆ ವಿದ್ಯಾರ್ಥಿಗಳಿಗೆ ವಿಷಯುಕ್ತ ಆಹಾರ ನೀಡಲಾಗಿತ್ತು ಎಂದು ಪ್ರತಿಪಾದಿಸಿದೆ. ದುರಂತಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಕೇಂದ್ರ, ಬಿಹಾರ ಸರ್ಕಾರಕ್ಕೆ ಸೂಚಿಸಿದೆ
10 ವರ್ಷ ವಯಸ್ಸಿನವರು: ಅಸುನೀಗಿದ 16 ವಿದ್ಯಾರ್ಥಿಗಳು 1-5ನೇ ತರಗತಿಯಲ್ಲಿ ಕಲಿಯುತ್ತಿದ್ದರು. ಅವರು 10 ವರ್ಷದೊಳಗಿನ ವಯಸ್ಸಿನವರಾಗಿದ್ದರು. ನಾಲ್ವರು ಪಟನಾ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ಕರೆ ತರುತ್ತಿದ್ದಂತೆ ಅಸುನೀಗಿದ್ದರು. 16 ಮಂದಿ ಛಪ್ರಾದಲ್ಲೇ ಕೊನೆಯುಸಿರೆಳೆದಿದ್ದರು. ಇನ್ನಿಬ್ಬರು ಬುಧವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಅಸುನೀಗಿದ ಚಿಣ್ಣರ ಪೈಕಿ ಇಬ್ಬರು ಬಿಸಿಯೂಟ ಸಿದ್ಧಪಡಿಸಿದ ಮಹಿಳೆಯ ಮಕ್ಕಳೂ ಸೇರಿದ್ದಾರೆ.
ಮತ್ತೆರಡು ದುರಂತ: ಮಂಗಳವಾರದ ದುರಂತದ ಕರಿಛಾಯೆ ಇರುವಂತೆಯೇ ಮಧುಬನಿ ಜಿಲ್ಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಬಿಸ್ಫಿ ಎಂಬಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ 50ಕ್ಕೂ ಹೆಚ್ಚುಮಕ್ಕಳು ಅಸ್ವಸ್ಥರಾಗಿದ್ದಾರೆ. ಮಕ್ಕಳಿಗಾಗಿ ಸಿದ್ಧಪಡಿಸಿದ ಅಡುಗೆಯಲ್ಲಿ ಹಲ್ಲಿ ಬಿದ್ದಿತ್ತು. ಅಸ್ವಸ್ಥರಾದ ಮಕ್ಕಳಿಗೆ ಕೂಡಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಗಯಾದಲ್ಲೂ ಅದೇ ರೀತಿಯ ದುರಂತ ಸಂಭವಿಸಿದ್ದು ವಿದ್ಯಾರ್ಥಿಯೊಬ್ಬ ಅಸುನೀಗಿದ್ದಾನೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.